More

    ಇಂದಿರಾ ಕ್ಯಾಂಟೀನ್ ವೇತನ ಬಾಕಿ

    ಶ್ರವಣ್‌ಕುಮಾರ್ ನಾಳ, ಪುತ್ತೂರು

    ಲಾಕ್‌ಡೌನ್ ವೇಳೆ ಜನರಿಗೆ ಆಹಾರ ಪೂರೈಸಿದ ಇಂದಿರಾ ಕ್ಯಾಂಟೀನ್‌ನ ಸಿಬ್ಬಂದಿಯ ಬವಣೆ ಕೇಳುವವರೇ ಇಲ್ಲ. ಸಿಬ್ಬಂದಿ ಮೂರು ತಿಂಗಳಿಂದ ವೇತನ ಸಿಗದೆ ಕಂಗಾಲಾಗಿದ್ದಾರೆ.

    ದ.ಕ. ಜಿಲ್ಲೆಯಲ್ಲಿ 8, ಉಡುಪಿ ಜಿಲ್ಲೆಯಲ್ಲಿ 4 ಇಂದಿರಾ ಕ್ಯಾಂಟೀನ್ ತೆರೆಯಲಾಗಿತ್ತು. ಈ ಪೈಕಿ ಹಲವು ಕ್ಯಾಂಟೀನ್‌ಗಳಲ್ಲಿ ವೇತನ ಪಾವತಿಯಲ್ಲಿ ವ್ಯತ್ಯಯ ಉಂಟಾಗಿದೆ. ಪುತ್ತೂರು ಹಾಗೂ ಸುಳ್ಯದಲ್ಲಿ ತಲಾ 7, ಬಂಟ್ವಾಳದಲ್ಲಿ 6 ಸಿಬ್ಬಂದಿ ಇಂದಿರಾ ಕ್ಯಾಂಟೀನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಮುಖ್ಯ ಅಡುಗೆದಾರ, ಸಹಾಯಕ, ಇಬ್ಬರು ಶುಚಿತ್ವ ಸಿಬ್ಬಂದಿ, ಸಹಾಯಕ ಮ್ಯಾನೇಜರ್, ಓರ್ವ ರಕ್ಷಣಾ ಸಿಬ್ಬಂದಿ ಇದ್ದಾರೆ. ಪ್ರತಿ ತಿಂಗಳು ಮುಖ್ಯ ಅಡುಗೆ ಸಿಬ್ಬಂದಿ ಹಾಗೂ ಸಹಾಯಕ ಮ್ಯಾನೇಜರ್‌ಗೆ 20 ಸಾವಿರ ರೂ, ಅಡುಗೆ ಸಹಾಯಕ ಹಾಗೂ ರಕ್ಷಣಾ ಸಿಬ್ಬಂದಿಗೆ 8 ಸಾವಿರ ರೂ, ಶುಚಿತ್ವ ಸಿಬ್ಬಂದಿಗೆ 8 ಸಾವಿರ ರೂ. ವೇತನ ಸರ್ಕಾರ ನೀಡುತ್ತದೆ. ಆದರೆ ಮೂರು ತಿಂಗಳಿಂದ ಸಿಬ್ಬಂದಿಗೆ ವೇತನ ಪಾವತಿಯಾಗಿಲ್ಲ. 2020ರಲ್ಲೂ ನಾಲ್ಕು ತಿಂಗಳ ವೇತನ ನೀಡಿರಲಿಲ್ಲ. ಆಗ ಸಿಬ್ಬಂದಿ ಮೂರು ವಾರ ಕ್ಯಾಂಟೀನ್ ಸ್ಥಗಿತಗೊಳಿಸಿ ಪ್ರತಿಭಟಿಸಿದ್ದು, ಬಳಿಕ ಜಿಲ್ಲಾಡಳಿತ ವೇತನ ಪಾವತಿಗೆ ಕ್ರಮ ಕೈಗೊಂಡಿತ್ತು.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಇಂದಿರಾ ಕ್ಯಾಂಟೀನ್ ಸಿಬ್ಬಂದಿಗೆ ವೇತನ ಪಾವತಿಸಲು ಶಾಸಕರು ಕ್ರಮ ಕೈಗೊಳ್ಳದಿದ್ದರೆ ‘ಇಂದಿರಾ ಕ್ಯಾಂಟೀನ್ ಉಳಿಸಿ- ಸಿಬ್ಬಂದಿ ರಕ್ಷಿಸಿ’ ಎಂದು ಹೋರಾಟ ನಡೆಸಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ.

    ಮಂಗಳೂರಿನಲ್ಲಿ ಸಮಸ್ಯೆ ಇಲ್ಲ: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಐದು ಇಂದಿರಾ ಕ್ಯಾಂಟೀನ್‌ಗಳಿದ್ದು, ಇಲ್ಲಿನ ನೌಕರರಿಗೆ ಮೇ ತಿಂಗಳ ತನಕ ವೇತನ ಪಾವತಿಯಾಗಿದೆ. ಪ್ರತಿ ತಿಂಗಳು 5ರಿಂದ 8ನೇ ತಾರೀಕಿನೊಳಗೆ ವೇತನ ಆಗುತ್ತದೆ. ಪ್ರತಿ ಕ್ಯಾಂಟೀನ್‌ನಲ್ಲಿ ಸಹಾಯಕ ಮ್ಯಾನೇಜರ್ ಸಹಿತ 5 ಸಿಬ್ಬಂದಿ ಇದ್ದಾರೆ. ಮ್ಯಾನೇಜರ್‌ಗೆ 22 ಸಾವಿರ ರೂ., ಸಹಾಯಕ ಮ್ಯಾನೇಜರ್‌ಗೆ 18 ಸಾವಿರ ರೂ., ಮುಖ್ಯ ಅಡುಗೆಯವರಿಗೆ 15 ಸಾವಿರ ರೂ. ಇತರ ಸಿಬ್ಬಂದಿಗೆ 12 ಸಾವಿರ ರೂ. ವೇತನವಿದೆ. ಇಎಸ್‌ಐ, ಪಿಎಫ್ ಸೌಲಭ್ಯವೂ ಇದೆ ಎಂದು ಸಾಯಿ ಹಾಸ್ಪಿಟಾಲಿಟಿ ಮ್ಯಾನೇಜರ್ ಮಾಧವ ತಿಳಿಸಿದ್ದಾರೆ.

    ಉಡುಪಿಯಲ್ಲಿ 2 ತಿಂಗಳಿಂದ ಸಿಕ್ಕಿಲ್ಲ: ಉಡುಪಿ ಜಿಲ್ಲೆಯ ಉಡುಪಿ, ಮಣಿಪಾಲ, ಕಾರ್ಕಳ, ಕುಂದಾಪುರದಲ್ಲಿ ಇಂದಿರಾ ಕ್ಯಾಂಟೀನ್ ಇದ್ದು, 20 ಸಿಬ್ಬಂದಿ ಇದ್ದಾರೆ. ಲಾಕ್‌ಡೌನ್ ಅವಧಿಯಲ್ಲಿ ಸರ್ಕಾರ ಉಚಿತ ಆಹಾರ ವಿತರಿಸಿದ್ದರಿಂದ ಸಿಬ್ಬಂದಿಗೆ ಸಂಬಳ ನೀಡಲು ಹಣಕಾಸಿನ ಅಡಚಣೆ ಉಂಟಾಗಿದೆ. ಸರ್ಕಾರದಿಂದ 2 ತಿಂಗಳ ಬಿಲ್ ಪಾವತಿಗೆ ಬಾಕಿ ಇದೆ. ಅದು ಕೈ ಸೇರಿದ ತಕ್ಷಣ ವೇತನ ಪಾವತಿಸಲಾಗುವುದು. ಮುಖ್ಯ ಅಡುಗೆಯವರಿಗೆ 25 ಸಾವಿರ ರೂ., ಕ್ಯಾಶಿಯರ್‌ಗೆ 15 ಸಾವಿರ ರೂ., ವಿತರಕರಿಗೆ 10 ಸಾವಿರ ರೂ., ಸ್ವಚ್ಛತಾ ಸಿಬ್ಬಂದಿಗೆ 8500 ರೂ. ಸಂಬಳ ನಿಗದಿ ಮಾಡಲಾಗಿದೆ ಎಂದು ಇಂದಿರಾ ಕ್ಯಾಂಟೀನ್ ಗುತ್ತಿಗೆದಾರ ಸಂಸ್ಥೆಯ ಮ್ಯಾನೇಜರ್ ಜಗದೀಶ್ ತಿಳಿಸಿದ್ದಾರೆ.

    ಈ ಹಿಂದೆಯೂ ಇಂದಿರಾ ಕ್ಯಾಂಟೀನ್ ಸಿಬ್ಬಂದಿ ವೇತನದ ಬಗ್ಗೆ ಗೊಂದಲ ಹಾಗೂ ಸಮಸ್ಯೆ ಆಗಿತ್ತು. ಆ ವೇಳೆ ಜಿಲ್ಲಾಧಿಕಾರಿ ಗಮನಕ್ಕೆ ತಂದು ಸಮಸ್ಯೆ ಪರಿಹರಿಸುವಂತೆ ಸೂಚಿಸಲಾಗಿತ್ತು. ಈಗ ಮತ್ತೆ ಸಮಸ್ಯೆ ಎದುರಾಗಿದ್ದು, ವೇತನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು.
    ಸಂಜೀವ ಮಠಂದೂರು
    ಪುತ್ತೂರು ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts