More

    ಸಿಡ್ನಿ ಮೈದಾನದಲ್ಲಿ ಅಭ್ಯಾಸ ಆರಂಭಿಸಿದ ಟೀಮ್ ಇಂಡಿಯಾ ಆಟಗಾರರು

    ಸಿಡ್ನಿ: 13ನೇ ಐಪಿಎಲ್ ಮುಕ್ತಾಯಗೊಂಡ ಬೆನ್ನಲ್ಲೇ ಆಸ್ಟ್ರೇಲಿಯಾ ಪ್ರವಾಸ ಆರಂಭಿಸಿರುವ ಭಾರತ ತಂಡ ಶನಿವಾರ ಆಭ್ಯಾಸ ಆರಂಭಿಸಿತು. ತಂಡದ ಎಲ್ಲ ಆಟಗಾರರ ಕೋವಿಡ್-19 ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಕೆಲಕಾಲ ಅಭ್ಯಾಸ ನಡೆಸಿದರು. ಸಿಡ್ನಿ ಒಲಿಂಪಿಕ್ ಪಾರ್ಕ್‌ನಲ್ಲಿರುವ ಬ್ಲಾಕ್‌ಟೌನ್ ಅಂತಾರಾಷ್ಟ್ರೀಯ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಪೃಥ್ವಿ ಷಾ ಹಾಗೂ ಮೊಹಮದ್ ಸಿರಾಜ್ ಅಭ್ಯಾಸ ನಡೆಸಿದರು. ಬಳಿಕ ಕೆಲಕಾಲ ಜಿಮ್‌ನಲ್ಲಿ ದೈಹಿಕ ಕಸರತ್ತು ನಡೆಸಿದರು. ಆಟಗಾರರು ಹೊರಾಂಗಣ ಹಾಗೂ ಜಿಮ್‌ನಲ್ಲಿ ಕಸರತ್ತಿನಲ್ಲಿ ತೊಡಗಿರುವ ಫೋಟೋಗಳನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್‌ನಲ್ಲಿ ಪ್ರಕಟಿಸಿದೆ.

    ಸ್ಪಿನ್ನರ್ ಕುಲದೀಪ್ ಯಾದವ್, ವೇಗಿಗಳಾದ ಉಮೇಶ್ ಯಾದವ್, ಶಾರ್ದೂಲ್ ಠಾಕೂರ್, ಆಲ್ರೌಂಡರ್ ರವೀಂದ್ರ ಜಡೇಜಾ ಹಾಗೂ ಟೆಸ್ಟ್ ತಜ್ಞ ಚೇತೇಶ್ವರ್ ಪೂಜಾರ ಕೆಲಕಾಲ ಮೈದಾನದಲ್ಲಿ ವಾಕಿಂಗ್ ಮಾಡಿದರು. ಅವರೊಂದಿಗೆ ಐಪಿಎಲ್‌ನಲ್ಲಿ ಮಿಂಚಿದ್ದ ಟಿ.ನಟರಾಜನ್, ದೀಪರ್ ಚಹರ್ ಕೂಡ ಕಾಣಿಸಿಕೊಂಡರು. ಭಾರತ ತಂಡ ಸದ್ಯ 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿದ್ದು, ಆಟಗಾರರು ಸದ್ಯ ಮೊದಲ ಕೋವಿಡ್-19 ಪರೀಕ್ಷೆಯನ್ನು ಮುಕ್ತಾಯಗೊಳಿಸಿದೆ. ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್ ಜತೆಗಿರುವ ಚಿತ್ರವನ್ನು ತಮ್ಮ ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ. ನಾನು ನನ್ನ ಸಹೋದರನನ್ನು ಮತ್ತೆ ಸೇರಿಕೊಂಡೆ. ರಾಷ್ಟ್ರೀಯ ತಂಡದ ಸೇವೆ ಸಿದ್ಧ ಎಂದು ಚಾಹಲ್ ಟ್ವೀಟ್ ಮಾಡಿದ್ದಾರೆ.

    ಭಾರತ ತಂಡ ಪ್ರವಾಸದ ವೇಳೆ ತಲಾ ಮೂರು ಏಕದಿನ, ಟಿ20 ಹಾಗೂ 4 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ನವೆಂಬರ್ 27 ರಂದು ಮೊದಲ ಏಕದಿನ ಪಂದ್ಯ ನಡೆಯಲಿದೆ. ಏಕದಿನ ಹಾಗೂ ಟಿ20 ಸರಣಿ ಮುಕ್ತಾಯಗೊಂಡ ಬಳಿಕ ಡಿಸೆಂಬರ್ 17 ರಿಂದ ಟೆಸ್ಟ್ ಸರಣಿ ನಡೆಯಲಿದ್ದು, ಅಡಿಲೇಡ್‌ನಲ್ಲಿ ಅಹರ್ನಿಶಿ ಟೆಸ್ಟ್ ಪಂದ್ಯ ನಡೆಯಲಿದೆ. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮೊದಲ ಟೆಸ್ಟ್ ಮುಕ್ತಾಯಗೊಂಡ ಬಳಿಕ ಪಿತೃತ್ವ ರಜೆ ಮೇಲೆ ತವರಿಗೆ ವಾಪಸಾಗಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts