More

    ಸುರಕ್ಷಿತ ವಲಯದಲ್ಲಿ ಉಡುಪಿ ಜಿಲ್ಲೆ-ಜಿಲ್ಲಾಧಿಕಾರಿ ಜಗದೀಶ್ ವಿಶ್ವಾಸ

    ಉಡುಪಿ: ಉಡುಪಿ ಜಿಲ್ಲೆ ಸದ್ಯ ಕರೊನಾ ಆತಂಕದಿಂದ ಮುಕ್ತವಾಗಿದೆ. ಕಾರಣ, ಜಿಲ್ಲೆಯಲ್ಲಿ ಕಂಡುಬಂದ 3 ಕರೊನಾ ಪಾಸಿಟಿವ್ ಪ್ರಕರಣಗಳ ರೋಗಿಗಳು ಗುಣಮುಖರಾಗಿ, ಸದ್ಯದಲ್ಲೇ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ. ಯಾವುದೇ ಹೊಸ ಪ್ರಕರಣಗಳಿಲ್ಲ. ಇದು ಜಿಲ್ಲೆಯ ಮಟ್ಟಿಗೆ ಸಿಹಿ ಸುದ್ದಿಯೇ. ಜಿಲ್ಲಾಡಳಿತ ಕಟ್ಟುನಿಟ್ಟಿನಿಂದ ಲಾಕ್‌ಡೌನ್ ಜಾರಿ, ಕೇಂದ್ರ-ರಾಜ್ಯ ಸರ್ಕಾಗಳ ನಿರ್ದೇಶನಗಳ ಪಾಲನೆ ಜಿಲ್ಲೆ ಸೇಫ್ ರೆನ್‌ಗೆ ಕೊಂಡೊಯ್ಯಲು ನೆರವಾಗಿದೆ. ಈ ವಿಚಾರದಲ್ಲಿ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ‘ವಿಜಯವಾಣಿ’ ಜತೆ ಮಾತನಾಡಿದ್ದಾರೆ.

    ಸೋಂಕಿತರ ಸಂಪರ್ಕದಲ್ಲಿದ್ದವರ ವರದಿ ಏನಾಗಿದೆ?
    ಕರೊನಾ ಸೋಂಕಿತ ಮೂವರು ಗುಣಮುಖರಾಗಿದ್ದಾರೆ. ಸದ್ಯದಲ್ಲೇ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ. ಸೋಂಕಿತರ ಸಂಪರ್ಕದಲ್ಲಿದ್ದ, ಈಗಾಗಲೇ ಸರ್ಕಾರಿ ಕ್ವಾರಂಟೈನ್‌ಗೆ ಒಳಪಟ್ಟಿದ್ದ ಎಲ್ಲರ ವರದಿ ನೆಗೆಟಿವ್ ಬಂದಿದೆ. ಸದ್ಯಕ್ಕೆ ಜಿಲ್ಲೆಯೊಳಗೆ ಕೋವಿಡ್ ಹೊಸ ಪ್ರಕರಣಗಳು ಪತ್ತೆಯಾಗುವ ಸಾಧ್ಯತೆ ತುಂಬ ಕಡಿಮೆ. ಹಾಗಾಗಿ ಜಿಲ್ಲೆಯಲ್ಲಿ ಸೋಂಕು ಹರಡಬಹುದಾದ ಆತಂಕ ದೂರವಾಗಿದೆ.

    ಕರೊನಾ ಆತಂಕದಿಂದ ದೂರವಾಗುತ್ತಿದೆ. ಇದಕ್ಕೆ ಜಿಲ್ಲಾಡಳಿತ ತೆಗೆದುಕೊಂಡ ಮಹತ್ವದ ಕ್ರಮಗಳೇನು?
    ಕೇಂದ್ರ, ರಾಜ್ಯ ಸರ್ಕಾರ ಗೈಡ್‌ಲೈನ್ಸ್‌ಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿದ್ದು. ಕ್ಲಸ್ಟರ್ ಮ್ಯಾನೇಜ್‌ಮೆಂಟ್ ನಿಯಮ ರೂಪಿಸಿ ಸೋಂಕಿತರು ಇರುವ ಪ್ರದೇಶವನ್ನು 3 ಕಿ.ಮೀ ಸರ್ವೆಲೆನ್ಸ್ ಮಾಡಿ ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಹಂತದಲ್ಲಿ ಸಂಪರ್ಕ ಹೊಂದಿದವರನ್ನು ಪತ್ತೆ ಮಾಡಿ ಅವರನ್ನು ಹೋಂ ಕ್ವಾರಂಟೈನ್ ಮಾಡದೆ, ಹಾಸ್ಟೆಲ್ ಮತ್ತು ಎಸ್‌ಡಿಎಂ ಆಸ್ಪತ್ರೆ ಕ್ವಾರಂಟೈನ್‌ನಲ್ಲಿ ಇರಿಸಿದ್ದು.

    ಜಿಲ್ಲಾಡಳಿತ ಎಲ್ಲ ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸಿದ್ದು ಹೇಗೆ?
    ಜಿಲ್ಲಾಡಳಿತ ಕರೊನಾ ವಿರುದ್ಧ ಹೋರಾಡಲು ವಿವಿಧ ಇಲಾಖೆ 15 ಸಮಿತಿಗಳನ್ನು ರಚಿಸಿ ಕೆಲಸ ಮಾಡಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸಿಬ್ಬಂದಿ ಸಮನ್ವಯತೆ ಸಾಧಿಸಿ ಕಾರ್ಯನಿರ್ವಹಿಸಿದ್ದಾರೆ. ಆರೋಗ್ಯ, ಪೊಲೀಸ್ ಪೂರಕವಾಗಿ ತೊಡಗಿಸಿಕೊಂಡ ಇನ್ನಿತರೆ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸಾಕಷ್ಟು ಶ್ರಮವಹಿಸಿ ಕೆಲಸ ಮಾಡಿದ್ದಾರೆ.

    ಉಡುಪಿ ಜಿಲ್ಲಾಡಳಿತ ಕ್ರಮಗಳ ಬಗ್ಗೆ ಪ್ರಶಂಸೆಗಳು ಕೇಳಿಬರುತ್ತಿದೆ..
    ಎಲ್ಲ ರೀತಿಯ ಕ್ರಮಗಳನ್ನು ಜಿಲ್ಲೆಯ ಐವರು ಶಾಸಕರೊಂದಿಗೆ ಚರ್ಚಿಸಿ ತೆಗೆದುಕೊಳ್ಳಲಾಯಿತು. ನಾನು ಒಬ್ಬನೇ ಕಾರ್ಯ ನಿರ್ವಹಿಸಿಲ್ಲ. ಶಾಸಕರು, ಸಂಸದರ ಸಲಹೆ, ಸೂಚನೆಗಳನ್ನು ಪಾಲಿಸಲಾಯಿತು. ಇಲ್ಲಿವರೆಗೂ ಯಾರು ಸಹ ಲಾಕ್‌ಡೌನ್‌ಗೆ ಸಂಬಂಧಿಸಿ ಅನಗತ್ಯ ಹಸ್ತಕ್ಷೇಪ ಮಾಡಿಲ್ಲ, ತುಂಬ ಒಳ್ಳೆಯ ರೀತಿಯಲ್ಲಿ ಸಹಕಾರ ನೀಡಿದ್ದಾರೆ. ಉಸ್ತುವಾರಿ ಸಚಿವರು ರಾಜ್ಯಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಜಿಲ್ಲೆಗೆ ಬರಲಾಗಲಿಲ್ಲ. ಪ್ರತಿದಿನ ವರದಿ ಪಡೆದು, ನಿರ್ದೇಶನಗಳನ್ನು ನೀಡುತ್ತಿದ್ದಾರೆ. ಎಲ್ಲರೂ ತಂಡವಾಗಿ ಕಾರ್ಯನಿರ್ವಹಿಸಿದ್ದೇವೆ.

    ಜನರ ಸಹಕಾರ ಹೇಗಿತ್ತು ?
    ಬುದ್ಧಿವಂತರ ಜಿಲ್ಲೆ ಎಂಬುದನ್ನು ಜನರು ಸಾಬೀತು ಮಾಡಿದ್ದಾರೆ. ಆರಂಭದಲ್ಲಿ ಎರಡು ದಿನ ಕಟ್ಟುನಿಟ್ಟಿನ ಕ್ರಮ ಅನಿವಾರ್ಯವಾಗಿತ್ತು. ಜಿಲ್ಲೆಯ ಜನ ಲಾಕ್‌ಡೌನ್‌ಗೆ ಸಂಪೂರ್ಣ ಸಹಕಾರ ಕೊಡುತ್ತಿದ್ದಾರೆ. ಮುಂದೆಯೂ ಇದೇ ರೀತಿ ಜಿಲ್ಲಾಡಳಿತ ಕ್ರಮ ವಹಿಸಲಿದೆ. ಜನರು ಸ್ಪಂದಿಸಬೇಕು.

    ಜಿಲ್ಲೆಯಲ್ಲಿ ಮುಂದಿನ ಕ್ರಮ ?
    ಲಾಕ್‌ಡೌನ್ ಪ್ರಕ್ರಿಯೆ ಎಂದಿನಂತೆ ಇರಲಿದೆ. ಜಿಲ್ಲೆಯ ಗಡಿಗಳನ್ನು ಮಾತ್ರ ಸೀಲ್ ಮಾಡಲಾಗಿದೆ. ಈ ಹಿಂದೆ ಕೆಲವು ಪಾಸ್, ಶಿಫಾರಸು ಪತ್ರ ತೋರಿಸಿ ಬೇರೆ ಬೇರೆ ಜಿಲ್ಲೆಗಳಿಂದ ಉಡುಪಿಗೆ ಬರುವ ಜನರ ಸಂಖ್ಯೆ ಹೆಚ್ಚಿತ್ತು. ಇದೀಗ ಜಿಲ್ಲೆಯ ಹಿತದೃಷ್ಟಿಯಿಂದ ಎಲ್ಲ ಶಾಸಕರೊಂದಿಗೆ ಚರ್ಚಿಸಿ ಗಡಿಯನ್ನು ಸೀಲ್ ಮಾಡಲಾಗಿದೆ. ತುರ್ತು ವೈದ್ಯಕೀಯ ಮತ್ತು ಗೂಡ್ಸ್ ವಾಹನಗಳಿಗೆ ಮಾತ್ರ ಪ್ರವೇಶ. ವೈದ್ಯಕೀಯ ಪರೀಕ್ಷೆ ನಡೆಸಿಯೇ ಇವರನ್ನು ಒಳಗೆ ಬಿಡಲಾಗುವುದು.

    ಪ್ರಸ್ತುತ ಉಡುಪಿ ಜಿಲ್ಲೆಗೆ ಹೊರಗಡೆಯಿಂದ ಜನರು ಬರುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ, ಗಡಿಗಳನ್ನು ಸೀಲ್ ಮಾಡಲಾಗಿದೆ. ಯಾರನ್ನೂ ಜಿಲ್ಲೆಯೊಳಗೆ ಪ್ರವೇಶಿಸಲು ಬಿಡುವುದಿಲ್ಲ. ಜಿಲ್ಲೆಯಿಂದ ಹೊರಗೆ ಹೋಗುವುದನ್ನು ತಡೆ ಹಿಡಿಯಲಾಗುವುದು. ಅಕ್ಕಪಕ್ಕದ ಜಿಲ್ಲೆಯವರು ಮತ್ತು ಬೇರೆ ಜಿಲ್ಲೆಗಳಿಂದ ಉಡುಪಿಗೆ ಬರಬೇಡಿ. ಬೇರೆ ರಾಜ್ಯಗಳಿಂದಲೂ ಜನ ಆಗಮಿಸುತ್ತಿರುವ ಮಾಹಿತಿ ಇದ್ದು, ಯಾರೂ ಸದ್ಯಕ್ಕೆ ಜಿಲ್ಲೆಗೆ ಬರಕೂಡದು. ಎಲ್ಲೆಲ್ಲಿದ್ದೀರೋ ಅದೇ ಜಾಗದಲ್ಲಿ ಸುರಕ್ಷಿತವಾಗಿರಿ
    -ಜಿ. ಜಗದೀಶ್, ಜಿಲ್ಲಾಧಿಕಾರಿ , ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts