ಹನೂರು: ನಿರ್ದಿಷ್ಟ ಗುರಿ ತಲುಪಲು ಸಾಧಕರ ಆದರ್ಶಗಳು ಸ್ಫೂರ್ತಿ ತುಂಬುತ್ತವೆ ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.
ಪಟ್ಟಣದ ಶ್ರೀ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಹಾಗೂ ಶ್ರೀ ವಿವೇಕಾನಂದರ 161ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಹಂತ ವಿದ್ಯಾರ್ಥಿ ಜೀವನದಲ್ಲಿ ಪ್ರಮುಖ ಘಟ್ಟ. ಹಾಗಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಪ್ರತಿಯೊಬ್ಬರೂ ನಿರ್ದಿಷ್ಟ ಗುರಿಯಿಟ್ಟುಕೊಳ್ಳಬೇಕು. ಈ ದಿಸೆಯಲ್ಲಿ ವ್ಯಾಸಂಗದ ಕಡೆ ಹೆಚ್ಚಿನ ಒತ್ತು ನೀಡಬೇಕು. ಯಶಸ್ಸು ಗಳಿಸುವುದರತ್ತ ಗಮನಹರಿಸಬೇಕು. ಇದನ್ನು ಪಾಲಿಸಿದರೆ ಉತ್ತಮ ಜೀವನ ರೂಪಿಸಿಕೊಳ್ಳಬಹುದು. ಈ ಬಗ್ಗೆ ಪಾಲಕರು ಅಗತ್ಯ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದ ಶಾಸಕರು, ಶ್ರೀ ವಿವೇಕಾನಂದ ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ಶ್ರೀ ಸರ್ವ ಜಯಾನಂದ ಮಹಾರಾಜ್ ಸ್ವಾಮೀಜಿ ಮಾತನಾಡಿ, ಇಂದಿನ ಯುಗದಲ್ಲಿ ಬುದ್ದಿವಂತ ಮಕ್ಕಳನ್ನು ಕಾಣುತ್ತೇವೆ. ಆದರೆ ಇವರಲ್ಲಿ ಸಂಸ್ಕಾರದ ಕೊರತೆ ಎದು ಕಾಣುತ್ತಿದ್ದು, ಜೀವನವನ್ನು ಸಮರ್ಥವಾಗಿ ನಿಭಾಯಿಸುವ ಸಾಮರ್ಥ್ಯ ಇರುವುದಿಲ್ಲ. ಮಾನಸಿಕವಾಗಿ ದುರ್ಬಲರಾಗಿರುತ್ತಾರೆ. ಆದ್ದರಿಂದ ಪಾಲಕರು ಈ ಬಗ್ಗೆ ಮನದಟ್ಟು ಮಾಡಿಕೊಂಡು ಮಕ್ಕಳ ಯಶಸ್ಸಿಗೆ ಸ್ಫೂರ್ತಿದಾಯಕವಾಗಿರುವ ಶ್ರೀ ವಿವೇಕಾನಂದರ ಜೀವನವನ್ನು ತಿಳಿಸಿಕೊಡಬೇಕು. ಇದರಿಂದ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಇದೇ ವೇಳೆ ನಗೆ ಖ್ಯಾತಿಯ ಸುಧಾ ಬರಗೂರು, ಬಿಇಒ ಎಂ.ಶಿವರಾಜು ಮಾತನಾಡಿದರು. ವಿವಿಧ ಸ್ಪರ್ಧೇಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಇದಕ್ಕೂ ಮೊದಲು ಶ್ರೀ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಉಮಾ ರಾಜೇಂದ್ರನ್, ಕಾರ್ಯದರ್ಶಿ ಸುರೇಶ್‌ನಾಯ್ಡು, ಸಂಚಾಲಕ ಎಂ.ರಾಜೇಂದ್ರನ್, ಖಜಾಂಚಿ ಶ್ರೀದೇವಿ, ಪ್ರಾಂಶುಪಾಲ ಜಿ. ಮಧುಸೂದನ್, ಮುಖ್ಯಶಿಕ್ಷಕಿ ಎಲ್. ಸತ್ಯಪ್ರಿಯ, ಸಂಯೋಜನಾಧಿಕಾರಿ ಎಂ.ಜಿ ನಾಗೇಂದ್ರ ಮತ್ತಿತರರಿದ್ದರು.