More

    ಭಾರತೀಯ ರೈಲ್ವೆಯಿಂದ ಸಿಹಿ ಸುದ್ದಿ: ಹೆಚ್ಚಿದೆ ತತ್ಕಾಲ್​ ಟಿಕೆಟ್​ಗಳ ಸಂಖ್ಯೆ

    ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಇದುವರೆಗೂ ನಡೆಯುತ್ತಿದ್ದ ಕಾನೂನು ಬಾಹಿರ ತತ್ಕಾಲ್​ ಟಿಕೆಟ್​ ಬುಕ್ಕಿಂಗ್​ಗೆಲ್ಲ ಬ್ರೇಕ್​ ಹಾಕಲಾಗಿದ್ದು ಇನ್ನು ಮುಂದೆ ಪ್ರಯಾಣಿಕರಿಗೆ ಹೆಚ್ಚಿನ ಸಂಖ್ಯೆಯಲ್ಲಿ ತತ್ಕಾಲ್​ ಟಿಕೆಟ್​ಗಳು ಲಭ್ಯವಾಗಲಿದೆ ಎಂದು ಇಲಾಖೆ ತಿಳಿಸಿದೆ.

    ದೂರದೂರಿಗೆ ರೈಲಿನಲ್ಲಿ ಹೋಗಲು ಕೊನೆ ಕ್ಷಣದಲ್ಲಿ ತತ್ಕಾಲ್​ ಟಿಕೆಟ್​ ಬುಕ್​ ಮಾಡಲಾಗುತ್ತದೆ. ರೈಲು ಹೊರಡುವುದಕ್ಕೂ ಒಂದು ದಿನ ಮೊದಲು ತತ್ಕಾಲ್​ ಟಿಕೆಟ್​ ಬುಕ್​ ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ. ಭಾರತೀಯ ರೈಲ್ವೆ ಇಲಾಖೆಯು ಐಆರ್​ಸಿಟಿಸಿಗೆ ಅಧಿಕೃತವಾಗಿ ಟಿಕೆಟ್​ ಬುಕ್ಕಿಂಗ್​ ಮಾಡುವಂತಹ ಹಕ್ಕನ್ನು ನೀಡಿದೆ. ರೈಲ್ವೆ ಟಿಕೆಟ್ ಬುಕ್ಕಿಂಗ್​ ​ಮಾಡುವುದಕ್ಕೆ ಇರುವುದು ಇದೊಂದೇ ವೆಬ್​ಸೈಟ್​ ಆಗಿದ್ದರೂ ಕೆಲವು ಹ್ಯಾಕರ್​ಗಳು ಬೇರೆ ಬೇರೆ ವೆಬ್​ಸೈಟ್​ಗಳ ಮೂಲಕ ಟಿಕೆಟ್​ ಬುಕ್ಕಿಂಗ್​ ಮಾಡಲಾರಂಭಿಸಿದ್ದರು.

    ‘ANMS’, ‘MAC’ ಮತ್ತು ‘Jaguar’ ಸೇರಿದಂತೆ ಒಟ್ಟು 60ಕ್ಕೂ ಹೆಚ್ಚು ವೆಬ್​ಸೈಟ್​ಗಳ ಮೂಲಕ ತತ್ಕಾಲ್​ ಟಿಕೆಟ್​ಗಳನ್ನು ಮಾಡಲಾಗುತ್ತಿತ್ತು. ಅಧಿಕೃತ ವೆಬ್​ಸೈಟ್​ನಲ್ಲಿ ಕೇಳಲಾಗುವ ಕ್ಯಾಪ್ಚಾವಾಗಿರಲೀ ಅಥವಾ ಒಟಿಪಿಯಾಗಿರಲೀ ಯಾವುದನ್ನೂ ಬಳಸದೆಯೇ ಇಂತಹ ವೆಬ್​ಸೈಟ್​ಗಳಲ್ಲಿ ತತ್ಕಾಲ್​ ಟಿಕೆಟ್​ ಬುಕ್​ ಮಾಡಲಾಗುತ್ತಿತ್ತು. ಅಧಿಕೃತ ವೆಬ್​ಸೈಟ್​ನಲ್ಲಿ ಒಂದು ತತ್ಕಾಲ್​ ಟಿಕೆಟ್​ ಬುಕ್​ ಮಾಡುವುದಕ್ಕೆ 2.55 ನಿಮಿಷ ಸಮಯ ತೆಗೆದುಕೊಂಡರೆ, ಕೇವಲ 1.48 ನಿಮಿಷದಲ್ಲಿ ಈ ಅನಧಿಕೃತ ವೆಬ್​ಸೈಟ್​ಗಳು ಟಿಕೆಟ್​ ಬುಕ್​ ಮಾಡಿಬಿಡುತ್ತಿದ್ದವು. ವರ್ಷಕ್ಕೆ ಸುಮಾರು 50 ಕೋಟಿಯಿಂದ 100 ಕೋಟಿ ರೂಪಾಯಿ ಮೌಲ್ಯದ ಟಿಕೆಟ್​ಗಳು ಈ ರೀತಿಯ ಅನಧಿಕೃತ ವೆಬ್​ಸೈಟ್​ಗಳಲ್ಲೇ ಬುಕ್​ ಆಗುತ್ತಿದ್ದವು.

    ಇದೀಗ ಪ್ರಯಾಣಿಕರ ಸ್ನೇಹಿ ನಿಲುವನ್ನು ತೆಗೆದುಕೊಂಡಿರುವ ರೈಲ್ವೆ ಇಲಾಖೆ ಅನಧಿಕೃತ ವೆಬ್​ಸೈಟ್​ಗಳನ್ನು ಗುರುತಿಸಿ ಅದರಲ್ಲಿದ್ದವರನ್ನು ಬಂಧಿಸಿದೆ. 60 ಕ್ಕೂ ಹೆಚ್ಚು ವೆಬ್​ಸೈಟ್​ಗಳು ಸ್ಥಗಿತಗೊಂಡಿದ್ದು ಅದರಲ್ಲಿ ಬುಕ್ಕಿಂಗ್​ ಆಗುತ್ತಿದ್ದ ತತ್ಕಾಲ್​ ಟಿಕೆಟ್​ಗಳೆಲ್ಲವೂ ಐಆರ್​ಸಿಟಿಯಲ್ಲಿಯೇ ಲಭ್ಯವಾಗುವಂತಾಗಿದೆ.

    ಈ ಕುರಿತಾಗಿ ಮಾತನಾಡಿರುವ ರೈಲ್ವೆ ಪ್ರೊಟೆಕ್ಷನ್​ ಫೋರ್ಸ್​ನ ಮಹಾ ನಿರ್ದೇಶಕ ಅರುಣ್​ ಕುಮಾರ್​, “ರೈಲ್ವೆ ಟಿಕೆಟ್​ ಬುಕ್ಕಿಂಗ್​ ಶುದ್ಧೀಕರಣಕ್ಕೂ ಮೊದಲಿಗೂ ಈಗೂ ಹೋಲಿಸಿದರೆ ಸಾಕಷ್ಟು ವ್ಯತ್ಯಾಸ ಕಂಡುಬಂದಿವೆ. ಮೊದಲಿಗೆ ತತ್ಕಾಲ್​ ಟಿಕೆಟ್​ಗಳು ಬಹಳಷ್ಟು ಬೇಗ ಖಾಲಿಯಾಗಿಬಿಡುತ್ತಿದ್ದವು. ಆದರೆ ಈಗ ಸಾಕಷ್ಟು ಸಮಯದವರೆಗೂ ಲಭಿಸುತ್ತಿದೆ” ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts