More

    ಮಂಗಳೂರಿನಲ್ಲೂ ಬಹುಮಹಡಿ ಕೈಗಾರಿಕಾ ಸಂಕೀರ್ಣ

    ವೇಣುವಿನೋದ್ ಕೆ.ಎಸ್. ಮಂಗಳೂರು
    ಉದ್ಯಮಗಳಿಗೆ ಕೈಗಾರಿಕಾ ಪ್ರದೇಶ, ಪೂರಕ ಸ್ಥಳಾವಕಾಶದ ಕೊರತೆ ನೀಗಿಸುವುದಕ್ಕಾಗಿ ಮಂಗಳೂರಿನ ಉದ್ಯಮಿಗಳು ಮಲ್ಟಿ ಲೆವೆಲ್ ಕೈಗಾರಿಕಾ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದಕ್ಕಾಗಿ ಸರ್ಕಾರದಿಂದ ಸಹಕಾರದ ಭರವಸೆಯೂ ದೊರಕಿದ್ದು, ಈ ಮಾದರಿಗೆ ಇರುವ ಬೇಡಿಕೆಗಳ ಬಗ್ಗೆ ಸಮೀಕ್ಷೆ ನಡೆಸುವುದಕ್ಕೆ ಸೂಚನೆ ಸಿಕ್ಕಿದೆ.

    ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಪ್ರಸ್ತುತ ಹೊಸ ಕೈಗಾರಿಕೆಗಳಿಗೆ ಜಾಗವಿಲ್ಲ. ಸಣ್ಣ ಸಣ್ಣ ಕೈಗಾರಿಕಾ ಘಟಕ ಸ್ಥಾಪಿಸುವವರಿಂದ ಸಾಕಷ್ಟು ಬೇಡಿಕೆ ಕೇಳಿಬರುತ್ತಿದೆ. ಆದರೆ ಅವರಿಗೆ ದೊಡ್ಡ ಮಟ್ಟದ ಬಂಡವಾಳ ಹೂಡಿಕೆ ಮಾಡಲಾಗುವುದಿಲ್ಲ. ಅಂಥವರ ಸಂಖ್ಯೆ ಹೆಚ್ಚಿರುವುದರಿಂದ ಅವರಿಗಾಗಿ ಈ ರೀತಿಯ ಸಂಕೀರ್ಣವನ್ನು ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ.

    ಹೊಸ ಪರಿಕಲ್ಪನೆ: ಮಲ್ಟಿ ಲೆವೆಲ್ ಕೈಗಾರಿಕಾ ಕಾಂಪ್ಲೆಕ್ಸ್ ಎಂಬುದು ಹೊಸ ಪರಿಕಲ್ಪನೆ. ಮುಂಬೈನಲ್ಲಿ ರಹೇಜಾ ಸಮೂಹದವರು ಇದೇ ಮಾದರಿಯ ಕಾಂಪ್ಲೆಕ್ಸ್ ನಿರ್ಮಿಸಿದ್ದಾರೆ. ನಮ್ಮ ರಾಜ್ಯದಲ್ಲಿ ಅಂಥ ಕಾಂಪ್ಲೆಕ್ಸ್ ಇಲ್ಲ. ಬೈಕಂಪಾಡಿಯಲ್ಲಿ ಕೆಎಸ್‌ಎಸ್‌ಐಡಿಸಿಯವರ ಒಂದು ಎಕರೆ ಜಾಗವಿದ್ದು, ಅಲ್ಲಿ ಈ ಕಾಂಪ್ಲೆಕ್ಸ್ ಯೋಜಿಸಲಾಗಿದೆ. ವಸತಿಗಾಗಿ ನಿರ್ಮಿಸಲಾಗುವ ಅಪಾರ್ಟ್‌ಮೆಂಟ್ ರೀತಿಯಲ್ಲೇ ಇದೂ ಇರಲಿದೆ. ಹಲವು ಸೌಲಭ್ಯಗಳನ್ನು ಎಲ್ಲರಿಗೂ ಆಗುವಂತೆ ಇರಿಸಿ, ಅಗತ್ಯವಿರುವ ಸ್ಥಳಾವಕಾಶ ಒದಗಿಸಲಾಗುವುದು.

    ಯಾಕಾಗಿ ಈ ಪಾರ್ಕ್?: ಪ್ರಮುಖವಾಗಿ ಉದ್ಯಮಿಗಳಿಗೆ, ನವೋದ್ಯಮಿಗಳಿಗೆ ಅಗತ್ಯವಾದ ಎಲ್ಲ ಮೂಲಸೌಕರ್ಯಗಳನ್ನೂ ಒದಗಿಸುವ ಮೂಲಕ ಜಾಗ, ಸಂಪನ್ಮೂಲ, ಶಕ್ತಿ ಎಲ್ಲವನ್ನೂ ಉಳಿಸುವುದು. ಬಹುಮಹಡಿ ಸಂಕೀರ್ಣವಾದ್ದರಿಂದ ಭೂಮಿ ಉಳಿತಾಯವಾಗುತ್ತದೆ, ಉಳಿತಾಯವಾದ ಜಾಗದಲ್ಲಿ ಟ್ರಕ್‌ಗಳು ಮತ್ತಿತರ ವಾಹನ ಸಂಚಾರಕ್ಕೆ, ಪಾರ್ಕಿಂಗ್‌ಗೆ ಜಾಗ, ಅಪಾಯಕಾರಿ ವಸ್ತುಗಳ ಸಂಗ್ರಹಣೆಗೆ ಗೋದಾಮು, ಟ್ರಕ್ ಬೇ, ಪ್ರತ್ಯೇಕ ಪ್ರಯಾಣಿಕರ ಹಾಗೂ ಕಾರ್ಗೊ ಲಿಫ್ಟ್‌ಗಳನ್ನು ಒದಗಿಸಲಾಗುವುದು. ಪರಸ್ಪರ ಸಹಕಾರವುಳ್ಳ, ನೋಡುವುದಕ್ಕೂ ಮೆಚ್ಚುಗೆಯೆನಿಸುವ ಸ್ನೇಹೀ ವಾತಾವರಣವಿರುವ ಪರಿಸರ ನಿರ್ಮಿಸುವುದು ಮುಖ್ಯ ಉದ್ದೇಶ ಎಂದು ಕೆನರಾ ಸಣ್ಣ ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಜಿತ್ ಕಾಮತ್ ತಿಳಿಸುತ್ತಾರೆ.

    ಯಾವೆಲ್ಲ ಕೈಗಾರಿಕೆ?: ಪ್ರಸ್ತುತ ನಮ್ಮಲ್ಲಿ ಪ್ರಮುಖವಾಗಿ ಬೇಡಿಕೆ ಇರುವ ಕೈಗಾರಿಕೆಗಳೆಂದರೆ ಆಗ್ರೋ ಆಧಾರಿತ ಮತ್ತು ಸಂಸ್ಕರಿತ ಆಹಾರ, ಗಾರ್ಮೆಂಟ್ಸ್ ಮತ್ತು ಟೆಕ್ಸ್‌ಟೈಲ್, ಇಲೆಕ್ಟ್ರಾನಿಕ್ಸ್, ಇಲೆಕ್ಟಿಕಲ್ ಪ್ಯಾನೆಲ್ಸ್, ಮೋಟರ್ಸ್‌, ಟೂಲ್ಸ್ ಮತ್ತು ಡೈ, ಅಲ್ಯುಮಿನಿಯಂ ಫ್ಯಾಬ್ರಿಕೇಶನ್, ರಬ್ಬರ್ ಪ್ರಾಡಕ್ಟ್ಸ್, ಪೇಪರ್ ಪ್ರಾಡಕ್ಟ್ಸ್ ಮತ್ತು ಟಿಶ್ಯೂ ಇತ್ಯಾದಿ.
    ಈ ಬಹುಮಹಡಿ ಸಂಕೀರ್ಣದಲ್ಲಿ ಮೈನ್ ಬ್ಲಾಕ್ ಹಾಗೂ ಸರ್ವೀಸ್ ಬ್ಲಾಕ್ ಇರಲಿದ್ದು, ಮೈನ್ ಬ್ಲಾಕ್‌ನಲ್ಲಿ ವಿವಿಧ ಕೈಗಾರಿಕಾ ಘಟಕಗಳು, ಎಲ್ಲರಿಗೂ ಅನ್ವಯವಾಗುವಂತೆ ಕಾಮನ್ ರಿಸೆಪ್ಷನ್, ಸಮಾಲೋಚನಾ ಕೊಠಡಿ, ಪ್ರಿಂಟಿಂಗ್, ಸ್ಟಾಫ್ ರೆಸ್ಟ್ ರೂಮ್, ಸರ್ವರ್ ರೂಮ್, ಡಿಜಿ ಪವರ್ ಸಪ್ಲೈ, ಅಗ್ನಿಶಾಮಕ ಟವರ್, ಅಲಾರ್ಮ್ ಮತ್ತು ಅಗಿ ್ನಸುರಕ್ಷತಾ ವ್ಯವಸ್ಥೆ ಇರಲಿದೆ.
    ಸರ್ವೀಸ್ ಬ್ಲಾಕ್‌ನಲ್ಲಿ ಕಂಟ್ರೋಲ್ ಪ್ಯಾನೆಲ್, ಕಂಪ್ರೆಸರ್, ಸಬ್‌ಸ್ಟೇಷನ್ ಯಾರ್ಡ್, ಡಿಜಿ ಯಾರ್ಡ್, ಟ್ರಕ್ ಬೇ, ಭೂಗತ ನೀರು ಶೇಖರಣಾಗಾರ, ಟ್ರೀಟ್ಮೆಂಟ್ ಪ್ಲಾಂಟ್, ಸೋಲಾರ್ ಪವರ್ ಜನರೇಶನ್ ಘಟಕ ಇರುತ್ತದೆ. ಇಷ್ಟು ಘಟಕಗಳಿಗೆ ಪ್ರತ್ಯೇಕವಾಗಿ ವರ್ಟಿಕಲ್ ಕಾರ್ ಪಾರ್ಕಿಂಗ್ ಯಾಂತ್ರೀಕೃತ ಮಾದರಿಯಲ್ಲಿ ನಿರ್ಮಿಸಿ ಜಾಗ ಉಳಿಸಲಾಗುವುದು.

    ಅನೇಕ ಉದ್ದಿಮೆದಾರರಿಗೆ ಅಗತ್ಯವಿರುವಷ್ಟು ಸ್ಥಳಾವಕಾಶ, ಕಾಮನ್ ಸೌಲಭ್ಯಗಳು ಸಾಕಾಗುತ್ತವೆ, ಹೆಚ್ಚಿನ ಬಂಡವಾಳ ಇರುವುದಿಲ್ಲ. ಅಂಥವರಿಗೆ ಈ ಕಾಂಪ್ಲೆಕ್ಸ್ ನೆರವಾಗಲಿದೆ. ಇದನ್ನು ಸರ್ಕಾರ, ಕೆಎಸ್‌ಎಸ್‌ಐಡಿಸಿ, ನಮ್ಮ ಸಂಘ ಸೇರಿಕೊಂಡು ನಿರ್ಮಿಸಿ, ವಿಶೇಷ ಉದ್ದೇಶ ವಾಹಿನಿ ಮೂಲಕ ನಿರ್ವಹಣೆ ಮಾಡಬಹುದು. ಆಸಕ್ತರು ನಮ್ಮನ್ನು ಸಂಪರ್ಕಿಸಬಹುದು.
    – ಅಜಿತ್ ಕಾಮತ್, ಅಧ್ಯಕ್ಷ, ಕೆನರಾ ಸಣ್ಣ ಕೈಗಾರಿಕಾ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts