More

    ಇಂದು ಲಂಕಾ ಎದುರು 2ನೇ ಏಕದಿನ ಕದನ; ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ

    ಕೊಲಂಬೊ: ಎರಡನೇ ಸ್ತರದ ತಂಡವೆಂದು ಕಡೆಗಣಿಸಬೇಕಾಗಿಲ್ಲ, ಮೊದಲ ಆಯ್ಕೆಯ ಟೀಮ್ ಇಂಡಿಯಾಗೆ ಯಾವ ರೀತಿಯಲ್ಲೂ ಕಡಿಮೆ ಇಲ್ಲದ ತಂಡವಿದು ಎಂದು ಶ್ರೀಲಂಕಾ ಪ್ರವಾಸದ ಮೊದಲ ಪಂದ್ಯದಲ್ಲೇ ನಿರೂಪಿಸಿರುವ ಶಿಖರ್ ಧವನ್ ಸಾರಥ್ಯದ ಯುವ ಭಾರತ ತಂಡ, 48 ಗಂಟೆಗಳ ಅಂತರದಲ್ಲೇ 2ನೇ ಸವಾಲಿಗೆ ಸಜ್ಜಾಗಿದೆ. ಆತಿಥೇಯರ ವಿರುದ್ಧ ಮಂಗಳವಾರ ನಡೆಯಲಿರುವ 2ನೇ ಏಕದಿನ ಪಂದ್ಯದಲ್ಲಿ ಸರಣಿ ಒಲಿಸಿಕೊಳ್ಳುವತ್ತ ರಾಹುಲ್ ದ್ರಾವಿಡ್ ಮಾರ್ಗದರ್ಶನದ ತಂಡ ಉತ್ಸುಕವಾಗಿದೆ.

    ಪೃಥ್ವಿ ಷಾ, ಇಶಾನ್ ಕಿಶನ್ ಅವರಂಥ ಯುವ ಆಟಗಾರರ ಮಿಂಚಿನ ನಿರ್ವಹಣೆಯ ನಡುವೆ ಶಿಖರ್ ಧವನ್ ನಾಯಕನ ಆಟವಾಡುವ ಮೂಲಕ ಮೊದಲ ಪಂದ್ಯದಲ್ಲಿ ಭಾರತಕ್ಕೆ ಸುಲಭ ಗೆಲುವು ಒದಗಿಸಿದ್ದರು. ಕನ್ನಡಿಗ ಮನೀಷ್ ಪಾಂಡೆ ಮತ್ತು ಸೂರ್ಯಕುಮಾರ್ ಯಾದವ್ ಕೂಡ ಉಪಯುಕ್ತ ಆಟದ ಮೂಲಕ ಭಾರತದ ಸರಾಗ ಚೇಸಿಂಗ್‌ಗೆ ನೆರವಾಗಿದ್ದರು. ಶ್ರೀಲಂಕಾ ನೀಡಿದ 260 ಪ್ಲಸ್ ಮೊತ್ತ ಗುರಿ, ಸವಾಲೇ ಅಲ್ಲ ಎನ್ನುವಂತೆ ಭಾರತ ತಂಡ 37ನೇ ಓವರ್‌ನಲ್ಲೇ ಬೆನ್ನಟ್ಟಿತ್ತು.

    ಮತ್ತೆ ಕುಲ್-ಚಾ ಮೋಡಿ
    2019ರ ಏಕದಿನ ವಿಶ್ವಕಪ್ ಬಳಿಕ ಮೊದಲ ಬಾರಿಗೆ ಜತೆಯಾಗಿ ಆಡಿದ ಕುಲ್-ಚಾ ಖ್ಯಾತಿಯ ಸ್ಪಿನ್ ಜೋಡಿಯಾದ ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ತಮ್ಮ ದಾಳಿ ಇನ್ನೂ ಹರಿತ ಕಳೆದುಕೊಂಡಿಲ್ಲ ಎಂಬುದನ್ನು ನಿರೂಪಿಸಿದರು. ಇವರಿಬ್ಬರೂ ತಲಾ 2 ವಿಕೆಟ್ ಕಬಳಿಸಿ ಶ್ರೀಲಂಕಾಕ್ಕೆ ಕಡಿವಾಣ ಹಾಕುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತೆ ಬೌಲಿಂಗ್ ದಾಳಿ ಆರಂಭಿಸಿರುವುದು ಕೂಡ ತಂಡದ ಸಮತೋಲನ ಹೆಚ್ಚಿಸಿದೆ. ಕೃನಾಲ್ ಪಾಂಡ್ಯ ಕೂಡ ನಿಯಂತ್ರಿತ ಸ್ಪಿನ್ ದಾಳಿಯಿಂದ ಗಮನಸೆಳೆದಿದ್ದರೆ, ಉಪನಾಯಕನ ಜವಾಬ್ದಾರಿ ಹೊತ್ತ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಮಾತ್ರ ನಿರಾಸೆ ಮೂಡಿಸಿದ್ದರು.

    ಇಕ್ಕಟ್ಟಿನಲ್ಲಿ ಶ್ರೀಲಂಕಾ
    ಅನನುಭವಿಗಳಿಂದ ತುಂಬಿರುವ ಶ್ರೀಲಂಕಾ ತಂಡ ಸರಣಿಯನ್ನು ಜೀವಂತ ಉಳಿಸಿಕೊಳ್ಳಬೇಕಾದರೆ ಅಮೋಘ ರೀತಿಯಲ್ಲಿ ಪುಟಿದೇಳಬೇಕಾದ ಅನಿವಾರ‌್ಯತೆಯಲ್ಲಿದೆ. ಲಂಕಾದ ಕೆಲ ಬ್ಯಾಟ್ಸ್‌ಮನ್‌ಗಳು ಉತ್ತಮ ಆರಂಭ ಕಂಡರೂ, ಅದನ್ನು ದೊಡ್ಡ ಮೊತ್ತವಾಗಿ ಬದಲಾಯಿಸುವ ತಾಳ್ಮೆ ಪ್ರದರ್ಶಿಸಲಿಲ್ಲ. ಭಾರತದ ಸ್ಪಿನ್ ದಾಳಿಗೆ ಲಂಕನ್ನರು ದಿಕ್ಕು ತಪ್ಪಿದ್ದರು. ಗೆಲುವಿನ ಹಾದಿಗೆ ಮರಳಬೇಕಾದರೆ ಲಂಕಾ 300 ಪ್ಲಸ್ ಮೊತ್ತ ಪೇರಿಸುವ ತಾಕತ್ತು ತೋರುವುದು ಅಗತ್ಯವಾಗಿದೆ. ಶ್ರೀಲಂಕಾ ಬೌಲರ್‌ಗಳು ಕೂಡ ಭಾರತದ ಯುವ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಹೇರುವಂಥ ನಿರ್ವಹಣೆ ಪ್ರದರ್ಶಿಸಬೇಕಾಗಿದೆ.

    ಪಿಚ್ ರಿಪೋರ್ಟ್
    ಆರ್. ಪ್ರೇಮದಾಸ ಕ್ರೀಡಾಂಗಣದ ಪಿಚ್ ನಿಧಾನಗತಿಯದ್ದಾಗಿದೆ. ಹೀಗಾಗಿ ಶ್ರೀಲಂಕಾ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗೆ ಇಳಿದಂಥ ಎಡವಟ್ಟು 2ನೇ ಪಂದ್ಯದಲ್ಲಿ ಪುನರಾವರ್ತನೆಯಾಗುವ ನಿರೀಕ್ಷೆ ಇಲ್ಲ. ಪಿಚ್ ಚೇಸಿಂಗ್‌ಗೆ ಪೂರಕವಾಗಿ ಕಂಡುಬಂದಿದೆ.

    ಟೀಮ್ ನ್ಯೂಸ್:
    ಭಾರತ: ಸರಣಿ ಜಯದತ್ತ ಗಮನಹರಿಸಿರುವ ಕಾರಣ ಭಾರತ ತಂಡ ಮೊದಲ ಪಂದ್ಯದ ಗೆಲುವಿನ ತಂಡ ಸಂಯೋಜನೆಯಲ್ಲಿ ಯಾವುದೇ ಬದಲಾವಣೆ ಮಾಡುವ ನಿರೀಕ್ಷೆ ಇಲ್ಲ. 26 ರನ್ ಗಳಿಸಲು 40 ಎಸೆತ ಆಡಿದ್ದ ಮನೀಷ್ ಪಾಂಡೆ, ಯುವ ಆಟಗಾರರ ಅಬ್ಬರದ ಎದುರು ಮಂಕಾಗಿ ಕಂಡಿದ್ದರೂ ಮತ್ತೊಂದು ಅವಕಾಶ ಪಡೆಯುವುದು ಖಚಿತ.
    ಶ್ರೀಲಂಕಾ: ಹೊಸ ಚೆಂಡು ಹಂಚಿಕೊಂಡ ಇಸುರು ಉದಾನ 2 ಓವರ್‌ಗಳಲ್ಲಿ 27 ರನ್ ನೀಡಿ ದುಬಾರಿಯಾಗಿದ್ದರು. ಹೀಗಾಗಿ ಲಹಿರು ಕುಮಾರ ಅಥವಾ ಕಸುನ್ ರಜಿತ ಅವಕಾಶ ಗಿಟ್ಟಿಸಿಕೊಳ್ಳಬಹುದು. ಸೋಲಿನ ನಡುವೆ ಬ್ಯಾಟಿಂಗ್ ವಿಭಾಗದಲ್ಲಿ ಬದಲಾವಣೆ ಅನುಮಾನ.

    *ಆರಂಭ: ಮಧ್ಯಾಹ್ನ 3.00
    *ನೇರಪ್ರಸಾರ: ಸೋನಿ ನೆಟ್‌ವರ್ಕ್

    *10: ಶ್ರೀಲಂಕಾ ತಂಡ 2021ರಲ್ಲಿ ಇದುವರೆಗೆ ಆಡಿರುವ ಒಟ್ಟು 10 ಏಕದಿನ ಪಂದ್ಯಗಳಲ್ಲಿ 1ರಲ್ಲಿ ಮಾತ್ರ ಜಯಿಸಿದ್ದು, 8ರಲ್ಲಿ ಸೋತಿದೆ. 1 ಪಂದ್ಯ ರದ್ದಾಗಿದೆ.

    ವೈಶಿಷ್ಟ್ಯ-ಬೆರಗುಗಳ ಜಾಗತಿಕ ಕ್ರೀಡಾಕೂಟ ಒಲಿಂಪಿಕ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts