More

    ಕಲ್ಲುದೊಡ್ಡಿಯಲ್ಲಿ ಸರ್ವಧರ್ಮ ಸಾಮರಸ್ಯ

    ಚಿಕ್ಕಮಗಳೂರು: ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀ ರಾಮಲಲ್ಲಾ ಪ್ರಾಣಪ್ರತಿಷ್ಠೆ ಕಾರ್ಯಕ್ರಮ ಚಿಕ್ಕಮಗಳೂರಿನ ಕಲ್ಲುದೊಡ್ಡಿ ಗ್ರಾಮದಲ್ಲಿ ಸರ್ವಧರ್ಮ ಸಾಮರಸ್ಯಕ್ಕೆ ಹೊಸ ಭಾಷ್ಯ ಬರೆದಿದೆ. ಶ್ರೀರಾಮನ ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲ ಧರ್ಮೀಯರ ಮನೆಗಳ ಗೋಡೆಗಳ ಮೇಲೆ ಜೈ ಶ್ರೀರಾಮ್ ಎಂಬ ಬರಹಗಳು ರಾರಾಜಿಸುತ್ತಿವೆ.

    ಯಾರೋ ಒತ್ತಾಯಪೂರ್ವಕವಾಗಿ ಎಲ್ಲರ ಮನೆಯ ಗೋಡೆಗಳ ಮೇಲೆ ಬರೆದ ಬರಹಗಳಲ್ಲ. ಬದಲಿಗೆ ಎಲ್ಲರೂ ಸ್ವಯಂಪ್ರೇರಿತರಾಗಿಯೇ ತಮ್ಮ ಮನೆ ಗೋಡೆಗಳ ಮೇಲೆ ಜೈ ಶ್ರೀರಾಮ್ ಎಂದು ಬರಹಗಳನ್ನು ಬರೆಸಿಕೊಂಡಿದ್ದಾರೆ. ಅಲ್ಲದೆ ಮುಸ್ಲಿಂ ಸಮಾಜದ ಯುವಕರೇ ಗೋಡೆ ಬರಹ ಅಭಿಯಾನದಲ್ಲಿ ಭಾಗಿಯಾಗಿರುವುದು ಇನ್ನೊಂದು ವಿಶೇಷ.
    ಚಿಕ್ಕಮಗಳೂರು ನಗರ ಹೊರವಲಯದಲ್ಲಿರುವ ಕಲ್ಲುದೊಡ್ಡಿ ಬಡಾವಣೆಯಲ್ಲಿ ಹಿಂದು, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮಾಜದವರು ಒಟ್ಟಾಗಿ ವಾಸಿಸುತ್ತಿದ್ದಾರೆ. ಹಿಂದಿನಿಂದಲೂ ಧರ್ಮ ಭೇದವಿಲ್ಲದೆ ಸಾಮರಸ್ಯದ ಜೀವನ ನಡೆಸುತ್ತಿರುವ ಈ ಬಡಾವಣೆಯ ಜನತೆ ಶ್ರೀ ರಾಮಲಲ್ಲಾ ಪ್ರಾಣಪ್ರತಿಷ್ಠೆ ಕಾರ್ಯಕ್ರಮವನ್ನು ವಿಶೇಷವಾಗಿ ಆಚರಿಸಬೇಕು ಎಂಬ ಉದ್ದೇಶದಿಂದ ತಮ್ಮೆಲ್ಲರ ಮನೆಗಳ ಗೋಡೆಗಳ ಮೇಲೆ ಜೈ ಶ್ರೀರಾಮ್ ಎಂಬ ಗೋಡೆ ಬರಹ ಬರೆಸಿದ್ದಾರೆ. ಬರೋಬ್ಬರಿ 3500 ಮನೆಗಳ ಗೋಡೆಗಳ ಮೇಲೆ ಹೀಗೆ ಗೋಡೆ ಬರಹ ಬರೆದಿರುವುದು ವಿಶೇಷ.
    ಎಲ್ಲರ ಮನೆಗೂ ಮಂತ್ರಾಕ್ಷತೆ: ಆರಂಭದಲ್ಲಿ ಶ್ರೀ ರಾಮಲಲ್ಲಾ ಪ್ರಾಣಪ್ರತಿಷ್ಠೆ ಹಿನ್ನೆಲೆಯಲ್ಲಿ ಮಂತ್ರಾಕ್ಷತೆಯನ್ನು ಕಲ್ಲುದೊಡ್ಡಿ ಬಡಾವಣೆಯ ಎಲ್ಲ ಮನೆಗಳಿಗೂ ವಿತರಣೆ ಮಾಡಲಾಗಿತ್ತು. ಮಂತ್ರಾಕ್ಷತೆ ವಿತರಣೆಗೆ ಬಂದಿದ್ದವರನ್ನು ಗೌರವಾದರದಿಂದ ಸ್ವಾಗತಿಸಿದ್ದ ಇತರೆ ಧರ್ಮೀಯರು ಮಂತ್ರಾಕ್ಷತೆ ಸ್ವೀಕರಿಸುವ ಮೂಲಕ ಸಾಮರಸ್ಯಕ್ಕೆ ಮುನ್ನುಡಿ ಬರೆದಿದ್ದರು. ಮಂತ್ರಾಕ್ಷತೆ ವಿತರಣೆ ವೇಳೆ ಮನೆಯಲ್ಲಿ ಇಲ್ಲದವರು ಮಂತ್ರಾಕ್ಷತೆ ವಿತರಣೆ ಮಾಡಲು ಹೋದವರಿಗೆ ಕರೆ ಮಾಡಿ ನಮ್ಮ ಮನೆಗೆ ಮಂತ್ರಾಕ್ಷತೆ ತಲುಪಿಲ್ಲ ಎಂದು ಹೇಳಿ ಮಂತ್ರಾಕ್ಷತೆ ತರಿಸಿಕೊಂಡಿರುವ ಉದಾಹರಣೆಗಳೂ ಇಲ್ಲಿವೆ. ಜತೆಗೆ ಮನೆಯಲ್ಲಿ ಸೂತಕವಿದ್ದವರು ಸೂತಕವನ್ನು ಕಳೆದುಕೊಂಡು ಮಂತ್ರಾಕ್ಷತೆ ಸ್ವೀಕರಿಸುವ ಮೂಲಕ ಗೌರವ ಸಲ್ಲಿಸಿರುವುದು ಇನ್ನೊಂದು ವಿಶೇಷ.
    ಶ್ರೀ ರಾಮಲಲ್ಲಾ ಪ್ರಾಣಪ್ರತಿಷ್ಠೆ ಅಂಗವಾಗಿ ಗೋಡೆ ಬರಹ ಅಭಿಯಾನಕ್ಕೆ ಇತರೆ ಧರ್ಮೀಯರು ಸಹಕಾರ ನೀಡಿರುವುದು ಅತ್ಯಂತ ಸಂತಸ ತಂದಿದೆ. ಅವರನ್ನು ನಾವು ಬೇರೆ ಧರ್ಮದವರು ಎಂದು ಭಾವಿಸುವುದಿಲ್ಲ. ಬದಲಿಗೆ ನಾವೆಲ್ಲರೂ ಸಹೋದರರು. ನಮ್ಮ ಬಡಾವಣೆಯ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಧರ್ಮೀಯರ ನಡೆ ಇಡೀ ದೇಶಕ್ಕೆ ಮಾದರಿಯಾಗಿದೆ. ನಾವು ಅವರನ್ನು ಎಂದೆಂದಿಗೂ ಗೌರವದಿಂದ ಕಾಣುತ್ತೇವೆ ಎನ್ನುತ್ತಾರೆ ನಿವಾಸಿ ರಾಜು.
    ಮನವಿ ಮೇರೆಗೆ ಬರಹ: ಆರಂಭದಲ್ಲಿ ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠೆ ಹಿನ್ನೆಲೆಯಲ್ಲಿ ಒಂದಷ್ಟು ಯುವಕರು ತಮ್ಮ ಮನೆಗಳ ಗೋಡೆಗಳ ಮೇಲೆ ಜೈ ಶ್ರೀರಾಮ್ ಎಂಬ ಗೋಡೆಬರಹ ಬರೆಯಲು ಆರಂಭಿಸಿದ್ದಾರೆ. ಇದನ್ನು ಗಮನಿಸಿದ ಇತರೆ ಧರ್ಮದ ಕೆಲವರು ಸ್ವಯಂಪ್ರೇರಿತರಾಗಿ ಮುಂದೆ ಬಂದು ತಮ್ಮ ಮನೆಯ ಗೋಡೆಗಳ ಮೇಲೆಯೂ ಜೈ ಶ್ರೀರಾಮ್ ಎಂದು ಬರೆಯುವಂತೆ ಮನವಿ ಮಾಡಿದ್ದಾರೆ. ಅಷ್ಟರಲ್ಲಿಯೇ ಎಲ್ಲರೂ ಗೋಡೆ ಬರಹ ಬರೆಯಲು ಮುಂದೆ ಬಂದಿದ್ದಾರೆ. ಹೀಗಾಗಿ ಇಡೀ ಬಡಾವಣೆಯ ಮನೆಗಳ ಗೋಡೆಗಳ ಮೇಲೆ ಜೈ ಶ್ರೀರಾಮ್ ಎಂಬ ಬಹರಗಳು ವಿಜೃಂಭಿಸಲಾರಂಭಿಸಿವೆ. ಜತೆಗೆ ಶ್ರೀ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ದಿನ ವಿಶೇಷ ಆಚರಣೆ ನಡೆಸಲು ಸಿದ್ಧತೆ ನಡೆಸಿದ್ದಾರೆ.
    ಶ್ರೀರಾಮ ಎಲ್ಲರಿಗೂ ಸೇರಿದವನು. ನಮ್ಮ ಬಡಾವಣೆಯಲ್ಲಿ ನಾವೆಲ್ಲರೂ ಹಿಂದಿನಿಂದಲೂ ಒಂದಾಗಿದ್ದೇವೆ. ಮುಂದೆಯೂ ಒಂದಾಗಿಯೇ ಇರುತ್ತೇವೆ. ರಾಜಕೀಯ ಪಕ್ಷಗಳು ತಮ್ಮ ಬೇಳೆಕಾಳು ಬೇಯಿಸಿಕೊಳ್ಳುವ ಉದ್ದೇಶದಿಂದ ಜಾತಿ, ಧರ್ಮಗಳ ನಡುವೆ ದ್ವೇಷ ಬಿತ್ತುವ ಕೆಲಸ ಮಾಡುತ್ತವೆ. ಇದಕ್ಕೆ ನಾವು ಬಲಿಯಾಗಬಾರದು. ನಾವೆಲ್ಲರೂ ಒಗ್ಗಟ್ಟಾಗಿದ್ದಾಗ ಮಾತ್ರ ನಮ್ಮ ಬಡಾವಣೆ ಸುಂದರವಾಗಿರಲು ಸಾಧ್ಯ ಎನ್ನುತ್ತಾರೆ ಸೈಯದ್.
    ಹಿಂದಿನಿಂದಲೂ ಇದೆ ಸಾಮರಸ್ಯ: ಕಲ್ಲುದೊಡ್ಡಿ ಬಡಾವಣೆಯಲ್ಲಿ ಸರ್ವಧರ್ಮ ಸಾಮರಸ್ಯ ಈಗಿನದಲ್ಲ. ಹಿಂದುಗಳ ಹಬ್ಬದ ವೇಳೆ ಇತರೆ ಧರ್ಮೀಯರಿಗೆ ಹಬ್ಬದ ಊಟವನ್ನು ನೀಡುವುದು ಹಾಗೂ ಕ್ರಿಶ್ಚಿಯನ್, ಮುಸ್ಲಿಮರ ಹಬ್ಬದ ವೇಳೆ ತಮ್ಮ ಹಬ್ಬದ ಊಟವನ್ನು ಬಡಾವಣೆಯವರಿಗೆ ನೀಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇನ್ನು ಬಡಾವಣೆಯಲ್ಲಿ ಪ್ರತಿಷ್ಠಾಪನೆ ಮಾಡುವ ಗಣಪತಿಯನ್ನು ವಿಸರ್ಜನೆ ಮಾಡಲು ಬಳಸುವ ಟ್ರಾೃಕ್ಟರ್‌ಗೆ ಚಾಲಕರಾಗಿ ಕರ್ತವ್ಯ ನಿರ್ವಹಿಸುವುದೇ ಮುಸ್ಲಿಂ ಸಮಾಜದ ಯುವಕರು. ಇನ್ನು ಗಣಪತಿ ಮೆರವಣಿಗೆ ವೇಳೆ ಪಾನಕ ಹಾಗೂ ಮಜ್ಜಿಗೆ ವಿತರಣೆ ಮಾಡುವ ಮೂಲಕ ಇತರ ಧರ್ಮೀಯರು ಭಾವೈಕ್ಯ ಮೆರೆಯುತ್ತಿದ್ದಾರೆ.
    ನಾವು ಕ್ರೈಸ್ತರು ಆಗಿರಬಹುದು. ನಾವು ನಮ್ಮ ಧರ್ಮವನ್ನು ಪ್ರೀತಿಸುತ್ತೇವೆ ಹಾಗೆಯೇ ಇತರೆ ಧರ್ಮಗಳನ್ನು ಗೌರವಿಸುತ್ತೇವೆ. ನಮ್ಮ ಬಡಾವಣೆಯಲ್ಲಿ ಎಲ್ಲ ಧರ್ಮೀಯರ ಹಬ್ಬಗಳಲ್ಲಿಯೂ ನಾವು ಭಾಗಿಯಾಗುತ್ತೇವೆ. ಹಾಗೆಯೇ ಬೇರೆಯವರು ನಮ್ಮ ಹಬ್ಬಗಳಲ್ಲಿ ಭಾಗಿಯಾಗುತ್ತಾರೆ. ಹೀಗಾಗಿಯೇ ನಾವು ಶ್ರೀರಾಮನ ಗೋಡೆ ಬರಹ ಅಭಿಯಾನದಲ್ಲಿ ಭಾಗಿಯಾಗಿ ನಮ್ಮ ಮನೆ ಗೋಡೆಯ ಮೇಲೂ ಜೈಶ್ರೀರಾಮ್ ಎಂದು ಬರೆಸಿಕೊಂಡಿದ್ದೇವೆ ಎನ್ನುತ್ತಾರೆ ಶಾಂತಿ ಫರ್ನಾಂಡೀಸ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts