More

    ನಮ್ಮ ಮೆಟ್ರೋ ನೂತನ ಮಾರ್ಗ ಪರೀಕ್ಷಿಸಿದ ರೈಲ್ವೆ ಸುರಕ್ಷತಾ ಆಯುಕ್ತ

    ಬೆಂಗಳೂರು: ನಮ್ಮ ಮೆಟ್ರೋ 2ನೇ ಹಂತದ ಯಲಚೇನಹಳ್ಳಿಯಿಂದ ಅಂಜನಾಪುರ ಮಾರ್ಗವನ್ನು ರೈಲ್ವೆ ಸುರಕ್ಷತಾ ಆಯುಕ್ತರು ಬುಧವಾರ ಮತ್ತು ಗುರುವಾರ ಪರೀಕ್ಷೆ ನಡೆಸಲಿದ್ದಾರೆ. ಕಳೆದೊಂದು ತಿಂಗಳಿನಿಂದ ನಿರೀಕ್ಷೆಯಲ್ಲಿದ್ದ ರೈಲ್ವೆ ಸುರಕ್ಷತಾ ಆಯುಕ್ತರ ಮೂಲಕ ಯಲಚೇನಹಳ್ಳಿಯಿಂದ ಅಂಜನಾಪುರ ಮಾರ್ಗದ ಪರೀಕ್ಷಾ ಕಾರ್ಯ ಎರಡು ದಿನ ನಡೆಯಲಿದೆ.

    6.4 ಕಿ.ಮೀ. ಉದ್ದದ ವಿಸ್ತರಿತ ಮಾರ್ಗದಲ್ಲಿನ ಸುರಕ್ಷತಾ ಕ್ರಮಗಳನ್ನು ರೈಲ್ವೆ ಸುರಕ್ಷತಾ ಆಯುಕ್ತರು ಪರೀಕ್ಷೆಗೊಳಪಡಿಸಲಿದ್ದಾರೆ. ಥರ್ಡ್​ ರೈಲ್​ ಹಳಿಗಳಿಗೆ ವಿದ್ಯುತ್​ ಪ್ರವಹಿಸುವುದು, ನಿಲ್ದಾಣಗಳು ಮತ್ತು ಮಾರ್ಗದಲ್ಲಿನ ಸಿಗ್ನಲಿಂಗ್​ ವ್ಯವಸ್ಥೆ, ಮಾರ್ಗದಲ್ಲಿ ಸಿಗುವ ತಿರುವುಗಳಲ್ಲಿ ರೈಲು ಸಂಚರಿಸುವ ವೇಗ ನಿಗದಿ ಸೇರಿ ಇನ್ನಿತರ ವಿಷಯಗಳ ಪರೀಕ್ಷೆ ನಡೆಸಲಾಗುತ್ತದೆ. ಅದನ್ನಾಧರಿಸಿ ಏನಾದರೂ ಬದಲಾವಣೆ ತರಬೇಕೆಂದರೆ ಆಯುಕ್ತರು ಅದನ್ನು ಬಿಎಂಆರ್​ಸಿಎಲ್​ಗೆ ಸೂಚನೆ ನೀಡಲಿದ್ದಾರೆ. ಆ ಬದಲಾವಣೆ ತಂದ ನಂತರ ರೈಲ್ವೆ ಸುರಕ್ಷತಾ ಆಯುಕ್ತರು ಮಾರ್ಗದಲ್ಲಿ ವಾಣಿಜ್ಯ ಸಂಚಾರ ಕೈಗೊಳ್ಳಲು ಅನುಮತಿ ನೀಡಲಿದ್ದಾರೆ. ಅದರಂತೆ ಈ ಮಾಸಾಂತ್ಯದಲ್ಲಿ ನೂತನ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗುವ ನಿರೀಕ್ಷೆ ಹೊಂದಲಾಗಿದೆ.

    ರೈಲು ಸಂಚಾರದಲ್ಲಿ ವ್ಯತ್ಯಯ: ರೈಲ್ವೆ ಸುರಕ್ಷತಾ ಆಯುಕ್ತರು ಪರೀಕ್ಷೆ ನಡೆಸುತ್ತಿರುವ ಕಾರಣದಿಂದ ಆರ್​.ವಿ.ರಸ್ತೆಯಿಂದ ಯಲಚೇನಹಳ್ಳಿ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತಗೊಳಿಸಲಾಗುತ್ತಿದೆ. ಮಂಗಳವಾರದಿಂದಲೇ ರೈಲು ಸಂಚಾರ ಸ್ಥಗಿತಗೊಂಡಿದ್ದು, ಗುರುವಾರದವರೆಗೆ ಮುಂದುವರಿಯಲಿದೆ. ಬೆಳಗ್ಗೆ 7ರಿಂದ ರಾತ್ರಿ 9 ಗಂಟೆಗವರೆಗೆ ನಾಗಸಂದ್ರದಿಂದ ಆರ್​.ವಿ.ರಸ್ತೆ ನಿಲ್ದಾಣದವರೆಗೆ ಮಾತ್ರ ಮೆಟ್ರೋ ರೈಲು ಸೇವೆಯಿರಲಿದೆ. ಉಳಿದಂತೆ ನ. 20ರಿಂದ ನಾಗಸಂದ್ರದಿಂದ ಯಲಚೇನಹಳ್ಳಿವರೆಗೂ ರೈಲು ಸಂಚರಿಸಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts