More

    ದಸರಾ ಉದ್ಘಾಟನೆಗೆ ಸಿಎಂಗೆ ಆಹ್ವಾನ, ಕ್ಷೇತ್ರ ಅಭಿವೃದ್ಧಿ ರೂವಾರಿ ಜನಾರ್ದನ ಪೂಜಾರಿ ಮಾಹಿತಿ

    ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಂಗಳೂರು ದಸರಾ ಮಹೋತ್ಸವ ಸೆ.26ರಿಂದ ಅ.6ರವರೆಗೆ ನಡೆಯಲಿದ್ದು, ಭಕ್ತರ ಅಭಿಲಾಷೆಯಂತೆ ಈ ಬಾರಿಯ ಮಂಗಳೂರು ದಸರಾ ಮಹೋತ್ಸವ ಮತ್ತಷ್ಟು ವೈಭವಪೂರ್ಣವಾಗಿ ನಡೆಯಲಿದೆ. ಉದ್ಘಾಟನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಹ್ವಾನಿಸಲಾಗುವುದು ಎಂದು ಕುದ್ರೋಳಿ ಕ್ಷೇತ್ರದ ಅಭಿವೃದ್ಧಿ ರೂವಾರಿ ಬಿ.ಜನಾರ್ದನ ಪೂಜಾರಿ ಹೇಳಿದರು.


    ದಸರಾ ಮಹೋತ್ಸವ ಅಂಗವಾಗಿ ಭಾನುವಾರ ಶ್ರೀ ಕ್ಷೇತ್ರದಲ್ಲಿ ಭಾನುವಾರ ಪೂರ್ವಭಾವಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
    ಆಮಂತ್ರಣ ಪತ್ರಿಕೆಯನ್ನು ಮುಖ್ಯಮಂತ್ರಿಗಳಿಗೆ ಕಳುಹಿಸಿಕೊಟ್ಟು, ದಸರಾಕ್ಕೆ ಬರುವಂತೆ ನಾನೇ ಆಹ್ವಾನಿಸುತ್ತೇನೆ. ಮುಖ್ಯಮಂತ್ರಿ ಸಮಯವನ್ನು ಗೊತ್ತುಪಡಿಸಿ ದಸರಾ ಉದ್ಘಾಟನೆ ದಿನ, ಸಮಯ ನಿಗದಿಪಡಿಸಲಾಗುವುದು. ಮಂಗಳೂರು ದಸರಾ ಮಹೋತ್ಸವಕ್ಕೆ ಪ್ರಧಾನಿ ಮೋದಿ ಅವರು ಬಂದರೂ ಖುಷಿ ಪಡುತ್ತೇವೆ ಎಂದರು.

    ದೇವರ ವಿಗ್ರಹ ಮೊದಲು: ವರ್ಷದಿಂದ ವರ್ಷಕ್ಕೆ ವೇಷಭೂಷಣ, ಸ್ತಬ್ಧಚಿತ್ರಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಮೆರವಣಿಗೆಯೂ ವಿಳಂಬವಾಗುತ್ತಿದೆ. ಇದರಿಂದ ಭಕ್ತರಿಗೆ ಗಣಪತಿ, ನವದುರ್ಗೆಯರು ಸಹಿತ ಶಾರದೆಯ ವೈಭವದ ಶೋಭಾಯಾತ್ರೆ ನೋಡಲು ಸಾಧ್ಯವಾಗುತ್ತಿಲ್ಲ. ಇದಕ್ಕಾಗಿ ಈ ಹಿಂದೆ ನಿರ್ಧರಿಸಿದಂತೆ ಹಸಿರು ಕೊಡೆಗಳು, ಜಾನಪದ ಕಲಾ ತಂಡಗಳ ಬಳಿಕ ನಾರಾಯಣಗುರು, ಗಣಪತಿ, ನವದುರ್ಗೆಯರು ಸಹಿತ ಶಾರದೆಯ ಟ್ಯಾಬ್ಲೋಗಳು ತೆರಳಲಿವೆ. ಇದಾದ ಬಳಿಕ ವೇಷಭೂಷಣಗಳ ಸ್ತಬ್ಧಚಿತ್ರಗಳು ಸಾಗಿ ಬರಲಿವೆ. ಕ್ತರ ಅಭಿಪ್ರಾಯದಂತೆ ಕ್ಷೇತ್ರದ ಆಡಳಿತ ಮಂಡಳಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ತಿಳಿಸಿದ್ದಾರೆ.


    ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ನಡೆಯುವ ‘ಮಂಗಳೂರು ದಸರಾ ಮಹೋತ್ಸವ’ದ ಶಾರದೆಗೆ ಈ ಬಾರಿ 12ಲಕ್ಷ ರೂ. ವೆಚ್ಚದಲ್ಲಿ 12 ಕೆ.ಜಿ. ತೂಕದ ರಜತ ಪೀಠ ನಿರ್ಮಿಸಲಾಗುತ್ತಿದೆ. ಕುದ್ರೋಳಿ ಶ್ರೀ ಗೋಕರ್ಣನಾಥ ಸೇವಾದಳ ಹಾಗೂ ಭಕ್ತಾದಿ ಗಳಿಂದ ಈ ರಜತಪೀಠ ನಿರ್ಮಿಸಲಾಗುತ್ತಿದ್ದು, ಪುತ್ತೂರಿನಲ್ಲಿ ನಿರ್ಮಿಸಲಾಗುತ್ತಿದೆ. 24ರಂದು ರಜತ ಪೀಠ ಸಮರ್ಪಣಾ ಕಾರ್ಯ ನಡೆಯಲಿದೆ. ಭಕ್ತರೊಬ್ಬರು ಬೆಳ್ಳಿಯ ವೀಣೆಯನ್ನು ಕೊಡುಗೆಯಾಗಿ ನೀಡಲಿದ್ದಾರೆ ಎಂದವರು ತಿಳಿಸಿದರು.


    ಪೂರ್ವಭಾವಿ ಸಭೆಯಲ್ಲಿ ಮೇಯರ್ ಜಯಾನಂದ ಅಂಚನ್, ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್. ಸಾಯಿರಾಮ್, ಉಪಾಧ್ಯಕ್ಷೆ ಊರ್ಮಿಳಾ ರಮೇಶ್, ಕಾರ್ಯದರ್ಶಿ ಮಾಧವ ಸುವರ್ಣ, ಟ್ರಸ್ಟಿಗಳಾದ ರವಿಶಂಕರ್ ಮಿಜಾರ್, ಕೆ.ಮಹೇಶ್ಚಂದ್ರ, ಎಂ.ಶೇಖರ್ ಪೂಜಾರಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಉಪಾಧ್ಯಕ್ಷ ಬಿ.ಜಿ.ಸುವರ್ಣ, ಸದಸ್ಯರಾದ ಹರಿಕೃಷ್ಣ ಬಂಟ್ವಾಳ, ರಮಾನಾಥ್ ಕಾರಂದೂರು, ಶೈಲೇಂದ್ರ ವೈ.ಸುವರ್ಣ, ಎಚ್.ಎಸ್. ಜಯರಾಜ್, ಕೃತಿನ್ ಡಿ.ಅಮೀನ್, ಚಂದನ್‌ದಾಸ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts