More

    ಆಂತರಿಕ ದೂರು ಸಮಿತಿ ನಿರ್ಲಕ್ಷೃ, ಲೈಂಗಿಕ ಕಿರುಕುಳ ತಡೆ ಕ್ರಮದ ಕಡೆಗೆ ನಿರುತ್ಸಾಹ

    – ವೇಣುವಿನೋದ್ ಕೆ.ಎಸ್.ಮಂಗಳೂರು

    ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ(ತಡೆಗಟ್ಟುವಿಕೆ, ನಿಷೇಧಿಸುವಿಕೆ, ನಿವಾರಿಸುವಿಕೆ) ಅಧಿನಿಯಮ 2013ರ ಅನ್ವಯ ಸರ್ಕಾರಿ, ಖಾಸಗಿ ಸೇರಿದಂತೆ 10ಕ್ಕಿಂತ ಹೆಚ್ಚಿನ ಸಿಬ್ಬಂದಿ ಇರುವಲ್ಲಿ ಆಂತರಿಕ ದೂರು ಸಮಿತಿ ರಚನೆ ಆಗಲೇಬೇಕು. ಸುಪ್ರೀಂಕೋರ್ಟ್‌ನ ವಿಶಾಖಾ ಮಾರ್ಗಸೂಚಿಯನ್ವಯ ಇದು ಕಡ್ಡಾಯ. ಆದರೆ, ದ.ಕ.ಜಿಲ್ಲೆಯ ಸರ್ಕಾರಿ ಕಚೇರಿಗಳೂ ಸೇರಿದಂತೆ ಅನೇಕ ಸಂಸ್ಥೆಗಳು ಇಷ್ಟು ವರ್ಷವಾದರೂ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವ ಮಾಹಿತಿ ಬೆಳಕಿಗೆ ಬಂದಿದೆ.

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇದನ್ನು ನಿರ್ವಹಣೆ ಮಾಡಬೇಕು. ಕಾರ್ಮಿಕ ಇಲಾಖೆ ಇದಕ್ಕೆ ಸಹಕಾರ ಕೊಡಬೇಕು. ಉಳಿದಂತೆ ಎಲ್ಲ ಸರ್ಕಾರಿ, ಖಾಸಗಿ, ನಿಗಮ ಮಂಡಳಿ, ಸಾರ್ವಜನಿಕ ಉದ್ದಿಮೆಗಳು ಇದಕ್ಕೆ ಪೂರಕ ಸಮಿತಿಗಳನ್ನು ರಚಿಸಲೇಬೇಕು. ಆದರೆ ಈ ಒಟ್ಟು ವ್ಯವಸ್ಥೆ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ.

    ಯಾವಾಗಲಾದರೊಮ್ಮೆ ಮಹಿಳಾ ಆಯೋಗದವರು ಬಂದು ಪ್ರಗತಿ ಪರಿಶೀಲಿಸುವಾಗಲಷ್ಟೇ ಪ್ರಸ್ತಾಪಗೊಳ್ಳುತ್ತದೆ. ಬಳಿಕ ಮರೆತುಹೋಗುತ್ತದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಈ ಬಗ್ಗೆ ಕೆಲವೊಮ್ಮೆ ಪ್ರಕಟಣೆಗಳನ್ನು ನೀಡುತ್ತದಾದರೂ, ಸರ್ಕಾರಿ ಸಂಸ್ಥೆಗಳೇ ಇದನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

    ಯಾಕಾಗಿ ಈ ಹೆಜ್ಜೆ?: ಖಾಸಗಿ ಅಥವಾ ಸರ್ಕಾರಿ ಕಚೇರಿ, ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿಗಳು ತಮಗೆ ಯಾವುದೇ ರೀತಿಯ ಕಿರುಕುಳವಾದರೆ ಅದರ ಸೂಕ್ತ ವಿಚಾರಣೆ ನಡೆದು ಕ್ರಮ ಜರಗಿಸಲು ಸುಪ್ರೀಂ ಕೋರ್ಟ್ ವಿಶಾಖಾ ಮಾರ್ಗಸೂಚಿಗಳ ಅನ್ವಯ ಆಂತರಿಕ ಸಮಿತಿ ರಚನೆಗೆ ನಿರ್ದೇಶನ ನೀಡಿದೆ. ಒಂದು ವೇಳೆ 10 ಸಿಬ್ಬಂದಿಗಿಂತ ಕಡಿಮೆ ಇದ್ದರೆ ಸಮಿತಿ ಬೇಡ, ಆದರೆ ಮಾಹಿತಿಯನ್ನು ಕಡ್ಡಾಯವಾಗಿ ಸಲ್ಲಿಸಲೇ ಬೇಕು. ಕೆಲಸದ ಸ್ಥಳದಲ್ಲಿ ಪಾರದರ್ಶಕ ದೂರು ಪೆಟ್ಟಿಗೆಯನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂಬಿತ್ಯಾದಿ ನಿರ್ದೇಶನಗಳಿವೆ. ಆದರೆ ಇವುಗಳನ್ನು ಪರಿಶೀಲಿಸುತ್ತಿಲ್ಲ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಈ ಬಗ್ಗೆ ಪರಿಶೀಲನೆಗೆ ಸಿಬ್ಬಂದಿ ಇಲ್ಲ. ಅನೇಕ ಕಚೇರಿ, ಸಂಸ್ಥೆಗಳು ಸಮಿತಿ ರಚನೆ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿವೆ. ಎಷ್ಟೋ ಸಂಸ್ಥೆಗಳು ನೀಡಲು ಬಾಕಿ ಇದೆ. ಖಾಸಗಿ ಸಂಸ್ಥೆಗಳ ಮಾಹಿತಿ ನೀಡಬೇಕಾದವರು ಕಾರ್ಮಿಕ ಇಲಾಖೆ, ಅವರಿಗೂ ಮಹಿಳಾ ಇಲಾಖೆಯವರು ಪತ್ರ ಬರೆದು ವಿನಂತಿಸಿಕೊಂಡಿದ್ದಾರೆ. ಇನ್ನೂ ಮಾಹಿತಿ ಬರಬೇಕಿದೆ ಎನ್ನುತ್ತಾರೆ ಅಧಿಕಾರಿಗಳು.

    ಮಾಹಿತಿ ಕೊಡಬೇಕಾದವರು ಯಾರು?
    ಸರ್ಕಾರಿ ಕಚೇರಿಗಳು, ಜಿಲ್ಲಾ/ತಾಲೂಕು ಮಟ್ಟ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸರ್ಕಾರಿ/ಖಾಸಗಿ ಉದ್ದಿಮೆಗಳು, ಸಂಸ್ಥೆಗಳು: ಕಾರ್ಮಿಕ ಇಲಾಖೆ, ಸರ್ಕಾರಿ ಹಾಗೂ ಖಾಸಗಿ ಪ್ರಾಥಮಿಕ/ಪ್ರೌಢಶಾಲೆ: ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ಕಾರಿ ಹಾಗೂ ಖಾಸಗಿ ಪದವಿಪೂರ್ವ ಕಾಲೇಜು: ಪದವಿ ಪೂರ್ವ ಶಿಕ್ಷಣ ಇಲಾಖೆ, ಸರ್ಕಾರಿ ಹಾಗೂ ಖಾಸಗಿ ಪದವಿ ಕಾಲೇಜುಗಳು: ಪದವಿ ಶಿಕ್ಷಣ ಇಲಾಖೆ, ಸರ್ಕಾರಿ/ಖಾಸಗಿ ಆಸ್ಪತ್ರೆಗಳು, ಸರ್ಕಾರಿ/ಖಾಸಗಿ ವೈದ್ಯಕೀಯ/ಅರೆವೈದ್ಯಕೀಯ ಕಾಲೇಜು, ನರ್ಸಿಂಗ್ ಕಾಲೇಜುಗಳು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸರ್ಕಾರಿ/ಖಾಸಗಿ ಪಾಲಿಟೆಕ್ನಿಕ್ ಕಾಲೇಜುಗಳು: ಕೆಪಿಟಿ, ಸರ್ಕಾರಿ/ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳು: ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಮಾಧ್ಯಮಗಳು: ವಾರ್ತಾ ಇಲಾಖೆ ಮಾಹಿತಿ ನೀಡಲಬೇಕಿದೆ.

    ದೂರು ನಿವಾರಣಾ ಸಮಿತಿ ರಚನೆ ಆಗಿದೆಯೇ ಇಲ್ಲವೇ ಎನ್ನುವುದು ನಮಗೆ ದೂರು ಬಂದರೆ ಮಾತ್ರ ಗೊತ್ತಾಗುತ್ತದೆ. ಕೆಲವು ಇಲಾಖೆಗಳು ನಮಗೆ ಸರಿಯಾದ ಮಾಹಿತಿ ಕೊಡಲು ಬಾಕಿ ಇದೆಯೇ ಎಂದು ಪರಿಶೀಲಿಸುತ್ತೇವೆ. ಮತ್ತೆ ಪತ್ರಬರೆದು ವಿವರ ಕಳಿಸುವಂತೆ ಕೋರಲಾಗುವುದು. ಮಂಗಳೂರು ಮಹಾನಗರಪಾಲಿಕೆಯಲ್ಲಿ ಕಳೆದ ವಾರ ಮಹಿಳಾ ದೌರ್ಜನ್ಯದ ದೂರು ಬಂದಿತ್ತು, ಅಲ್ಲಿಂದ ಮಾಹಿತಿ ಕೇಳಿದ್ದೇವೆ.
    – ಪಾಪ ಭೋವಿ, ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts