More

    ಟೆಂಟ್​ ತೆಗೆಯಿರಿ ಎಂದು ಹೇಳಲು ಹೋದ ಭಾರತೀಯ ಯೋಧರ ಮೇಲೆ ಚೀನಿಯರ ದಾಳಿ

    ನವದೆಹಲಿ: ಉಭಯ ರಾಷ್ಟ್ರಗಳ ನಡುವಿನ ಮಾತುಕತೆ ವೇಳೆ ಆದ ಒಪ್ಪಂದಂತೆ ಲಡಾಖ್​ನ ಶಯಾಕ್​ ಮತ್ತು ಗಲ್ವಾನ್​ ನದಿ ಸಂಗಮದ ವೈ ಜಂಕ್ಷನ್​ನಲ್ಲಿ ಭಾರತದ ಎಲ್ಲೆಯೊಳಗೆ ಹಾಕಿಕೊಂಡಿದ್ದ ಟೆಂಟ್​ ಅನ್ನು ತೆಗೆಯುವಂತೆ ಹೇಳಲು ಹೋದ ಭಾರತೀಯ ಸೇನಾಪಡೆಯ ಯೋಧರ ಮೇಲೆ ಚೀನಿ ಯೋಧರು ದಾಳಿ ಮಾಡಿದ್ದು ಇದೀಗ ಬಹಿರಂಗಗೊಂಡಿದೆ.

    16 ಬಿಹಾರ್​ ರೆಜಿಮೆಂಟ್​ನ ಪದಾತಿ ದಳದ ಪೆಟ್ರೋಲಿಂಗ್​ ತಂಡ ಒಪ್ಪಂದದಂತೆ ಟೆಂಟ್​ ತೆಗೆಯುವಂತೆ ಜೂ.15ರ ಸಂಜೆ ಚೀನಿ ಯೋಧರಿಗೆ ಹೇಳಲು ಟೆಂಟ್​ ಬಳಿಗೆ ಹೋಗಿದ್ದರು. ಆಗ 10ರಿಂದ 12 ಚೀನಿ ಯೋಧರು ಅಲ್ಲಿದ್ದರು. ಆದರೆ, ಅವರು ಟೆಂಟ್​ ಅನ್ನು ತೆಗೆಯಲು ನಿರಾಕರಿಸಿದರು.

    ತಮ್ಮ ಶಿಬಿರಕ್ಕೆ ಮರಳಿದ ಭಾರತೀಯ ಯೋಧರು ಕಮಾಂಡಿಂಗ್​ ಆಫೀಸರ್​ ಕರ್ನಲ್​ ಸಂತೋಷ್​ ಬಾಬು ಅವರಿಗೆ ಈ ವಿಷಯ ತಿಳಿಸಿದರು. ಈ ಹಿನ್ನೆಲೆಯಲ್ಲಿ ಕರ್ನಲ್​ ಸಂತೋಷ್​ ಬಾಬು 50 ಯೋಧರ ಜತೆಗೂಡಿ ಚೀನಿ ಟೆಂಟ್​ ಬಳಿಗೆ ತೆರಳಿ ಅದನ್ನು ತೆಗೆಯುವಂತೆ ಹೇಳಿದರು. ವಾಗ್ಯುದ್ಧ ಆರಂಭವಾಗುತ್ತಿರುವಂತೆಯೇ ಭಾರತೀಯ ಯೋಧರು ಟೆಂಟ್​ ಅನ್ನು ಕೀಳಲು ಮುಂದಾದರು.

    ಇದನ್ನೂ ಓದಿ: ಚೀನಿ ಯೋಧರು ಬಾಲ ಬಿಚ್ಚಿದರೆ ಸೂಕ್ತ ರೀತಿಯಲ್ಲಿ ತಿರುಗೇಟು ನೀಡಿ

    ಆ ವೇಳೆಗಾಗಲೆ 300ರಿಂದ 350 ಯೋಧರನ್ನು ಸ್ಥಳಕ್ಕೆ ಕರೆಯಿಸಿಕೊಂಡಿದ್ದ ಪೀಪಲ್ಸ್​ ಲಿಬರೇಷನ್​ ಆರ್ಮಿ (ಪಿಎಲ್​ಎ) ಯೋಧರು ಭಾರತೀಯರ ಮೇಲೆ ದಾಳಿ ಮಾಡಲು ಕಬ್ಬಿಣದ ರಾಡುಗಳು, ಬಡಿಗೆಗಳನ್ನು ಸಿದ್ಧಪಡಿಸಿಟ್ಟುಕೊಂಡಿದ್ದರು. ಅಲ್ಲದೆ, ಎತ್ತರದ ಸ್ಥಳದಲ್ಲಿ ಯೋಧರನ್ನು ಇರಿಸಿ, ಕಲ್ಲು ತೂರಾಟಕ್ಕೆ ಸೂಚನೆ ನೀಡಲಾಗಿತ್ತು.

    ಭಾರತೀಯ ಯೋಧರು ಟೆಂಟ್​ ಕೀಳಲು ಮುಂದಾಗುತ್ತಿದ್ದಂತೆ ಚೀನಿ ಯೋಧರು ಮೊದಲಿಗೆ ಕಲ್ಲು ತೂರಾಟ ಆರಂಭಿಸಿದ್ದಲ್ಲದೆ, ಶಿಬಿರದ ಬಳಿ ಇದ್ದ ಯೋಧರು ಕಬ್ಬಿಣದ ರಾಡು ಮತ್ತು ಬಡಿಗೆಗಳಿಂದ ಹಲ್ಲೆ ನಡೆಸಲು ಆರಂಭಿಸಿದರು. ಮೊದಲ ಪೆಟ್ಟು ತಿಂದ ಹವಲ್ದಾರ್​ ಪಳನಿ ನೆಲಕ್ಕುರುಳುತ್ತಿದ್ದಂತೆ ಭಾರತೀಯ ಯೋಧರು ಕೂಡ ಪ್ರತಿದಾಳಿ ಆರಂಭಿಸಿದರು. ಬಳಿಕ ಕಮಾಂಡಿಂಗ್​ ಆಫೀಸರ್​ ಕರ್ನಲ್​ ಸಂತೋಷ್​ ಬಾಬು ಅಸುನೀಗಿದರು. ಆನಂತರದಲ್ಲಿ ಪರಿಸ್ಥಿತಿ ನಿಯಂತ್ರಣ ತಪ್ಪಿ, ಪೂರ್ಣ ಪ್ರಮಾಣದ ಘರ್ಷಣೆ ಆರಂಭವಾಯಿತು.

    ಅಂದಾಜು ಮೂರು ಗಂಟೆ ಘರ್ಷಣೆ ನಡೆಯಿತು. ಈ ಘರ್ಷಣೆಯಲ್ಲಿ ಚೀನಾದ ಹಲವು ಯೋಧರು ಹತರಾದರು ಅಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಗಾಯಗೊಂಡರು.
    ಮರುದಿನ ಬೆಳಗ್ಗೆ ಪರಿಸ್ಥಿತಿ ಸ್ವಲ್ಪ ಶಾಂತಗೊಂಡ ನಂತರದಲ್ಲಿ ಮೃತಪಟ್ಟ ಚೀನಿ ಯೋಧರ ದೇಹಗಳನ್ನು ಭಾರತೀಯ ಯೋಧರು ಪಿಎಲ್​ಎಗೆ ಹಸ್ತಾಂತರಿಸಿದರು. ಈ ಘರ್ಷಣೆಯಲ್ಲಿ ಭಾರತದ 100ಕ್ಕೂ ಹೆಚ್ಚು ಯೋಧರು ಪಾಲ್ಗೊಂಡಿದ್ದರೆ, ಚೀನಾದ 350 ಯೋಧರು ಇದ್ದರು ಎಂದು ಹೇಳಲಾಗಿದೆ.

    ಇಷ್ಟೆಲ್ಲ ಘರ್ಷಣೆ ಆಗುತ್ತಿದ್ದರೂ, ಪೆಟ್ರೋಲ್​ ಪಾಯಿಂಟ್​ 14ರಲ್ಲಿ ಭಾರತೀಯ ಸೀಮೆಯೊಳಗೆ ಚೀನಿಯರು ಹಾಕಿಕೊಂಡಿದ್ದ ಟೆಂಟ್​ ಅನ್ನು ತೆಗೆದುಹಾಕುವಲ್ಲಿ ಭಾರತೀಯ ಯೋಧರು ಯಶಸ್ವಿಯಾಗಿದ್ದರು. ಇದಾದ ಬಳಿಕ ಚೀನಿಯರು ಈ ಪ್ರದೇಶದ ಸುತ್ತ ಹೆಚ್ಚಿನ ಸಂಖ್ಯೆಯಲ್ಲಿ ಯೋಧರನ್ನು ಭದ್ರತೆಗಾಗಿ ನಿಯೋಜಿಸಿಕೊಂಡಿತ್ತು. ಜತೆಗೆ, ಇದರಿಂದ ಸ್ವಲ್ಪ ಹಿಂಬದಿಯಲ್ಲಿ ಕೂಡ ಹೆಚ್ಚುವರಿ ಯೋಧರನ್ನು ನಿಯೋಜಿಸಿತ್ತು ಎನ್ನಲಾಗಿದೆ.

    ಭಾರತೀಯ ಯೋಧರ ಸಾಹಸಗಾಥೆ: ನಾಲ್ಕು ಉಗ್ರ ಸಂಘಟನೆ ಮುಖ್ಯಸ್ಥರು ಖತಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts