More

    ಕೈಗಾರಿಕೆ ಸ್ಥಾಪನೆಯಿಂದ ಅಭಿವೃದ್ಧಿ: ಬಿಎಂಆರ್‌ಡಿಎ ಮಾಜಿ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಅಭಿಪ್ರಾಯ

    ಮಾಗಡಿ : ಕೈಗಾರಿಕೆ ಪ್ರಾರಂಭದಿಂದ ತಾಲೂಕು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಬಿಎಂಆರ್‌ಡಿಎ ಮಾಜಿ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಹೇಳಿದರು.
    ಪಟ್ಟಣದ ಕೆಂಪೇಗೌಡ ಪ್ರತಿಮೆ ಬಳಿ ಭಾನುವಾರ ಕೈಗಾರಿಕೆ ಪ್ರದೇಶ ಸ್ಥಾಪನೆ ಕುರಿತು ಕೈಗಾರಿಕೆ ಬೇಕೆ, ಬೇಡವೇ ಎಂದು ಚರ್ಚಿಸಲು ಕರೆದಿದ್ದ ಸಭೆಯಲ್ಲಿ ಮಾತನಾಡಿ, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಮಾಗಡಿ, ನಾಗಮಂಗಲ ತಾಲೂಕಿನಲ್ಲಿ ಕೈಗಾರಿಕೆ ಸ್ಥಾಪಿಸಲು ಕೈಗಾರಿಕೆ ವಲಯ ಗುರುತಿಸಲು ಅಧಿಸೂಚನೆ ಹೊರಡಿಸಿದರು.

    ನಂತರ ಬಿಜೆಪಿ ಸರ್ಕಾರದಲ್ಲಿ ಕೈಗಾರಿಕಾ ಸಚಿವರಾಗಿದ್ದ ಜಗದೀಶ್ ಶೆಟ್ಟರ್ ಅವರು ಕಾಳಾರಿ, ನಾರಸಂದ್ರ, ಶಿವನಸಂದ್ರ ಸೇರಿ ಸುತ್ತಮುತ್ತಲ 3200 ಎಕರೆ ಜಮೀನು ಗುರುತಿಸಿದ್ದಾರೆ ಎಂದು ತಿಳಿಸಿದರು.
    ಕೆಲವರು ಸ್ವಾರ್ಥಕ್ಕಾಗಿ ಕೈಗಾರಿಕೆ ತರುತ್ತೇನೆ ಎನ್ನುತ್ತಿದ್ದು, ಕೆಲವರು ತರಲು ಬಿಡುವುದಿಲ್ಲ ಎನ್ನುತ್ತಿದ್ದಾರೆ. ಸರ್ಕಾರ ರೈತರಿಗೆ ನೋಟಿಸ್ ನೀಡಿ ಶೇ.60ರಷ್ಟು ರೈತರು ಒಪ್ಪಿಗೆ ಪತ್ರ ನೀಡಿದರೆ ಮಾತ್ರ ಕೈಗಾರಿಕೆ ಮಾಡಲು ಅಧಿಸೂಚನೆ ಮಾಡುತ್ತಾರೆ. ಈಗಾಗಲೇ ಅಧಿಸೂಚನೆಯಾಗಿದೆ, ಒತ್ತುವರಿ ಮಾಡುತ್ತಿದ್ದಾರೆ, ಸರ್ಕಾರ ಸುಗ್ರೀವಾಜ್ಞೆ ತಂದು ಒಕ್ಕಲೆಬ್ಬಿಸುತ್ತಾರೆ ಎಂಬ ಕಟ್ಟುಕಥೆ ಹೇಳಿ ರೈತರಲ್ಲಿ ಗೊಂದಲ ಮೂಡಿಸುತ್ತಿರುವುದು ಸರಿಯಲ್ಲ
    ಎಂದು ಆರೋಪಿಸಿದರು.

    ತಾಲೂಕಿನಲ್ಲಿ ಕೈಗಾರಿಕೆಗಳಿಲ್ಲದೆ ಸಾವಿರಾರು ಮಂದಿ ಬೆಂಗಳೂರಿಗೆ ಉದ್ಯೋಗಕ್ಕೆ ತೆರಳುತ್ತಿದ್ದಾರೆ. ನಮ್ಮ ತಾಲೂಕಿಗೂ ಕೈಗಾರಿಕೆ ಬಂದರೆ ಅಭಿವೃದ್ಧಿಯ ಜತೆಗೆ ಬೇರೆಡೆ ಕೆಲಸ ಮಾಡುವವರು ಇಲ್ಲೆ ಕೆಲಸ ಮಾಡಲು ಬರುತ್ತಾರೆ. ಸ್ಥಳಿಯವಾಗಿ ರೈತರ ಮಕ್ಕಳ ಅರ್ಹತೆ ಅನುಗುಣವಾಗಿ ಉದ್ಯೋಗ ನೀಡಬೇಕು ಎಂಬ ನಿಂಬಂಧನೆ ಹಾಕೋಣ, ರೈತರಿಗೆ ತೊಂದರೆಯಾಗದೆ ಜಮೀನಿಗೆ ಉತ್ತಮ ಬೆಲೆ ನೀಡಿ ಕೈಗಾರಿಕೆ ಸ್ಥಾಪನೆ ಮಾಡಲಿ ಎಂದರು.

    ಮಣ್ಣಿಗಾನಹಳ್ಳಿ ರೈತಮುಖಂಡ ಕುಮಾರು ಮಾತನಾಡಿ, ಕೈಗಾರಿಕೆ ಬೇಕು, ಆದರೆ ನಮ್ಮ ಬಳಿ ಅಲ್ಪ ಸಲ್ಪ ಜಮೀನಿದ್ದು, ಇದನ್ನುಮಾರಾಟ ಮಾಡಿ ಬೇರೆಡೆ ಖರೀದಿಸಲು ಈ ಹಣ ಸಾಲದು. ರೈತರ ಜಮೀನನ್ನು ಬಿಟ್ಟು ನಾರಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಾಲ್ಕು ಕಡೆ ಗೋಮಾಳ ಪ್ರದೇಶವಿದೆ ಅಲ್ಲಿ ಕೈಗಾರಿಕೆ ಪ್ರದೇಶ ನಿರ್ಮಿಸಿ ಎಂದು ಸಲಹೆ ನೀಡಿದರು.

    ಕಸಾಪ ತಾಲೂಕು ಅಧ್ಯಕ್ಷೆ ಕಲ್ಪನಾ ಶಿವಣ್ಣ ಮಾತನಾಡಿ, ಗೋಮಾಳದಲ್ಲಿ ಕಾರ್ಖಾನೆ
    ನಿರ್ಮಿಸಲಿ, ಈಗಾಗಲೇ ಬೇರೆಡೆ ವಶಪಡಿಸಿಕೊಂಡಿರುವ ಕೃಷಿ ಭೂಮಿಯಲ್ಲಿ ಅರ್ಧದಷ್ಟು ಉಪಯೋಗಿಸಿಕೊಂಡಿಲ್ಲ. ಬಣ್ಣದ ಮಾತನಾಡಿ ಜನರ ಹಾದಿ ತಪ್ಪಿಸುವುದು ಬೇಡ, ಕೈಗಾರಿಕೆಯಿಂದ ಉದ್ಯೋಗ ದಾತರಾಗಲು ಸಾಧ್ಯವಿಲ್ಲ, ಪ್ಲಾಸ್ಟಿಕ್ ಕಾರ್ಖಾನೆ ಬಂದರೆ ಪರಿಸರ ನಾಶವಾಗುತ್ತದೆ ಎಂದರು.

    ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ತಮ್ಮಣ್ಣಗೌಡ, ತಾಲೂಕು ಜೆಡಿಎಸ್ ಅಧ್ಯಕ್ಷ ಪೊಲೀಸ್ ರಾಮಣ್ಣ, ಮಾಜಿ ಅಧ್ಯಕ್ಷ ಗುಡ್ಡೇಗೌಡ, ಮಹಿಳಾ ಅಧ್ಯಕ್ಷೆ ಶೈಲಜಾ, ಪುರಸಭೆ ಅಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷ ರೆಹಮತ್, ಸದಸ್ಯರಾದ ಜಯರಾಮು, ಅನಿಲ್ ಕುಮಾರು, ಮಾಜಿ ಸದಸ್ಯ ರೂಪೇಶ್, ಕೆಡಿಪಿ ಸದಸ್ಯ
    ನಾಗರಾಜು, ಎಪಿಎಂಸಿ ನಿರ್ದೆಶಕ ಮಂಜುನಾಥ್, ರೈತಸಂಘದ ಅಧ್ಯಕ್ಷ ಲೋಕೇಶ್, ಕರ್ನಾಟಕ ರೈತಹಿತರಕ್ಷಣಾ ವೇದಿಕೆ ಅಧ್ಯಕ್ಷ ಗುಡ್ಡೇಗೌಡ, ಜಿಲ್ಲಾ ಉಪಾಧ್ಯಕ್ಷ ಆರ್.ದಿನೇಶ್, ತಾಪಂ ಮಾಜಿ ಅಧ್ಯಕ್ಷೆ ಅರುಂದತಿ ಚಿಕ್ಕಣ್ಣ ಇತರರು ಇದ್ದರು.

    ಮಾಗಡಿ ಬೆಂಗಳೂರು ಆಗುವುದಿಲ್ಲ : ಕೈಗಾರಿಕೆ ಪ್ರಾರಂಭವಾದ ಕೂಡಲೇ ಮಾಗಡಿ ಬೆಂಗಳೂರು ಆಗುವುದಿಲ್ಲ, ಮಾಗಡಿ ಬೆಂಗಳೂರು ಆಗಬೇಕೇ ಬೇಡವೆ ಎಂದು ಕಸಾಪ ತಾಲೂಕು ಅಧ್ಯಕ್ಷೆ ಕಲ್ಪನಾ ಶಿವಣ್ಣ ಸಭೆಯಲ್ಲಿ ಕೇಳಿದಾಗ ಹಲವಾವರು ಬೇಕು ಎಂದರೆ ಮತ್ತಷ್ಟು ಮಂದಿ ಬೇಡ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಈ ವೇಳೆ ಗೊಂದಲ ಉಂಟಾದಾಗ ಸಭೆ ಆಯೋಜಕರು ತಿಳಿಗೊಳಿಸಿದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts