More

    ನಿರ್ಭೀತ ಉರಗ ತಜ್ಞೆ ‘ನೀರ್ಝರಾ’

    ಬೆಳಗಾವಿ: ಅಡುಗೆ ಕೋಣೆಯಲ್ಲಿ ಜಿರಲೆ ಕಂಡರೆ ಸಾಕು ಭಯದಿಂದ ರಂಪಾಟ ಮಾಡುವ ಗೃಹಿಣಿಯರನ್ನು ಕಂಡಿರುತ್ತೀರಿ. ಆದರೆ, ಈ ಮಹಿಳೆ ಮಾತ್ರ ವಿಷಕಾರಿ ಹಾವುಗಳನ್ನು ಹಿಡಿದು ಸಂರಕ್ಷಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡು ರಾಜ್ಯದ ಏಕೈಕ ಉರಗ ತಜ್ಞೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

    ಉರಗ ಸಂರಕ್ಷಣೆಯಲ್ಲಿ ವಿಶ್ವದಾಖಲೆಯ ಹೊಸ್ತಿಲಲ್ಲಿ ನಿಂತಿರುವ ಉರಗ ತಜ್ಞೆ ನೀರ್ಝರಾ ಚಿಟ್ಟಿ, ಮೂಲತಃ ಕೊಲ್ಲಾಪುರ ಜಿಲ್ಲೆಯ ಚಂದಗಡ ತಾಲೂಕಿನ ಹಜಗೋಳಿ ನಿವಾಸಿ. ಬೆಳಗಾವಿ ತಾಲೂಕಿನ ಯಳ್ಳೂರು ಗ್ರಾಮದ ಆನಂದ ಚಿಟ್ಟಿ ಅವರನ್ನು ವರಿಸಿ ಯಳ್ಳೂರಿನಲ್ಲಿಯೇ ನೆಲೆಸಿದ್ದಾರೆ.

    ಹಾವು ಕಂಡರೆ ಮಾರುದ್ದ ಓಡುತ್ತಿದ್ದ ನೀರ್ಝರಾ, ಇದೀಗ ರಾಜ್ಯದ ಮೊದಲ ಉರಗ ತಜ್ಞೆಯನ್ನಾಗಿ ಖ್ಯಾತಿ ಗಳಿಸಿದ್ದಾರೆ. ಈ ಸಾಧನೆಗೆ ಕಾರಣರಾದದ್ದು ಮತ್ಯಾರೂ ಅಲ್ಲ, ಅವರ ಪತಿ ಆನಂದ ಚಿಟ್ಟಿ. ಪತಿ ಆನಂದ ಅವರು 21ನೇ ವಯಸ್ಸಿನಿಂದಲೇ ಹಾವು ರಕ್ಷಣೆಯಲ್ಲಿ ತೊಡಗಿದ್ದು, ಕಳೆದ 18 ವರ್ಷಗಳಲ್ಲಿ ವಿಷ ಸರ್ಪಗಳೂ ಸೇರಿದಂತೆ ಒಟ್ಟು 15 ಸಾವಿರಕ್ಕೂ ಅಧಿಕ ಹಾವುಗಳನ್ನು ಸಂರಕ್ಷಿಸಿದ್ದಾರೆ.

    ಎಲ್ಲರಂತೆ ಹಾವು ಕಂಡರೆ ಓಡುತ್ತಿದ್ದ ನೀರ್ಝರಾಗೆ ಪತಿ ಆನಂದ ಸತತ 5 ವರ್ಷಗಳ ಕಾಲ ತರಬೇತಿ ನೀಡಿ ಉರಗ ತಜ್ಞೆಯನ್ನಾಗಿಸಿದ್ದಾರೆ. ನೀರ್ಝರಾ ಚಿಟ್ಟಿ ಈವರೆಗೆ 1,500ಕ್ಕೂ ಹೆಚ್ಚು ಹಾವುಗಳ ಹಿಡಿದಿದ್ದು, ಸಹ್ಯಾದ್ರಿ ಪರ್ವತ ಶ್ರೇಣಿಗೆ ಹೊಂದಿಕೊಂಡಿರುವ ಬೆಳಗಾವಿ ಜಿಲ್ಲೆಯಲ್ಲಿ ಸುಮಾರು 35 ವಿಧದ ಹಾವುಗಳನ್ನು ಗುರುತಿಸಿದ್ದಾರೆ.

    ಹಾವು ರಕ್ಷಣೆಗೆ ಲೈಸನ್ಸ್: ಕರ್ನಾಟಕ ರಾಜ್ಯ ವನ್ಯಜೀವಿ ರಕ್ಷಣಾ ಪ್ರಾಧಿಕಾರ ಆನಂದ ಚಿಟ್ಟಿ, ಪತ್ನಿ ನೀರ್ಝರಾ ಚಿಟ್ಟಿಗೆ ಸಾರ್ವಜನಿಕ ಸ್ಥಳಗಳಲ್ಲಿ ಅಪಾಯಕ್ಕೆ ಸಿಲುಕಿರುವ ಹಾವು ರಕ್ಷಣೆಗೆ ಲೈಸೆನ್ಸ್ ಕೂಡ ನೀಡಿದೆ. ಆನಂದ ಚಿಟ್ಟಿ, ಪತ್ನಿ ನೀರ್ಝರಾ ಚಿಟ್ಟಿ ಹಾವು ಕಾಣಿಸಿಕೊಂಡಿದೆ ಎಂದು ಫೋನ್ ಬಂದರೆ ಸಾಕು, ಅದು ಎಲ್ಲಿಯೇ ಇರಲಿ, ಹಗಲು ರಾತ್ರಿಯೆನ್ನದೆ ಬೈಕ್ ಏರಿ ಹಾವು ಹಿಡಿಯೋಕೆ ಹೋಗುತ್ತಾರೆ. ಪತಿ ಜತೆಗಿರದಿದ್ದರೂ ಭಯವಿಲ್ಲದೆ ಹಾವುಗಳನ್ನು ಹಿಡಿಯುತ್ತಾರೆ. ಹಿಡಿದ ಹಾವುಗಳನ್ನು ಖಾನಾಪುರ ಸಮೀಪದ ಅರಣ್ಯ ಪ್ರದೇಶಕ್ಕೆ ಬಿಡುವುದು ಇವರ ನಿತ್ಯದ ಕಾಯಕವಾಗಿದೆ. ದಂಪತಿಗಳಿಬ್ಬರು ಈ ವರೆಗೆ ಹಾವುಗಳ ಬಗ್ಗೆ ಶಾಲೆ- ಕಾಲೇಜುಗಳಲ್ಲಿ 700ಕ್ಕೂ ಹೆಚ್ಚು ಉಪನ್ಯಾಸ ನೀಡಿದ್ದಾರೆ.

    ಬೆಳಗಾವಿಯ ಸುತ್ತಮುತ್ತ ಹಲವು ಜಾತಿಯ ಸಾವಿರಾರು ಹಾವು ಕಾಣಿಸಿಕೊಳ್ಳುತ್ತವೆ. ನಗರ ಸೇರಿದಂತೆ ಸುತ್ತಮುತ್ತ ಗ್ರಾಮಗಳಲ್ಲಿ ಎಲ್ಲಿಯೇ ಹಾವು ಕಂಡರೂ ತಕ್ಷಣ ತೆರಳಿ ಹಾವು ರಕ್ಷಣೆ ಮಾಡಿ, ಅರಣ್ಯ ಪ್ರದೇಶದಲ್ಲಿ ಬಿಡುತ್ತೇವೆ. ಈ ವರೆಗೆ 1,500ಕ್ಕೂ ಹೆಚ್ಚು ಹಾವುಗಳನ್ನು ಹಿಡಿದಿದ್ದೇನೆ. ನನ್ನ ಈ ಸಾಧನೆಗೆ ಪತಿ ಆನಂದ ಸ್ಫೂರ್ತಿ. ಹಾವು ಸಂರಕ್ಷಣೆಯಲ್ಲಿ ವಿಶ್ವದಾಖಲೆ ಮಾಡುವ ಕನಸಿದೆ.
    | ನೀರ್ಝರಾ ಚಿಟ್ಟಿ, ಉರಗ ತಜ್ಞೆ

    | ರವಿ ಗೋಸಾವಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts