More

    ಬೌದ್ಧಿಕವಾಗಿ ದಿವಾಳಿಯಾದ ಕಾಂಗ್ರೆಸ್

    ಬೆಳಗಾವಿ: ಕಾಂಗ್ರೆಸ್ ಬೌದ್ಧಿಕ, ವೈಚಾರಿಕ ಹಾಗೂ ನೈತಿಕವಾಗಿ ದಿವಾಳಿಯಾಗಿದೆ. ಅಧಿಕಾರವಧಿಯಲ್ಲಿ ಕೇವಲ ಮತಬ್ಯಾಂಕ್‌ಗಾಗಿ ಆಡಳಿತ ನಡೆಸಿದ್ದ ಕಾಂಗ್ರೆಸ್, ಇಂದಿಗೂ ಅದೇ ಮನಸ್ಥಿತಿಯಲ್ಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು.

    ಬೆಳಗಾವಿ ಜಿಲ್ಲೆಯ ಗ್ರಾಮೀಣ ಮತ್ತು ನಗರ ಘಟಕಗಳ ಹಾಗೂ ವಿವಿಧ ಮಂಡಲಗಳ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಂಶಾಡಳಿತ ರಾಜಕಾರಣಕ್ಕೆ ಜೋತುಬಿದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ರಾಷ್ಟ್ರ ವಿರೋಧಿ ಘೋಷಣೆ ಹಾಕುವವರ ಪರವಾಗಿದ್ದುಕೊಂಡು, ಗಲಭೆಗಳಿಗೆ ಕುಮ್ಮಕ್ಕು ನೀಡಿ ದೇಶದಲ್ಲಿ ಅರಾಜಕತೆ ಸೃಷ್ಟಿಗೆ ಷಡ್ಯಂತ್ರ ನಡೆಸುತ್ತಿದೆ. ಕಾಂಗ್ರೆಸ್ ಎಂಬ ಮನೆಗೆ ಬೆಂಕಿ ಬಿದ್ದಿದ್ದು, ದ್ವೇಷದ ಜ್ವಾಲೆಗೆ ಸುಟ್ಟು ಹೋಗುತ್ತಿದೆ. ಒಂದುವೇಳೆ ಇಂದೇ ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷರನ್ನು ನೇಮಿಸಿದರೆ ಆ ಮನೆ ಒಡೆದು ಹೋಳಾಗಲಿದೆ ಎಂದರು.

    ಸಿದ್ದರಾಮಯ್ಯಗೆ ಸವಾಲು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಾಧ್ಯಕ್ಷರಾದರೆ ಪಕ್ಷದಲ್ಲಿ ಡಾ. ಜಿ.ಪರಮೇಶ್ವರ ಅವರಿರಲ್ಲ. ಇನ್ನು ಡಿ.ಕೆ. ಶಿವಕುಮಾರ್ ಅವರಾದರೆ ಸ್ವತಃ ಸಿದ್ದರಾಮಯ್ಯನವರೇ ಸಹಿಸಲ್ಲ. ಈ ನಿಜಾಂಶ ಒಪ್ಪಿಕೊಳ್ಳದ ಸಿದ್ದರಾಮಯ್ಯ, ಅವರಲ್ಲಿ ತಾಕತ್ತು ಇದ್ದರೆ ಕೂಡಲೇ ಡಿ.ಕೆ. ಶಿವಕುಮಾರ್ ಅವರನ್ನು ಕರ್ನಾಟಕ ರಾಜ್ಯ ಕಾಂಗ್ರೆಸ್ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲು ಹೈಕಮಾಂಡ್‌ಗೆ ಹೇಳಲಿ ಎಂದು ಸವಾಲು ಹಾಕಿದರು.

    ರಾಜಕೀಯ ಹುದ್ದೆ ಸಿಗದಿದ್ದಾಗ ಕಣ್ಣೀರು ಹರಿಸುವ ನಾಯಕರು ಒಂದೆಡೆಯಿದ್ದಾರೆ. ಮತ್ತೊಂದೆಡೆ, ತಮ್ಮ ಅಧಿಕಾರಾವಧಿಯಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ಹಿಂದು ಕಾರ್ಯಕರ್ತರು ಸೇರಿದಂತೆ ನೂರಾರು ಜನಸಾಮಾನ್ಯರ ಹತ್ಯೆಯಾದಾಗ ರಾಜ್ಯದ ಜನರಿಂದ ಕಣ್ಣೀರು ಹಾಕಿಸಿದ ನಾಯಕರಿವರು ಎಂದು ಪರೋಕ್ಷವಾಗಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ವಿರುದ್ಧ ಕಟೀಲು ಹರಿಹಾಯ್ದರು.

    ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ, ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಶಾಸಕರಾದ ಅನಿಲ ಬೆನಕೆ, ಅಭಯ ಪಾಟೀಲ, ಮಹಾದೇವಪ್ಪ ಯಾದವಾಡ, ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಇತರರಿದ್ದರು.

    ಬಿಜೆಪಿಗೆ ಇದು ಸುವರ್ಣಯುಗ

    ಅಂದು ಕಾಂಗ್ರೆಸ್ ಸರ್ಕಾರದ ಆಡಳಿತಾವಧಿಯಲ್ಲಿ ನಡೆದ ಹತ್ಯೆ ಪ್ರಕರಣಗಳಲ್ಲಿ ನ್ಯಾಯ ಒದಗಿಸುವ ಮತ್ತು ಶೋಷಣೆಗೊಳಗಾದವರಿಗೆ ಸೂಕ್ತ ರೀತಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಂದಿಸುತ್ತಿದ್ದಾರೆ. ರಾಜ್ಯದ ಜನಸಾಮಾನ್ಯರ ಕಣ್ಣೀರು ಒರೆಸುವಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ರಾಜ್ಯದಲ್ಲಿಯೂ ಬಿಜೆಪಿ, ಕೇಂದ್ರದಲ್ಲಿಯೂ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದು, ದೇಶದಲ್ಲಿ ಬಿಜೆಪಿ ಸುವರ್ಣ ಯುಗದಲ್ಲಿದೆ. ಮುಂಬರುವ ಗ್ರಾಪಂ, ತಾಪಂ, ಜಿಪಂ ಹಾಗೂ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನೇ ಗೆಲ್ಲಿಸಬೇಕು. ಆ ಮೂಲಕ ಬಿಜೆಪಿಯನ್ನು ಸ್ಥಳೀಯ ಸರ್ಕಾರಗಳ ಆಡಳಿತಗಳಲ್ಲಿಯೂ ಅಧಿಕಾರಕ್ಕೆ ತರಬೇಕು ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts