ಮುಂಬೈ: ಪ್ಲೇಆಫ್ ಹಂತಕ್ಕೇರುವ ತವಕದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಈಗಾಗಲೇ ಲೀಗ್‌ನಿಂದ ಹೊರಬಿದ್ದಿರುವ ಮುಂಬೈ ಇಂಡಿಯನ್ಸ್ ತಂಡಗಳು ಐಪಿಎಲ್-15ರ ಹಣಾಹಣಿಯಲ್ಲಿ ಶನಿವಾರ ಎದುರಾಗಲಿವೆ. ಆರ್‌ಸಿಬಿ ಅಭಿಮಾನಿಗಳ ಪಾಲಿಗೆ ಮಹತ್ವ ಪಡೆದಿರುವ ಈ ಪಂದ್ಯ ಡೆಲ್ಲಿಗೆ ಕ್ವಾರ್ಟರ್ ಫೈನಲ್‌ನಂತಿದೆ. ಲೀಗ್ ಹಂತಲ್ಲೇ ಪ್ರಮುಖ ಕೇಂದ್ರ ಬಿಂದುವಾಗಿರುವ ಮುಂಬೈ-ಡೆಲ್ಲಿ ನಡುವಿನ ಹೋರಾಟ ಅಭಿಮಾನಿಗಳ ಕುತೂಹಲ ಕೆರಳಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋಲನುಭವಿಸಿದಷ್ಟೇ ಆರ್‌ಸಿಬಿ ತಂಡದ ಮುಂದಿನ ಹಾದಿ ಸುಗಮವಾಗಲಿದೆ. ಮತ್ತೊಂದೆಡೆ, ತಂಡಕ್ಕೆ ಆಯ್ಕೆಯಾದರೂ ಕಳೆದ ಎರಡು ಆವೃತ್ತಿಗಳಿಂದ ಬೆಂಚು ಕಾಯಿಸಿರುವ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಮುಂಬೈ ಪರ ಐಪಿಎಲ್‌ಗೆ ಪದಾರ್ಪಣೆ ಮಾಡುವ ಸಾಧ್ಯತೆಗಳಿವೆ.
* ಗೆಲುವಿನ ಒತ್ತಡದಲ್ಲಿ ಡೆಲ್ಲಿ
ಬಲಿಷ್ಠ ಬ್ಯಾಟರ್‌ಗಳನ್ನೇ ಹೊಂದಿದ್ದರೂ ಅಸ್ಥಿರ ನಿರ್ವಹಣೆ ತೋರುತ್ತಾ ಬಂದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಪಂದ್ಯದಲ್ಲಿ ಗೆಲುವು ದಾಖಲಿಸಿದರಷ್ಟೇ ಮುಂದಿನ ಹಂತಕ್ಕೇರಲಿದೆ. ಇದುವರೆಗೂ ಆಡಿರುವ 13 ಪಂದ್ಯಗಳಲ್ಲಿ 7 ಜಯ, 6 ಸೋಲು ಕಂಡಿರುವ ಡೆಲ್ಲಿ ತಂಡ ಉತ್ತಮ ರನ್‌ರೇಟ್ (+0.255) ಹೊಂದಿದ್ದು, ಕನಿಷ್ಠ ಗೆಲುವು ದಾಖಲಿಸಿದರೂ ಆರ್‌ಸಿಬಿ ತಂಡವನ್ನು ಹಿಂದಿಕ್ಕಿ ನಾಲ್ಕನೇ ತಂಡವಾಗಿ ಪ್ಲೇಆಫ್ ಖಾತ್ರಿಪಡಿಸಿಕೊಳ್ಳಲಿದೆ. ಹೀಗಾಗಿ ಡೆಲ್ಲಿ ಪಾಲಿಗೆ ಈ ಪಂದ್ಯ ಮಾಡು ಇಲ್ಲವೆ ಮಡಿ ಎಂಬಂತಿದೆ. ಡೇವಿಡ್ ವಾರ್ನರ್ (427), ಮಿಚೆಲ್ ಮಾರ್ಷ್ (251), ರೊವ್ಮನ್ ಪೊವೆಲ್ (207) ವಿದೇಶಿ ಬ್ಯಾಟರ್‌ಗಳ ನಿರ್ವಹಣೆಯನ್ನೇ ಡೆಲ್ಲಿ ನೆಚ್ಚಿಕೊಂಡಿದೆ. ಶಾರ್ದೂಲ್ ಠಾಕೂರ್ ದುಬಾರಿಯಾಗುತ್ತಿದ್ದರೂ ವಿಕೆಟ್ ಕಬಳಿಸುತ್ತಿದ್ದಾರೆ.
* ಅರ್ಜುನ್ ತೆಂಡುಲ್ಕರ್ ಕಣಕ್ಕೆ?
ಕಳೆದ ಪಂದ್ಯ ಎರಡು ಆವೃತ್ತಿಗಳಿಂದ ಸತತ 27 ಪಂದ್ಯಗಳಲ್ಲಿ ಸ್ಥಾನ ಪಡೆಯಲು ವಿಫಲರಾಗಿರುವ ಅರ್ಜುನ್ ತೆಂಡುಲ್ಕರ್ ಐಪಿಎಲ್‌ಗೆ ಪರ್ದಾಪಣೆ ಮಾಡುವ ನಿರೀಕ್ಷೆಯಿದೆ. ಮುಂಬೈ ಪರ ಕಡೆ ಪಂದ್ಯಗಳಲ್ಲಿ ಹೊಸ ಆಟಗಾರರಿಗೆ ಮಣೆ ಹಾಕಲಾಗುವುದು ಎಂದು ನಾಯಕ ರೋಹಿತ್ ಶರ್ಮ ಹಲವು ಬಾರಿ ಸೂಚನೆ ನೀಡಿದ್ದರು. ಇದುವರೆಗೂ 13 ಪಂದ್ಯಗಳಿಂದ 22 ಆಟಗಾರರಿಗೆ ಅವಕಾಶ ನೀಡಲಾಗಿದೆ.
ಟೀಮ್ ನ್ಯೂಸ್:
ಡೆಲ್ಲಿ: ಬಹುತೇಕ ಹಿಂದಿನ ಪಂದ್ಯಗಳಲ್ಲಿ ಆಡಿದ ತಂಡವೇ ಕಣಕ್ಕಿಳಿಯಬಹುದು.
ಕಳೆದ ಪಂದ್ಯ: ಪಂಜಾಬ್ ಎದುರು 17 ರನ್ ಜಯ
ಮುಂಬೈ ಇಂಡಿಯನ್ಸ್: ಕೆಲವೊಂದು ಹೊಸಮುಖಗಳಿಗೆ ಮಣೆ ಹಾಕುವ ಸಾಧ್ಯತೆಗಳಿವೆ.
ಕಳೆದ ಪಂದ್ಯ: ಸನ್‌ರೈಸರ್ಸ್ ವಿರುದ್ಧ 3 ರನ್ ಸೋಲು
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್
ಮುಖಾಮುಖಿ: 31, ಮುಂಬೈ: 16, ಡೆಲ್ಲಿ: 15
ಮೊದಲ ಮುಖಾಮುಖಿ: ಡೆಲ್ಲಿ ತಂಡಕ್ಕೆ 4 ವಿಕೆಟ್ ಜಯ