More

    ಕರೊನಾ ಲಸಿಕೆ ಪಡೆದ ಇನ್ಪೋಸಿಸ್ ದಿಗ್ಗಜ, ನಾರಾಯಣ ಹೆಲ್ತ್ ಸಿಟಿಯಲ್ಲಿ ಚುಚ್ಚು ಮದ್ದು ಹಾಕಿಸಿಕೊಂಡ ನಾರಾಯಣಮೂರ್ತಿ ದಂಪತಿ

    ಆನೇಕಲ್: ದೇಶದಾದ್ಯಂತ ಕರೊನಾ ಮೂರನೇ ಹಂತದ ಲಸಿಕೆ ನೀಡಲಾಗುತ್ತಿದ್ದು, ಸೋಮವಾರ ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿಯಲ್ಲಿ ಇನ್ಪೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಹಾಗೂ ಇನ್ಪೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ಲಸಿಕೆ ಪಡೆದರು.

    ಬೊಮ್ಮಸಂದ್ರ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ಸಂಜೆ 4 ಗಂಟೆಗೆ ಆಗಮಿಸಿದ ದಂಪತಿ, ದೇಶದ ಜನ ಕರೊನಾ ಮಹಾಮಾರಿಯಿಂದ ಹೊರ ಬರಬೇಕು ಎನ್ನುವುದು ನಮ್ಮ ಆಸೆ. ಹಿರಿಯ ನಾಗರಿಕರಿಗಾಗಿ ಲಸಿಕೆ ನೀಡಲಾಗುತ್ತಿದ್ದು ಎಲ್ಲರೂ ಪಡೆಯಬೇಕು, ನಮ್ಮ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದರು.

    ಇನ್ಪೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಮಾತನಾಡಿ, ದೇಶದ ಪ್ರಧಾನಿಗಳೂ ಲಸಿಕೆಯ ಬಗ್ಗೆ ಸಾಕಷ್ಟು ಕಾಳಜಿ ವಹಿಸಿ ಕೆಲಸ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ನಾವೆಲ್ಲರೂ ಲಸಿಕೆ ಪಡೆಯಬೇಕು ಎಂದರು.

    ವಿಜಯವಾಣಿಗೆ ಮಾತುಕತೆ:

    ಸುಧಾಮೂರ್ತಿ

    1. ಕರೊನಾ ಲಸಿಕೆ ಪಡೆದಿದ್ದೀರಾ, ನಿಮ್ಮ ಅನಿಸಿಕೆ ಏನು?

    – ಯಾರೂ ಭಯಪಡದೆ ಲಸಿಕೆ ಪಡೆಯಬೇಕು. ಹಿರಿಯ ನಾಗರಿಕರಿಗೆ ಹೆಚ್ಚಾಗಿ ಕರೊನಾ ಕಾಣಿಸಿಕೊಳ್ಳುತ್ತಿರುವುದರಿಂದ ಅವರು ಮೊದಲು ಲಸಿಕೆ ಪಡೆಯಬೇಕು.

    2. ಕರೊನಾ ಸಂದರ್ಭದ ದಿನಗಳನ್ನು ಹೇಗೆ ಕಳೆದಿರಿ?

    – ಒಂದು ವರ್ಷದಿಂದ ನಾನು ಹಾಗೂ ನಾರಾಯಣಮೂರ್ತಿಯವರು ಮನೆಯಿಂದ ಹೊರ ಬರಲಿಲ್ಲ, ಮನೆಗೂ ಯಾರನ್ನು ಬಿಟ್ಟುಕೊಳ್ಳಲಿಲ್ಲ. ಲಸಿಕೆ ತೆಗೆದುಕೊಂಡ ನಂತರ ಧೈರ್ಯ ಬಂದಿದ್ದು ಇನ್ನು ಮುಂದೆ ಕಚೇರಿಗೆ ಹೋಗಬೇಕು ಎಂದುಕೊಂಡಿದ್ದೇವೆ.

    3. ದೇಶದ ಲಸಿಕೆ ಬಗ್ಗೆ ಅಭಿಪ್ರಾಯ?

    ನನಗೆ ಸಾಕಷ್ಟು ಸಂತೋಷ ಇದೆ. ಕನ್ನಡತಿಯಾಗಿ ಲಸಿಕೆ ಪಡೆಯುತ್ತಿರುವುದು ಖುಷಿ ತಂದಿದೆ. ನಮ್ಮ ದೇಶದ ವಿಜ್ಞಾನಿಗಳು ಮುಂದುವರಿದಿದ್ದಾರೆ ಎನ್ನುವುದಕ್ಕೆ ಇದೇ ಸಾಕ್ಷಿ. ಅವರಿಗೆ ಧನ್ಯವಾದ ಅರ್ಪಿಸುತ್ತೇನೆ.

    4. ಮುಂದಿನ ದಿನಗಳಲ್ಲಿ ಇನ್ಪೋಸಿಸ್ ಫೌಂಡೇಶನ್ ವತಿಯಿಂದ ಲಸಿಕೆಗೆ ಸಹಕಾರ ನೀಡುತ್ತೀರಾ?

    ಕರೊನಾ ಸಂದರ್ಭದಲ್ಲಿ ಸಾಕಷ್ಟು ಸಹಕಾರವನ್ನು ನೀಡಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯಾವುದೇ ರೀತಿಯ ಸಹಕಾರ ಕೇಳಿದರೂ ಸಂಸ್ಥೆಯಿಂದ ನೀಡಲು ಸಿದ್ಧರಿದ್ದೇವೆ.

    ನಾರಾಯಣಮೂರ್ತಿ

    1. ಲಸಿಕೆ ಪಡೆದ ತಮಗೆ ಏನನಿಸುತ್ತಿದೆ?

    ವರ್ಷದಿಂದ ಮನೆಯಲ್ಲೇ ಇದ್ದು ಈಗ ಹೊರಬಂದಿದ್ದೇನೆ. ದೇವಿ ಶೆಟ್ಟಿ ಅವರು ನಮಗೆ ಲಸಿಕೆ ಪಡೆಯಲು ಸಹಕಾರ ನೀಡಿದ್ದಾರೆ, ಬೆಂಗಳೂರು ನಗರದ ಹೊರಭಾಗದಲ್ಲಿ ಅವರ ಕಾರ್ಯ ಶ್ಲಾಘನೀಯವಾದದ್ದು.

    2. ದೇಶೀಯ ಲಸಿಕೆ ಬಗ್ಗೆ ತಮ್ಮ ಅಭಿಪ್ರಾಯ?

    ನಮ್ಮ ದೇಶದ ಲಸಿಕೆ ಎನ್ನುವುದು ಹೆಮ್ಮೆ, ನಾನೂ ಪ್ರಥಮ ದಿನವೇ ಹಿರಿಯ ನಾಗರಿಕನಾಗಿ ಲಸಿಕೆ ಪಡೆದಿದ್ದೇನೆ, ಸಂತೋಷವಾಗುತ್ತಿದೆ.

    3. ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವ ಹಿರಿಯ ನಾಗರಿಕರಿಗೆ ಏನು ಹೇಳುತ್ತೀರಿ?

    ನನಗೆ 74, ಸುಧಾಮೂರ್ತಿಗೆ 70 ವರ್ಷವಾಗಿದೆ. ನಾವು ಧೈರ್ಯವಾಗಿ ಬಂದು ಲಸಿಕೆ ಪಡೆದಿದ್ದೇವೆ. ಎಲ್ಲರೂ ಭಯಪಡದೆ ಲಸಿಕೆ ಪಡೆಯಬೇಕು. ಇದರಿಂದಲೇ ನಮ್ಮ ಸುರಕ್ಷತೆ ಎನ್ನುವುದನ್ನು ಅರಿಯಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts