More

  ರಾಯಚೂರಿನಲ್ಲಿ ಕೈಗಾರಿಕಾ ಕ್ಲಸ್ಟರ್ ಆರಂಭ: ಪ್ರಧಾನಿ ಮೋದಿ ಹೇಳಿಕೆ

  ಸಿಂಧನೂರು: ಬಿಜೆಪಿ ಅಭಿವೃದ್ಧಿಯ ರೂಟ್ ಮ್ಯಾಪ್ ಹಾಕಿಕೊಂಡು ಕೆಲಸ ಮಾಡುತ್ತಿದೆ. ಅಭಿವೃದ್ಧಿಯಲ್ಲಿ ಕರ್ನಾಟಕವನ್ನು ನಂಬರ್ ಒನ್ ಮಾಡುವುದು ಬಿಜೆಪಿಯ ಸಂಕಲ್ಪವಾಗಿದೆ. ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರ ರಾಜ್ಯ ಅಭಿವೃದ್ಧಿಯತ್ತ ಸಾಗಲು ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

  ಬಿಜೆಪಿ ಜನರ ಅಭಿವೃದ್ಧಿಗೋಸ್ಕರ ಮತ ಕೇಳುತ್ತಿದೆ

  ನಗರದ ಹೊರವಲಯದ ಹೊಸಳ್ಳಿ ಕ್ಯಾಂಪ್ ಬಳಿ ಬಿಜೆಪಿ ಸಮಾವೇಶದಲ್ಲಿ ಮಂಗಳವಾರ ಮಾತನಾಡಿದರು. ಕಾಂಗ್ರೆಸ್ ನಿವೃತ್ತಿ ಅಂಚಿನಲ್ಲಿರುವ ನಾಯಕರಿಗಾಗಿ ವೋಟ್ ಕೇಳಿದರೆ, ಜೆಡಿಎಸ್ ಕುಟುಂಬದ ರಾಜಕೀಯ ಅಸ್ತಿತ್ವ ಉಳಿಸಲು ಮತ ಕೇಳುತ್ತಿದೆ. ಆದರೆ ಬಿಜೆಪಿ ಜನರ ಅಭಿವೃದ್ಧಿಗೋಸ್ಕರ ಮತ ಕೇಳುತ್ತಿದೆ ಎಂದರು.

  ಇದನ್ನೂ ಓದಿ: ಕರ್ನಾಟಕವನ್ನು ನಂ.​ 1 ಮಾಡುವ ಚುನಾವಣೆ ಇದಾಗಿದೆ: ಬೀದರ್​ನಲ್ಲಿ ಪ್ರಧಾನಿ ಮೋದಿ ಹೇಳಿಕೆ

  ಕಾಂಗ್ರೆಸ್‌ನಿಂದ ಪರಿವಾರದ ಸೇವೆ

  ಕಾಂಗ್ರೆಸ್ ಒಂದು ಪರಿವಾರದ ಸೇವೆ ಮಾಡುವುದರಲ್ಲಿಯೇ ಕಾಲ ಕಳೆದಿದೆ. ಹೀಗಾಗಿ ಕಾಂಗ್ರೆಸ್ ಪರಿವಾರ ಬೆಳೆಯುತ್ತಿದ್ದರೆ, ಜನಸಾಮಾನ್ಯರು ಹಿಂದೆ ಬೀಳುವಂತಾಗಿದೆ. ಬಿಜೆಪಿ ಸಾಮಾನ್ಯರ ಬದುಕನ್ನು ಸರಿಪಡಿಸುವ ಕೆಲಸವನ್ನು ಅಧಿಕಾರಕ್ಕೆ ಬಂದ ನಂತರ ಮಾಡುತ್ತಿದೆ. ಜನರ ಮತ್ತು ಮನೆ ಮನೆಯ ಅಗತ್ಯಕ್ಕೆ ಅನುಸಾರವಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಾ ಬರಲಾಗಿದೆ.


  ಜಲಶಕ್ತಿ ಸಚಿವಾಲಯ ಸ್ಥಾಪಿಸುವ ಮೂಲಕ 9 ಕೋಟಿ ಕುಟುಂಬಗಳಿಗೆ ನಳ ಸಂಪರ್ಕ, ಗ್ರಾಮೀಣ ಅರ್ಥ ವ್ಯವಸ್ಥೆ ಸುಧಾರಿಸಲು ಸಹಕಾರ ಸಚಿವಾಲಯ, ಯುವಜನರಿಗೆ ಕೌಶಲ ತರಬೇತಿ, ಆದಿವಾಸಿಗಳ ವಿಕಾಸಕ್ಕಾಗಿ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪನೆ ಮಾಡಲಾಗಿದೆ. ಮಹಿಳೆಯರ ಸ್ವಸಹಾಯ ಸಂಘಗಳ ಮೂಲಕ ಶಕ್ತಿ ತುಂಬುವ ಕೆಲಸ ಮಾಡಲಾಗಿದೆ.


  ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಸಾವಿರಾರು ಕೋಟಿ ರೂ. ಅನುದಾನ ನೀಡಿದ್ದು, ರಾಯಚೂರು ಜಿಲ್ಲೆಯಲ್ಲಿ ಕೈಗಾರಿಕಾ ಕ್ಲಸ್ಟರ್ ಹಾಗೂ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗುತ್ತಿದೆ. ಕೈಗಾರಿಕಾ ಕ್ಲಸ್ಟರ್‌ನಿಂದ ಉದ್ಯೋಗಗಳು ಸೃಜನೆಯಾಗಲಿವೆ.

  ರಾಯಚೂರಿನಲ್ಲಿ ಕೈಗಾರಿಕಾ ಕ್ಲಸ್ಟರ್ ಆರಂಭ: ಪ್ರಧಾನಿ ಮೋದಿ ಹೇಳಿಕೆ
  ಮೈಗೆ ಕೇಸರಿ ಬಣ್ಣ, ಭಾರತ ನಕಾಶೆ ಹಾಗೂ ನರೇಂದ್ರ ಮೋದಿ ಚಿತ್ರ ಬಿಡಿಸಿಕೊಂಡು ಆಗಮಿಸಿದ್ದ ಅಭಿಮಾನಿ ಅಭಿಷೇಕ.ಗಿಡವೇರಿ ಕುಳಿತು ಕಾರ್ಯಕ್ರಮ ವೀಕ್ಷಿಸುತ್ತಿರುವ ಯುವಕರು.


  ಆತ್ಮ ನಿರ್ಭರ್ ಭಾರತ ನಿರ್ಮಾಣದಲ್ಲಿ ದೇಶದ ಎಲ್ಲರ ಕೊಡುಗೆಯಿದೆ. ಯುವಕರು, ರೈತರು, ದುಡಿಯುವ ವರ್ಗದ ಜನ ಸೇರಿ ಎಲ್ಲರೂ ದೇಶ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ನಡೆಸುವ ಯಾವುದೇ ಷಡ್ಯಂತ್ರ ನಡೆಯುವುದಿಲ್ಲ. ಜನರು ಬಿಜೆಪಿಗೆ ಅಧಿಕಾರ ನೀಡುವ ಮೂಲಕ ಅದನ್ನು ಹಿಮ್ಮೆಟ್ಟಿಸಲಿದ್ದಾರೆ.


  ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಗೋಹತ್ಯೆ ನಿಷೇಧ ಕಾನೂನು, ಎಸ್ಸಿ, ಎಸ್ಟಿ ಮೀಸಲು ಹೆಚ್ಚಳ ಸೇರಿ ಬಿಜೆಪಿ ಸರ್ಕಾರ ಜಾರಿಗೆ ತಂದ ಎಲ್ಲ ಜನಪರ ಯೋಜನೆಗಳನ್ನು ರದ್ದುಗೊಳಿಸುವುದಾಗಿ ಕಾಂಗ್ರೆಸ್ ನಾಯಕರು ಹೇಳುತ್ತಿದ್ದು, ಇಂತಹ ಜನ ವಿರೋಧಿ ಪಕ್ಷವನ್ನು ಅಧಿಕಾರದಿಂದ ದೂರವಿರಿಸುವ ಕೆಲಸವನ್ನು ಜನರು ಮಾಡಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದರು.

  ಹಿಂದುಳಿದವರು, ದಲಿತರಿಗೆ ಗೌರವ

  ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ನಮ್ಮ ಸೈನಿಕರಿಗೆ ಬೆಲೆಯಿಲ್ಲದಂತಹ ಸಂದರ್ಭದಲ್ಲಿ ಪ್ರಧಾನಿ ಮೋದಿ ಸೈನಿಕರಿಗೆ ಗೌರವ ನೀಡುವುದರ ಜತೆಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಒದಗಿಸುವ ಕೆಲಸ ಮಾಡಿದ್ದಾರೆ. ಕೇಂದ್ರ ಸಚಿವ ಸಂಪುಟದಲ್ಲಿ 27 ಜನ ಹಿಂದುಳಿದವರಿಗೆ ಹಾಗೂ 9 ಜನ ದಲಿತರಿಗೆ ಸಚಿವ ಸ್ಥಾನ ನೀಡುವ ಮೂಲಕ ಹಿಂದುಳಿದ ಮತ್ತು ದಲಿತರಿಗೆ ಗೌರವ ನೀಡಿದ್ದಾರೆ. ಮೋದಿ ವಿಶ್ವನಾಯಕರಾಗಿ ಬೆಳೆದಿದ್ದು, ಭಿಕ್ಷೆ ಬೇಡುವಂತಹ ಸ್ಥಿತಿಯಲ್ಲಿರುವ ಪಾಕಿಸ್ತಾನದ ಜನರು ಮೋದಿಯಂತಹ ಪ್ರಧಾನಿ ಬೇಕು ಎಂದು ಕೇಳುತ್ತಿದ್ದಾರೆ ಎಂದು ಹೇಳಿದರು.

  ಈ ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರಗಳು ಲೂಟಿಗಾಗಿ ರಾಜ್ಯದ ಮೇಲೆ 5 ಲಕ್ಷ ಕೋಟಿ ರೂ. ಸಾಲದ ಹೊರೆ ಹೊರೆಸಿವೆ. ಅವರು ಮಾಡಿದ ಸಾಲ ಕಟ್ಟುವುದರ ಜತೆಗೆ ರಾಜ್ಯ ಸರ್ಕಾರ ಕೋವಿಡ್ ಸಂದರ್ಭದಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಮಾಡಿದೆ. ರೈತರ ನೀರಿನ ಸಮಸ್ಯೆ ನಿಗಿಸಲು ಕಾಲುವೆ ಆಧುನಿಕರಣದ ಜತೆಗೆ ಸಮತೋಲನ ಜಲಾಶಯ ನಿರ್ಮಾಣ ಮಾಡಲಾಗುತ್ತಿದೆ.
  ಕೆ.ಶಿವನಗೌಡ ನಾಯಕ,ಶಾಸಕ, ದೇವದುರ್ಗ

  ನೂಕು ನುಗ್ಗಲು, ಭದ್ರತಾ ವೈಫಲ್ಯ

  ಪ್ರಧಾನಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆ ಏರ್ಪಡಿಸಿದ್ದರೂ ಭದ್ರತಾ ವೈಫಲ್ಯ ಕಂಡುಬಂತು. ಬ್ಯಾರಿಕೇಡ್‌ಗಳನ್ನು ನೂಕಿ ಜನರು ವೇದಿಕೆ ಮುಂಭಾಗಕ್ಕೆ ಬರುತ್ತಿದ್ದರೆ, ಪೊಲೀಸರು ಬ್ಯಾರಿಕೇಡ್ ಹಿಡಿದುಕೊಂಡು ತಡೆಯಲು ಯತ್ನಿಸಿದರು. ಪ್ರಧಾನಿ ಮೋದಿ ಕೂಡಾ ಭಾಷಣದಲ್ಲಿ ನೂಕಾಟ ನಡೆಸದಂತೆ ಮನವಿ ಮಾಡಿದರು. ಗಣ್ಯರಿಗೆ ಮೀಸಲಾದ ಸ್ಥಳದಲ್ಲಿ ಎಲ್ಲರನ್ನು ಬಿಟ್ಟಿದ್ದರಿಂದ ನೂಕು ನುಗ್ಗಲು ಉಂಟಾಗಿತ್ತು. ನೂಕು ನುಗ್ಗಲಿನಿಂದ ಮಹಿಳೆಯರು ಹೆಚ್ಚಿನ ಸಮಸ್ಯೆ ಎದುರಿಸಿದರು. ಜಿಲ್ಲೆಯ ಹಲವು ಕ್ಷೇತ್ರಗಳ ಉಸ್ತುವಾರಿ ವಹಿಸಿಕೊಂಡಿರುವ ಹೊರ ರಾಜ್ಯಗಳ ನಾಯಕರು ನೂಕುನುಗ್ಗಲಿನಲ್ಲಿ ಸಿಲುಕಿ ಸಂಕಷ್ಟ ಎದುರಿಸಿದರು. ವಿಭಾಗವಾರು ಪ್ರತ್ಯೇಕ ದಾರಿ ಮಾಡದಿರುವುದು ಸಮಸ್ಯೆಗೆ ಕಾರಣವಾಗಿತ್ತು. ವೇದಿಕೆ ಮುಂಭಾಗದಲ್ಲಿ ಅನೇಕರು ಆಗಮಿಸಿದ್ದು, ಭದ್ರತಾ ಲೋಪ ಎದ್ದುಕಂಡು ಬರುತ್ತಿತ್ತು.

  ರಾಯಚೂರಿನಲ್ಲಿ ಕೈಗಾರಿಕಾ ಕ್ಲಸ್ಟರ್ ಆರಂಭ: ಪ್ರಧಾನಿ ಮೋದಿ ಹೇಳಿಕೆ
  ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದ ಸಮಾವೇಶದಲ್ಲಿ ಹಾಜರಿದ್ದ ಜನರು.
  ರಾಯರು, ಬಸವೇಶ್ವರರ ಸ್ಮರಣೆ

  ಪ್ರಧಾನಿ ಮೋದಿಗೆ ಕಂಬಳಿ ಹೊದಿಸಿ ಶ್ರೀರಾಮನ ವಿಗ್ರಹವನ್ನು ನೀಡುವ ಮೂಲಕ ಬಿಜೆಪಿ ಜಿಲ್ಲಾ ಘಟಕದಿಂದ ಗೌರವಿಸಲಾಯಿತು. ಜತೆಗೆ ಪ್ರಧಾನಿ ಮೋದಿ ಭಾಷಣ ಆರಂಭದಲ್ಲಿ ಭತ್ತ ನಾಡಿನ ಸಹೋದರ, ಸಹೋದರಿಯರಿಗೆ ನಮಸ್ಕಾರಗಳು ಎಂದು ಹೇಳುವುದರ ಜತೆಗೆ ಜಗಜ್ಯೋತಿ ಬಸವೇಶ್ವರರು ಹಾಗೂ ಕಲಿಯುಗದ ಕಲ್ಪತರು ರಾಯರಿಗೆ ಪ್ರಣಾಮಗಳು ಎಂದು ಮಾತು ಆರಂಭಿಸಿದರು. ಭಾಷಣದ ಕೊನೆಯಲ್ಲಿ ನನ್ನದೊಂದು ಮಾತು ನಡೆಸಿಕೊಡುವಂತೆ ಜನರನ್ನು ಕೇಳಿ ಪ್ರತಿ ಮನೆಗೆ ತೆರಳಿ ನಿಮಗೆ ನಮಸ್ಕಾರ ತಿಳಿಸಿದ್ದಾರೆ ಎಂದು ಹೇಳಿ ಹಿರಿಯರ ಆಶೀರ್ವಾದ ಸಿಗುವಂತೆ ಮಾಡುವಂತೆ ಕೋರಿದರು.

  ಸಂಸದ ರಾಜಾ ಅಮರೇಶ್ವರ ನಾಯಕ, ವಿವಿಧ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳಾದ ಕೆ.ಕರಿಯಪ್ಪ, ಬಿ.ವಿ.ನಾಯಕ, ಪ್ರತಾಪಗೌಡ ಪಾಟೀಲ್, ಡಾ.ಶಿವರಾಜ ಪಾಟೀಲ್, ತಿಪ್ಪರಾಜು ಹವಾಲ್ದಾರ್, ಬಸವರಾಜ ದಢೇಸುಗೂರು, ದೊಡ್ಡನಗೌಡ ಪಾಟೀಲ್, ಮಾನಪ್ಪ ವಜ್ಜಲ್, ಮಾಜಿ ಸಂಸದ ಕೆ.ವಿರುಪಾಕ್ಷಪ್ಪ, ಮುಖಂಡರಾದ ಚಂದ್ರಶೇಖರ ಪಾಟೀಲ್, ಶಶಿಕಲಾ ಟೆಂಗಳಿ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts