More

    ಶಿಶುವಿಗೆ ಹೃದಯ ಶಸ್ತ್ರಚಿಕಿತ್ಸೆ, ಕೆಎಲ್‌ಇ ವೈದ್ಯರ ಸಾಧನೆ

    ಬೆಳಗಾವಿ: 10 ದಿನದ ಅವಳಿ-ಜವಳಿ ಶಿಶುಗಳಲ್ಲಿ ಉಸಿರಾಟದ ತೊಂದರೆಯಿಂದ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಒಂದು ಮಗುವಿಗೆ ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ ನೆರವೇರಿಸುವ ಮೂಲಕ ವೈದ್ಯರು ಜೀವದಾನ ನೀಡಿ, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ನಗರದ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಹೃದಯ ಶಸ್ತ್ರಚಿಕಿತ್ಸಾ ವಿಭಾಗದ ತಜ್ಞವೈದ್ಯ ಡಾ.ಪ್ರವೀಣ ತಂಬ್ರಳ್ಳಿಮಠ ಹಾಗೂ ಅವರ ತಂಡ ಕ್ಲಿಷ್ಟಕರ ಶಸ ಚಿಕಿತ್ಸೆ ಮಾಡಿ ಮಗುವನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

    ಟಿಜಿಎ ಸಮಸ್ಯೆ: ಗೋವಾದ ಖಾಸಗಿ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ಜನಿಸಿದ್ದ ಮಗುವಿಗೆ ಉಸಿರಾಟದ ತೊಂದರೆ, ಎದೆಬಿಗಿತ ಉಂಟಾಗಿ ದೇಹ ನೀಲಿ ಬಣ್ಣಕ್ಕೆ ತಿರಗುತ್ತಿತ್ತು. ಅಲ್ಲಿನ ವೈದ್ಯರು ಶೀಘ್ರವೇ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಲು ಸಲಹೆ ನೀಡಿದ್ದಾರೆ.

    ಮಗು ಆಸ್ಪತ್ರೆಗೆ ಬಂದ ತಕ್ಷಣವೇ ಪರೀಕ್ಷಿಸಲಾಗಿ ಕೇವಲ 2 ಕೆಜಿಗಿಂತಲೂ ಕಡಿಮೆ ತೂಕವಿದ್ದ ಆ ಶಿಶುವಿಗೆ ಹೃದಯದಿಂದ ಪಲ್ಮನರಿ ಮತ್ತು ಅರೋಟಾದ ಎರಡು ಮುಖ್ಯ ರಕ್ತನಾಳಗಳ ಮೂಲಕ ರಕ್ತ ಹೊರಹೋಗುತ್ತಿತ್ತು. ಇದನ್ನು ವೈದ್ಯಕೀಯ ಭಾಷೆಯಲ್ಲಿ ‘ಟ್ರಾನ್ಸ್‌ಪೊಸಿಶನ್ ಆಫ್ ದಿ ಗ್ರೇಟ್ ಆರ‌್ಟರಿ (ಟಿಜಿಎ) ಎಂದು ಕರೆಯಲಾಗುತ್ತದೆ. ಇಂತಹ ಮಗು ಜನಿಸಿದ ತಿಂಗಳೊಳಗಾಗಿ ಸಾವನ್ನಪ್ಪುತ್ತವೆ.

    ಹೃದಯ ಚಿಕಿತ್ಸೆ: ಉಸಿರಾಟ ಸೇರಿದಂತೆ ಇನ್ನಿತರ ತೊಂದರೆ ಅನುಭವಿಸುತ್ತಿದ್ದ ಮಗು ಬದುಕುವುದು ಕಷ್ಟವಾಗಿತ್ತು. ಆದರೂ ತಡಮಾಡದೆ ಕಾರ್ಯೋನ್ಮುಖರಾದ ವೈದ್ಯರು, ನಿರಂತರ 8 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದರು. ಮಗುವಿನ ಹೃದಯವು 50 ಗ್ರಾಂಗಿಂತ ಕಡಿಮೆ ತೂಕವಿದ್ದು, ಶಸ್ತ್ರಚಿಕಿತ್ಸೆ ಅತ್ಯಂತ ಕಠಿಣವಾಗಿತ್ತು. ಹೃದಯದಿಂದ ಪಲ್ಮನರಿ ಮತ್ತು ಅರೋಟಾದ ಎರಡು ಮುಖ್ಯ ರಕ್ತನಾಳಗಳ ಮೂಲಕ ರಕ್ತವು ಹೊರಹೋಗುತ್ತಿರುವುದನ್ನು ತಡೆಯಲು ಎರಡು ಮುಖ್ಯ ರಕ್ತನಾಳಗಳನ್ನು ನಿಗದಿತ ಹೃದಯದ ಪಂಪಿಂಗ್ ಮಾರ್ಗಕ್ಕೆ ಜೋಡಿಸಿ, ಮಗುವಿನ ಹೃದಯ ಸರಿಪಡಿಸಿದರು.

    ಯಶಸ್ವಿ ಚಿಕಿತ್ಸೆ ಮೂಲಕ ಹಸುಗೂಸಿನ ಪ್ರಾಣ ಉಳಿಸಿದರು. ಅತ್ಯಂತ ಕ್ಲಿಷ್ಟಕರವಾದ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ತಜ್ಞವೈದ್ಯ ಡಾ.ಪ್ರವೀಣ ತಂಬ್ರಳ್ಳಿಮಠ, ಡಾ.ನಿಕುಂಜ ವ್ಯಾಸ ಅವರಿಗೆ ಅರಿವಳಿಕೆ ತಜ್ಞರಾದ ಡಾ.ಆನಂದ ವಾಘರಾಳಿ, ಡಾ.ಶರಣಗೌಡ ಪಾಟೀಲ, ಡಾ.ನಿಧಿ ಗೋಯಲ್ ಸಾಥ್ ನೀಡಿದ್ದರು. ಈ ಶಸ್ತ್ರಚಿಕಿತ್ಸೆಯನ್ನು ಗೋವಾದ ಆರೋಗ್ಯ ಯೋಜನೆಯಾದ ದೀನದಯಾಳ ಸ್ವಾಸ್ಥ್ಯ ಸೇವಾ ಯೋಜನೆಯಡಿ ನೆರವೇರಿಸಲಾಗಿದೆ.

    ವೈದ್ಯ ತಂಡಕ್ಕೆ ಡಾ. ಕೋರೆ ಅಭಿನಂದನೆ: ಶಸ್ತ್ರಚಿಕಿತ್ಸೆ ಬಳಿಕ ಮಗು ಉಸಿರಾಟದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿದೆ. ಇದರಿಂದ ಸಂತಸಗೊಂಡಿರುವ ಮಗುವಿನ ಪಾಲಕರು ಹಾಗೂ ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರು ವೈದ್ಯರ ಮತ್ತು ನರ್ಸಿಂಗ್ ಸಿಬ್ಬಂದಿ ಮಹತ್ತರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts