More

    ಕಾರವಾರದಲ್ಲಿ ನಡೆಯಲಿದೆ ಭಾರತೀಯ ಜಂಟಿ ಕಮಾಂಡರ್‌ಗಳ ಸಭೆ: ಚೀನಾ ಅತಿಕ್ರಮಣದ ತಡೆಗೆ ಸಿದ್ಧತೆ

    ಕಾರವಾರದಲ್ಲಿ ನಡೆಯಲಿದೆ ಭಾರತೀಯ ಜಂಟಿ ಕಮಾಂಡರ್‌ಗಳ ಸಭೆ: ಚೀನಾ ಅತಿಕ್ರಮಣದ ತಡೆಗೆ ಸಿದ್ಧತೆ| ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

    ಭಾರತದ ಮೂರೂ ಸೇನಾಪಡೆಗಳ ಮುಖ್ಯಸ್ಥರ ಸಮಾವೇಶ (ಕಂಬೈನ್ಡ್ ಕಮಾಂಡರ್ಸ್ ಕಾನ್ಫರೆನ್ಸ್) ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಅನಿಲ್ ಚೌಹಾಣ್ ಅವರ ಉಪಸ್ಥಿತಿಯಲ್ಲಿ ಮಾರ್ಚ್​ನಲ್ಲಿ ಕಾರವಾರದಲ್ಲಿ ನಡೆಯಲಿದೆ. ಈ ಸಮ್ಮೇಳನದಲ್ಲಿ ದೀರ್ಘಕಾಲದಿಂದ ಎದುರು ನೋಡುತ್ತಿದ್ದ, ಮಿಲಿಟರಿ ಥಿಯೇಟರ್ ಕಮಾಂಡಿನ ಸ್ಥಾಪನೆಯ ಕುರಿತಾಗಿ ಮಿಲಿಟರಿ ನಾಯಕತ್ವ ಸೂಕ್ತ ಕ್ರಮ ಕೈಗೊಳ್ಳುವ ನಿರೀಕ್ಷೆಗಳಿವೆ. ಮೂರೂ ಸೇನಾಪಡೆಗಳು ಈ ಯೋಜನೆಯ ಕುರಿತಾದ ತಮ್ಮ ಅಭಿಪ್ರಾಯಗಳನ್ನು ಸರ್ಕಾರಕ್ಕೆ ಸಲ್ಲಿಸುವ ನಿರೀಕ್ಷೆಗಳಿವೆ.

    ಮೂರೂ ಪಡೆಗಳ ಮುಖ್ಯಸ್ಥರೂ ಥಿಯೇಟರ್ ಕಮಾಂಡಿನ ಸ್ಥಾಪನೆಗೆ ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಟರ್ಫ್ ರಕ್ಷಣೆ ಅಥವಾ ಬೇರೆ ಏನಾದರೂ ಕಾರಣ ಇದರ ಜಾರಿಯಾಗುವುದು ತಡವಾಗುವಂತೆ ಮಾಡುತ್ತಿದೆಯೇ ಎಂಬುದು ಖಚಿತವಾಗಬೇಕಿದೆ.

    ಅದೇನೇ ಕಾರಣಗಳಿದ್ದರೂ, ಇದರ ಜಾರಿಯಲ್ಲಿನ ತಡ ಭಾರತದ ಬದ್ಧ ವೈರಿಯಾಗಿರುವ ಚೀನಾಗೆ ಮೇಲುಗೈ ಒದಗಿಸಿ ಕೊಡಲಿದೆ. ಒಂದು ಸಲ ಭಾರತ ಈ ಬದಲಾವಣೆಗಳನ್ನು ತರಲು ಆರಂಭಿಸಿದರೆ, ಪ್ರಮುಖ ಏಕೀಕರಣದ ಸಮಸ್ಯೆಗಳು ಎದುರಾಗಬಹುದು.

    ಪ್ರತಿ ಸುಧಾರಣೆಯೂ ಸಮಸ್ಯೆ ತಂದೊಡ್ಡಿದೆ!

    ರಷ್ಯಾ 2014ರಲ್ಲಿ ಏಕೀಕೃತ ಕಾರ್ಯತಂತ್ರದ ಕಮಾಂಡನ್ನು ಜಾರಿಗೆ ತಂದಿತು. ಚೀನಾ ಥಿಯೇಟರ್ ಕಮಾಂಡಿನ ಪರಿಕಲ್ಪನೆಗಳನ್ನು 2016ರಲ್ಲಿ ಅಂಗೀಕರಿಸಿತು. ರಷ್ಯಾದ ಪಡೆಗಳ ಜಂಟಿ ನಾಯಕತ್ವದ ಕೊರತೆ ಪ್ರಸ್ತುತ ಉಕ್ರೇನ್ ದಾಳಿಯಲ್ಲಿನ ಇತರ ಕೊರತೆಗಳೊಡನೆ ಎದ್ದು ಕಾಣುತ್ತಿದೆ. ಒಂದು ವೇಳೆ ಚೀನಾ ಏನಾದರೂ ಯುದ್ಧ ಎದುರಿಸುವ ಪರಿಸ್ಥಿತಿ ಬಂದರೆ, ಅದರ ಪರಿಸ್ಥಿತಿ ಏನೂ ಭಿನ್ನವಾಗಿರದು.

    ಚೀನಾ ಯಾಕೆ ಪ್ರತಿದಿನವೂ ಭಾರತ, ಅಮೆರಿಕ ಮತ್ತು ಜಪಾನ್ ಪಡೆಗಳ ಎದುರು ತನ್ನ ಬಲವನ್ನು ಪರೀಕ್ಷಿಸಲು ಎದುರು ನೋಡುತ್ತಿತ್ತು ಎನ್ನುವುದನ್ನು ಇದು ವಿವರಿಸುತ್ತದೆ. ದುರದೃಷ್ಟವಶಾತ್, ಭಾರತ ಜಂಟಿ ಪಡೆಗಳ ನಿರ್ವಹಣೆಯಲ್ಲಿ ಎದುರಾಗಬಹುದಾದ ಸವಾಲುಗಳನ್ನು ತಿಳಿಯುವ ಹಾದಿಯಲ್ಲಿ ಇನ್ನೂ ಪ್ರಯತ್ನ ನಡೆಸಬೇಕಿದೆ.

    ಭಾರತ ದಶಕಗಳ ಕಾಲ ವಿಳಂಬ ನೀತಿ ಅನುಸರಿಸಿದರೆ, ಚೀನಾ ಅಮೆರಿಕದ ಮಿಲಿಟರಿ ನೀತಿಗಳನ್ನು ಅಧ್ಯಯನ ನಡೆಸುತ್ತಿದೆ. ಅಂತಹ ಕ್ರಮಗಳಲ್ಲಿ ಪ್ರಮುಖವಾದುದೆಂದರೆ ಚೀನಾದ ಇತ್ತೀಚಿನ ಮಲ್ಟಿ ಡೊಮೈನ್ ಪ್ರಿಸಿಷನ್ ವಾರ್‌ಫೇರ್ (ಎಂಡಿಪಿಡಬ್ಲ್ಯು) ಪರಿಕಲ್ಪನೆ. ಇದು ಚೀನಾದ ಪಡೆಗಳನ್ನು ಸೈಬರ್ ಸ್ಪೇಸ್‌ನಿಂದ ಔಟರ್ ಸ್ಪೇಸ್ ತನಕ ಎಲ್ಲವನ್ನೂ ಒಟ್ಟಾಗಿ ನಿರ್ವಹಿಸುತ್ತದೆ. ಚೀನಾ ಇದರ ಮೂಲಕ ಅಮೆರಿಕದ ರಕ್ಷಣಾ ಇಲಾಖೆಯ ಜಾಯಿಂಟ್ ಆಲ್ ಡೊಮೈನ್ ಕಮಾಂಡ್ ಆ್ಯಂಡ್ ಕಂಟ್ರೋಲ್ (ಜೆಎಡಿಸಿ2) ಅನ್ನು ಎದುರಿಸಲು ಪ್ರಯತ್ನಿಸುತ್ತಿದೆ.

    ಅಮೆರಿಕದ ರಕ್ಷಣಾ ಇಲಾಖೆ ಪ್ರಕಟಿಸಿರುವ ವಾರ್ಷಿಕ “ಚೀನಾ ಮಿಲಿಟರಿ ಪವರ್ ರಿಪೋರ್ಟ್” ಪ್ರಕಾರ, ಕಮಾಂಡ್ ಮತ್ತು ಕಂಟ್ರೋಲ್, ಕಮ್ಯುನಿಕೇಶನ್ಸ್, ಕಂಪ್ಯೂಟರ್‌ಗಳು, ಇಂಟಲಿಜೆನ್ಸ್, ಸರ್ವಯಲೆನ್ಸ್ ಹಾಗೂ ರಿಕನಯಸೆನ್ಸ್ (ಸಿ4ಐಎಸ್ಆರ್)ಗಳನ್ನು ಪರಸ್ಪರ ಸಂಪರ್ಕಿಸಲು ಎಂಡಿಪಿಡಬ್ಲ್ಯು ಸ್ಥಾಪಿಸಲಾಗಿದೆ. ಆ ಮೂಲಕ ಸೇನಾಶಕ್ತಿಯನ್ನು ಸಮನ್ವಯಗೊಳಿಸಿ, ಕ್ಷಿಪ್ರವಾಗಿ ಶತ್ರುಗಳ ಬಲಹೀನತೆಯನ್ನು ಕಂಡುಹಿಡಿಯಲಾಗುತ್ತದೆ.

    ಒಂದು ಬಾರಿ ಎಂಡಿಪಿಡಬ್ಲ್ಯು ಯೋಜನೆ ಜಾರಿಗೆ ಬಂದರೆ, ಅದು ಚೀನಾದ ಪಡೆಗಳಿಗೆ ಆಪರೇಟಿಂಗ್ ಸಿಸ್ಟಮ್‌ಗಳ ಪ್ರಾಥಮಿಕ ದುರ್ಬಲತೆಗಳನ್ನು ತಿಳಿಯಲು ಸಹಾಯಕವಾಗುತ್ತದೆ. ಇದರ ಆಧಾರಿತವಾಗಿ, ಕದನದ ಸಂದರ್ಭ ಎದುರಾದರೆ, ಚೀನಾದ ಪಡೆಗಳು ಭಾರತದ ದುರ್ಬಲತೆಗಳ ಮೇಲೆ ಕೈನೆಟಿಕ್ ಅಥವಾ ನಾನ್ ಕೈನೆಟಿಕ್ ನಿಖರ ದಾಳಿ ನಡೆಸಲು ಸಾಧ್ಯವಾಗುತ್ತದೆ. ಪಿಎಲ್ಎ ಶತ್ರುವಿನ ಆಪರೇಟಿಂಗ್ ಸಿಸ್ಟಮ್, ಜಾಲಬಂಧ ಹಾಗೂ ಮೂಲಭೂತ ವ್ಯವಸ್ಥೆಗಳನ್ನು ಎಂಡಿಪಿಡಬ್ಲ್ಯು ರೀತಿಯ ಯುದ್ಧ ವಿಧಾನದಿಂದ ನಾಶಪಡಿಸಬಲ್ಲದು.

    ಕಮಾಂಡ್ ಇನ್‌ಫರ್ಮೇಶನ್ ಸಿಸ್ಟಮ್‌ಗಳು ಸೇನಾಪಡೆಗಳು ಮತ್ತು ಕಮಾಂಡರ್‌ಗಳಿಗೆ ಪ್ರಸ್ತುತ ಸನ್ನಿವೇಶದ ಕುರಿತು ಹೆಚ್ಚಿನ ಗ್ರಹಿಕೆ ಒದಗಿಸುತ್ತವೆ. ಆ ಮೂಲಕ ಅವರು ಉತ್ತಮ ನಿರ್ಣಯ ಕೈಗೊಳ್ಳಲು, ಕಾರ್ಯಾಚರಣೆ ಮತ್ತು ಜವಾಬ್ದಾರಿಯನ್ನು ಇನ್ನೂ ಉತ್ತಮವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ.

    ಲೋಕೋಪಯೋಗಿ ಇಲಾಖೆ ಬಹುತೇಕ ಕೃತಕ ಬುದ್ಧಿಮತ್ತೆ, ಡೇಟಾ ವಿಶ್ಲೇಷಣೆ, ಹಾಗೂ ಅಡ್ವಾನ್ಸ್ಡ್ ಕಂಪ್ಯೂಟಿಂಗ್ ಮೇಲೆ ಅವಲಂಬಿತವಾಗಿದೆ. ಎಂಡಿಪಿಡಬ್ಲ್ಯು ಮೇಲೆ ಅಮೆರಿಕಾದ ಚಿಪ್ ನಿರ್ಬಂಧ ಕೆಲಕಾಲ ಋಣಾತ್ಮಕ ಪರಿಣಾಮ ಬೀರಿತ್ತು. ಒಂದು ಸಲ ಚೀನಾ ಸಂಶೋಧನೆ ಮತ್ತು ಅಭಿವೃದ್ಧಿ ಮೂಲಕ ಅಥವಾ ತಂತ್ರಜ್ಞಾನ ಕಳವಿನ ಮೂಲಕ ತನ್ನ ಚಿಪ್ ನಿರ್ಮಾಣ ಸಾಮರ್ಥ್ಯವನ್ನು ಅಭಿವೃದ್ಧಿ ಪಡಿಸಿದ ಬಳಿಕ ಎಂಡಿಪಿಡಬ್ಲ್ಯು ಭಾರತಕ್ಕೆ ತೊಂದರೆ ನೀಡಲು ಮರಳಿ ಬರಲಿದೆ.

    ಅದರೊಡನೆ, ಹಿಂದೂ ಮಹಾಸಾಗರದ ಮೇಲೆ ಭಾರತೀಯ ನೌಕಾಪಡೆ ಕೊಂಚ ಮೇಲುಗೈ ಹೊಂದಿರುವುದರಿಂದ, ಈಗಿನ ಚಿಪ್ ಕೊರತೆ ಭಾರತೀಯ ಸೇನೆ ಮುಂದಿನ ವರ್ಷಗಳಲ್ಲಿ ಎದುರಾಗಬಹುದಾದ ಆಧುನಿಕ ಯುದ್ಧವನ್ನು ಎದುರಿಸಲು ಸೂಕ್ತ ತರಬೇತಿ ನೀಡಲು ಸಮಯಾವಕಾಶ ಒದಗಿಸುತ್ತದೆ.

    ಹೆಚ್ಚುತ್ತಿರುವ ಚೀನಾದ ಅಪಾಯ

    ಇತ್ತೀಚಿನ ಮಾಧ್ಯಮ ವರದಿಗಳ ಪ್ರಕಾರ, ಚೀನಾ ತನ್ನ ಬಳಿ ಇರುವ 400 ಅಣ್ವಸ್ತ್ರ ಸಿಡಿತಲೆಗಳನ್ನು 2035ರ ವೇಳೆಗೆ 1,500ಕ್ಕೆ ಹೆಚ್ಚಿಸಲು ಉದ್ದೇಶಿಸಿದೆ. ಚೀನಾ ಈಗಾಗಲೇ ಕೃತಕ ಬುದ್ಧಿಮತ್ತೆ (ಎಐ), ಸ್ವಾಯತ್ತ ವ್ಯವಸ್ಥೆಗಳು, ಸೆಮಿ ಕಂಡಕ್ಟರ್‌ಗಳು, ಕ್ವಾಂಟಮ್ ತಂತ್ರಜ್ಞಾನಗಳು, ಹಾಗೂ ಅತ್ಯಾಧುನಿಕ ವಸ್ತುಗಳ ಅಭಿವೃದ್ಧಿಗಾಗಿ ಪ್ರಯತ್ನ ನಡೆಸುತ್ತಿದೆ. ಚೀನಾದ ತಂತ್ರಜ್ಞಾನದ ಅಭಿವೃದ್ಧಿ ಭಾರತದಂತಹ ರಾಷ್ಟ್ರಕ್ಕೆ ಗಂಭೀರವಾದ ಮಿಲಿಟರಿ ಪರಿಣಾಮಗಳನ್ನು ತಂದೊಡ್ಡಬಹುದು.

    ಇತ್ತೀಚೆಗೆ ಬೆಲ್‌ಫರ್ ಸೆಂಟರ್ ಫಾರ್ ಸೈನ್ಸ್ ಆ್ಯಂಡ್ ಇಂಟರ್‌ನ್ಯಾಷನಲ್ ಅಫೇರ್ಸ್ ಮೌಲ್ಯಮಾಪನದ ಪ್ರಕಾರ, ಚೀನಾ ಈಗಾಗಲೇ ಜಗತ್ತಿನ ತಂತ್ರಜ್ಞಾನ ಉತ್ಪಾದನೆಯಲ್ಲಿ ಅಮೆರಿಕಾವನ್ನು ಹಿಂದಿಕ್ಕಿದೆ. ಈ ಸಂಶೋಧನೆಯ ಪ್ರಕಾರ, ಚೀನಾ ಕೃತಕ ಬುದ್ಧಿಮತ್ತೆ, 5ಜಿ, ಸೆಮಿಕಂಡಕ್ಟರ್, ಕ್ವಾಂಟಮ್‌ ತಂತ್ರಜ್ಞಾನ, ಬಯೋಟೆಕ್ನಾಲಜಿ, ಹಾಗೂ ಪರಿಸರ ಸ್ನೇಹಿ ಇಂಧನ ವಲಯಗಳಲ್ಲಿ ಅಮೆರಿಕಾಗೆ ಪ್ರಮುಖ ಎದುರಾಳಿಯಾಗಿದೆ. ವರದಿಯ ಪ್ರಕಾರ, ಹಲವು ವಲಯಗಳಲ್ಲಿ ಚೀನಾ ಅಮೆರಿಕಾವನ್ನು ಹಿಂದಿಕ್ಕಿದೆ.

    ಭಾರತದಿಂದ ಪ್ರತ್ಯುತ್ತರದ ಹುಡುಕಾಟ

    ಭಾರತದ ಜಾಯಿಂಟ್ ಥಿಯೇಟರ್ ಕಮಾಂಡ್ ಜಾರಿಗೆ ಬಂದ ಬಳಿಕ, ಭಾರತ ಆಧುನಿಕ ಸೇನೆಗೆ ಬೇಕಾದ ಅಗತ್ಯತೆಗಳನ್ನು ಹೊಂದಲಿದೆ. ಆಗ ಭಾರತದ ಮಿಲಿಟರಿ ನಾಯಕತ್ವಕ್ಕೆ ಮೇಲೆ ಹೆಸರಿಸಿದ ಪ್ರಮುಖ ತಂತ್ರಜ್ಞಾನಗಳನ್ನು ಒಳಗೊಳ್ಳಲು ಸಾಧ್ಯವಾಗುತ್ತದೆ.

    ಭಾರತದ ಆಧುನಿಕ ಸೇನಾಪಡೆಗಳು ಎದುರಿಸುತ್ತಿರುವ ಹಲವು ಸವಾಲುಗಳು

    ಮಾಹಿತಿ ತಂತ್ರಜ್ಞಾನದಲ್ಲಿ ಏಕರೂಪದ ವ್ಯವಸ್ಥೆಯ ಅಗತ್ಯತೆ: ಐಎಸ್ಆರ್‌ನಲ್ಲಿ ಸ್ವಾಯತ್ತ ವಾಹನಗಳು, ಮಾಹಿತಿ ಸಮರ, ಇಲೆಕ್ಟ್ರಾನಿಕ್ ಯುದ್ಧ, ಸಿಮ್ಯುಲೇಶನ್‌, ತರಬೇತಿ, ಮುನ್ಸೂಚಕ ನಿರ್ವಹಣೆ, ಟಾರ್ಗೆಟ್ ರೆಕಗ್ನಿಷನ್ ಸೈಬರ್ ಅಟ್ಯಾಕ್ ರಿಕನಯಸೆನ್ಸ್, ವಿಚಕ್ಷಣೆ, ಹಾಗೂ ಕೃತಕ ಬುದ್ಧಿಮತ್ತೆ ಆಧಾರಿತ ಮುನ್ಸೂಚನೆ, ಬಾಹ್ಯಾಕಾಶದಿಂದ ಸಂವಹನ ಮತ್ತು ಭೂ ವೀಕ್ಷಣಾ ಡೇಟಾಸೆಟ್‌ಗಳು ಸೇರಿದಂತೆ ಕೃತಕ ಬುದ್ಧಿಮತ್ತೆಯನ್ನು ಒಳಗೊಳ್ಳುವಂತೆ ಮಾಡಲಾಗುತ್ತದೆ. ಆದರೆ ತಂತ್ರಜ್ಞಾನದಲ್ಲಿನ ಅತಿಯಾದ ಅವಲಂಬನೆಯ ಪರಿಣಾಮವಾಗಿ, ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯ ಧ್ರುವೀಕರಣಗೊಳಿಸುವ ಸಮಸ್ಯೆಯನ್ನು ತಂದೊಡ್ಡುತ್ತದೆ. ಚೀನಾದ ಸೇನೆ ಈಗಾಗಲೇ ಇಂತಹ ಸಮಸ್ಯೆಯನ್ನು ಎದುರಿಸುತ್ತಿದೆ.

    ಪ್ರಸ್ತುತ ಎಐ ಸಾಮರ್ಥ್ಯದ ಕುರಿತ ಅತಿಯಾದ ಅಂದಾಜು ಮತ್ತು ಅವುಗಳ ಮೇಲಿನ‌ ಅತಿಯಾದ ಅವಲಂಬನೆ: ಜಂಟಿ ನೀತಿಗಳನ್ನು ಬೋಧಿಸುವ ನ್ಯಾಷನಲ್ ಡಿಫೆನ್ಸ್ ಯುನಿವರ್ಸಿಟಿಯ ಕೊರತೆಯೂ ಪ್ರಮುಖ ಸವಾಲಾಗಿದೆ. ಇಂಡಿಯನ್ ಡಿಫೆನ್ಸ್ ಯುನಿವರ್ಸಿಟಿ (ಐಡಿಯು) ನಿರ್ಮಾಣಕ್ಕಾಗಿ 1967ರಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಅದರ ನಿರ್ಮಾಣಕ್ಕಾಗಿ ಭೂಮಿಪೂಜೆ 2013ರಲ್ಲಿ ನಡೆಸಲಾಯಿತು. ಆಗಸ್ಟ್ 2016ರಲ್ಲಿ ಡ್ರಾಟ್ ಲಾ ನಿಯಮವನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಲಾಯಿತು. ಆದರೆ ಅದಕ್ಕಾಗಿ ಇನ್ನೂ ಮಂತ್ರಿಮಂಡಲದ ಅನುಮತಿ ನೀಡಲಾಗಿಲ್ಲ. ಸೇನಾಪಡೆಗಳು ಮತ್ತು ಹಿರಿಯ ಕಮಾಂಡರ್‌ಗಳು ಆಧುನಿಕ ಯುದ್ಧತಂತ್ರದ ಕುರಿತಾದ ಜ್ಞಾನ ಪಡೆಯುವ ಅನಿವಾರ್ಯತೆ ಇದೆ.

    ತಾಂತ್ರಿಕ ಸಂಕೀರ್ಣತೆ ಮತ್ತು ಅರೆಮನಸ್ಸಿನ ಪ್ರಯತ್ನ: ತಂತ್ರಜ್ಞಾನದ ಮಹತ್ವದ ಕುರಿತು ಯಾವುದೇ ಅನುಮಾನಗಳಿಲ್ಲ. ಆದರೆ ಇನ್ನೂ ಸಾಬೀತುಪಡಿಸಲಾಗದ ತಂತ್ರಜ್ಞಾನದ ಪರಿಕಲ್ಪನೆಗಳ ಮೇಲಿನ ಅತಿಯಾದ ಅವಲಂಬನೆ ಸೇನಾಪಡೆಗೆ ತುಟ್ಟಿಯಾಗಿ ಪರಿಣಮಿಸಬಹುದು. ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಇದೇ ಪರಿಸ್ಥಿತಿಯನ್ನು ಅನುಭವಿಸುತ್ತಿದೆ. ಪಿಎಲ್ಎಯ ಹಿರಿಯ ಅಧಿಕಾರಿಯೊಬ್ಬರು ‘ಇಂಟಲಿಜೆಂಟೈಸೇಷನ್’ ಎಂಬ ಪರಿಕಲ್ಪನೆಯ ಪದವನ್ನು ಪ್ರಯೋಗಿಸಿದ್ದಾರೆ. ಚೀನಾದ ಸೇನೆಯ ಬಹುತೇಕ ಅಧಿಕಾರಿಗಳಿಗೆ ಈ ಕುರಿತ ಹೆಚ್ಚಿನ ಮಾಹಿತಿಯೇ ಲಭ್ಯವಿಲ್ಲ. ಹಿರಿಯ ಅಧಿಕಾರಿಗಳು ಅವರ ಅಜ್ಞಾನವನ್ನು ತೋರಿಸಲು ತಯಾರಿಲ್ಲ. ಕಿರಿಯ ಅಧಿಕಾರಿಗಳು ಅವರ ಹಿರಿಯ ಅಧಿಕಾರಿಗಳ ಜ್ಞಾನವನ್ನು ಪ್ರಶ್ನಿಸುವಷ್ಟು ಧೈರ್ಯ ಹೊಂದಿಲ್ಲ.

    ಇನ್ನು ಕಾಳಜಿಯ ಅಂಶಗಳೆಂದರೆ ಅರೆ ಮನಸ್ಸಿನ ಪ್ರಯತ್ನಗಳಾದ ಐದು ವರ್ಷ ಹಳೆಯ ಜಾಯಿಂಟ್ ಡಾಕ್ಟ್ರಿನ್ ಆ್ಯಂಡ್ ಇಂಡಿಯನ್ ಆರ್ಮ್ಡ್ ಫೋರ್ಸಸ್ ಮುಖ್ಯವಾಗಿದೆ. 2017ರ ಪ್ರಕಟಣೆಯಲ್ಲಿ ಭಾರತದ ಸೇನೆಯ ಜಂಟಿ ನಾಯಕತ್ವದ ವಿಶ್ಲೇಷಣೆಯನ್ನು ಹೊಂದಿಲ್ಲ. ಕಳೆದ ಐದು ವರ್ಷಗಳಲ್ಲಿ ಹಲವು ಬದಲಾವಣೆಗಳಾಗಿದ್ದು, ಈಗ ಜಂಟಿ ಡಾಕ್ಟ್ರಿನ್ನಿನ ಪರಿಷ್ಕರಣೆ ಮತ್ತು ಹೆಚ್ಚಿನ ಮತ್ತು ವಿಸ್ತಾರವಾದ ಗಮನದ ಅಗತ್ಯತೆಯಿದೆ. ಅಮೆರಿಕಾ ಮತ್ತು ಚೀನಾ ದೇಶಗಳೂ ಇಂತಹ ಕ್ರಮಗಳನ್ನು ಕೈಗೊಂಡಿವೆ. ಇಂತಹ ಅಗತ್ಯತೆಗಳು ಇಂಡಿಯನ್ ಡಿಫೆನ್ಸ್ ಯುನಿವರ್ಸಿಟಿಯ ಸ್ಥಾಪನೆಯ ಅಗತ್ಯತೆಯನ್ನು ತೋರಿಸುತ್ತಿವೆ.

    ತಡವಾಗುವಿಕೆ ಭಾರತದ ಅಭಿವೃದ್ಧಿಯನ್ನು ನಿಧಾನಿಸಬಲ್ಲದು: ಮೇಲೆ ಹೇಳಿದ ಕಾರಣಗಳಿಂದ, ಭವಿಷ್ಯದ ಯುದ್ಧಗಳು ತಾಂತ್ರಿಕ ಮತ್ತು ಪಾರಂಪರಿಕ ಯುದ್ಧದ ಮಾದರಿಗಳನ್ನು ಒಳಗೊಳ್ಳಲಿವೆ. ತಂತ್ರಜ್ಞಾನ ಮಾನವರಿಗೆ ಸಹಕಾರಿಯಾಗಬೇಕೇ ಹೊರತು ತೊಂದರೆ ನೀಡಬಾರದು. ಆಧುನಿಕ ಯುದ್ಧ ಆರ್ಥಿಕ ಅಭಿವೃದ್ಧಿ ಮತ್ತು ತಂತ್ರಜ್ಞಾನದ ಮೇಲೆ ಆಧಾರಿತವಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಚೀನಾ ಈ ದಿಕ್ಕಿನಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಆದರೆ ಆ ಚಲನೆ ಅದು ಅಂದುಕೊಂಡದ್ದಕ್ಕಿಂತ ನಿಧಾನವಾಗಿದೆ.

    ಚೀನಾದ ಬಳಿ 30,000 ಅಂತಾರಾಷ್ಟ್ರೀಯ ಸಂಸ್ಥೆಗಳಿದ್ದು, ವಾರ್ಷಿಕವಾಗಿ 100 ಮಿಲಿಯನ್‌ಗೂ ಹೆಚ್ಚು ಚೀನೀಯರು ವಿದೇಶಗಳಿಗೆ ಭೇಟಿ ನೀಡುತ್ತಾರೆ. ಚೀನಾ ತನ್ನ ಪಾರಂಪರಿಕ ಮಿಲಿಟರಿ ಶಕ್ತಿಯ ಮೂಲಕ ಅವರನ್ನು ಕಾಪಾಡಲು ಏರ್ಪಾಡು ನಡೆಸುತ್ತಿದೆ. ಚೀನಾ 2014 ಮತ್ತು 2018ರ ಮಧ್ಯ ಹಲವು ಯುದ್ಧನೌಕೆಗಳನ್ನು ಸೇನೆಗೆ ನಿಯೋಜಿಸಿದ್ದು, ಚೀನಾ ನೌಕಾಪಡೆಯ ಸಾಮರ್ಥ್ಯ ಭಾರತ, ಬ್ರಿಟಿಷ್, ಜರ್ಮನ್, ತೈವಾನ್, ಹಾಗೂ ಸ್ಪೇನ್ ನೌಕಾಪಡೆಗಳ ಒಟ್ಟು ಸಾಮರ್ಥ್ಯಕ್ಕಿಂತ ಹೆಚ್ಚಾಗಿದೆ. ಚೀನಾದ ಇಂತಹ ತಯಾರಿಯ ಹಿಂದೆ ಒಂದು ಸಂದೇಶವೂ ಇದೆ.

    ಭಾರತ ಜಗತ್ತಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ. ಒಂದು ವೇಳೆ ಭಾರತ ದೂರದ ಪ್ರದೇಶಗಳಲ್ಲಿ ಯುದ್ಧ ನಡೆಸುವ ಉದ್ದೇಶ ಹೊಂದಿಲ್ಲವಾದರೂ, ಭಾರತ ಅನಿರೀಕ್ಷಿತ ಬೆಳವಣಿಗೆ ಕಾಣುತ್ತಿರುವ ಜಗತ್ತಿನಲ್ಲಿ ತನ್ನ ಅಸ್ತಿತ್ವವನ್ನು ರಕ್ಷಿಸಿಕೊಳ್ಳುವ ಅನಿವಾರ್ಯತೆಯಿದೆ.

    ಇಂದು ಭಾರತದ ಶಾಂತಿ ಸ್ಥಾಪನಾ ಪಡೆಗಳು ವಿಶ್ವಸಂಸ್ಥೆಯ ಪರವಾಗಿ ಜಗತ್ತಿನ ವಿವಾದಾತ್ಮಕ ಪ್ರದೇಶಗಳಲ್ಲಿ ಗಸ್ತು ತಿರುಗುತ್ತಿವೆ. ಭವಿಷ್ಯದಲ್ಲಿ ಇದೇ ಪಡೆಗಳು ಭಾರತದ ಅಗತ್ಯತೆಗೆ ಶಕ್ತಿ ಪ್ರದರ್ಶನ ಮತ್ತು ವಿವಾದಗಳ ಪರಿಹಾರದಲ್ಲಿ ಭಾಗಿಯಾಗಲಿವೆ. ಆ ದಿನಗಳೂ ಇನ್ನು ತುಂಬಾ ದೂರದಲ್ಲಿಲ್ಲ. ಭಾರತೀಯ ಸೇನಾಪಡೆಗಳು ಇದನ್ನು ಅರ್ಥೈಸಿಕೊಂಡು, ಸಮರ ಸನ್ನದ್ಧವಾಗಬೇಕಿದೆ.

    ನಾಯಿಯನ್ನು ನಾಯಿ ಎಂದ ಪಕ್ಕದ ಮನೆಯವನನ್ನು ಕೊಂದೇ ಬಿಟ್ಟ!

    ಪೈಲಟ್ ಕೆಲಸಕ್ಕೇ ಮುಳುವಾದ ‘ಮೂತ್ರ ವಿಸರ್ಜನೆ’; ಏರ್​ ಇಂಡಿಯಾದ ಪ್ರಕರಣ ‘ಒಂದಕ್ಕೆ’ 30 ಲಕ್ಷ ರೂ. ದಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts