More

    ಸಮಾಜಸೇವೆಗೆ ಸೌಂದರ್ಯದ ಸ್ಪರ್ಶ; ಶಿಕ್ಷಣ ಕ್ಷೇತ್ರದಲ್ಲಿ ಹೊಸ ಛಾಪು ಮೂಡಿಸಿದ ಭರತ್ ರಮೇಶ್​ ಸೌಂದರ್ಯ

    ರಾಷ್ಟ್ರೀಯತೆ ವಿಚಾರಧಾರೆಗಳನ್ನು ಅಳವಡಿಸಿಕೊಂಡು ಆ ಮೂಲಕ ಸಮಾಜ ಬಾಂಧವರನ್ನು ಜಾಗೃತಿಗೊಳಿಸಲು ‘ವಿದ್ಯಾಮಾನ್ಯ ಹಾಗೂ ಸೌಂದರ್ಯ ಅಂಬಿಕಾ ಶಿಕ್ಷಣ ಸಂಸ್ಥೆ’ ಮುನ್ನಡೆಸುತ್ತಿದ್ದಾರೆ ಭರತ್ ರಮೇಶ್ ಸೌಂದರ್ಯ. ಇವರ ಶಾಲಾ-ಕಾಲೇಜುಗಳಲ್ಲಿ ಮಕ್ಕಳನ್ನು ಸೇರಿಸಲು ಪಾಲಕರು ಪೈಪೋಟಿ ನಡೆಸುವುದುಂಟು. ಆರೆಸ್ಸೆಸ್ ಹಿನ್ನೆಲೆಯ ಭರತ್ ರಮೇಶ್ ಸೌಂದರ್ಯ, ಗೋಶಾಲೆ ನಿರ್ವಿುಸಿ ದೇಸಿ ತಳಿಯ ಗೋವು ಸಲಹುವಲ್ಲಿ ನಿರತರಾಗಿದ್ದಾರೆ. ಆಂದ್ರಹಳ್ಳಿ ಬಳಿ ದೇವಸ್ಥಾನ ನಿರ್ವಿುಸಿ ಧಾರ್ವಿುಕ ಕ್ಷೇತ್ರದಲ್ಲಿ ಸಾತ್ವಿಕ ಚಟುವಟಿಕೆಗಳನ್ನು ಕೈಗೊಂಡು ಬಡವರಿಗೂ ನೆರವಾಗುತ್ತಿದ್ದಾರೆ. ಕೋವಿಡ್ ಸಾಂಕ್ರಾಮಿಕದ ವೇಳೆ ದಾಸರಹಳ್ಳಿ ವಲಯದಲ್ಲಿ ಇವರು ಕೈಗೊಂಡ ಸೇವೆ ಜನಮನದಲ್ಲಿ ಅಚ್ಚಳಿಯದೆ ನಿಂತಿದೆ. ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಾಗಿ ಎಲ್ಲ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತ ಬಂದಿದ್ದಾರೆ. ಇವರ ವಿಶಿಷ್ಟ ಸೇವೆಯನ್ನು ಪರಿಗಣಿಸಿರುವ ‘ವಿಜಯವಾಣಿ’ ಪತ್ರಿಕೆ ‘ಬೆಂಗಳೂರು ರತ್ನ’ ಪ್ರಶಸ್ತಿ ನೀಡಿ ಗೌರವಿಸಿದೆ.

    ಬೆಂಗಳೂರು: ‘ಕೆರೆಯ ನೀರನ್ನು ಕೆರೆಗೆ ಚೆಲ್ಲು’ ನಾಣ್ನುಡಿಯಂತೆ ಸಮಾಜದಿಂದ ಗಳಿಸಿದ್ದನ್ನು ಸಮಾಜಮುಖಿ ಕಾರ್ಯಗಳಿಗೆ ಬಳಸುತ್ತ, ತನ್ನ ಸುತ್ತಲಿನ ಪರಿಸರ ಹಾಗೂ ಸಮುದಾಯದ ಏಳಿಗೆಗಾಗಿ ಶ್ರಮಿಸುತ್ತಿರುವ ಅಪರೂಪದ ಸಾಧಕ- ಭರತ್ ರಮೇಶ್ ಸೌಂದರ್ಯ.

    ಬಾಲ್ಯದಿಂದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್​ಎಸ್​ಎಸ್) ಒಡನಾಟಕ್ಕೆ ಬಂದ ಇವರು, ಅಲ್ಲಿ ಪಡೆದ ಸಂಸ್ಕಾರ, ಸಂಸ್ಕೃತಿ, ಸದ್ವಿಚಾರ, ದೇಶಭಕ್ತಿಯ ಚಿಂತನೆಗಳನ್ನು ಅಳವಡಿಸಿಕೊಂಡು ಮೇಲ್ಮಟ್ಟಕ್ಕೆ ಬೆಳೆದವರು. ತಾನು ಬೆಳೆಯುವ ಜತೆಗೆ ತನ್ನ ಜತೆಯಲ್ಲಿರುವವರನ್ನೂ ಬೆಳೆಸುತ್ತಿದ್ದಾರೆ. ಪ್ರಾಮಾಣಿಕತೆ, ಪರಿಶ್ರಮ, ದೂರಾಲೋಚನೆ, ನಾಯಕತ್ವದ ಗುಣದಿಂದಾಗಿ ಯುವಜನರ ಐಕಾನ್ ಆಗಿ ಹೊರಹೊಮ್ಮಿದ್ದಾರೆ ಭರತ್ ರಮೇಶ್ ಸೌಂದರ್ಯ. ಯುವಪಡೆಯೊಂದಿಗೆ ಸಮಾಜದ ಓರೆ-ಕೋರೆಗಳನ್ನು ತಿದ್ದುವ ಹಾಗೂ ನೈಜ ಕಾಳಜಿಯೊಂದಿಗೆ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುತ್ತ ಬರುತ್ತಿದ್ದಾರೆ. ಎಬಿವಿಪಿ ಹಾಗೂ ಬಿಜೆಪಿಯಲ್ಲಿ ಹಲವು ವರ್ಷ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ. ಕೆಲ ವರ್ಷಗಳಿಂದೀಚೆಗೆ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಬದಲಾವಣೆ ತರುವ ಚಿಂತನೆಯೊಂದಿಗೆ ಆರಂಭಿಸಿರುವ ವಿದ್ಯಾಮಾನ್ಯ ಹಾಗೂ ಸೌಂದರ್ಯ ಅಂಬಿಕಾ ಶಿಕ್ಷಣ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಆಂದ್ರಹಳ್ಳಿ ಹಾಗೂ ಸೌಂದರ್ಯ ಅಂಬಿಕಾ ಶಿಕ್ಷಣ ಸಂಸ್ಥೆ ನೆಲಮಂಗಲದಲ್ಲಿ ಜನಮಾನಸದಲ್ಲಿ ಉಳಿಯುವಂತಹ ಪ್ರಗತಿಯನ್ನು ಕಂಡಿದೆ. ಈ ಶಿಕ್ಷಣ ಸಂಸ್ಥೆಯು ಆರಂಭಿಸಿರುವ ಶಾಲೆ- ಕಾಲೇಜಿನ ವಿದ್ಯಾರ್ಥಿಗಳಲ್ಲಿ ನೈತಿಕ ಶಿಕ್ಷಣ, ಶಿಸ್ತು, ಜ್ಞಾನ ಸಂಪಾದನೆ, ರಾಷ್ಟ್ರೀಯತೆ ಹಾಗೂ ಸೇವಾ ಮನೋಭಾವ ಮೂಡಿಸುವಲ್ಲಿ ಸಕ್ರಿಯವಾಗಿದೆ. ದೇಸಿ ಶಿಕ್ಷಣಕ್ಕೆ ಒತ್ತು ನೀಡಿರುವ ಕಾರಣದಿಂದ ಈ ಸಂಸ್ಥೆಯ ಶಾಲಾ-ಕಾಲೇಜು ಸೇರಲು ಬೇಡಿಕೆ ಹೆಚ್ಚುತ್ತಿದೆ. ಪ್ರಸ್ತುತ ಆಂದ್ರಹಳ್ಳಿಯಲ್ಲಿ 1ರಿಂದ 12ನೇ ತರಗತಿ ಆರಂಭಿಸಿದ್ದರೆ, ನೆಲಮಂಗಲ ಬಳಿಯ ಟಿ.ಬೇಗೂರಿನಲ್ಲಿ 1-10ನೇ ತರಗತಿ, ಪಿಯು ಹಾಗೂ ಪದವಿ ಕಾಲೇಜು ಮತ್ತು ಅಂಬಿಕಾ ನರ್ಸಿಂಗ್ ಕಾಲೇಜು ಸ್ಥಾಪನೆ ಮಾಡಲಾಗಿದೆ. ಈ ಶಿಕ್ಷಣ ಸಂಸ್ಥೆಗಳಿಂದ ಪ್ರತಿವರ್ಷ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಉನ್ನತ ಶಿಕ್ಷಣ ಪಡೆಯುವತ್ತ ದೃಷ್ಟಿ ಹರಿಸಿರುವುದು ಸಂಸ್ಥೆಯು ಗುಣಮಟ್ಟದ ಶಿಕ್ಷಣ ನೀಡುತ್ತಿರುವುದಕ್ಕೆ ಸಾಕ್ಷಿಯಾಗಿದೆ.

    ಪಠ್ಯೇತರ ಚಟುವಟಿಕೆಗೆ ಒತ್ತು: ವಿದ್ಯಾಮಾನ್ಯ ವಿದ್ಯಾಕೇಂದ್ರವು ಶಾಲೆ-ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೆ ವಿಶೇಷ ಒತ್ತು ನೀಡುತ್ತ ಬಂದಿದೆ. ರಾಷ್ಟ್ರೀಯ ಹಬ್ಬಗಳ ಜತೆಗೆ ಮಹಾಮಹಿಮರ ಜಯಂತಿ ಹಾಗೂ ಇನ್ನಿತರ ವಿಶೇಷ ಸಂದರ್ಭಗಳಲ್ಲಿ ಸಮಾರಂಭ ಏರ್ಪಡಿಸಿ ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರಹೊಮ್ಮುವಂತೆ ಮಾಡಲಾಗುತ್ತಿದೆ. 2016ರಲ್ಲಿ ಹಳ್ಳಿಜೀವನದ ಥೀಮ್ ಇಟ್ಟುಕೊಂಡು ಪ್ರದರ್ಶನ ನಡೆಸಿದ್ದು ಪಾಲಕರಿಂದ ಪ್ರಶಂಸೆಗೆ ಒಳಗಾಗಿತ್ತು. 2018ರಲ್ಲಿ ವಿಜಯನಗರ ಸಾಮ್ರಾಜ್ಯ ಕುರಿತು ಕಾರ್ಯಕ್ರಮ ನಡೆದಿತ್ತು. ಬಳಿಕ 2019ರಲ್ಲಿ ಬುದ್ಧನ ಜೀವನ ಚರಿತ್ರೆಯ ಮೂಲಕ ಬೌದ್ಧ ಚಿಂತನೆಗಳನ್ನು ಸಾರುವ ಪ್ರದರ್ಶನ ಪಾಲಕರ ವಲಯಕ್ಕೆ ಹೊಸ ಸಂದೇಶ ರವಾನಿಸಿತ್ತು. 2022ರಲ್ಲಿ ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ವೇಳೆ ನೂರಾರು ವಿದ್ಯಾರ್ಥಿಗಳು ಮಹಾಪುರುಷರ ವೇಷಭೂಷಣ ಧರಿಸಿ, ನೀಡಿದ ಪ್ರದರ್ಶನ ಸ್ವಾತಂತ್ರ್ಯಪೂರ್ವ ಭಾರತ ಸೃಷ್ಟಿಸಿದಂತಿತ್ತು!

    ಇವುಗಳ ಜತೆಗೆ ಡ್ರಗ್ಸ್​ಮುಕ್ತ ಭಾರತ, ಕಾರ್ಗಿಲ್ ವಿಜಯದಿವಸ, ಯೋಧರಿಗೆ ಸನ್ಮಾನ, ಒಲಿಂಪಿಕ್ಸ್ ಪದಕ ಗೆದ್ದಿದ್ದಕ್ಕೆ ವಿಜಯೋತ್ಸವ, ರಾಷ್ಟ್ರೀಯ ಹಬ್ಬಗಳನ್ನೂ ನಿಯಮಿತವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಇತ್ತೀಚಿಗೆ ಅಯೋಧ್ಯೆಯಲ್ಲಿ ನಡೆದ ರಾಮಮಂದಿರ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಇವರ ಶಾಲೆಯ ವಿದ್ಯಾರ್ಥಿ ವೃಂದವು 5 ಗಂಟೆಗಳ ಕಾಲ ‘ರಾಮಕಥಾಮೃತ’ ಎಂಬ ದೃಶ್ಯಕಾವ್ಯವನ್ನು ಪ್ರದರ್ಶಿಸಿತು. ಸುಮಾರು 700 ಮಕ್ಕಳು ನಡೆಸಿಕೊಟ್ಟ ಈ ಪ್ರದರ್ಶನವು ಪ್ರೇಕ್ಷಕರ ಮನಸೂರೆಗೊಳ್ಳುವಂತಿತ್ತು. ಇವರು ಕಲೆಗೆ ನೀಡಿರುವ ಪ್ರೋತ್ಸಾಹವನ್ನು ಗುರುತಿಸಿ ತುಳು ಸಾಹಿತ್ಯ ಅಕಾಡೆಮಿಯು ‘ತುಳು ಕಲಾ ಪೋಷಕ ಪ್ರಶಸ್ತಿ’ ನೀಡಿ ಗೌರವಿಸಿದೆ. ಹಾಗೂ ಇವರ ಸಮಾಜಸೇವೆಯನ್ನು ಗುರುತಿಸಿ ಬೆಂಗಳೂರಿನ ‘ಕುಲಾಳ ಸಂಘ’ ವತಿಯಿಂದ ಯುವ ಸಮಾಜ ಸೇವಕ ಪ್ರಶಸ್ತಿ ನೀಡಲಾಗಿದೆ.

    Bharath Ramesh Soundarys

    ಹುಂಡಿ ಹಣ ಬಡವರಿಗೆ ಹಂಚಿಕೆ: ಭರತ್ ರಮೇಶ್ ಅವರಿಗೆ ಸಾಯಿಬಾಬಾ ದೇಗುಲ ನಿರ್ವಿುಸಬೇಕೆಂಬ ಮಹದಾಸೆ ಇತ್ತು. ಹಲವು ವರ್ಷಗಳ ಪ್ರಯತ್ನದ ಬಳಿಕ ದೈವಜ್ಞರ ಸೂಚನೆ ಮೇರೆಗೆ ಆಂದ್ರಹಳ್ಳಿಯ ನವಿಲುನಗರದಲ್ಲಿ ಶ್ರೀ ಪ್ರಸನ್ನ ದುರ್ಗಾಪರಮೇಶ್ವರಿ ದೇವಾಲಯ ನಿರ್ವಿುಸಿದರು. ಇಲ್ಲಿಯೇ ನಾಗದೇವತೆ, ಸಾಯಿಬಾಬಾ ಗುಡಿಯನ್ನು ಸುಂದರವಾಗಿ ನಿರ್ವಿುಸಲಾಗಿದೆ. ಇದು ಈ ಭಾಗದವರ ಆಕರ್ಷಣೀಯ ಧಾರ್ವಿುಕ ಕೇಂದ್ರವಾಗಿ ಮಾರ್ಪಟ್ಟಿದೆ. ವರ್ಷಪೂರ್ತಿ ಒಂದಿಲ್ಲೊಂದು ಕಾರ್ಯಕ್ರಮಗಳು ನಡೆಯುತ್ತವೆ. ವಿಶೇಷವೆಂದರೆ, ಇಲ್ಲಿನ ದೇಗುಲದ ಹುಂಡಿಯ ಹಣವನ್ನು ಬಡವರಿಗೆ ಹಂಚಿಕೆ ಮಾಡಿ ಅವರ ಬದುಕಿಗೆ ಆಸರೆಯಾಗುವಂತೆ ಮಾದರಿ ಕಾರ್ಯವನ್ನು ಕೈಗೊಂಡಿದ್ದಾರೆ.

    ಸೇವಾಬಸ್ತಿಯಲ್ಲಿ ಅಕ್ಷರಾಭ್ಯಾಸ: ಒಂದೆರಡು ವರ್ಷದ ಹಿಂದೆ ಮಂಜುನಾಥನಗರದಲ್ಲಿರುವ ಶಾಲೆಯೊಂದರ ನವೀಕರಣ ಕೈಗೊಳ್ಳಲಾಯಿತು. ಈ ಕಾರ್ಯ ಪೂರ್ಣವಾಗುತ್ತಿದ್ದಂತೆ ಅಲ್ಲಿನ ಸೇವಾಬಸ್ತಿಯಲ್ಲಿ (ಕೊಳೆಗೇರಿ) ಬಡ ಕುಟುಂಬದ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಅಲ್ಲಿನ ಜನರು ಹಬ್ಬದ ರೀತಿ ಆಚರಿಸಿ ಸಂಭ್ರಮಿಸಿದರು. ಮಕ್ಕಳ ವಿದ್ಯಾರ್ಜನೆಗೆ ಬಡ ಕುಟುಂಬಗಳ ಪಾಲಕರು ಹಾತೊರೆಯುತ್ತಿದ್ದಾರೆ ಎಂಬುದು ಖಾತ್ರಿಯಾಗಿ ಅಂತಹ ಕೆಲ ಮಕ್ಕಳಿಗೆ ತಮ್ಮ ಶಾಲೆಯಲ್ಲಿ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ಜತೆಗೆ ಇನ್ನೂ ಹಲವು ವಿದ್ಯಾರ್ಥಿಗಳಿಗೆ ಕಡಿಮೆ ಮೊತ್ತದ ಶುಲ್ಕದಲ್ಲಿ ಶಿಕ್ಷಣ ನೀಡಲಾಗುತ್ತಿದೆ ಎಂದು ಭರತ್ ರಮೇಶ್ ಪ್ರತಿಕ್ರಿಯಿಸಿದ್ದಾರೆ.

    ಸ್ವದೇಶಿ ಮೇಳ ಆಯೋಜನೆ: ಸ್ವದೇಶಿ ಜಾಗರಣ ಮಂಚ್ ವತಿಯಿಂದ ದಾಸರಹಳ್ಳಿಯಲ್ಲಿ ನಡೆದಂತಹ ಸ್ವದೇಶಿ ಮೇಳದ ಸಂಘಟಕನಾಗಿ ಕಾರ್ಯನಿರ್ವಹಿಸಿದ್ದರು. ಎರಡು ವರ್ಷದ ಹಿಂದೆ ಸ್ವದೇಶಿ ಜಾಗರಣ ಮಂಚ್ ವತಿಯಿಂದ 5 ದಿನಗಳ ಸ್ವದೇಶಿ ವಸ್ತುಗಳ ಪ್ರದರ್ಶನದಲ್ಲಿ ಮೇಳದ ಸಂಘಟಕ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದರು. ದೈನಂದಿನ ಬದುಕಿನಲ್ಲಿ ಬಳಸುವ ಎಲ್ಲ ಬಗೆಯ ವಸ್ತುಗಳನ್ನು ಸ್ವದೇಶಿ ಪರಿಕಲ್ಪನೆಯಡಿ ತಯಾರಿಸಿ ಪ್ರದರ್ಶಿಸಲಾಗಿತ್ತು. ಇವುಗಳನ್ನು ಕಂಡು ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದರು. ನಮ್ಮೂರಲ್ಲೇ ಇಂತಹ ವಸ್ತುಗಳು ಸಿಗುತ್ತಿವೆಯೇ ಎಂದು ಉದ್ಗಾರ ತೆಗೆದು ಖರೀದಿಸಿ, ಬೆಂಬಲಿಸಿದ್ದರು. ನಿತ್ಯವೂ ಸ್ವದೇಶಿ ವಸ್ತುಗಳನ್ನು ಬಳಸುವ ಕುರಿತು ಉಪನ್ಯಾಸ, ಜಾಗೃತಿ ಕಾರ್ಯಕ್ರಮಗಳು ನಡೆದು ಸಹಸ್ರಾರು ಮಂದಿ ಸ್ಥಳೀಯವಾಗಿ ಉತ್ಪಾದಿಸುವ ವಸ್ತುಗಳನ್ನು ಬಳಸುವ ಸಂಕಲ್ಪ ಕೈಗೊಂಡರು.

    ಕರೊನಾ ವಾರಿಯರ್ ಆಗಿ ಕಾರ್ಯ: ಕೋವಿಡ್ ಸಾಂಕ್ರಾಮಿಕದ ವೇಳೆ ಭರತ್ ರಮೇಶ್ ಹಾಗೂ ಅವರ ತಂಡ ದೊಡ್ಡ ಮಟ್ಟದಲ್ಲಿ ಸೇವಾ ಕಾರ್ಯವನ್ನು ಕೈಗೊಂಡಿತ್ತು. ಎರಡೂ ಅಲೆಗಳ ವೇಳೆ ಬಡವರು, ಶ್ರಮಿಕರು ಹಾಗೂ ಕಾರ್ವಿುಕ ವರ್ಗಕ್ಕೆ ಆಹಾರ ಪೊಟ್ಟಣಗಳನ್ನು ಪೂರೈಸಲಾಯಿತು. ಹಲವು ನೂರು ಮಂದಿಗೆ ತರಕಾರಿ ಹಾಗೂ ದಿನಸಿ ಕಿಟ್​ಗಳನ್ನು ನಿರಂತರವಾಗಿ ಹಂಚಿಕೆ ಮಾಡಲಾಯಿತು. ಲಸಿಕೆ, ಔಷಧ ಹಾಗೂ ಆಕ್ಸಿಜನ್ ಸಿಲಿಂಡರ್ ಒದಗಿಸಲು ಭರತ್ ರಮೇಶ್ ನೆರವಾದರು. 2ನೇ ಅಲೆ ವೇಳೆ ಕೆ.ಸಿ. ಜನರಲ್ ಆಸ್ಪತ್ರೆಯ ಸಿಬ್ಬಂದಿಗೆ ತಿಂಗಳ ಕಾಲ ಆಹಾರ ಪೂರೈಸುವಲ್ಲಿ ಮುತುವರ್ಜಿ ವಹಿಸಿದರು. ತಮ್ಮ ಶಾಲಾ ವಾಹನವನ್ನೇ ಆಂಬುಲೆನ್ಸ್ ಆಗಿ ಪರಿವರ್ತಿಸಿ ಕರೊನಾ ರೋಗಿಗಳಿಗೆ ಮೀಸಲಿಟ್ಟರು. ಯುವಕರ ತಂಡ ರಚಿಸಿ ವೃದ್ಧರ ಸಹಿತ ಅಶಕ್ತರ ಮನೆಬಾಗಿಲಿಗೆ ಔಷಧ ತಲುಪಿಸಿದರು. ಇದೇ ಸಂದರ್ಭದಲ್ಲಿ ಶಾಲೆಗೆ ಬಾರದ ಗ್ರಾಮೀಣ ವಿದ್ಯಾರ್ಥಿಗಳಿದ್ದ ಜಾಗಕ್ಕೆ ಶಿಕ್ಷಕರ ಜತೆ ತೆರಳಿ ಮನೆಪಾಠ ಮಾಡಿ ಪಾಲಕರಿಗೆ ಧೈರ್ಯ ತುಂಬಿದರು. ಸುಮಾರು ಒಂದೂವರೆ ವರ್ಷ ಕರೊನಾ ವಾರಿಯರ್ ಆಗಿ ಸಕ್ರಿಯವಾಗಿ ಕೆಲಸ ಮಾಡಿದ ಭರತ್ ರಮೇಶ್​ರನ್ನು ಸ್ಥಳೀಯರು ಹಾಗೂ ರಾಜಕೀಯ ಪಕ್ಷಗಳ ಪ್ರಮುಖ ಬೆನ್ನುತಟ್ಟಿ ಪ್ರಶಂಸಿದವು.

    Bharath Ramesh Soundarys

    ಪಕ್ಷ ನೀಡುವ ಜವಾಬ್ದಾರಿ ನಿರ್ವಹಿಸಲು ಬದ್ಧ: ದಾಸರಹಳ್ಳಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಭರತ್ ರಮೇಶ್ ಅವರು ತಮ್ಮ ಸಮಾಜಮುಖಿ ಕೆಲಸದಿಂದಾಗಿ ಜನಮನ ಗೆದ್ದಿದ್ದಾರೆ. ಬಿಜೆಪಿಯಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತ ಪಕ್ಷ ಸಂಘಟನೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಸಂಘಟನೆಗೆ ಹೆಚ್ಚು ಒತ್ತು ನೀಡುವ ಸಲುವಾಗಿ ಯುವಕರಿಗೆ ತರಬೇತಿ ಶಿಬಿರ, ಪುನರ್ ಮನನ ಕಾರ್ಯಕ್ರಮಗಳನ್ನೂ ಏರ್ಪಡಿಸಿ ಯುವ ಕಾರ್ಯಕರ್ತರಲ್ಲಿ ಹುರುಪು ತುಂಬಿದ್ದಾರೆ. ಪಕ್ಷ ನೀಡಿರುವ ಜಬಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದು, ಮುಂದೆಯೂ ಯಾವುದೇ ಹೊಣೆ ನೀಡಿದರೂ ಅದನ್ನು ನಿಭಾಯಿಸಬಲ್ಲೆ. ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಸೂಚಿಸಿದರೆ ಸಿದ್ಧನಿದ್ದೇನೆ. ಏನೇ ಆದರೂ ಸಮಾಜಸೇವೆಯನ್ನು ಮಾತ್ರ ಬಿಡಲಾರೆ ಎನ್ನುತ್ತಾರೆ ಈ ಸಂಘನಿಷ್ಠ.

    ಎಬಿವಿಪಿಯಲ್ಲಿ ಸಕ್ರಿಯ ಕಾರ್ಯ: ಭರತ್ ರಮೇಶ್ ಅವರು ಎಬಿವಿಪಿಯಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿ ಹಲವು ವರ್ಷ ಕೆಲಸ ಮಾಡಿ ಯಶಸ್ವಿ ಸಂಘಟಕ ಎಂದು ಹೆಸರು ಗಳಿಸಿದ್ದರು. ಬೆಂಗಳೂರು ಗ್ರಾಮಾಂತರ ಸಹ ಪ್ರಮುಖ್ ಆಗಿ ಗ್ರಾಮೀಣ ಭಾಗದಲ್ಲಿ ಸಂಘಟನೆಯನ್ನು ಸದೃಢಗೊಳಿಸಿದರು. ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು. ತಾರಸಿ ತೋಟ, ಸ್ವದೇಶಿ ವಸ್ತುಗಳ ಬಳಕೆ, ಸಮಾಜಮುಖಿ ಕಾರ್ಯಗಳಲ್ಲಿ ಪಾಲ್ಗೊಳ್ಳುವಿಕೆ ಬಗ್ಗೆ ಸಂವಾದ, ಚಿಂತನ-ಮಂಥನ ನಡೆಸಿದ್ದರು. ಅದೇ ಸಮಯದಲ್ಲಿ ತ್ರಿವರ್ಣ ಧ್ವಜ ಯಾತ್ರೆ, ಸಂಘಟನೆಯ ವಿವಿಧ ಜಾಗೃತಿ ಕಾರ್ಯಕ್ರಮಗಳು ಹಾಗೂ ಪ್ರತಿಭಟನೆಗಳಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳ ಸಮೂಹಕ್ಕೆ ಹತ್ತಿರವಾದರು.

    ಸಮಾಜಮುಖಿ ಕಾರ್ಯಗಳಿಗೆ ಆದ್ಯತೆ: ಭರತ್ ರಮೇಶ್ ಅವರು ಶಿಕ್ಷಣಕ್ಕೆ ನೀಡಿರುವಷ್ಟೇ ಸಾಮಾಜಿಕ ಕಾರ್ಯಕ್ಕೂ ಆದ್ಯತೆ ನೀಡಿದ್ದಾರೆ. ದಾಸರಹಳ್ಳಿ ವ್ಯಾಪ್ತಿಯಲ್ಲಿ ಉತ್ತಮ ಪರಿಸರ ಮೂಡಿಸಲು ಪ್ಲಾಸ್ಟಿಕ್​ವುುಕ್ತ ಕಾರ್ಯಕ್ರಮ ರೂಪಿಸಿ ಜನರಲ್ಲಿ ಅರಿವು ಮೂಡಿಸಿದ್ದಾರೆ. ಸಾವಿರಾರು ಸಂಖ್ಯೆಯ ಬಟ್ಟೆ ಹಾಗೂ ಪೇಪರ್ ಬ್ಯಾಗ್​ಗಳನ್ನು ಸ್ಥಳೀಯರಿಗೆ ವಿತರಿಸಿದ್ದಾರೆ. ದೀಪಾವಳಿ ವೇಳೆ ದೇಸಿತನ ಮೈಗೂಡಿಸಿಕೊಳ್ಳಲು ಗೋಮಯ ದೀಪಗಳನ್ನು ಹಂಚಿದ್ದಾರೆ. ಸಾವಯವ ಉತ್ಪನ್ನಗಳನ್ನು ಬಳಸುವಂತೆ ಜನರಲ್ಲಿ ಪ್ರೇರೇಪಿಸಲು ಆಗಾಗ್ಗೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಪರಿಸರಸ್ನೇಹಿ ಹಬ್ಬ ಹರಿದಿನ ಆಚರಿಸಲು ಕಾರಣರಾಗಿದ್ದಾರೆ. ನೀರಿನ ಸದ್ಬಳಕೆ ಹಾಗೂ ಸಂಸ್ಕರಿತ ಜಲ ಬಳಸುವ ಜತೆಗೆ ಮಿತವಾಗಿ ಬಳಸುವಂತೆ ಅರಿವು ಮೂಡಿಸಿದ್ದಾರೆ. ಈ ಎಲ್ಲ ಕಾರ್ಯಕ್ರಮಗಳನ್ನು ಕೈಗೊಳ್ಳಲು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರೇ ಪ್ರೇರಣೆಯಾಗಿದ್ದು, ದಾಸರಹಳ್ಳಿ ಶಾಸಕ ಎಸ್.ಮುನಿರಾಜು ಅವರ ಮಾರ್ಗದರ್ಶನದಲ್ಲಿ ನಡೆಸಿಕೊಂಡು ಬರಲಾಗುತ್ತಿದೆ ಎನ್ನುತ್ತಾರೆ ಭರತ್ ರಮೇಶ್.

    ಗೋಶಾಲೆಯಲ್ಲಿ ದೇಸಿ ತಳಿಗಳ ಸಾಕಣೆ: ಆಂದ್ರ್ರಹಳ್ಳಿ ಗ್ರಾಮೀಣ ಭಾಗದಲ್ಲಿ ಭರತ್ ರಮೇಶ್ ಅವರು ಗೋಶಾಲೆಯನ್ನು ನಡೆಸುತ್ತಿದ್ದಾರೆ. ಇದರಲ್ಲಿ ದೇಸಿ ತಳಿಗಳ ಗೋವುಗಳನ್ನು ಸಾಕಣೆ ಮಾಡುತ್ತಿದ್ದಾರೆ. ‘ಸೌಂದರ್ಯ ಸುರಭಿ’ ಹೆಸರಿನ ಈ ಸಂಸ್ಥೆಯಲ್ಲಿ ದೇಸಿ ತಳಿಯ ಗೋವುಗಳು, ಇತರ ಹಸುಗಳು ಹಾಗೂ ಅವುಗಳ ಉತ್ಪನ್ನಗಳಿಂದ ಆಗುವ ಉಪಯೋಗಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತಿದೆ. ಸಾವಯವ ಕೃಷಿ ಹಾಗೂ ಹೈನುಗಾರಿಕೆಗೆ ಆದ್ಯತೆ ನೀಡುವ ಹಿನ್ನೆಲೆಯಲ್ಲಿ ಇವರ ಈ ಪ್ರಯತ್ನ ಯಶ ನೀಡಿದೆ.

    ದೇಶ ಹಾಗೂ ಸಮಾಜವನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯಲು ಯುವಕರ ಪಾತ್ರ ದೊಡ್ಡದಿದೆ. ಇದನ್ನು ಆಲೋಚಿಸಿಯೇ ಯುವಜನರು ಒಳ್ಳೆಯ ಹಾದಿಯಲ್ಲಿ ಸಾಗುವಂತಾಗಲು ಅವರಿಗೆ ಅಗತ್ಯ ಮಾರ್ಗದರ್ಶನಕ್ಕೆ ಆದ್ಯತೆ ನೀಡಿದ್ದೇನೆ. ನಮ್ಮ ಶಾಲಾ-ಕಾಲೇಜಿನ ವಾರ್ಷಿಕೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳೆಲ್ಲವೂ ದೇಶಭಕ್ತಿ ಉದ್ದೀಪಿಸುವ ಚಟುವಟಿಕೆಗಳೇ ಆಗಿರುತ್ತವೆ. ಬಡವರು ಮತ್ತು ದುರ್ಬಲ ವರ್ಗದ ಜನರಿಗೆ ಸಹಾಯ ಮಾಡಲು ನಿರಂತರವಾಗಿ ಸಮಾಜಸೇವೆ ಮಾಡುತ್ತಿದ್ದೇನೆ. ನನ್ನ ಈ ಕಾರ್ಯವನ್ನು ಗುರುತಿಸಿ ವಿಜಯವಾಣಿ ದಿನಪತ್ರಿಕೆ ಬೆಂಗಳೂರು ರತ್ನ ಪ್ರಶಸ್ತಿ ನೀಡಿರುವುದು ನನ್ನ ಮೇಲೆ ಇನ್ನಷ್ಟು ಜವಾಬ್ದಾರಿಯನ್ನು ಹೊರಿಸಿದಂತಾಗಿದೆ. ಅದನ್ನು ನಾನು ಸಂತೋಷದಿಂದ ನಿಭಾಯಿಸುತ್ತೇನೆ.

    | ಭರತ್ ರಮೇಶ್ ಸೌಂದರ್ಯ

    ಕೋವಿಡ್ ಸಂದರ್ಭದಲ್ಲಿ ಭರತ್ ರಮೇಶ್ ಅವರು ಜನರಿಗೆ ದೊಡ್ಡ ಮಟ್ಟದಲ್ಲಿ ಸಹಾಯ ಮಾಡಿದ್ದಾರೆ. ಹಲವು ತಿಂಗಳು ಕಾಲ ಬೆಂಬಲಿಗರೊಂದಿಗೆ ದಾಸರಹಳ್ಳಿ ಕ್ಷೇತ್ರದ ವಿವಿಧೆಡೆ ಅವಿರತ ಶ್ರಮಿಸಿರುವುದು ಜನರ ಮನಸ್ಸಿನಲ್ಲಿ ಉಳಿದಿದೆ. ರೋಗಿಗಳು ಆಸ್ಪತ್ರೆಗೆ ಸೇರಲು ಪರದಾಡುತ್ತಿರುವಾಗ ತಮ್ಮ ಶಾಲೆಯ ವಾಹನವನ್ನೇ ಆಂಬುಲೆನ್ಸ್ ಆಗಿ ಪರಿವರ್ತಿಸಿ ಅನುಕೂಲ ಮಾಡಿಕೊಟ್ಟರು. ಶಿಕ್ಷಣ, ಸಾಂಸ್ಕೃತಿಕ, ಧಾರ್ವಿುಕ, ಕ್ರೀಡಾ ಕ್ಷೇತ್ರಕ್ಕೆ ಇವರ ಕೊಡುಗೆಯಿಂದ ಸ್ಥಳೀಯರಿಗೆ ಅನುಕೂಲ ಆಗಿದೆ.

    | ಸಾತಪ್ಪ ಮಂಜುನಾಥನಗರ

    ಭರತ್ ರಮೇಶ್ ಅವರು ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಸಮಾಜಕ್ಕೆ ಉತ್ತಮ ವಿದ್ಯಾವಂತರನ್ನು ರೂಪಿಸುವಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಇವರ ಶಾಲಾ- ಕಾಲೇಜು ಇತರ ಶೈಕ್ಷಣಿಕ ಸಂಸ್ಥೆಗಳಿಗೆ ಮಾದರಿಯಾಗಿದೆ. ದಾಸರಹಳ್ಳಿ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಜನಜಾಗೃತಿ ಮೂಡಿಸಿದ್ದಾರೆ. ಸಮಾಜಸೇವೆ ಮೂಲಕ ಬಡ ವರ್ಗವೂ ಸೇರಿ ಎಲ್ಲ ವರ್ಗಗಳ ಜನರಿಗೆ ಸಹಾಯ ಮಾಡುತ್ತಿರುವ ಇವರಿಗೆ ಬೆಂಗಳೂರು ರತ್ನ ಪ್ರಶಸ್ತಿ ಬಂದಿರುವುದು ನಮಗೆ ಹೆಚ್ಚು ಖುಷಿಯಾಗಿದೆ.

    | ಮಧು ಬಿಜೆಪಿ ಮುಖಂಡ, ಬಾಗಲಗುಂಟೆ

    ದಾಸರಹಳ್ಳಿ ಭಾಗದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಿ ಜಾಗೃತ ಸಮಾಜ ನಿರ್ವಿುಸುವಲ್ಲಿ ಭರತ್ ರಮೇಶ್ ಹೆಸರು ಮಾಡಿದ್ದಾರೆ. ಈ ಕ್ಷೇತ್ರದಲ್ಲಿರುವ ಮಕ್ಕಳು ಉತ್ತಮ ವಿದ್ಯಾವಂತರಾಗಬೇಕೆಂಬ ಧ್ಯೇಯವನ್ನು ಹೊಂದಿ, ಅದರಂತೆ ತಮ್ಮ ಶಾಲಾ-ಕಾಲೇಜಿನಲ್ಲಿ ಅತ್ಯುತ್ತಮ ಶಿಕ್ಷಣವನ್ನು ಕೊಡುತ್ತಿದ್ದಾರೆ. ಬಿಜೆಪಿ ಪಕ್ಷದಲ್ಲೂ ಸಕ್ರಿಯವಾಗಿರುವ ಇವರು, ಸದ್ದಿಲ್ಲದೆ ಸಮಾಜಸೇವೆಯನ್ನು ಮಾಡಿ ಸ್ಥಳೀಯರ ಜನಮನ ಗೆದ್ದಿದ್ದಾರೆ. ಯುವಜನರಿಗೆ ಸ್ಪೂರ್ತಿಯಾಗಿರುವ ಇವರಿಗೆ ಬೆಂಗಳೂರು ರತ್ನ ಪ್ರಶಸ್ತಿ ಸಂದಿರುವುದು ನ್ಯಾಯೋಚಿತವಾಗಿದೆ.

    | ಲಕ್ಕಹನುಮಯ್ಯ ದಾಸರಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts