More

    ಐಸಿಸಿ ಅಂಡರ್​ 19 ವಿಶ್ವಕಪ್ ಸೆಮಿಫೈನಲ್​: ಭಾರತದ ಬೌಲಿಂಗ್​ ದಾಳಿಗೆ ಬೆದರಿದ ಪಾಕ್ ಪಡೆ​ಯಿಂದ ಸಾಧಾರಣ ಗುರಿ

    ಪಾಟ್​ಚೇಫ್​ಸ್ಟ್ರೋಮ್: ಇಲ್ಲಿನ ಸೆನ್​ವೆಸ್​ ಪಾರ್ಕ್​ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 19 ವಯೋಮಿತಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೆಮಿಫೈನಲ್​ ಪಂದ್ಯದಲ್ಲಿ ಮೊನಚಾದ ಬೌಲಿಂಗ್​ ದಾಳಿ ನಡೆಸಿದ ಟೀಮ್​ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದೆ.

    ಟಾಸ್​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಪಾಕ್​ ತಂಡಕ್ಕೆ ಟೀಮ್​ ಇಂಡಿಯಾ ವೇಗಿ ಯಶಸ್ವಿ ಜೈಸ್ವಾಲ್​, ಮೊಹಮ್ಮದ್​ ಹುರೈರಾ(4) ವಿಕೆಟ್​ ಕಬಳಿಸುವ ಮೂಲಕ ಆರಂಭಿಕ ಆಘಾತ ನೀಡಿದರು. ಇದರ ಬೆನ್ನಲ್ಲೇ ಫಹಾದ್​ ಮುನೀರ್​ ಯಾವುದೇ ರನ್​ ಖಾತೆ ತೆರಯದೇ ರವಿ ಬಿಷ್ಣೋಯಿ ಬೌಲಿಂಗ್​ನಲ್ಲಿ ನಿರ್ಗಮಿಸಿದರು. ನಾಲ್ಕನೇ ವಿಕೆಟ್​ಗೆ ಹೈದರ್​ ಜತೆಗೂಡಿದ ನಾಯಕ ರೊಹೈಲ್​ ನಾಜಿರ್​ ಉತ್ತಮ ಜತೆಯಾಟವಾಡಿ ತಂಡದ ಮೊತ್ತವನ್ನು ಕೊಂಚ ಹಿಗ್ಗಿಸಿದರು.

    ತಂಡದ ಮೊತ್ತ 96 ರನ್​ ಆಗಿದ್ದಾಗ 56 ರನ್​ ಗಳಿಸಿದ್ದ ಹೈದರ್​ ಬಿರುಸಿನ ಹೊಡೆತಕ್ಕೆ ಕೈಹಾಕಿ ಔಟಾದರು. ಇದರ ಬೆನ್ನಲ್ಲೇ ಖಾಸಿಮ್​ ಅಕ್ರಂ(9), ಮಹಮ್ಮದ್​ ಹ್ಯಾರಿಸ್​(21) ಇರ್ಫಾನ್​ ಖಾನ್​(3) ಹಾಗೂ ಅಬ್ಬಾಸ್ ಅಫ್ರಿದಿ(2) ಭಾರತೀಯ ಬೌಲರ್​ಗಳನ್ನು ಎದುರಿಸಲಾಗದೇ ಪೆವಲಿಯನ್​ ಪರೇಡ್​ ನಡೆಸಿದರು.

    ಇತ್ತ ಏಕಾಂಗಿಯಾಗಿ ಹೋರಾಡುತ್ತಿದ್ದ ನಾಯಕ ರೊಹೈಲ್​ ನಾಜಿರ್​ ತಂಡದ ಮೊತ್ತವನ್ನು ನೂರೈವತ್ತರ ಗಡಿ ದಾಟಿಸಿ 62 ರನ್​ ಗಳಿಸಿ ವಿಕೆಟ್​ ಒಪ್ಪಿಸಿದರು. ಇದರ ಬೆನ್ನಲ್ಲೇ ತಹೀರ್​ ಹುಸೇನ್​(2) ಮತ್ತು ಆಮೀರ್​ ಅಲಿ(1) ರನ್​ ಗಳಿಸಿ ಔಟಾದರೆ, ಮೊಹಮ್ಮದ್​ ಆಮೀರ್​ ಖಾನ್​ ಯಾವುದೇ ರನ್​ ಖಾತೆ ತೆರೆಯದೇ ಅಜೇಯರಾಗಿ ಉಳಿದರು.

    ಅಂತಿಮವಾಗಿ ಪಾಕ್​ ತಂಡ 43.1 ಓವರ್​ಗಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು 172 ರನ್​ ಗಳಿಸಲಷ್ಟೇ ಶಕ್ತವಾಯಿತು. ಟೀಮ್​ ಇಂಡಿಯಾ ಪರ ಸಂಘಟಿತ ಬೌಲಿಂಗ್​ ಪ್ರದರ್ಶನ ನೀಡಿದ ಸುಶಾಂತ್​ ಮಿಶ್ರಾ 3 ವಿಕೆಟ್​ ಕಬಳಿಸಿದರೆ, ಕಾರ್ತಿಕ್​ ತ್ಯಾಗಿ ಮತ್ತು ರವಿ ಬಿಷ್ಣೋಯಿ ತಲಾ 2 ವಿಕೆಟ್​ ಪಡೆದರು. ಉಳಿದಂತೆ ಅಥರ್ವ ಅಂಕೋಲೆಕರ್​ ಮತ್ತು ಯಶಸ್ವಿ ಜೈಸ್ವಾಲ್​ ತಲಾ ಒಂದು ವಿಕೆಟ್​ಗೆ ತೃಪ್ತಿಪಟ್ಟರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts