More

    ಕರೊನಾ ವಿರುದ್ಧ ಹೋರಾಟಕ್ಕೆ ಭಾರತವೇ ವಿಶ್ವ ನಾಯಕ

    ಕರೊನಾ ವಿರುದ್ಧ ಹೋರಾಟಕ್ಕೆ ಭಾರತವೇ ವಿಶ್ವ ನಾಯಕಜಗತ್ತಿನಾದ್ಯಂತ ಸಂಕಟ ತಂದೊಡ್ಡಿರುವ ಕರೊನಾ ವಿರುದ್ಧದ ಸಮರದಲ್ಲಿ ಭಾರತ ನಾಯಕನಾಗಿ ಹೊರಹೊಮ್ಮಿದೆ. ಆರೋಗ್ಯವೋ ಐಶ್ವರ್ಯವೋ, ಜೀವನವೋ ಜೀವನೋಪಾಯವೋ, ಉಳಿವೋ ಪುನರುಜ್ಜೀವನವೋ ಎಂಬ ಪ್ರಶ್ನೆಗಳು, ಹೆಚ್ಚುತ್ತಿರುವ ಸಾಮಾಜಿಕ ಬಿಗುವು, ನಿರುದ್ಯೋಗ, ಸಾಗಾಟ ವ್ಯವಸ್ಥೆಯಲ್ಲಿ ಅಸ್ತವ್ಯಸ್ತತೆ, ಆರ್ಥಿಕತೆಯ ಮಂದಗತಿ, ಪರೀಕ್ಷೆಗೆ ಅಗತ್ಯ ಸವಲತ್ತುಗಳ ಕೊರತೆ, ವಿದೇಶಗಳಲ್ಲಿ ಸಿಲುಕಿರುವ ಸಾವಿರಾರು ಜನರ ತೆರವು ಮಾಡುವಿಕೆ, ಮಿಲಿಯಾಂತರ ಜನರಿಗೆ ಆಹಾರ ಪೂರೈಕೆ ಮುಂತಾದ ಸಂಕೀರ್ಣ ಪ್ರಶ್ನೆಗಳು ಕಾಡುತ್ತಿವೆ. ಒಂದು ಖಂಡದಷ್ಟು ವಿಶಾಲವಾದ ದೇಶದಾದ್ಯಂತ ಆರೋಗ್ಯ ಸೇವೆ ಒದಗಿಸುವುದು, ಅವಶ್ಯವಿದ್ದವರಿಗೆ ಪರಿಹಾರ ಒದಗಿಸುವುದು, ದೇಶ ಮುನ್ನಡೆಯುವಂತೆ ನೋಡಿಕೊಳ್ಳುವುದು ಇವೇ ಮುಂತಾದ ಮಹಾ ಪ್ರಶ್ನೆಗಳೂ ನಮ್ಮ ಮುಂದಿವೆ. ಇವೆಲ್ಲ ಸವಾಲುಗಳು ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವ ಯಾರನ್ನೇ ಆದರೂ ಧೃತಿಗೆಡಿಸುವಂಥದ್ದಾಗಿರುತ್ತದೆ.

    ಜಗತ್ತಿನ ದೇಶಗಳೊಂದಿಗೆ ಸಂಬಂಧ ಸಾಧಿಸಿದ ಭಾರತ, ಬಿಕ್ಕಟ್ಟಿನ ಸಂದರ್ಭದ ರಾಜತಾಂತ್ರಿಕತೆಯನ್ನು ಸಾಂಕ್ರಾಮಿಕವನ್ನು ತಡೆಯುವ ದಿಸೆಯಲ್ಲಿ ಅಸ್ತ್ರವನ್ನಾಗಿ ಮಾಡಿಕೊಂಡಿದೆ. ಇತರ ದೇಶಗಳು ರೋಗಕ್ಕೆ ಚಿಕಿತ್ಸೆ ತನ್ನ ರಾಷ್ಟ್ರಕ್ಕೆ ಮಾತ್ರ ಸಂಬಂಧಿಸಿದ ವಿಚಾರವೆಂದು ತಿಳಿದರೆ, ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ ಇದೊಂದು ಜಾಗತಿಕ ಸಮಸ್ಯೆ ಎಂದು ಪರಿಭಾವಿಸಿ ಕ್ಷಿಪ್ರವಾಗಿ ಕಾರ್ಯಾಚರಣೆಗಿಳಿಯಿತು. ಭಾರತ ಪರಿಸ್ಥಿತಿಯನ್ನು ಕುಶಲತೆ, ಸಮತೋಲನದಿಂದ ನಿಭಾಯಿಸಿತು.

    ಇದನ್ನೂ ಓದಿ: ಅನಿಸಿಕೆ: ಹಿತ್ತಲ ಗಿಡ ಮಾತ್ರ ಮದ್ದು ಎಂದು ಅರಿಯುವ ಕಾಲ

    ಆರಂಭದಲ್ಲೇ ಕ್ರಮ: ಸೋಂಕಿನ ಆರಂಭದ ದಿನಗಳಿಂದಲೇ ಭಾರತ ವ್ಯಾಪಕ, ಕಠಿಣ ಮುಂಜಾಗ್ರತೆ ಕ್ರಮ ಕೈಗೊಂಡಿತು. ಸಂಚಾರ ವ್ಯವಸ್ಥೆಗಳನ್ನು ನಿಯಂತ್ರಿಸಲಾಯಿತು. ಆರೋಗ್ಯ ಸೌಲಭ್ಯಗಳನ್ನು ಮಿಂಚಿನ ವೇಗದಲ್ಲಿ ಸನ್ನದ್ಧಗೊಳಿಸಲಾಯಿತು. ದೇಶದ ಎಲ್ಲ ಭಾಗಗಳಲ್ಲಿ ಆಹಾರಧಾನ್ಯ ಸಂಗ್ರಹ ಮಾಡಲಾಯಿತು. ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸತತ ಸಂಪರ್ಕ ಇಟ್ಟುಕೊಂಡಿತು. ಸಾರ್ವಜನಿಕರು ಏನು ಮಾಡಬೇಕು, ಏನು ಮಾಡಬಾರದು ಎಂದು ನಿಯತವಾಗಿ ತಿಳಿಸಲಾಯಿತು. ರಾಜ್ಯಗಳು, ತಜ್ಞರು, ಆರೋಗ್ಯ ಕಾರ್ಯಕರ್ತರು ಮತ್ತು ಸಾರ್ವಜನಿಕರನ್ನೂ ಪ್ರಧಾನಮಂತ್ರಿ ನೇತೃತ್ವದಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳಲಾಯಿತು.

    2008ರ ಹಿಂಜರಿತಕ್ಕೆ ಅಮೆರಿಕ, ಚೀನಾ ಮತ್ತು ಜಿ-20 ದೇಶಗಳು ಪ್ರತಿಕ್ರಿಯಿಸಿದ್ದ ಸ್ವರೂಪದ ತೀಕ್ಷ್ಣತೆ ಕರೊನಾ ವಿರುದ್ಧದ ಸಮರದಲ್ಲಿ ನಾಪತ್ತೆಯಾಗಿತ್ತು. ಎಲ್ಲ ದೇಶಗಳು ತಮ್ಮ ಹಿತವನ್ನಷ್ಟೆ ನೋಡಿದವು. ಹೀಗಾಗಿ ಜಾಗತಿಕವಾಗಿ ನಾಯಕತ್ವದ ಶೂನ್ಯತೆ ಸೃಷ್ಟಿಯಾಯಿತು. ಕರೊನಾ ವಿರುದ್ಧ ಹೋರಾಟಕ್ಕೆ ಜಾಗತಿಕವಾದ ಯಾವುದೇ ಕಾರ್ಯಸೂಚಿ ಇರಲಿಲ್ಲ. ಇಲ್ಲಿ ಭಾರತಕ್ಕೆ ಜಾಗತಿಕ ಮಟ್ಟದ ಅವಕಾಶವೊಂದು ಲಭ್ಯವಾಯಿತು. ಸಾವಿನ ಸಂಖ್ಯೆ ಮೂರಂಕಿ ದಾಟುವುದರೊಳಗಾಗೇ ವ್ಯಾಪಕ ಹಾಗೂ ಮುಂಜಾಗ್ರತಾ ಕ್ರಮ ಅದು ಕೈಗೊಂಡಿತು. ವೈಯಕ್ತಿಕ ಸುರಕ್ಷತಾ ಉಪಕರಣಗಳಿರಲಿ (ಪಿಪಿಇ) ಮಾಸ್ಕ್, ಸ್ಯಾನಿಟೈಸರ್ ಇಲ್ಲದಿದ್ದ ದೇಶ, ಇದ್ದಕ್ಕಿದ್ದಂತೆ ಕೊಡವಿ ನಿಂತು ಅವುಗಳನ್ನೆಲ್ಲ ದೊಡ್ಡ ಪ್ರಮಾಣದಲ್ಲಿ ತಯಾರಿಸಿ ಬೇರೆ ದೇಶಗಳಿಗೆ ಕೂಡ ಸರಬರಾಜು ಮಾಡುವ ಸ್ಥಿತಿಗೆ ತಲುಪಿತು. 1.4 ಬಿಲಿಯ ಜನರು ಲಾಕ್​ಡೌನ್​ಗೆ ಒಳಗಾದರು. ಸಾರ್ಕ್ ತುರ್ತು ಸ್ಥಿತಿ ನಿಧಿಗೆ ಆರಂಭಿಕ ಬೆಂಬಲವಾಗಿ 10 ಮಿಲಿಯ ಡಾಲರ್ ಹಣ ನೀಡಿತು. ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಿ ಜಗತ್ತಿನ ವಿವಿಧ ದೇಶಗಳಿಗೆ ರವಾನಿಸಿತು. ಸೋಂಕು ನಿಭಾಯಿಸುವಲ್ಲಿ ಭಾರತದ ಪ್ರಯತ್ನಗಳಿಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್​ಓ) ಮೆಚ್ಚುಗೆ ವ್ಯಕ್ತಪಡಿಸಿತು. ಬಿಲ್ ಗೇಟ್ಸ್ ಪ್ರಧಾನಿಗೆ ಶ್ಲಾಘನೆ ಪತ್ರ ಬರೆದರು. ಬಿಕ್ಕಟ್ಟಿನ ಸಮಯದ ಉತ್ತಮ ಗೆಳೆಯನೆಂದು ಇಡೀ ಜಗತ್ತು ಭಾರತದತ್ತ ನೋಡುತ್ತಿದೆ.

    ಇದನ್ನೂ ಓದಿ: ಕೊವಿಡ್​-19 ಸೋಂಕಿನ ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಸೇಫ್​ ಅಲ್ವೇ ಅಲ್ಲ…!

    ಮುಂದೇನು?: ಕೊವಿಡ್ ನಂತರ ಮನುಕುಲದ ಮುಂದಿರುವ ದಾರಿಯೇನು? ಮನುಷ್ಯ ಮತ್ತು ಪ್ರಕೃತಿ, ಮನುಷ್ಯ-ಮನುಷ್ಯ, ದೇಶ-ದೇಶಗಳ ನಡುವೆ ಸಂಬಂಧ ಕಳಚಿಕೊಂಡಿದೆ ಎಂಬುದನ್ನು ಕರೊನಾ ನಮಗೆ ಕಲಿಸಿದೆ. ಹೊಸ ಜಗತ್ತು ತನ್ನನ್ನು ತಾನು ಮರುಶೋಧಕ್ಕೆ ಒಡ್ಡಿಕೊಳ್ಳಬೇಕಾಗಿದೆ. ಮಾನವ ಮತ್ತೆ ಮೂಲ ಬೇರುಗಳಿಗೆ ಮರಳಬೇಕಾಗಿದೆ.

    ಇದನ್ನೂ ಓದಿ: ತಬ್ಲಿಘ್ ಜಮಾತ್ ವಿರುದ್ಧ ತನಿಖೆ ಆರಂಭಿಸಿದ ಸಿಬಿಐ

    ಭಾರತದ ಒಕ್ಕೂಟ ವ್ಯವಸ್ಥೆ ಕರೊನಾ ಬಿಕ್ಕಟ್ಟಿನ ವೇಳೆ ಚೆನ್ನಾಗಿ ಕೆಲಸ ಮಾಡಿತು. ಮೋದಿ ಕೊವಿಡ್ ವಿರುದ್ಧದ ಹೋರಾಟವನ್ನು ಮಹಾಭಾರತ ಯುದ್ಧಕ್ಕೆ ಹೋಲಿಸಿದ್ದರು. ಆದರೆ ಇಲ್ಲಿ ಕರ್ಣ ಮತ್ತು ಅರ್ಜುನ ಹೆಗಲಿಗೆ ಹೆಗಲು ಕೊಟ್ಟು ಜನರಲ್ ಮೋದಿ ನೇತೃತ್ವದಲ್ಲಿ ಸಾಮಾನ್ಯ ವೈರಿಯ ವಿರುದ್ಧ ಸೆಣಸಿದ್ದನ್ನು ಇಡೀ ಜಗತ್ತು ಕಂಡಿದೆ. ಮಹಾಭಾರತದಲ್ಲಿನ ಸನ್ನಿವೇಶದಂತೆ, ಜಗತ್ತು ಈಗ ಮೋದಿ ಅವರಿಗೆ ಹೀಗೆನ್ನುತ್ತಿದೆ- ‘ಸೂರ್ಯ ನಿಮ್ಮ ಮೇಲಿದ್ದಾನೆ. ವೈರಿ ನಿಮ್ಮ ಮುಂದೆ ನಿಂತಿದ್ದಾನೆ. ದೃಢಸಂಕಲ್ಪದಿಂದ ಹೋರಾಡುವುದಷ್ಟೆ ನಿಮ್ಮ ಮುಂದಿರುವ ಕಾರ್ಯಭಾರ’. ಮೋದಿ ಅವರನ್ನು ಸಂಕಷ್ಟಕ್ಕೊಳಗಾದ ಜಗತ್ತಿನ ಭವಿಷ್ಯದ ನಾಯಕ ಎಂದು ಸ್ವೀಕರಿಸಲು ಜಗತ್ತು ಸರ್ವ ಸನ್ನದ್ಧವಾಗಿದೆ.

    (ಲೇಖಕರು ನಿವೃತ್ತ ಐಎಎಸ್ ಅಧಿಕಾರಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts