More

    ಕಂಗೊಳಿಸಲಿದೆ ಕೈಗಾರಿಕಾ ಪ್ರದೇಶ

    ಆನಂದ ಅಂಗಡಿ ಹುಬ್ಬಳ್ಳಿ

    ಮೂಲ ಸೌಲಭ್ಯಗಳ ಕೊರತೆಯಿಂದಾಗಿ ಸ್ವತಃ ಉದ್ಯಮಿಗಳೂ ಕಾಲಿಡಲು ಹಿಂಜರಿಯುತ್ತಿದ್ದ ನಗರದ ಗೋಕುಲ ರಸ್ತೆಯ ಕೈಗಾರಿಕಾ ವಸಾಹತು (ಇಂಡಸ್ಟ್ರಿಯಲ್ ಏರಿಯಾ) ಇದೀಗ ನವ ವಧುವಿನಂತೆ ಶೃಂಗಾರಗೊಂಡಿದೆ.

    ಬೇಸಿಗೆಯಲ್ಲಿ ಧೂಳು, ಮಳೆಗಾಲದಲ್ಲಿ ಕಾಲಿಡಲಾಗದಂತಹ ಕೆಸರು, ಕಿತ್ತು ಹೋದ ರಸ್ತೆಗಳು, ಒಡೆದು ಹೋದ ಚರಂಡಿಗಳು ಸೇರಿ ಹಲವಾರು ಸಮಸ್ಯೆಗಳು ಈ ಕೈಗಾರಿಕಾ ವಸಾಹತುವಿನಲ್ಲಿ ಕಳೆದ 5 ದಶಕಗಳಿಂದ ತಲೆದೋರಿದ್ದವು.

    ಮೂಲ ಸೌಲಭ್ಯ ಒದಗಿಸುವ ಮೂಲಕ ಈ ಕೈಗಾರಿಕಾ ವಸಾಹತುವನ್ನು ಅಭಿವೃದ್ಧಿಪಡಿಸಬೇಕೆಂಬ ಕೈಗಾರಿಕೋದ್ಯಮಿಗಳ ಬೇಡಿಕೆಗೆ ಸರ್ಕಾರದಿಂದ ಸೂಕ್ತ ಸ್ಪಂದನೆ ದೊರಕಿರಲಿಲ್ಲ. ಹೊರ ರಾಜ್ಯ ಹಾಗೂ ವಿದೇಶಗಳಿಂದ ಬರುವ ಕೈಗಾರಿಕೋದ್ಯಮಿಗಳನ್ನು ಇಲ್ಲಿ ಕರೆದುಕೊಂಡು ಹೋಗಲು ಸ್ಥಳೀಯರು ಮುಜುಗರ ಪಡುವಂತಹ ಸ್ಥಿತಿ ಇತ್ತು. ಇದೀಗ ಈ ಎಲ್ಲ ಸಮಸ್ಯೆ, ಮುಜುಗರಗಳಿಗೆ ಮುಕ್ತಿ ದೊರೆತಿದೆ. ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್​ಸಿಟಿ ಕಂಪನಿ ಅಂದಾಜು 40 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು ಈ ತಿಂಗಳ ಅಂತ್ಯದಲ್ಲಿ ಪೂರ್ಣಗೊಳ್ಳಲಿವೆ.

    ಸ್ಮಾರ್ಟ್​ಸಿಟಿ ಯೋಜನೆಯಡಿ ವಿಜಯಪುರದ ಬಿ.ಎಸ್. ಬಿರಾದಾರ ಏಜೆನ್ಸಿಸ್ ಹಾಗೂ ಬೀದರಿನ ಜೆ.ಎಂ. ಕನ್​ಸ್ಟ್ರಕ್ಷನ್ ಗುತ್ತಿಗೆದಾರರು 2 ಪ್ಯಾಕೇಜ್​ನಲ್ಲಿ ಹಲವಾರು ಸೌಲಭ್ಯಗಳನ್ನು ಅಳವಡಿಸುವ ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಕೈಗಾರಿಕೆಗಳ ಬೆಳವಣಿಗೆಗೆ ಬೇಕಾದ ಅಗತ್ಯ ಸೌಲಭ್ಯಗಳು ಈ ವಸಾಹತುವಿನಲ್ಲಿ ಅಭಿವೃದ್ಧಿಗೊಂಡಿವೆ. 50 ವರ್ಷಗಳ ನಂತರ ಗೋಕುಲ ರಸ್ತೆಯ ಕೈಗಾರಿಕಾ ವಸಾಹತುವಿಗೆ ಸ್ಮಾರ್ಟ್ ಸೌಲಭ್ಯಗಳು ದೊರಕಿವೆ.

    ಗಟ್ಟಿಮುಟ್ಟಾದ ರಸ್ತೆ: ಒಟ್ಟು 4.5 ಕಿಮೀ ವ್ಯಾಪ್ತಿಯಲ್ಲಿ 40 ಟನ್​ಗೂ ಹೆಚ್ಚು ತೂಕದ ಸರಕು ಹೊತ್ತು ಸಾಗುವ ಲಾರಿಗಳ ಸಂಚಾರಕ್ಕೆ ಯೋಗ್ಯವಾದ ರಸ್ತೆಗಳನ್ನು ನಿರ್ವಿುಸಲಾಗಿದೆ. ಕೆಲವಡೆ ನಿರ್ವಣಗೊಂಡಿರುವ ರಸ್ತೆಗಳಿಗೆ ಅಂತಿಮ ರೂಪ ಕೊಡುವುದು ಬಾಕಿ ಇದೆ. ರಸ್ತೆ ಬದಿ ಡಕ್ಟ್, ಪೇವರ್ಸ್ ಅಳವಡಿಸಲಾಗಿದೆ. ಹಳೆಯ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ, ಹೊಸ ಕಂಬಗಳನ್ನು ಅಳವಡಿಸುವ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ನೆಲದಾಳದಲ್ಲಿ ವಿದ್ಯುತ್ ಕೇಬಲ್ ಅಳವಡಿಸಲಾಗಿದೆ. ಹೊಸ ಶೌಚಗೃಹ ನಿರ್ವಿುಸಲಾಗಿದೆ.

    ಸಣ್ಣ ಕೆಲಸವಷ್ಟೇ ಬಾಕಿ: ಹೊಸ ವಿದ್ಯುತ್ ಕಂಬಗಳಿಗೆ ಬಲ್ಬ್ ಅಳವಡಿಸುವ, ರಸ್ತೆಗಳಿಗೆ ನಾಮಫಲಕ ಹಾಗೂ ಇತರ ಸಣ್ಣಪುಟ್ಟ ಕಾಮಗಾರಿಗಳನ್ನು ಹೊರತುಪಡಿಸಿದರೆ ಮೂಲ ಸೌಲಭ್ಯ ಅಳವಡಿಸುವ ಎಲ್ಲ ಕಾರ್ಯಗಳು ಪೂರ್ಣಗೊಂಡಿವೆ.

    ಗೋಕುಲ ರಸ್ತೆಯ ಕೈಗಾರಿಕಾ ವಸಾಹತುವಿನಲ್ಲಿ ಕೈಗೊಂಡಿರುವ ಎಲ್ಲ ಅಭಿವೃದ್ಧಿ ಕಾಮಗಾರಿಗಳು ಈ ತಿಂಗಳ ಅಂತ್ಯಕ್ಕೆ ಪೂರ್ಣಗೊಳ್ಳಲಿವೆ. ಈ ಪ್ರದೇಶದಲ್ಲಿ ಮೂಲ ಸೌಲಭ್ಯ ಅಭಿವೃದ್ಧಿಪಡಿಸಬೇಕೆಂಬ ಉದ್ಯಮಿಗಳ ಬೇಡಿಕೆಯಂತೆ ಸ್ಮಾರ್ಟ್ ಸಿಟಿ ಯೋಜನೆಯಡಿ ಅಗತ್ಯ ಕಾಮಗಾರಿ ಕೈಗೊಳ್ಳಲಾಗಿದೆ.

    | ಎಸ್.ಎಚ್. ನರೇಗಲ್ ವಿಶೇಷ ಅಧಿಕಾರಿ,

    ಹು-ಧಾ ಸ್ಮಾರ್ಟ್ ಸಿಟಿ ಕಂಪನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts