More

    ಕ್ರೀಸ್​ಗೆ ಅಂಟಿಕೊಂಡ ಹೆಡ್​ನಿಂದ ಅರ್ಧಶತಕ: ಭಾರತ ಮೇಲೆ ಹೆಚ್ಚಿದ ಒತ್ತಡ, ವಿಕೆಟ್​ಗಾಗಿ ಫ್ಯಾನ್ಸ್​ ಪ್ರಾರ್ಥನೆ

    ಅಹಮದಾಬಾದ್​: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವಕಪ್​ ಟೂರ್ನಿಯ ಫೈನಲ್​ ಪಂದ್ಯದಲ್ಲಿ ಭಾರತ ನೀಡಿರುವ 241 ರನ್​ಗಳ ಗುರಿ ಬೆನ್ನತ್ತಿರುವ ಆಸ್ಟ್ರೇಲಿಯಾ, ಕೇವಲ 47 ರನ್​ಗಳಿಗೆ ಪ್ರಮುಖ 3 ವಿಕೆಟ್​ ಕಳೆದುಕೊಂಡ ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭದಲ್ಲಿ ಅರ್ಧಶತಕದ ಆಟದೊಂದಿಗೆ ಕ್ರೀಸ್​ನಲ್ಲಿ ಕಚ್ಚಿಕೊಂಡಿರುವ ಟ್ರಾವಿಸ್​ ಹೆಡ್​ ಹೊಸ ಭರವಸೆ ಮೂಡಿಸಿದ್ದಾರೆ. ಇತ್ತ ಭಾರತಕ್ಕೆ ಮತ್ತೊಂದು ವಿಕೆಟ್​ ಪಡೆಯುವ ಅನಿವಾರ್ಯತೆ ಇದ್ದು, ಫೈನಲ್​ ಕದನ ರೋಚಕ ಘಟ್ಟಕ್ಕೆ ಹೊರಳುತ್ತಿದೆ.

    ಆರಂಭಿಕರಾಗಿ ಕಣಕ್ಕಿಳಿದು ಕ್ರೀಸ್​ನಲ್ಲಿ ಭದ್ರವಾಗಿ ನೆಲೆಯೂರಿರುವ ಹೆಡ್​ ಇದೀಗ ಭಾರತಕ್ಕೆ ಬಹುದೊಡ್ಡ ಸವಾಲಾಗಿದ್ದಾರೆ. ಅರ್ಧಶತಕ ಸಿಡಿಸಿ ಶತಕದತ್ತ ಮುನ್ನುಗ್ಗುತ್ತಿರುವ ಹೆಡ್​ ಅವರನ್ನು ಔಟ್​ ಮಾಡುವುದು ಭಾರತಕ್ಕೆ ತುಂಬಾ ಮುಖ್ಯವಾಗಿದೆ. ಇಲ್ಲವಾದಲ್ಲಿ ವಿಜಯಲಕ್ಷ್ಮೀ ಆಸಿಸ್​ ಕಡೆಗೆ ವಾಲುವುದರಲ್ಲಿ ಯಾವುದೇ ಸಂದೇಹವಿಲ್ಲ. ಒಂದು ವೇಳೆ ಹೆಡ್​ ವಿಕೆಟ್​ ಬಿದ್ದರೆ, ನಂತರ ಬರುವ ಆಟಗಾರ ಕ್ರೀಸ್​ಗೆ ಹೊಂದಾಣಿಕೆಯಾಗಲು ಸಮಯ ಬೇಕಾಗುತ್ತದೆ. ಇದು ಭಾರತಕ್ಕೆ ವರವಾಗುತ್ತದೆ. ಹೀಗಾಗಿ ಹೆಡ್​ ವಿಕೆಟ್​ ಪಡೆಯುವುದು ಅಗತ್ಯವಾಗಿದೆ.

    ಹೆಡ್​ ಜತೆಗೆ ಮಾರ್ನಸ್​ ಲಬುಶೇನ್​ ಸಹ ಉತ್ತಮ ಜತೆಯಾಟಕ್ಕೆ ಸಾಥ್​ ನೀಡಿದ್ದಾರೆ. ಈ ಜೋಡಿ 25ನೇ ಓವರ್​ಗೆ 92 ರನ್​ಗಳ ಜತೆಯಾಟವಾಡಿದ್ದು, ಭಾರತದಿಂದ ವಿಜಯಲಕ್ಷ್ಮೀಯನ್ನು ತಮ್ಮ ಕಸಿದುಕೊಳ್ಳುತ್ತಿದ್ದಾರೆ. ಹೀಗಾಗಿ ಆದಷ್ಟು ಇವರಿಬ್ಬರ ವಿಕೆಟ್​ ಪಡೆಯುವುದು ಭಾರತಕ್ಕೆ ಅಗತ್ಯವಾಗಿದೆ.

    ಆರಂಭದಲ್ಲಿ ಮೊಹಮ್ಮದ್​ ಶಮಿ ಮತ್ತು ಜಸ್​ಪ್ರೀತ್​ ಬುಮ್ರಾ ತಮ್ಮ ಬೌಲಿಂಗ್​ನಲ್ಲಿ ಕಮಾಲ್​ ಮಾಡಿದರು. ಆದರೆ, ಈಗ ಆಸಿಸ್​ ವಿಕೆಟ್​ ಪಡೆಯಲು ಭಾರತೀಯ ಬೌಲರ್​ಗಳು ತಿಣುಕಾಡುತ್ತಿದ್ದಾರೆ. ತಂಡದ ಮೊತ್ತ 16 ರನ್​ ಇದ್ದಾಗ 7 ರನ್​ ಗಳಿಸಿದ್ದ ಡೇವಿಡ್​ ವಾರ್ನರ್​ ಮೊಹಮ್ಮದ್​ ಶಮಿ ಓವರ್​ನಲ್ಲಿ ಕೊಹ್ಲಿಗೆ ಕ್ಯಾಚಿತ್ತು ನಿರ್ಗಮಿಸುವ ಮೂಲಕ ಆರಂಭಿಕ ಆಘಾತ ನೀಡಿದರು. ಇದರ ಬೆನ್ನಲ್ಲೇ ನಾನೇನು ಕಮ್ಮಿ ಎನ್ನುವಂತೆ ನಿರ್ಣಾಯಕ ಪಂದ್ಯದಲ್ಲಿ ಮಾರಕ ಬೌಲಿಂಗ್​ ದಾಳಿ ಮಾಡಿದ ಬುಮ್ರಾ, ಮಿಚೆಲ್​ ಮಾರ್ಷ್​ (15) ಮತ್ತು ಸ್ಟೀವ್​ ಸ್ಮಿತ್​ (4) ಅವರನ್ನು ಬಂದಷ್ಟೇ ವೇಗವಾಗಿ ಪೆವಿಲಿಯನ್​ ಅಟ್ಟಿದರು. ಕೇವಲ 43 ರನ್​ಗೆ ಪ್ರಮುಖ 3 ವಿಕೆಟ್​ ಕಳೆದುಕೊಳ್ಳುವ ಮೂಲಕ ಆಸಿಸ್​ ಪಡೆ ಇದೀಗ ಸಂಕಷ್ಟಕ್ಕೆ ಸಿಲುಕಿತು. ಆದರೆ, ಹೆಡ್​ ಮತ್ತು ಲಬುಶೇನ್​ ಕ್ರೀಸ್​ ಕಚ್ಚಿಕೊಂಡಿದ್ದು 100 ರನ್​ಗಳ ಜತೆಯಾಟದತ್ತ ಬರುತ್ತಿದ್ದಾರೆ.

    ಸದ್ಯ ಆರಂಭಿಕರಾಗಿ ಕಣಕ್ಕಿಳಿದ ಟ್ರಾವಿಸ್​ ಹೆಡ್ ಮತ್ತು ಮಾರ್ನಸ್​ ಲಬುಶೇನ್​​ ಕ್ರೀಸ್​ನಲ್ಲಿದ್ದಾರೆ. 26 ಓವರ್​ ಮುಕ್ತಾಯಕ್ಕೆ ಆಸಿಸ್​ ಪಡೆ 3 ವಿಕೆಟ್​ ನಷ್ಟಕ್ಕೆ 144 ರನ್​ ಕಲೆಹಾಕಿದೆ.

    ಇದಕ್ಕೂ ಮುನ್ನ ಟಾಸ್​ ಸೋತು ಬ್ಯಾಟಿಂಗ್​ ಮಾಡಿದ ಭಾರತ ನಿಗದಿತ 50 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು ಭಾರತ 240 ರನ್​ ಕಲೆಹಾಕಿತು. ಈ ಮೂಲಕ ಆಸಿಸ್​ ಗೆಲುವಿಗೆ 241 ರನ್​ಗಳ ಗುರಿ ನೀಡಿದೆ. ತಂಡದ ಪರ ಶುಭಮಾನ್​ ಗಿಲ್​ ಮತ್ತು ರೋಹಿತ್​ ಶರ್ಮ ಆರಂಭಿಕರಾಗಿ ಕಣಕ್ಕಿಳಿದರು. ತಂಡದ ಮೊತ್ತ 30 ಆಗಿದ್ದಾಗ 4 ರನ್​ ಗಳಿಸಿದ್ದ ಗಿಲ್​, ಕ್ಯಾಚಿತ್ತು ನಿರ್ಗಮಿಸುವ ಮೂಲಕ ಆರಂಭಿಕ ಆಘಾತ ನೀಡಿದರು. ಇತ್ತ 31 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್​ ನೆರವಿನೊಂದಿಗೆ 47 ರನ್​ ಗಳಿಸಿ ಸ್ಫೋಟಕ ಆಟವಾಡುತ್ತಿದ್ದ ರೋಹಿತ್​, ಅರ್ಧ ಶತಕಕ್ಕೆ ಇನ್ನೂ ಮೂರು ರನ್​ ಬಾಕಿ ಇರುವಾಗಲೇ ಮಿಚೆಲ್​ ಸ್ಟಾರ್ಕ್​ ಓವರ್​ನಲ್ಲಿ ಆ್ಯಡಂ ಜಂಪಾಗೆ ಕ್ಯಾಚಿತ್ತು ಪೆವಲಿಯನ್​ಗೆ ಮರಳಿದರು. ಇದರಿಂದ ತಂಡಕ್ಕೆ ಕೊಂಚ ಹಿನ್ನಡೆಯಾಯಿತು.

    ವಿರಾಟ್​ ಕೊಹ್ಲಿ ತಾಳ್ಮೆಯ ಆಟದೊಂದಿಗೆ ಇನಿಂಗ್ಸ್​ ಕಟ್ಟಿದರೆ, ಸಮಿಫೈನಲ್​ನಲ್ಲಿ ಸ್ಫೋಟಕ ಶತಕದೊಂದಿಗೆ ಅಬ್ಬರಿಸಿ ಬೊಬ್ಬಿರಿದಿದ್ದ ಶ್ರೇಯಸ್​ ಅಯ್ಯರ್​ ಕೇವಲ 4 ರನ್​ಗಳಿಗೆ ಔಟಾಗಿದ್ದು, ಭಾರತಕ್ಕೆ ಭಾರೀ ಆಘಾತವಾಯಿತು. ಅಲ್ಲದೆ, ಕೇವಲ 81 ರನ್​ಗೆ ಪ್ರಮುಖ ಮೂರು ವಿಕೆಟ್​ ಕಳೆದುಕೊಂಡು ಭಾರತ ಸಂಕಷ್ಟಕ್ಕೆ ಸಿಲುಕಿತು. ಬಳಿಕ ಕೊಹ್ಲಿ ಮತ್ತು ರಾಹುಲ್​ ಜತೆಗೂಡಿ ಉತ್ತಮ ಜತೆಯಾಟದ ಮುನ್ಸೂಚನೆ ನೀಡಿದರು. ಆದರೆ, 64 ಎಸೆತಗಳಲ್ಲಿ 3 ಬೌಂಡರಿಯೊಂದಿಗೆ 54 ರನ್​ ಗಳಿಸಿ ಭರವಸೆ ಮೂಡಿಸಿದ್ದ ಕೊಹ್ಲಿ, ಔಟಾಗುವ ಮೂಲಕ ಭಾರತಕ್ಕಿದ್ದ ಬಹುದೊಡ್ಡ ಭರವಸೆ ಮಂಕಾಯಿತು. ಈ ಜೋಡಿ 68 ರನ್​ಗಳ ಜತೆಯಾಟ ನೀಡಿತ್ತು.

    ಬಳಿಕ ಬಂದ ರವೀಂದ್ರ ಜಡೇಜಾ ಕೇವಲ 9 ರನ್​ಗೆ ವಿಕೆಟ್​ ಒಪ್ಪಿಸಿ, ಬಂದಷ್ಟೇ ವೇಗವಾಗಿ ಪೆವಿಲಿಯನ್​ಗೆ ಮರಳಿದರು. 107 ಎಸೆತಗಳಲ್ಲಿ ಕೇವಲ 1 ಬೌಂಡರಿಯೊಂದಿಗೆ 66 ರನ್​ಗಳಿಸಿ ತಾಳ್ಮೆಯ ಆಟಕ್ಕೆ ಮೊರೆ ಹೋಗಿದ್ದ ರಾಹುಲ್​ಗೆ ಮಿಚೆಲ್​ ಸ್ಟಾರ್ಕ್​ ಪೆವಿಲಿಯನ್​ ಹಾದಿ ತೋರಿದರು. ನೆದರ್ಲೆಂಡ್​ ವಿರುದ್ಧದ ಲೀಗ್​ ಪಂದ್ಯದಲ್ಲಿ ಕೇವಲ 64 ಎಸೆತಗಳಲ್ಲಿ 102 ರನ್​ ಗಳಿಸಿದ್ದ ರಾಹುಲ್​, ಈ ಪಂದ್ಯದಲ್ಲಿ 107 ಎಸೆತಗಳಲ್ಲಿ 66 ರನ್​ ಗಳಿಸಿದರು. ಆಸಿಸ್​ ಬೌಲರ್​ಗಳನ್ನು ಎದುರಿಸಲು ರಾಹುಲ್​ ತಡಕಾಡಿದರು.

    ಉಳಿದಂತೆ ಮೊಹಮ್ಮದ್​ ಶಮಿ 6 ರನ್​ ಗಳಿಸಿದರೆ, ಜಸ್​ಪ್ರೀತ್​ ಬೂಮ್ರಾ 1, ಸೂರ್ಯಕುಮಾರ್​ ಯಾದವ್​ 18 ಹಾಗೂ ಕುಲದೀಪ್​ ಯಾದವ್ 10 ರನ್ ಗಳಿಸಿ ಔಟಾದರೆ, ಮೊಹಮ್ಮದ್​ ಸಿರಾಜ್​ 9 ರನ್​ ಗಳಿಸಿ ಅಜೇಯರಾಗಿ ಉಳಿದರು.

    ನಿರ್ಣಾಯಕ ಪಂದ್ಯದಲ್ಲಿ ಆಸಿಸ್​ ಪರ ಮಾರಕ ಬೌಲಿಂಗ್​ ದಾಳಿ ಮಾಡಿದ ಮಿಚೆಲ್​ ಸ್ಟಾರ್ಕ್​ ಪ್ರಮುಖ 3 ವಿಕೆಟ್​ ಕಬಳಿಸಿ ಮಿಂಚಿದರು. ನಾಯಕ ಪ್ಯಾಟ್​ ಕ್ಯುಮಿನ್ಸ್​ ಹಾಗೂ ಜೋಶ್​ ಹಜಾಲ್​ವುಡ್​ ತಲಾ 2 ವಿಕೆಟ್​ ಪಡೆದರೆ, ಗ್ಲೇನ್​ ಮ್ಯಾಕ್ಸ್​ವೆಲ್​ ಮತ್ತು ಆ್ಯಡಂ ಜಂಪಾ ತಲಾ ಒಂದೊಂದು ವಿಕೆಟ್​ ಪಡೆದರು. ಕುಲದೀಪ್​ ಯಾದವ್​ ರನೌಟ್​ಗೆ ತುತ್ತಾದರು.

    ಮುಸ್ಲಿಮರು ಭಾರತ ತಂಡದ ಸೋಲು ನಿರೀಕ್ಷಿಸ್ತಾರೆ: ವಿಷ ಕಾರುತ್ತಿರುವ ಪಾಕ್​ ನಟಿ ಸಹರ್ ಶಿನ್ವಾರಿ…

    ವಿಶ್ವಕಪ್ ಫೈನಲ್​: ಒಂದೆಡೆ ಕೂಗು, ಹುರಿದುಂಬಿಸೋ ಜೈಕಾರ, ಇನ್ನೊಂದೆಡೆ ಸದ್ದಡಗಿಸೋ ಹುನ್ನಾರ: ಗೆಲ್ಲೋರು ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts