More

    ಭಾರತ ಕಿರಿಯರ ತಂಡಕ್ಕೆ ಏಷ್ಯಾಕಪ್ ಕಿರೀಟ, ವಿಶ್ವಕಪ್‌ಗೆ ಭರ್ಜರಿ ಸಿದ್ಧತೆ

    ದುಬೈ: ಆರಂಭಿಕ ರಘುವಂಶಿ (56*ರನ್, 67 ಎಸೆತ, 7 ಬೌಂಡರಿ) ಉಪಯುಕ್ತ ಬ್ಯಾಟಿಂಗ್ ಮತ್ತು ಬೌಲರ್‌ಗಳ ಸಂಘಟಿತ ದಾಳಿಯ ನೆರವಿನಿಂದ ಭಾರತ ತಂಡ 19 ವಯೋಮಿತಿಯ ಏಷ್ಯಾಕಪ್ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದೆ. ಮಳೆಬಾಧಿತ ಫೈನಲ್ ಪಂದ್ಯದಲ್ಲಿ ಯಶ್ ಧುಲ್ ಸಾರಥ್ಯದ ಭಾರತ ತಂಡ ಶ್ರೀಲಂಕಾ ತಂಡವನ್ನು 9 ವಿಕೆಟ್‌ಗಳಿಂದ ಪರಾಭವಗೊಳಿಸಿತು.

    ದುಬೈ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗೆ ಇಳಿದ ಶ್ರೀಲಂಕಾ ತಂಡ 33 ಓವರ್‌ಗಳಲ್ಲಿ 7 ವಿಕೆಟ್‌ಗೆ 74 ರನ್ ಗಳಿಸಿ ಪರದಾಡುತ್ತಿದ್ದಾಗ ಮಳೆ ಅಡಚಣೆ ತಂದಿತು. 2 ಗಂಟೆಗಳ ಬಳಿಕ ಆಟ ಪುನರಾರಂಭಗೊಂಡಾಗ ಪಂದ್ಯವನ್ನು ತಲಾ 38 ಓವರ್‌ಗಳಿಗೆ ಇಳಿಸಲಾಯಿತು. ಇನಿಂಗ್ಸ್ ಮುಂದುವರಿಸಿದ ಲಂಕಾ 9 ವಿಕೆಟ್‌ಗೆ 106 ರನ್ ಪೇರಿಸಿತು. ಪ್ರತಿಯಾಗಿ ಭಾರತ ತಂಡ ಡಕ್ವರ್ತ್-ಲೂಯಿಸ್-ಸ್ಟರ್ನ್ ನಿಯಮದನ್ವಯ 38 ಓವರ್‌ಗಳಲ್ಲಿ 102 ರನ್ ಗುರಿ ಪಡೆಯಿತು. 21.3 ಓವರ್‌ಗಳಲ್ಲೇ 1 ವಿಕೆಟ್ ನಷ್ಟದಲ್ಲಿ 104 ರನ್ ಪೇರಿಸುವ ಮೂಲಕ ಭಾರತ ತಂಡ ಗೆಲುವು ದಾಖಲಿಸಿತು.

    ಆರಂಭಿಕ ಹರ್‌ನೂರ್ ಸಿಂಗ್(5) ವಿಕೆಟ್ ಬೇಗನೆ ಕಳೆದುಕೊಂಡು ಭಾರತ ತಂಡ ಆರಂಭಿಕ ಆಘಾತ ಎದುರಿಸಿತ್ತು. ಆಗ ಮತ್ತೋರ್ವ ಆರಂಭಿಕ ರಘುವಂಶಿ, ಶೇಕ್ ರಶೀದ್ (31*) ಜತೆಗೂಡಿ ಮುರಿಯದ 2ನೇ ವಿಕೆಟ್‌ಗೆ 96 ರನ್ ಸೇರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

    ಲಂಕಾಗೆ ವಿಕಿ-ತಂಬೆ ಕಡಿವಾಣ
    ಎಡಗೈ ಸ್ಪಿನ್ನರ್ ವಿಕಿ ಒಸ್ತ್‌ವಾಲ್ (11ಕ್ಕೆ 3) ಮತ್ತು ಆ್ ಸ್ಪಿನ್ನರ್ ಕೌಶಲ್ ತಂಬೆ (23ಕ್ಕೆ 2) ಶ್ರೀಲಂಕಾ ತಂಡಕ್ಕೆ ಕಡಿವಾಣ ಹೇರಿದರು. ವೇಗಿ ರವಿಕುಮಾರ್ ಲಂಕೆಗೆ ಆರಂಭಿಕ ಆಘಾತ ನೀಡಿದರು. ಬಳಿಕ ಕುಸಿಯುತ್ತ ಸಾಗಿದ ಲಂಕಾ, ಬಾಲಂಗೋಚಿಗಳಾದ ರವೀನ್ ಡಿಸಿಲ್ವ (15), ಯಸಿರು ರೋಡ್ರಿಗೊ (19*) ಮತ್ತು ಮಥೀಶ ಪಥಿರಣ (14) ಹೋರಾಟದಿಂದ ಮೂರಂಕಿ ತಲುಪಲು ಶಕ್ತವಾಯಿತು. ಮಳೆ ವಿರಾಮದ ಬಳಿಕ ತುಸು ಚೇತರಿಕೆಯ ಬ್ಯಾಟಿಂಗ್ ತೋರಿದ ಲಂಕಾ ಕೊನೇ 5 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 32 ರನ್ ಗಳಿಸಿತು.

    ಭಾರತ ಕಿರಿಯರ ತಂಡ ಸತತ 3ನೇ ಮತ್ತು ಒಟ್ಟಾರೆ 8ನೇ ಬಾರಿ ಏಷ್ಯಾಕಪ್ ಜಯಿಸಿತು. ಈ ಮುನ್ನ 1989, 2003, 2012 (ಪಾಕ್ ಜತೆ ಜಂಟಿ ಚಾಂಪಿಯನ್), 2013-14, 2016, 2018 ಮತ್ತು 2019ರಲ್ಲಿ ಗೆದ್ದಿತ್ತು.

    ವಿಶ್ವಕಪ್‌ಗೆ ಭರ್ಜರಿ ಸಿದ್ಧತೆ
    ಏಷ್ಯಾಕಪ್ ಗೆಲುವಿನೊಂದಿಗೆ ಭಾರತ ತಂಡ ಮುಂಬರುವ ಕಿರಿಯರ ವಿಶ್ವಕಪ್ ಟೂರ್ನಿಗೆ ಭರ್ಜರಿ ಸಿದ್ಧತೆ ನಡೆಸಿದೆ. ಜನವರಿ 14ರಿಂದ ವೆಸ್ಟ್ ಇಂಡೀಸ್‌ನಲ್ಲಿ 19 ವಯೋಮಿತಿ ವಿಶ್ವಕಪ್ ಟೂರ್ನಿ ನಡೆಯಲಿದೆ. ಕನ್ನಡಿಗ ಅನೀಶ್ವರ್ ಗೌತಮ್ ಕೂಡ ಭಾರತ ಕಿರಿಯರ ತಂಡದಲ್ಲಿದ್ದಾರೆ.

    ಶ್ರೀಲಂಕಾ: 38 ಓವರ್‌ಗಳಲ್ಲಿ 9 ವಿಕೆಟ್‌ಗೆ 106 (ವಿಕ್ರಮಸಿಂಘೆ 2, ಅಂಜಲ ಬಂಡಾರ 9, ಸದಿಶಾ ರಾಜಪಕ್ಷ 14, ದುನಿತ್ ವೆಲ್ಲಲಗೆ 9, ರವೀನ್ ಡಿಸಿಲ್ವ 15, ಯಸಿರು ರೋಡ್ರಿಗೊ 19*, ಪಥಿರಣ 14, ವಿಕಿ ಒಸ್ತ್‌ವಾಲ್ 11ಕ್ಕೆ 3, ಕೌಶಲ್ ತಂಬೆ 23ಕ್ಕೆ 2, ರವಿ 17ಕ್ಕೆ 1). ಭಾರತ: 21.3 ಓವರ್‌ಗಳಲ್ಲಿ 1 ವಿಕೆಟ್‌ಗೆ 104 (ಅಂಗ್‌ಕ್ರಿಷ್ ರಘುವಂಶಿ 56*, ಹರ್‌ನೂರ್ 5, ಶೇಕ್ ರಶೀದ್ 31*, ಯಸಿರು 12ಕ್ಕೆ 1). ಪಂದ್ಯಶ್ರೇಷ್ಠ: ವಿಕಿ ಒಸ್ತ್‌ವಾಲ್, ಸರಣಿಶ್ರೇಷ್ಠ: ಹರ್‌ನೂರ್ ಸಿಂಗ್.

    ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ರಾಸ್ ಟೇಲರ್ ವಿದಾಯ, 2022ರಲ್ಲಿ ಕೊನೇ ಆಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts