More

    ನೂರಶೆಟ್ಟರ್ ಶಾಲೆಯಲ್ಲಿ ನೂರೆಂಟು ಸಮಸ್ಯೆ

    ಶಿರಹಟ್ಟಿ: ಗುಣಮಟ್ಟದ ಶಿಕ್ಷಣ ನೀಡುವಲ್ಲಿ, ಪರೀಕ್ಷೆ ಫಲಿತಾಂಶದಲ್ಲಿಯೂ ಪಟ್ಟಣದ ಸಿ.ಸಿ. ನೂರಶೆಟ್ಟರ ಸರ್ಕಾರಿ ಪ್ರೌಢಶಾಲೆ ಪಾಸ್ ಆಗಿದೆ. ಹಾಗಂತ ಮೂಲಸೌಲಭ್ಯದ ವಿಚಾರಕ್ಕೆ ಬಂದರೆ ಫೇಲ್.

    2006ರಲ್ಲಿ ಆರಂಭವಾದ ಈ ಶಾಲೆಯ ತರಗತಿಗಳು ಕೆಲ ವರ್ಷ ಸ್ಥಳೀಯ ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡದಲ್ಲೇ ನಡೆದವು.ನಂತರ ಶಿಕ್ಷಣ ಪ್ರೇಮಿ ಚಂದ್ರಕಾಂತ ನೂರಶೆಟ್ಟರ್ ಅವರು ಜಮೀನು ಖರೀದಿಸಿ ಶಾಲೆಗೆ ದಾನ ನೀಡಿದ ಮೇಲೆ ಸ್ವಂತ ಕಟ್ಟಡ ನಿರ್ವಣಗೊಂಡಿತು. ಸದ್ಯ 8ನೇ ತರಗತಿಯಲ್ಲಿ 176, 9ನೇ ತರಗತಿಯಲ್ಲಿ 186 ಮತ್ತು 10ನೇ ತರಗತಿಯಲ್ಲಿ 138 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

    ಕೊಠಡಿ, ಶಿಕ್ಷಕರ ಕೊರತೆ: ನಿರ್ಮಾಣ ಹಂತದ ಒಂದು ಕಟ್ಟಡ ಸೇರಿ 9 ಕೊಠಡಿಗಳಿವೆ. ಇವುಗಳಲ್ಲಿ ಒಂದು ಮುಖ್ಯಾಧ್ಯಾಪಕರ ಕೊಠಡಿ, ಒಂದು ಕಂಪ್ಯೂಟರ್ ರೂಮ್ ಮತ್ತೊಂದು ಶಿಕ್ಷಕ ಸಿಬ್ಬಂದಿಯ ಕೊಠಡಿಯಾಗಿದ್ದರೂ ಇದರಲ್ಲಿ ಬಿಸಿಯೂಟದ ರೇಷನ್​ನೊಂದಿಗೆ ವಿಜ್ಞಾನ ಪ್ರಯೋಗಾಲಯ ಮತ್ತು ಇತರ ಸಲಕರಣೆಗಳನ್ನು ಇಡಲಾಗಿದೆ. ಇನ್ನುಳಿದ 5 ಕೊಠಡಿಗಳಲ್ಲಿ ತಲಾ ಎರಡು ಕೊಠಡಿಗಳು 8 ಮತ್ತು 9 ನೇ ತರಗತಿ ಮಕ್ಕಳಿಗೆ ಸೀಮಿತವಾದರೆ ಉಳಿದೊಂದು ಕೊಠಡಿಯಲ್ಲಿ 10ನೇ ತರಗತಿಯ 138 ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿದೆ. ಇನ್ನು 12 ಶಿಕ್ಷಕರ ಅಗತ್ಯವಿರುವ ಶಾಲೆಯಲ್ಲಿ ಈಗ 7 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ.

    ಶೌಚಗೃಹದ ಸಮಸ್ಯೆ: ಶಾಲೆ ಆರಂಭದ ಸಂದರ್ಭದಲ್ಲಿ ನಿರ್ವಿುಸಲಾದ ಎರಡು ಶೌಚಗೃಹಗಳು ಶಿಥಿಲಾವಸ್ಥೆಗೆ ತಲುಪಿದ್ದು ಬಂದ್ ಆಗಿವೆ. ವಿಧಿ ಇಲ್ಲದೆ ವಿದ್ಯಾರ್ಥಿನಿಯರು ದೂರದ ಪಟ್ಟಣ ಪಂಚಾಯಿತಿಯ ಸಾಮೂಹಿಕ ಶೌಚಗೃಹಗಳತ್ತ ತೆರಳುವ ದಯನೀಯ ಸ್ಥಿತಿ ನಿರ್ವಣವಾಗಿದೆ.

    ಹದಗೆಟ್ಟ ಮೈದಾನ: ಶಾಲೆ ಎದುರು ವಿಶಾಲವಾದ ಆಟದ ಮೈದಾನವಿದ್ದರೂ ಅಲ್ಲಿ ಯಥೇಚ್ಛವಾಗಿ ಮುಳ್ಳು ಕಂಟಿಗಳು ಬೆಳೆದಿವೆ. ತಗ್ಗು, ಗುಂಡಿಗಳಲ್ಲಿ ನೀರು ತುಂಬಿಕೊಂಡು ದುರ್ನಾತ ಬೀರುತ್ತಿದೆ. ಮೈದಾನ ಮಧ್ಯದಲ್ಲಿ ವಿದ್ಯುತ್ ಕಂಬ ನೆಟ್ಟಿದ್ದರಿಂದ ಕ್ರೀಡಾ ಚಟುವಟೆಕೆಗಳಿಗೆ ಅಡ್ಡಿಯಾಗಿದೆ.

    ಅಕ್ರಮ ಚಟುವಟಿಕೆ ತಾಣ: ಸುಮಾರು 4 ಎಕರೆ ಪ್ರದೇಶದಲ್ಲಿನ ಈ ಶಾಲೆಗೆ ಒಂದು ಕಡೆ ಮಾತ್ರ ತಡೆಗೋಡೆ ಇದೆ. ಉಳಿದೆಡೆ ಕಾಂಪೌಂಡ್ ಇಲ್ಲದ ಕಾರಣ ರಾತ್ರಿ ಪುಂಡ, ಪೋಕರಿಗಳ ಪಾಲಿಗೆ ಅಕ್ರಮ ಚಟುವಟಿಕೆ ತಾಣವಾಗಿದೆ. ಶಾಲೆ ಮೈದಾನದಲ್ಲೇ ಕೆಲವರು ಶೌಚ ಮಾಡುತ್ತಾರೆ. ಹೀಗಾಗಿ, ಮಕ್ಕಳು ಶಿಕ್ಷಕರಿಗೆ ನಿತ್ಯವೂ ಕಿರಿಕಿರಿಯಾಗಿದೆ. ಜ್ಞಾನ ದೇಗುಲದೊಳಗೆ ಕೈ ಮುಗಿದು ಬರಬೇಕಾದ ಮಕ್ಕಳು ಮೂಗು ಮುಚ್ಚಿಕೊಂಡು ಪ್ರವೇಶಿಸುವಂತಾಗಿದೆ.

    ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣದಿಂದ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಹೆಚ್ಚಿನ ಕೊಠಡಿಗಾಗಿ ಅನುದಾನ ಕೋರಲಾಗಿದೆ. ಹೆಚ್ಚಿನ ಶಿಕ್ಷಕರನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಶಾಲೆ ಆವರಣದ ಸ್ವಚ್ಛತೆ, ಕಾಂಪೌಂಡ್, ಶೌಚಗೃಹಗಳ ನಿರ್ಮಾಣ ಇತ್ಯಾದಿ ಸೌಲಭ್ಯಕ್ಕೆ ಆದ್ಯತೆ ನೀಡಲಾಗಿದೆ.
    | ಆರ್.ಎಸ್. ಬುರಡಿ ಕ್ಷೇತ್ರ ಶಿಕ್ಷಣಾಧಿಕಾರಿ, ಶಿರಹಟ್ಟಿ

    ಕನಿಷ್ಠ ಇನ್ನೂ 4 ಕೊಠಡಿಗಳು, ಹೆಚ್ಚುವರಿ ಶಿಕ್ಷಕರ ಅಗತ್ಯವಿದೆ. ಈ ವಿಷಯವನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ವಿದ್ಯಾರ್ಥಿನಿ ಯರಿಗೆ ಸುವ್ಯವಸ್ಥಿತ ಶೌಚಾಲಯದ ಅಗತ್ಯವಿದೆ. ಶಾಲೆ ಸುರಕ್ಷತೆ ಹಾಗೂ ಅನೈತಿಕ ಚಟುವಟಿಕೆಗೆ ಕಡಿವಾಣ ಹಾಕುಲು ಕಾಂಪೌಂಡ್, ದ್ವಾರ ಬಾಗಿಲು ನಿರ್ವಿುಸಲು ಅನುದಾನ ಕೋರಿ ಶಾಸಕರ ಗಮನಕ್ಕೆ ತರಲಾಗಿದೆ.
    | ಜಿ. ಡಿ. ಈರಕ್ಕನವರ ಪ್ರಭಾರ ಮುಖ್ಯಾಧ್ಯಾಪಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts