More

    ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅರುಣಕುಮಾರ ಪೂಜಾರ ಅರ್ಜಿ ಸಲ್ಲಿಕೆ

    ರಾಣೆಬೆನ್ನೂರ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ನನಗೆ ಜವಾಬ್ದಾರಿ ನೀಡಲಿದ್ದಾರೆ ಎಂಬ ವಿಶ್ವಾಸದಿಂದ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದೇನೆ ಎಂದು ಮಾಜಿ ಶಾಸಕ ಅರುಣಕುಮಾರ ಪೂಜಾರ ತಿಳಿಸಿದರು.
    ನಗರದ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಯುವಮೋರ್ಚಾ ಜಿಲ್ಲಾಧ್ಯಕ್ಷನಾಗಿ, ರಾಜ್ಯ ಸಮಿತಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೇನೆ. ಮುಂಬರುವ ಚುನಾವಣೆ ಕಾರ್ಯಕರ್ತರ ಚುನಾವಣೆಯಾಗಿದೆ. ಎಪಿಎಂಸಿ, ಜಿಪಂ, ತಾಪಂ, ನಗರಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಶ್ರಮಿಸುತ್ತೇನೆ ಎಂದರು.
    ರಾಜ್ಯದಲ್ಲಿ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಸರ್ಕಾರದಲ್ಲಿ ರೈತರಿಗೆ 4 ಸಾವಿರ ರೂ. ನೀಡುತ್ತಿದ್ದೇವು. ಆದರೆ, ಈಗಿನ ಕಾಂಗ್ರೆಸ್ ಸರ್ಕಾರ ಅದನ್ನು ನಿಲ್ಲಿಸಿದ್ದು ಕೂಡಲೇ ಅದಕ್ಕೆ ಮರು ಚಾಲನೆ ನೀಡಬೇಕು ಎಂದು ಆಗ್ರಹಿಸಿದರು.
    ವಿಧಾನಸಭೆ ಚುನಾವಣೆ ಪೂರ್ವದಲ್ಲಿ ರೈತರಿಗೆ ಕೇಂದ್ರ ಸರ್ಕಾರ ದೊಡ್ಡ ಪ್ರಮಾಣದಲ್ಲಿ ವಿಮೆ ಪರಿಹಾರ ಕೊಟ್ಟಿದೆ. ಬಿಟ್ಟಿ ಭಾಗ್ಯಗಳಿಂದಾಗಿ ಪರಿಹಾರ ಹಣ ಸರಿಯಾಗಿ ನೀಡುತ್ತಿಲ್ಲ. ಗೃಹಲಕ್ಷ್ಮೀ ಯೋಜನೆ ಹಣ ನೀಡುತ್ತಿಲ್ಲ. ಉಚಿತ ಕರೆಂಟ್ ನೀಡುತ್ತೇವೆಂದು ವಾಣಿಜ್ಯ ಕರೆಂಟ್ ಬಿಲ್ ಹೆಚ್ಚಳ ಮಾಡಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಯುವನಿಧಿ ಚಾಲನೆ ನೀಡಿದ್ದಾರೆ. ಆದರೆ, ಅದಕ್ಕೂ ಕೂಡ ಅನೇಕ ನಿಯಮಗಳನ್ನು ಜಾರಿಗೆ ತಂದು ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
    ಪ್ರಮುಖರಾದ ಎಸ್.ಎಸ್. ರಾಮಲಿಂಗಣ್ಣನವರ, ಮಂಜುನಾಥ ಓಲೇಕಾರ, ಡಾ. ಬಸವರಾಜ ಕೇಲಗಾರ, ಡಾ. ನಾರಾಯಣ ಪವಾರ, ದೀಪಕ ಹರಪನಹಳ್ಳಿ, ಭಾರತಿ ಜಂಬಗಿ, ಪ್ರಕಾಶ ಪೂಜಾರ, ತ್ರಿವೇಣಿ ಪವಾರ, ಶಿವಕುಮಾರ ಮುದ್ದಪ್ಪಳವರ, ನಾಗರಾಜ ಪವಾರ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts