More

    ನಾಯಕವಾಡಿ ರಸ್ತೆ ಬದಿ ಅಪಾಯಕಾರಿ ಮರ, ತೆರವಿಗೆ ಒತ್ತಾಯ

    ಗಂಗೊಳ್ಳಿ: ಗುಜ್ಜಾಡಿ ಗ್ರಾಪಂ ವ್ಯಾಪ್ತಿಯ ನಾಯಕವಾಡಿ-ಮುಳ್ಳಿಕಟ್ಟೆ ಮುಖ್ಯರಸ್ತೆಯಲ್ಲಿ ಭಾರಿ ಗಾತ್ರದ ಮರವೊಂದು ರಸ್ತೆ ಮೇಲೆ ಉರುಳಿ ಬೀಳುವ ಸ್ಥಿತಿಯಲ್ಲಿದ್ದು, ಅಪಾಯ ಆಹ್ವಾನಿಸುತ್ತಿದೆ.

    ನಾಯಕವಾಡಿ-ಮುಳ್ಳಿಕಟ್ಟೆ ಮುಖ್ಯರಸ್ತೆಯಲ್ಲಿನ ಐಸ್‌ಪ್ಲಾಂಟ್ ಸಮೀಪ ಭಾರಿ ಗಾತ್ರದ ಮರವೊಂದು ರಸ್ತೆಗೆ ವಾಲಿಕೊಂಡ ಸ್ಥಿತಿಯಲ್ಲಿದ್ದು, ಯಾವುದೇ ಕ್ಷಣದಲ್ಲಾದರೂ ಬುಡ ಸಮೇತ ಉರುಳಿ ಬೀಳುವ ಸಾಧ್ಯತೆ ಇದೆ. ಮರದ ಬುಡ ಕಿತ್ತು ಬಂದಿದ್ದು, ದಿನದಿಂದ ದಿನಕ್ಕೆ ಮರ ಸಂಪೂರ್ಣವಾಗಿ ರಸ್ತೆಗೆ ವಾಲಿಕೊಳ್ಳುತ್ತಿದೆ. ನಾಯಕವಾಡಿ-ಮುಳ್ಳಿಕಟ್ಟೆ ಮುಖ್ಯರಸ್ತೆಯಲ್ಲಿ ಪ್ರತಿನಿತ್ಯ ನೂರಾರು ವಾಹನಗಳು ಹಾಗೂ ಸಾರ್ವಜನಿಕರು ಸಂಚರಿಸುತ್ತಿದ್ದು ಈ ಸಂದರ್ಭ ಮರ ಉರುಳಿ ಬಿದ್ದರೆ ಅಪಾಯ ಅಲ್ಲಗಳೆಯುವಂತಿಲ್ಲ. ಈ ರಸ್ತೆಯಲ್ಲಿ ಭಾರಿ ವಾಹನಗಳು ಸಂಚರಿಸಲು ಕಷ್ಟವಾಗುತ್ತಿದ್ದು, ವಾಹನದ ಮೇಲ್ಭಾಗಕ್ಕೆ ಮರ ತಾಗುತ್ತಿದೆ. ರಾತ್ರಿ ವೇಳೆ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳು ರಸ್ತೆಗೆ ವಾಲಿಕೊಂಡಿರುವ ಮರವನ್ನು ಅಂದಾಜಿಸಲಾಗದೆ ಹತ್ತಿರಕ್ಕೆ ಬಂದ ಮೇಲೆ ಬ್ರೇಕ್ ಹೊಡೆದು ನಿಲ್ಲಿಸಿ ಬಳಿಕ ಸಂಚರಿಸುತ್ತಿವೆ. ರಸ್ತೆಗೆ ವಾಲಿಕೊಂಡಿರುವ ಈ ಮರದಿಂದ ಒಂದಲ್ಲ ಒಂದು ದಿನ ಅನಾಹುತವಾಗುವ ಸಾಧ್ಯತೆಯಿದ್ದು, ಆದಷ್ಟು ಶೀಘ್ರ ನಾಯಕವಾಡಿ-ಮುಳ್ಳಿಕಟ್ಟೆ ಮುಖ್ಯರಸ್ತೆಯಲ್ಲಿನ ಈ ಬೃಹತ್ ಗಾತ್ರದ ಮರವನ್ನು ತೆರವುಗೊಳಿಸಿ ಮುಂದಾಗುವ ಅನಾಹುತಗಳನ್ನು ತಡೆಯುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

    ಗಂಗೊಳ್ಳಿ ನಾಯಕವಾಡಿ-ಮುಳ್ಳಿಕಟ್ಟೆ ರಸ್ತೆಯಲ್ಲಿ ವಾಲಿಕೊಂಡಿರುವ ಮರ ಅಪಾಯಕಾರಿ ಸ್ಥಿತಿಯಲ್ಲಿದೆ. ಈ ಬಗ್ಗೆ ಅರಣ್ಯ ಇಲಾಖೆ ಗಮನಕ್ಕೆ ತರಲಾಗಿದೆ. ಅಪಾಯಕಾರಿ ಸ್ಥಿತಿಯಲ್ಲಿರುವ ಮರವನ್ನು ತೆರವುಗೊಳಿಸುವ ಬಗ್ಗೆ ಅರಣ್ಯ ಇಲಾಖೆಗೆ ಮತ್ತೊಮ್ಮೆ ಮನವಿ ಮಾಡಿಕೊಳ್ಳಲಾಗುವುದು. ಅರಣ್ಯ ಇಲಾಖೆ ಒಪ್ಪಿಗೆ ನೀಡಿದರೆ ಪಂಚಾಯಿತಿ ಮೂಲಕ ಮರ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
    ರಾಜು ಪೂಜಾರಿ
    ಉಪಾಧ್ಯಕ್ಷರು, ಗುಜ್ಜಾಡಿ ಗ್ರಾಪಂ

    ನಾಯಕವಾಡಿ-ಮುಳ್ಳಿಕಟ್ಟೆ ರಸ್ತೆಯಲ್ಲಿ ಮರವೊಂದು ರಸ್ತೆಗೆ ವಾಲಿಕೊಂಡಿದ್ದು, ಯಾವುದೇ ಕ್ಷಣದಲ್ಲಾದರೂ ಉರುಳಿ ಬೀಳುವ ಸಾಧ್ಯತೆ ಇದೆ. ರಸ್ತೆಯಲ್ಲಿ ವಾಹನಗಳು, ಪಾದಚಾರಿಗಳು ಸದಾ ಸಂಚರಿಸುತ್ತಿದ್ದು, ಈ ಸಂದರ್ಭ ಮರ ಉರುಳಿ ಬಿದ್ದರೆ ಭಾರಿ ಅನಾಹುತವಾಗಲಿದೆ. ಸಮಸ್ಯೆ ಬಗ್ಗೆ ಸ್ಥಳೀಯ ಪಂಚಾಯಿತಿ ಗಮನಕ್ಕೆ ತರಲಾಗಿದ್ದು, ಮಳೆಗಾಲ ಪ್ರಾರಂಭವಾಗುವ ಮೊದಲು ಮರ ತೆರವುಗೊಳಿಸಬೇಕು.
    ಪ್ರದೀಪ, ಸ್ಥಳೀಯ ನಿವಾಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts