More

    ಟೀಮ್ ಇಂಡಿಯಾಗೆ 3 ಹೊಸ ಅಭ್ಯಾಸ ವಿಧಾನ; ಲಾಭವೇನು ಗೊತ್ತೇ?

    ನವದೆಹಲಿ: ಭಾರತ ತಂಡ ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಮತ್ತು ಇಂಗ್ಲೆಂಡ್ ವಿರುದ್ಧದ ತವರಿನ ಟೆಸ್ಟ್ ಸರಣಿಗಳಲ್ಲಿ ಭರ್ಜರಿ ಗೆಲುವನ್ನೇ ಸಾಧಿಸಿತ್ತು. ಆದರೆ ಇಲ್ಲಿ ಬ್ಯಾಟ್ಸ್‌ಮನ್‌ಗಳ ದೊಡ್ಡ ದೊಡ್ಡ ಇನಿಂಗ್ಸ್‌ಗಳಿಗಿಂತ ಹೆಚ್ಚಾಗಿ ಬೌಲರ್‌ಗಳು ಪ್ರತಿ ಪಂದ್ಯದಲ್ಲೂ 20 ವಿಕೆಟ್ ಕಬಳಿಸುವಲ್ಲಿ ಸಫಲರಾಗಿದ್ದೇ ಯಶಸ್ಸಿಗೆ ಪ್ರಮುಖ ಕಾರಣವಾಗಿತ್ತು. ಹೀಗಾಗಿ ಮುಂಬರುವ ಇಂಗ್ಲೆಂಡ್ ಪ್ರವಾಸದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಮತ್ತು ಆತಿಥೇಯರ ಎದುರಿನ ಟೆಸ್ಟ್ ಸರಣಿಯಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳಿಂದಲೂ ದೊಡ್ಡ ದೊಡ್ಡ ಇನಿಂಗ್ಸ್‌ಗಳು ಬರಬೇಕೆಂಬ ಕಾರಣಕ್ಕಾಗಿ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ವಿಶೇಷ ಯೋಜನೆಯೊಂದನ್ನು ರೂಪಿಸಿದ್ದಾರೆ. ಅದುವೇ 3 ಹೊಸ ವಿಧಾನದ ತರಬೇತಿ.

    ಈ ಹೊಸ ತರಬೇತಿ ವಿಧಾನಗಳಿಂದ ಬ್ಯಾಟ್ಸ್‌ಮನ್‌ಗಳು ಶತಕ, ದ್ವಿಶತಕ ಮತ್ತು ತ್ರಿಶತಕದಂಥ ದೊಡ್ಡ ದೊಡ್ಡ ಇನಿಂಗ್ಸ್‌ಗಳನ್ನು ದಾಖಲಿಸಲು ಮತ್ತು ಈ ಮೂಲಕ ಭಾರತ ತಂಡ ಬೃಹತ್ ಮೊತ್ತಗಳನ್ನು ಪೇರಿಸಲು ನೆರವಾಗುವ ನಿರೀಕ್ಷೆ ಇಡಲಾಗಿದೆ. ಇಂಗ್ಲೆಂಡ್ ವಾತಾವರಣದಲ್ಲಿ ಚೆಂಡು ವೇಗ ಮತ್ತು ಸ್ವಿಂಗ್‌ನಿಂದ ಕೂಡಿರುತ್ತದೆ. ಇಂಥ ಎಸೆತಗಳನ್ನು ಎದುರಿಸುವಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ಇನ್ನೂ ಅಷ್ಟೇನೂ ನಿಪುಣರಾಗಿಲ್ಲ. ಹೀಗಾಗಿ ಈ ಅಂಶಗಳತ್ತ ಆದ್ಯತೆ ನೀಡಿ ಕೋಚ್ ರವಿಶಾಸ್ತ್ರಿ 3 ಹೊಸ ತರಬೇತಿ ವಿಧಾನಗಳನ್ನು ರೂಪಿಸಿದ್ದಾರೆ.

    ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕಳೆದ 13 ಟೆಸ್ಟ್ ಇನಿಂಗ್ಸ್‌ಗಳಲ್ಲಿ ಶತಕ ಕಾಣದೆ ಪರದಾಡುತ್ತಿದ್ದರೆ, ಯುವ ಆರಂಭಿಕ ಶುಭಮಾನ್ ಗಿಲ್ ಆಡಿದ 13 ಇನಿಂಗ್ಸ್‌ಗಳಲ್ಲಿ 1 ಶತಕವಷ್ಟೇ ಗಳಿಸಿದ್ದಾರೆ. ಅಜಿಂಕ್ಯರಹಾನೆ ಕಳೆದ 50 ಇನಿಂಗ್ಸ್‌ಗಳಲ್ಲಿ 3 ಶತಕ ಬಾರಿಸಿದ್ದರೂ, 110-115 ರನ್‌ಗಿಂತ ಮೇಲೆ ಹೋಗಿಲ್ಲ. ರೋಹಿತ್ ಶರ್ಮ ಅವರಂತೂ ವಿದೇಶಿ ನೆಲದಲ್ಲಿ ಇನ್ನೂ ಟೆಸ್ಟ್ ಶತಕದ ಖಾತೆ ತೆರೆದಿಲ್ಲ. ಕಳೆದ ಎರಡೂವರೆ ವರ್ಷಗಳಿಂದ ಭಾರತೀಯ ಬ್ಯಾಟ್ಸ್‌ಮನ್‌ಗಳಿಂದ ದ್ವಿಶತಕದಂಥ ದೊಡ್ಡ ಇನಿಂಗ್ಸ್‌ಗಳು ಬಂದಿಲ್ಲ. ಈ ಕೊರತೆಯನ್ನು ಈಗ ಭಾರತ ತಂಡ ನೀಗಿಸಲೇಬೇಕಾಗಿದೆ. ಯಾಕೆಂದರೆ 2018ರ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ತಂಡ ನಾಟಿಂಗ್‌ಹ್ಯಾಂ ಟೆಸ್ಟ್ ಗೆದ್ದಾಗ ವಿರಾಟ್ ಕೊಹ್ಲಿ ಎರಡೂ ಇನಿಂಗ್ಸ್‌ಗಳಲ್ಲಿ ಆಡಿದ ದೊಡ್ಡ ಇನಿಂಗ್ಸ್ ಪ್ರಮುಖ ಕಾರಣವಾಗಿತ್ತು.

    ತರಬೇತಿ ವಿಧಾನ-1
    ಪಿಚ್ ಅಳತೆ 22 ಯಾರ್ಡ್‌ನಿಂದ 16 ಯಾರ್ಡ್‌ಗೆ ತಗ್ಗಿಸಿ ನೆಟ್‌ನಲ್ಲಿ ರೋಬೋ-ಆರ್ಮ್ ಎಸೆತಗಳನ್ನು ಎದುರಿಸುವುದು. ಇದು ಹೆಚ್ಚಿನ ವೇಗದ ಎಸೆತಗಳನ್ನು ಎದುರಿಸಲು ಬ್ಯಾಟ್ಸ್‌ಮನ್‌ಗಳಿಗೆ ನೆರವಾಗಲಿದೆ. ಬ್ರಿಟನ್ ಪಿಚ್‌ಗಳಲ್ಲಿ ಈ ಸವಾಲು ಹೆಚ್ಚಿರುತ್ತದೆ. ಭಾರತಕ್ಕಿಂತ ಹೆಚ್ಚಿನ ವೇಗದಲ್ಲಿ ಬ್ರಿಟನ್ ಪಿಚ್‌ಗಳಲ್ಲಿ ಚೆಂಡುಗಳು ಪುಟಿದೇಳುತ್ತವೆ.

    ತರಬೇತಿ ವಿಧಾನ-2
    ಮೊದಲೇ ಸಾಕಷ್ಟು ಶೈನಿಂಗ್ ಮಾಡಲಾದ ಚೆಂಡುಗಳನ್ನು ನೆಟ್ ಅಭ್ಯಾಸದ ವೇಳೆ ಬಳಸುವುದು. ಇದು ಇಂಗ್ಲೆಂಡ್‌ನಲ್ಲಿ ವೇಗಿಗಳ ರಿವರ್ಸ್ ಸ್ವಿಂಗ್ ಎಸೆತಗಳನ್ನು ಸಮರ್ಥವಾಗಿ ಎದುರಿಸಲು ನೆರವಾಗಲಿದೆ. ಅಲ್ಲದೆ ಯಾವೆಲ್ಲ ಸ್ವಿಂಗ್ ಎಸೆತಗಳನ್ನು ಹಾಗೆಯೇ ಬಿಟ್ಟುಬಿಡಬೇಕೆಂದು ಬ್ಯಾಟ್ಸ್‌ಮನ್‌ಗೆ ನಿರ್ಧರಿಸಲು ಇದರಿಂದ ಸುಲಭವಾಗಲಿದೆ.

    ತರಬೇತಿ ವಿಧಾನ-3
    ಟೆಸ್ಟ್ ಕ್ರಿಕೆಟ್‌ನಲ್ಲಿ ದೀರ್ಘಕಾಲ ಕ್ರೀಸ್‌ನಲ್ಲಿ ಅಗತ್ಯವಿರುವ ‘ಆರ್ಟ್ ಆಫ್​ ಲಿವಿಂಗ್’ ಅಂದರೆ ಯಾವೆಲ್ಲ ಎಸೆತಗಳನ್ನು ಹಾಗೆಯೇ ಕೀಪರ್ ಕೈಸೇರಲು ಬಿಟ್ಟುಬಿಡಬೇಕೆಂಬ ಕೆಲಯನ್ನು ಬ್ಯಾಟ್ಸ್‌ಮನ್‌ಗಳಿಗೆ ಕರಗತ ಮಾಡಿಸುವುದು. ಇದರಿಂದ ಬ್ಯಾಟ್ಸ್‌ಮನ್‌ಗಳು ಪಿಚ್‌ಗೆ ಹೊಂದಿಕೊಂಡು ದೊಡ್ಡ ಇನಿಂಗ್ಸ್ ಆಡಲು ನೆರವಾಗಲಿದೆ. ಪ್ರತಿ ಎಸೆತವನ್ನು ಆಡುವ ದುಸ್ಸಾಹಸ ಕಡಿಮೆ ಆಗುತ್ತದೆ.

    ಭಾರತ ಪರ ದೀರ್ಘಕಾಲ ಆಡಲು ಸಾಧ್ಯವಾಗದ ಬಗ್ಗೆ ಕಾರಣ ವಿವರಿಸಿದ ರಾಬಿನ್ ಉತ್ತಪ್ಪ

    ಮಹಿಳಾ ತಂಡದ ಕೋಚ್​ ಹುದ್ದೆಯಿಂದ ರಾಮನ್​ ಪದಚ್ಯುತಿಗೆ ಬೇಸರ ಹೊರಹಾಕಿದ ಸೌರವ್​ ಗಂಗೂಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts