More

    ಐಪಿಎಲ್ 14ನೇ ಆವೃತ್ತಿಯ ಆರಂಭ ದಿನಾಂಕದ ಸುಳಿವು ನೀಡಿದ ಭಾರತ-ಇಂಗ್ಲೆಂಡ್ ಸರಣಿ ವೇಳಾಪಟ್ಟಿ!

    ನವದೆಹಲಿ: ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧ ಭಾರತ ತಂಡ ಆಡಲಿರುವ ಟೆಸ್ಟ್, ಟಿ20, ಏಕದಿನ ಸರಣಿಯ ವೇಳಾಪಟ್ಟಿ ಪ್ರಕಟವಾಗುವುದರೊಂದಿಗೆ, ಮುಂದಿನ ವರ್ಷ ನಡೆಯಲಿರುವ ಐಪಿಎಲ್ 14ನೇ ಆವೃತ್ತಿಯ ಆರಂಭದ ದಿನಾಂಕದ ಬಗ್ಗೆಯೂ ಸುಳಿವು ಲಭಿಸಿದೆ. ಇಂಗ್ಲೆಂಡ್ ವಿರುದ್ಧದ ಸರಣಿ ಮಾರ್ಚ್ 28ರವರೆಗೂ ಸಾಗಲಿದೆ. ಹೀಗಾಗಿ ಐಪಿಎಲ್ ಟೂರ್ನಿ ಏಪ್ರಿಲ್ 10ರ ನಂತರವೇ ಆರಂಭಗೊಳ್ಳುವ ನಿರೀಕ್ಷೆ ಹರಡಿದೆ.

    ಇಂಗ್ಲೆಂಡ್ ವಿರುದ್ಧದ 2 ತಿಂಗಳ ಸುದೀರ್ಘ ಸರಣಿ ಫೆಬ್ರವರಿ 5ರಂದು ಆರಂಭಗೊಳ್ಳಲಿದೆ. ಹೀಗಾಗಿ ಈ ಸರಣಿಯ ಬಳಿಕ ಟೀಮ್ ಇಂಡಿಯಾ ಆಟಗಾರರಿಗೆ ಕನಿಷ್ಠ 10 ದಿನಗಳ ವಿಶ್ರಾಂತಿ ಲಭಿಸುವ ನಿರೀಕ್ಷೆ ಇದೆ. ಹೀಗಾಗಿ ಏಪ್ರಿಲ್ 2ನೇ ವಾರದವರೆಗೆ ಐಪಿಎಲ್ 14ನೇ ಆವೃತ್ತಿ ಆರಂಭಗೊಳ್ಳುವ ಸಾಧ್ಯತೆ ಇಲ್ಲ ಎನ್ನಲಾಗಿದೆ.

    ಯುಎಇಯಲ್ಲಿ ನಡೆದ ಐಪಿಎಲ್ 13ನೇ ಆವೃತ್ತಿ ಕಳೆದ ನವೆಂಬರ್ 10ರಂದು ಮುಕ್ತಾಯಗೊಂಡಿದ್ದು, ಐದೇ ತಿಂಗಳಲ್ಲಿ ಮತ್ತೊಂದು ಟೂರ್ನಿ ನಡೆಯುವುದು ಖಚಿತವೆನಿಸಿದೆ. ಈ ಬಾರಿ ಭಾರತದಲ್ಲೇ ಟೂರ್ನಿ ಆಯೋಜನೆಯ ನಿರೀಕ್ಷೆ ಹೆಚ್ಚಾಗಿದೆ. ಇಂಗ್ಲೆಂಡ್ ವಿರುದ್ಧದ ಸರಣಿ ಭಾರತದಲ್ಲೇ ನಿಗದಿಯಾಗಿರುವುದರಿಂದ ಅದರ ಯಶಸ್ಸು ಬಿಸಿಸಿಐಗೆ ಐಪಿಎಲ್ 14ನೇ ಆವೃತ್ತಿಯನ್ನೂ ತವರಿನಲ್ಲೇ ನಡೆಸಲು ವಿಶ್ವಾಸ ತುಂಬುವ ನಿರೀಕ್ಷೆ ಇದೆ. ಆದರೆ ಎಂದಿನ ತವರು-ಎದುರಾಳಿ ನೆಲದ ಮಾದರಿಯಲ್ಲಿ ಪಂದ್ಯಗಳು ನಡೆಯುವ ಸಾಧ್ಯತೆ ಕಡಿಮೆ ಇದೆ.

    ಅರಬ್ ರಾಷ್ಟ್ರದಲ್ಲಿ ಈ ಬಾರಿ ಟೂರ್ನಿ ಆಯೋಜಿಸಿದಂತೆ ಕೇವಲ 3 ತಾಣಗಳಲ್ಲಿ ಪಂದ್ಯಗಳು ನಡೆಯಬಹುದು. ಸದ್ಯಕ್ಕೆ ಮಹಾರಾಷ್ಟ್ರ ಟೂರ್ನಿಯ ಆತಿಥ್ಯಕ್ಕೆ ನೆಚ್ಚಿನ ತಾಣವಾಗಿದೆ. ಆದರೆ ಕರೊನಾ ಪ್ರಕರಣಗಳ ಸ್ಥಿತಿ ಮತ್ತು ಕರೊನಾ ಲಸಿಕೆಯ ಲಭ್ಯತೆಯ ಆಧಾರದಲ್ಲಿ ಟೂರ್ನಿಯ ಆತಿಥ್ಯ ನಿಶ್ಚಯವಾಗಲಿದೆ.

    ವಿವಾಹದ 3ನೇ ವಾರ್ಷಿಕೋತ್ಸವಕ್ಕೆ ವಿಶೇಷ ಸಂದೇಶ ಹಂಚಿಕೊಂಡ ವಿರೂಷ್ಕಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts