More

    ಜಿಲ್ಲೆಯಲ್ಲಿ ಇಳಿಮುಖದತ್ತ ಸೋಂಕು

    ಹಾವೇರಿ: ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿದ್ದ ಕರೊನಾ ಸೋಂಕು ನಿಯಂತ್ರಿಸಲು ಹಾಗೂ ಸೋಂಕಿತರನ್ನು ಪತ್ತೆ ಹಚ್ಚಿ ಸಕಾಲದಲ್ಲಿ ವೈದ್ಯಕೀಯ ಸೇವೆ ಒದಗಿಸಲು ಆರೋಗ್ಯ ಇಲಾಖೆ ನಡೆಸಿದ ಹಳ್ಳಿಯ ಕಡೆ ವೈದ್ಯರ ನಡೆ ಅಭಿಯಾನ ಹಾಗೂ ವಿವಿಧ ಕ್ರಮಗಳು ಫಲ ನೀಡಿದೆ. ಪರಿಣಾಮ ಜಿಲ್ಲೆಯಲ್ಲಿ ಸೋಂಕು ಇಳಿಮುಖದತ್ತ ಸಾಗಿದೆ.

    ಜಿಲ್ಲೆಯಲ್ಲಿ ಮೇ ತಿಂಗಳಲ್ಲಿ ಶರವೇಗದಲ್ಲಿದ್ದ ಸೋಂಕು ಜೂನ್ 2ನೇ ವಾರದ ನಂತರ ಇಳಿಮುಖವಾಗುತ್ತ ಸಾಗಿದೆ. ಕಳೆದ 10 ದಿನಗಳ ಅವಧಿಯಲ್ಲಿ ಕೇವಲ 175 ಜನರಲ್ಲಿ ಮಾತ್ರ ಸೋಂಕು ಕಾಣಿಸಿಕೊಂಡಿದೆ. ವೈದ್ಯರ ನಡೆ ಹಳ್ಳಿಯ ಕಡೆಗೆ ಅಭಿಯಾನದಲ್ಲಿ ಸೋಂಕು ಹೆಚ್ಚಿರುವ ಹಳ್ಳಿಗಳಿಗೆ ಆಯಾ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರ ತಂಡ ಭೇಟಿ ನೀಡಿತು. ಇವರೊಂದಿಗೆ ಗ್ರಾಮ ಮಟ್ಟದ ಕಾರ್ಯಪಡೆ, ಪಂಚಾಯಿತಿ ಸಿಬ್ಬಂದಿ ಕೈಜೋಡಿಸಿತು. ಪ್ರತಿದಿನ ಈ ತಂಡ ಮೂರ್ನಾಲ್ಕು ಹಳ್ಳಿಗಳಿಗೆ ಭೇಟಿ ನೀಡಿ, ಮನೆಮನೆ ಸರ್ವೆ ಕಾರ್ಯ ನಡೆಸಿತು. ಗ್ರಾಮದ ಯಾವ ಏರಿಯಾದಲ್ಲಿ ಹೆಚ್ಚು ಸೋಂಕು ಕಂಡಿದೆಯೋ ಅಲ್ಲಿ ಪ್ರತಿಯೊಬ್ಬರ ಸ್ವ್ಯಾಬ್ ಟೆಸ್ಟ್ ಮಾಡಲಾಯಿತು. ಕರೊನಾ ಸೋಂಕಿನ ಲಕ್ಷಣಗಳಿರುವ ವ್ಯಕ್ತಿಗಳಿಗೆ ಅಗತ್ಯ ಔಷಧ ನೀಡಿ, ಟೆಸ್ಟ್​ನಲ್ಲಿ ಪಾಸಿಟಿವ್ ಬಂದವರನ್ನು ಕೋವಿಡ್ ಕೇರ್ ಸೆಂಟರ್​ಗೆ, ಅವಶ್ಯವಿದ್ದವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಮುಖ್ಯವಾಗಿ ಹೋಮ್ ಐಸೋಲೇಷನ್ ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ನಿಲ್ಲಿಸಲಾಯಿತು. ಇದರಿಂದ ಗ್ರಾಮೀಣ ಭಾಗದಲ್ಲಿ ಸೋಂಕು ನಿಯಂತ್ರಣಕ್ಕೆ ಸಾಕಷ್ಟು ಅನುಕೂಲವಾಯಿತು.

    ಕರೊನಾ ಟೆಸ್ಟ್ ಹೆಚ್ಚಳ: ಹಳ್ಳಿ ಕಡೆ ಅಭಿಯಾನದ ಮೂಲಕ ಪ್ರತಿದಿನ ಸೋಂಕಿನ ಲಕ್ಷಣವಿದ್ದವರ ಜೊತೆಗೆ ವಿವಿಧ ಕಾರ್ಯಗಳಿಗೆ ಬೇರೆಡೆ ಸಂಚಾರ ನಡೆಸಿದವರನ್ನು ಕರೊನಾ ಟೆಸ್ಟ್​ಗೆ ಒಳಪಡಿಸಲಾಯಿತು. ಪ್ರತಿ ತಾಲೂಕಿನಲ್ಲಿ ನಿತ್ಯ 350ರಿಂದ 400 ಜನರ ಟೆಸ್ಟ್ ಕಡ್ಡಾಯ ಮಾಡಿದ್ದಲ್ಲದೆ ಜಿಲ್ಲೆಯಲ್ಲಿ ಪ್ರತಿದಿನ 2,500ಕ್ಕೂ ಹೆಚ್ಚು ಜನರ ಪರೀಕ್ಷೆ ನಡೆಸಲಾಯಿತು. ಇದರಿಂದ ಸೋಂಕಿತರು ಬಹುಬೇಗನೇ ಪತ್ತೆಯಾಗಿ ಆರೈಕೆಗೆ ದಾಖಲಾದರು. ಅಲ್ಲದೆ, ಅವರಿಂದ ಮತ್ತೊಬ್ಬರಿಗೆ ಸೋಂಕು ಹರಡುವುದನ್ನು ತಪ್ಪಿಸಲಾಯಿತು.

    ಈ ಅಭಿಯಾನ ಆರಂಭಕ್ಕೂ ಮೊದಲು ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸೋಂಕು ವ್ಯಾಪಕವಾಗಿತ್ತು. ಸೋಂಕು ಲಕ್ಷಣವಿದ್ದರೂ ಟೆಸ್ಟ್ ಮಾಡಿಸಿಕೊಳ್ಳಲು ಜನ ಒಪ್ಪುತ್ತಿರಲಿಲ್ಲ. ಕೋವಿಡ್ ಆರೈಕೆ ಕೇಂದ್ರಕ್ಕೆ ಬರಲು ಹಿಂದೇಟು ಹಾಕುತ್ತಿದ್ದರು. ಆದರೆ, ವೈದ್ಯರ ನಡೆ ಹಳ್ಳಿ ಕಡೆ ಅಭಿಯಾನ ಆರಂಭವಾದ ಮೇಲೆ ಗ್ರಾಮೀಣರಲ್ಲಿ ಜಾಗೃತಿ ಮೂಡಿಸಲಾಯಿತು. ಬ್ಯಾಡಗಿ ತಾಲೂಕಿನ ಗ್ರಾಮವೊಂದರಲ್ಲಿ ಜನತೆ ಟೆಸ್ಟ್​ಗೆ ನಿರಾಕರಿಸಿದಾಗ ಇಡೀ ಗ್ರಾಮವನ್ನೇ ಸೀಲ್​ಡೌನ್ ಮಾಡಿದರು. ನಂತರ ಗ್ರಾಮಸ್ಥರ ಮನವೊಲಿಸಿ ಟೆಸ್ಟ್ ಮಾಡಿಸಲಾಯಿತು. ಲಸಿಕಾಕರಣದ ಅಭಿಯಾನವನ್ನು ಹಮ್ಮಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಹಾಕಿಸಲಾಯಿತು. ಇಂತಹ ಅನೇಕ ಕ್ರಮಗಳಿಂದ ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿದೆ.

    ಆರೋಗ್ಯ ಸಿಬ್ಬಂದಿ ಅನನ್ಯ ಸೇವೆ: ವೈದ್ಯರು, ನರ್ಸ್​ಗಳು, ಸಿಬ್ಬಂದಿಯ ಕಾರ್ಯ ಈ ಅಭಿಯಾನದಲ್ಲಿ ಮಹತ್ವದ್ದಾಗಿತ್ತು. ಕರೊನಾ ಸೋಂಕಿತರ ಪತ್ತೆಯ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಸಮರ್ಪಕವಾಗಿ ಮಾಡಿದರು. ಆರೋಗ್ಯ ಇಲಾಖೆಯ ಹೊಣೆ ಹೊತ್ತಿರುವ ಡಿಎಚ್​ಒ ಡಾ. ಎಚ್.ಎಸ್. ರಾಘವೇಂದ್ರಸ್ವಾಮಿಯವರು ಕಾಲಿಗೆ ಪೆಟ್ಟು ಬಿದ್ದು ಚಿಕಿತ್ಸೆಗೆ ಒಳಗಾಗಿದ್ದರು. ನಡೆದಾಡಲು ತೊಂದರೆಯಾಗಿ ವಿಶ್ರಾಂತಿ ಅಗತ್ಯವಿದ್ದರೂ ಕರೊನಾ ನಿಯಂತ್ರಣಕ್ಕಾಗಿ ವಾಕರ್​ನ ಸಹಾಯದಿಂದ ಕರ್ತವ್ಯಕ್ಕೆ ಹಾಜರಾಗಿ ಉಳಿದ ಸಿಬ್ಬಂದಿಗೆ ಪ್ರೇರಣೆ ತುಂಬಿದರು.

    ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಹಳ್ಳಿ ಕಡೆ ವೈದ್ಯರ ನಡೆ ಕಾರ್ಯಕ್ರಮ ಆರಂಭಿಸಲಾಯಿತು. ಶಾಸಕರು, ಜಿಲ್ಲಾಧಿಕಾರಿ, ಸಿಇಒ ಸಲಹೆಯ ಮೇರೆಗೆ ಸೋಂಕು ಹರಡದಂತೆ ತಡೆಯಲು ನಾನಾ ಕ್ರಮಗಳನ್ನು ಕೈಗೊಂಡ ಪರಿಣಾಮ ಇಂದು ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ನಿಯಂತ್ರಣಕ್ಕೆ ಬಂದಿದೆ. ಸಂಭವನೀಯ 3ನೇ ಅಲೆ ನಿಯಂತ್ರಣಕ್ಕೂ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದ್ದು, ಮಕ್ಕಳ ಪ್ರತ್ಯೇಕ ವಾರ್ಡ್ ಹಾಗೂ ಬೆಡ್​ಗಳನ್ನು ನಿರ್ವಿುಸಲಾಗುತ್ತಿದೆ. ಎಲ್ಲ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ.

    | ಡಾ. ಎಚ್.ಎಸ್. ರಾಘವೇಂದ್ರಸ್ವಾಮಿ, ಡಿಎಚ್​ಒ ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts