More

    ಭಾರತದಲ್ಲಿ ಸಂಸದರ ಆಹಾರಕ್ಕಿಲ್ಲ ಸಬ್ಸಿಡಿ, ಮಕ್ಕಳಿಗಿದೆ ಬಿಸಿಯೂಟ: ಆದರೆ ಬ್ರಿಟನ್​ನಲ್ಲಿ ಉಲ್ಟಾ, ಪರಿಸ್ಥಿತಿ ಕಷ್ಟ..

    ಬೆಂಗಳೂರು: ಪಾಶ್ಚಿಮಾತ್ಯ ರಾಷ್ಟ್ರಗಳು ನಮಗಿಂತ ಮುಂದುವರಿದಿವೆ ಎಂಬುದು ಸಾಮಾನ್ಯ ಅನಿಸಿಕೆ. ಆದರೆ ಆ ದೇಶಗಳ ಅನೇಕ ಸಮಸ್ಯೆಗಳು ನಮಗೆ ತಿಳಿದಿರುವುದಿಲ್ಲ. ಅಂತಹ ಸಮಸ್ಯೆಗಳ ಪರಿಹಾರಕ್ಕಾಗಿ ಆ ದೇಶಗಳು ಪರದಾಡುತ್ತಿದ್ದರೆ, ಭಾರತ ಪರಿಹಾರ ಕ್ರಮಗಳೊಂದಿಗೆ ಯಶಸ್ಸು ಸಾಧಿಸಿದೆ. ಇತ್ತೀಚೆಗೆ ಬ್ರಿಟನ್‌ನಲ್ಲಿ ಅಂಥದ್ದೊಂದು ಸಮಸ್ಯೆ ಬೆಳಕಿಗೆ ಬಂದಿದೆ. ಸಬ್ಸಿಡಿ ದರದಲ್ಲಿ ಸಂಸದರಿಗೆ ಆಹಾರ ನೀಡುತ್ತಿರುವ ಹಾಗೂ ಶಾಲಾ ಮಕ್ಕಳಿಗೆ ಊಟವನ್ನು ನಿರಾಕರಿಸುತ್ತಿರುವ ಬಗ್ಗೆ ಬ್ರಿಟನ್‌ ಜನತೆ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ.

    ಮ್ಯಾಂಚೆಸ್ಟರ್​​ನಲ್ಲಿ ನಡೆದ ʼಎನಫ್‌ ಈಸ್‌ ಎನಫ್‌ʼ ಪ್ರತಿಭಟನಾ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಮಹಿಳೆಯೊಬ್ಬರು ತಾನು ಅಡುಗೆ ಕೆಲಸ ಮಾಡುತ್ತಿರುವ ಲ್ಯಾಂಕ್‌ಷೈರ್‌ ಶಾಲೆಯ ಮಕ್ಕಳಿಗೆ ಊಟ ನೀಡಲು ಸಾಧ್ಯವಾಗದ್ದಕ್ಕೆ ಕಣ್ಣೀರು ಹಾಕಿರುವ ವಿಡಿಯೋ ವೈರಲ್‌ ಆಗಿದ್ದು, ಆ ಮೂಲಕ ಅಲ್ಲಿನ ಸಮಸ್ಯೆ ಜಗಜ್ಜಾಹೀರಾಗಿದೆ.

    ‘ಬೇಸಿಗೆ ರಜೆ ಕಳೆದು ಅಕ್ಟೋಬರ್‌ ತಿಂಗಳು ಹತ್ತಿರವಾಗುತ್ತಿದ್ದಂತೆ ನನಗೆ ಭಯವಾಗುತ್ತಿದೆ, ನನಗೆ ಅಳು ಬರುತ್ತಿದೆ. ಏಕೆಂದರೆ ನಾನು ಶಾಲೆಗೆ ಹೋದಾಗ ಅಲ್ಲಿನ ಪುಟಾಣಿ ಮಕ್ಕಳಿಗೆ, ನಿಮಗೆ ಊಟ ಇಲ್ಲ ಎಂದು ಹೇಳಬೇಕಾಗುತ್ತದೆʼ ಎಂದು ಅವರು ಕಣ್ಣೀರು ಹಾಕಿದ್ದಾರೆ.

    ಬ್ರಿಟನ್ ನಿವಾಸಿಗಳ ಮನೆಯ ಇಂಧನದ ವಾರ್ಷಿಕ ಬಿಲ್‌ಗಳಲ್ಲಿ ಶೇ.80 ಹೆಚ್ಚಳವಾಗುತ್ತದೆ ಎಂದು ದೇಶದ ಇಂಧನ ನಿಯಂತ್ರಕ ಸಂಸ್ಥೆಯು ಶುಕ್ರವಾರ ಘೋಷಿಸಿದೆ. ಇದರಿಂದಾಗಿ ಗ್ರಾಹಕರ ಸರಾಸರಿ ಮನೆಯ ಇಂಧನ ವೆಚ್ಚ ವರ್ಷಕ್ಕೆ 1,971 ಪೌಂಡ್‌ಗಳಿಂದ 3,549 ಪೌಂಡ್‌ಗಳಿಗೆ ಹೆಚ್ಚಾಗುತ್ತದೆ. ಅನಿಲ ಪೂರೈಕೆದಾರರು ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ ವಿಧಿಸಬಹುದಾದ ಗರಿಷ್ಠ ಮೊತ್ತವು 2022ರ ಅ. 1ರಂದು ಜಾರಿಗೆ ಬರಲಿದೆ. ಚಳಿಗಾಲ ಆರಂಭವಾಗುತ್ತಿದ್ದಂತೆ ಜನವರಿಯಲ್ಲಿ ಬಿಲ್‌ಗಳು ಮತ್ತೆ ಹೆಚ್ಚಾಗುವ ನಿರೀಕ್ಷೆ ಇದೆ.

    ಉಕ್ರೇನ್‌ ರಷ್ಯಾ ನಡುವಿನ ಯುದ್ಧದಿಂದ ಉಂಟಾಗಿರುವ ಬಿಕ್ಕಟ್ಟಿನಿಂದಾಗಿ ಸಗಟು ನೈಸರ್ಗಿಕ ಅನಿಲದ ಬೆಲೆಗಳು ಗಗನಕ್ಕೇರುತ್ತಿವೆ ಎಂದು ಹೇಳಲಾಗಿದೆ. ಇದು ಮನೆಗಳಲ್ಲಿ ಶಾಖವಿರುವಂತೆ ನೋಡಿಕೊಳ್ಳಲು ಮತ್ತು ವಿದ್ಯುತ್ ಉತ್ಪಾದಿಸಲು ಇಂಧನವನ್ನು ಅವಲಂಬಿಸಿರುವ ಯುರೋಪ್‌ ರಾಷ್ಟ್ರಗಳ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರಿದೆ. ಅದರಲ್ಲಿ ಬ್ರಿಟನ್‌ ಕೂಡ ಸೇರಿದ್ದು, ಇದು ಏಳು ಶ್ರೀಮಂತ ಪ್ರಜಾಪ್ರಭುತ್ವ ರಾಷ್ಟ್ರಗಳ ಪೈಕಿ ಅತಿ ಹೆಚ್ಚು ಹಣದುಬ್ಬರ ಇರುವ ದೇಶವಾಗಿದೆ. ಇದರ ಪರಿಣಾಮವಾಗಿ ಮಕ್ಕಳ ಪೋಷಕರು ಶಾಲೆಯಲ್ಲಿ ನೀಡುವ ಊಟಕ್ಕೆ ನೀಡಬೇಕಾದ ಹಣವನ್ನು ಕಟ್ಟಲು ಪರದಾಡುತ್ತಿದ್ದಾರೆ. ಅಂತಹ ಮಕ್ಕಳಿಗೆ ಶಾಲೆಗಳಲ್ಲಿ ಊಟ ನಿರಾಕರಿಸಲಾಗುತ್ತಿದೆ.

    ಆ. 30ರಂದು ಮ್ಯಾಂಚೆಸ್ಟರ್ ಕ್ಯಾಥೆಡ್ರಲ್‌ನಲ್ಲಿ ʼಎನಫ್ ಈಸ್ ಎನಫ್ʼ ರ‍್ಯಾಲಿಯಲ್ಲಿ ಮಾತನಾಡಿದ ಈ ಮಹಿಳೆಯು ಅವರು ಕೆಲಸ ಮಾಡುವ ಲ್ಯಾಂಕ್‌ಷೈರ್ ಶಾಲೆಯಲ್ಲಿ ಮಕ್ಕಳ ಬಡತನದ ಬಗ್ಗೆ ವಿವರಿಸುತ್ತ ಕಣ್ಣೀರು ಹಾಕಿದರು. ‘ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನನಗೆ ಇಂತಹ ಕೆಲಸ ಮಾಡಲು ಇಷ್ಟವಾಗುತ್ತಿಲ್ಲ. ಅಲ್ಲಿ ಮಕ್ಕಳಿಗೆ ಊಟ ಇಲ್ಲ ಎಂದು ಹೇಳಲು ನನ್ನ ಹೃದಯ ಹಿಂಡುತ್ತದೆ’ ಎಂದು ಅವರು ಹೇಳಿದ್ದಾರೆ.

    ‘ಶಾಲೆಯಲ್ಲಿ ಮೊದಲು ತಿಂಗಳಿಗೆ ಒಂದು ಮಗುವಿಗೆ ನಿನ್ನ ಖಾತೆಯಲ್ಲಿ ಹಣವಿಲ್ಲ, ನಿನಗೆ ಊಟವಿಲ್ಲ ಎಂದು ಹೇಳುತ್ತಿದ್ದೆ, ಆದರೆ ಈಗ ಸುಮಾರು 10-15 ಮಕ್ಕಳಿಗೆ ಹಾಗೆ ಹೇಳಬೇಕಾದ ಪರಿಸ್ಥಿತಿ ಇದೆ’ ಎನ್ನುತ್ತಾರೆ. ‘ಮಕ್ಕಳು ತಮ್ಮ ಗೆಳೆಯರೊಂದಿಗೆ ಸರದಿ ಸಾಲಿನಲ್ಲಿ ಬಂದಾಗ ನಿನಗೆ ಊಟವಿಲ್ಲ ಎಂದು ಹೇಳಿದರೆ ಅವರು ಅವಮಾನದಿಂದ ಕುಗ್ಗಿಹೋಗುತ್ತಾರೆ. ಅವರು ‘ಸರಿ, ನಾವೀಗ ಏನು ತಿನ್ನಬೇಕುʼ ಎನ್ನುವಂತೆ ದೈನ್ಯದಿಂದ ನನ್ನ ಮುಖ ನೋಡುತ್ತಾರೆ. ನಾನು ನಿಮಗೆ ಏನನ್ನೂ ಕೊಡಲು ಸಾಧ್ಯವಿಲ್ಲ, ನನ್ನನ್ನು ಕ್ಷಮಿಸಿ ಎಂದು ಹೇಳುವ ದುರ್ದೈವ ನನ್ನದು’ ಎಂದು ಆಕೆ ಸಾರ್ವಜನಿಕವಾಗಿ ಗೋಳಾಡುತ್ತಾರೆ.

    ದೇಶದಲ್ಲಿ ಇಂತಹ ಪರಿಸ್ಥಿತಿ ಇರುವಾಗ, ಬ್ರಿಟನ್‌ನ ಸಂಸತ್ತಿನಲ್ಲಿ ಸದಸ್ಯರಿಗೆ ಸಬ್ಸಿಡಿ ದರದಲ್ಲಿ ಆಹಾರ ಪೂರೈಕೆ ಆಗುತ್ತಿರುವ ಬಗ್ಗೆ ಅಲ್ಲಿನ ಜನರು ಕೆಂಡಾಮಂಡಲವಾಗಿದ್ದಾರೆ. ಸಂಸದರಿಗೆ ಪೂರೈಕೆ ಆಗುತ್ತಿರುವ ಆಹಾರ ಹಾಗೂ ಅದರ ರಿಯಾಯಿತಿ ಬೆಲೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಕ್ಕಳು ಊಟವಿಲ್ಲದೇ ಇರುವಾಗ ಸಂಸದರಿಗೆ ಇಂತಹ ಸೌಲಭ್ಯ ಬೇಕೇ? ಎಂದು ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ತದ್ವಿರುದ್ಧವಾಗಿ ಭಾರತದ ಸಂಸತ್ತಿನಲ್ಲಿ ಸಂಸದರಿಗೆ ಸಬ್ಸಿಡಿ ಬೆಲೆಯಲ್ಲಿ ಆಹಾರ ಒದಗಿಸುವುದನ್ನು ನಿಲ್ಲಿಸಲಾಗಿದೆ ಮತ್ತು ಕೋಟ್ಯಂತರ ಮಕ್ಕಳಿಗೆ ಉಚಿತವಾಗಿ ಬಿಸಿಯೂಟ ನೀಡಲಾಗುತ್ತಿದೆ.

    ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಈಗ ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ್ (ಪ್ರಧಾನ ಮಂತ್ರಿ ಪೋಷಣ್) ಯೋಜನೆ ಎಂದು ಕರೆಯಲಾಗುತ್ತಿದೆ. ಇದು ಕೇಂದ್ರ ಪ್ರಾಯೋಜಿತ ಯೋಜನೆಯಾಗಿದ್ದು, ಸರ್ಕಾರಿ ಮತ್ತು ಸರ್ಕಾರಿ-ಅನುದಾನಿತ ಶಾಲೆಗಳ ಬಾಲವಾಟಿಕಾ ಮತ್ತು I-VIII ತರಗತಿಗಳಲ್ಲಿ ಓದುತ್ತಿರುವ ಎಲ್ಲಾ ಶಾಲಾ ಮಕ್ಕಳನ್ನು ಒಳಗೊಂಡಿದೆ. ಈ ಯೋಜನೆಯಡಿ 5ರಿಂದ 11 ವರ್ಷ ವಯಸ್ಸಿನ ಸುಮಾರು 12 ಕೋಟಿ ಮಕ್ಕಳು ಸೌಲಭ್ಯ ಪಡೆಯುತ್ತಿದ್ದಾರೆ. ಇದರಲ್ಲಿ ದೇಶಾದ್ಯಂತ 11.20 ಲಕ್ಷ ಶಾಲೆಗಳಲ್ಲಿ ಓದುತ್ತಿರುವ ಬಾಲವಾಟಿಕಾದ 22.6 ಲಕ್ಷ ಮಕ್ಕಳು, ಪ್ರಾಥಮಿಕ ಶಾಲೆಯ 7.2 ಕೋಟಿ ಮಕ್ಕಳು ಮತ್ತು 4.6 ಕೋಟಿ ಮಾಧ್ಯಮಿಕ ಶಾಲಾ ಮಕ್ಕಳು ಇದ್ದಾರೆ. ಪ್ರಧಾನಮಂತ್ರಿ ಪೋಷಣ್‌ ಯೋಜನೆಯ ಉದ್ದೇಶವೆಂದರೆ, ಭಾರತದ ಬಹುಪಾಲು ಮಕ್ಕಳ ಎರಡು ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವುದು, ಅವುಗಳೆಂದರೆ ಹಸಿವು ಮತ್ತು ಶಿಕ್ಷಣ.

    ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಬಾಲವಾಟಿಕಾ ಮತ್ತು I – VIII ತರಗತಿಗಳಲ್ಲಿ ಓದುತ್ತಿರುವ ಮಕ್ಕಳ ಪೌಷ್ಟಿಕಾಂಶದ ಸ್ಥಿತಿಯನ್ನು ಸುಧಾರಿಸುವುದು, ಬಡಮಕ್ಕಳು, ಹಿಂದುಳಿದ ವರ್ಗಗಳಿಗೆ ಸೇರಿದವರು, ಶಾಲೆಗೆ ಹೆಚ್ಚು ನಿಯಮಿತವಾಗಿ ಹಾಜರಾಗುವಂತೆ ಪ್ರೋತ್ಸಾಹಿಸುವುದು ಮತ್ತು ತರಗತಿಯ ಚಟುವಟಿಕೆಗಳ ಮೇಲೆ ಕೇಂದ್ರೀಕರಿಸಲು ಅವರಿಗೆ ಸಹಾಯ ಮಾಡುವುದು, ಬೇಸಿಗೆ ರಜೆಯಲ್ಲಿ ಮತ್ತು ವಿಪತ್ತಿನ ಸಮಯದಲ್ಲಿ ಬರಪೀಡಿತ ಪ್ರದೇಶಗಳಲ್ಲಿ ಪ್ರಾಥಮಿಕ ಹಂತದ ಮಕ್ಕಳಿಗೆ ಪೌಷ್ಟಿಕಾಂಶದ ಬೆಂಬಲವನ್ನು ಒದಗಿಸುವುದು ಈ ಯೋಜನೆಯ ಧ್ಯೇಯವಾಗಿದೆ. ಕೇಂದ್ರ ಸರ್ಕಾರವು ಈ ಯೋಜನೆಯಡಿ ಪ್ರತಿ ವರ್ಷ ಸುಮಾರು 9,500 ಕೋಟಿ ರೂ. ಆಹಾರ ಸಬ್ಸಿಡಿ ಸೇರಿದಂತೆ 20,000 ಕೋಟಿ ರೂ. ($ 2.5 ಶತಕೋಟಿ) ಗೂ ಹೆಚ್ಚು ಹಣವನ್ನು ಖರ್ಚು ಮಾಡುತ್ತಿದೆ.

    ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಲಾಕ್‌ಡೌನ್‌ನಿಂದ ಶಾಲೆಗಳನ್ನು ಮುಚ್ಚಿದ ಸಮಯದಲ್ಲಿ ದಾಖಲಾದ ಎಲ್ಲಾ ಮಕ್ಕಳಿಗೆ ಆಹಾರ ಭದ್ರತಾ ಭತ್ಯೆ ನೀಡಲಾಯಿತು. 2022-23ನೇ ಸಾಲಿನಲ್ಲಿ 31 ಲಕ್ಷ ಮೆಟ್ರಿಕ್ ಟನ್ ಆಹಾರಧಾನ್ಯಗಳನ್ನು ಯೋಜನೆಯಡಿ ಹಂಚಿಕೆ ಮಾಡಲಾಯಿತು.
    ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, 2013ರ ಅಡಿಯಲ್ಲಿ ಬಿಸಿಯೂಟ ಮಗುವಿನ ಹಕ್ಕಾಗಿದೆ. ಪ್ರಧಾನಮಂತ್ರಿ ಪೋಷಣಾ ಯೋಜನೆ ಅಡಿಯಲ್ಲಿ, ಎಲ್ಲಾ ಶಾಲಾ ದಿನಗಳಲ್ಲಿ ಎಲ್ಲಾ ಅರ್ಹ ಮಕ್ಕಳಿಗೆ ಬಿಸಿಯೂಟ ನೀಡಲಾಗುತ್ತದೆ, ಇದರಲ್ಲಿ ಪ್ರಾಥಮಿಕ ಶಾಲಾ ಮಕ್ಕಳಿಗೆ 450 ಕ್ಯಾಲೋರಿಗಳು ಮತ್ತು 12 ಗ್ರಾಂ ಪ್ರೋಟೀನ್ ಮತ್ತು ಮಾಧ್ಯಮಿಕ ಶಾಲಾ ಮಕ್ಕಳಿಗೆ 700 ಕ್ಯಾಲೋರಿಗಳು ಮತ್ತು 20 ಗ್ರಾಂ ಪ್ರೋಟೀನ್ ಒಳಗೊಂಡ ಆಹಾರ ನೀಡಲಾಗುತ್ತಿದೆ.

    ದೇಶಾದ್ಯಂತ 4 ಲಕ್ಷಕ್ಕೂ ಹೆಚ್ಚು ಶಾಲೆಗಳಲ್ಲಿ ‘ಶಾಲಾ ಪೌಷ್ಟಿಕ ಉದ್ಯಾನ’ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಶಾಲಾ ಮಕ್ಕಳ ಆಹಾರದಲ್ಲಿ ಪೌಷ್ಟಿಕಾಂಶಯುಕ್ತ ಹಸಿರು ತರಕಾರಿಗಳು ಮತ್ತು ಹಣ್ಣುಗಳನ್ನು ಸೇರಿಸಲು ಇವುಗಳು ತುಂಬಾ ಸಹಾಯಕವಾಗಿವೆ. ‘ತಿಥಿಭೋಜನ’ ರೂಪದಲ್ಲಿ ಈ ಯೋಜನೆಯಲ್ಲಿ ಸಮುದಾಯದ ಸಹಭಾಗಿತ್ವವನ್ನು ಬಲಪಡಿಸಲಾಗಿದೆ. ತಿಥಿಭೋಜನ ಅಡಿಯಲ್ಲಿ, ಜನ್ಮದಿನಗಳು, ವಾರ್ಷಿಕೋತ್ಸವ, ರಾಷ್ಟ್ರೀಯ ಪ್ರಾಮುಖ್ಯತೆಯ ದಿನಗಳು ಮುಂತಾದ ದಿನಗಳಂದು ಸಮುದಾಯ ಸ್ವಯಂಸೇವಕರು ಊಟ/ಹೆಚ್ಚುವರಿ ಆಹಾರ ಪದಾರ್ಥಗಳನ್ನು ಒದಗಿಸುತ್ತಾರೆ.

    ಪೂರಕ ಪೋಷಣೆಗಾಗಿ ಅವಕಾಶ ಕಲ್ಪಿಸಲಾಗಿದೆ. ಅಂದರೆ. ಯೋಜನೆಯ ಹೊಂದಾಣಿಕೆ ಅಂಶದ ಅಡಿಯಲ್ಲಿ ರಕ್ತಹೀನತೆಯ ಹೆಚ್ಚಿರುವ ಮಹತ್ವಾಕಾಂಕ್ಷೆಯ ಜಿಲ್ಲೆಗಳು ಮತ್ತು ಇತರ ಜಿಲ್ಲೆಗಳಲ್ಲಿ (ಎನ್‌ ಹೆಚ್‌ ಎಫ್‌ ಎಸ್‌ ಅಂಕಿಅಂಶದ ಪ್ರಕಾರ) ಹಣ್ಣುಗಳು, ಚಿಕ್ಕಿಗಳು ಇತ್ಯಾದಿಗಳನ್ನು ನೀಡಲು ಅವಕಾಶವಿದೆ.

    ಯೋಜನೆಯ ಅನುಷ್ಠಾನದಲ್ಲಿ ಮಹಿಳಾ ಸ್ವಸಹಾಯ ಗುಂಪುಗಳು ಮತ್ತು ರೈತ ಉತ್ಪಾದಕ ಸಂಸ್ಥೆಗಳ ಭಾಗವಹಿಸುವಿಕೆಯನ್ನು ಹೆಚ್ಚಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಪ್ರೋತ್ಸಾಹಿಸಲಾಗಿದೆ. ಪ್ರಧಾನಮಂತ್ರಿ ಪೋಷಣ್ ಅಡಿಯಲ್ಲಿ ಬಿಸಿಯೂಟ ತಯಾರಿಕೆಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಿರಿಧಾನ್ಯ ಬಳಸಲು ಪ್ರೋತ್ಸಾಹ ನೀಡಲಾಗುತ್ತಿದೆ.

    ಪ್ರಧಾನಮಂತ್ರಿ ಪೋಷಣ್ ಯೋಜನೆಯ ‘ಸಾಮಾಜಿಕ ಲೆಕ್ಕ ಪರಿಶೋಧನೆ’ಯನ್ನು ಪ್ರತಿ ಜಿಲ್ಲೆಗೂ ಕಡ್ಡಾಯಗೊಳಿಸಲಾಗಿದೆ ಮತ್ತು ಬಹುತೇಕ ರಾಜ್ಯಗಳಲ್ಲಿ ಇದನ್ನು ನಡೆಸಲಾಗುತ್ತಿದೆ. ಪಂಚಾಯತ್ ಪ್ರತಿನಿಧಿಗಳು, ಪೋಷಕರು ಮತ್ತು ಸಮುದಾಯದವರು ಭಾಗವಹಿಸಿ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸುವ ಸಾರ್ವಜನಿಕ ಸಭೆಗಳನ್ನು ನಡೆಸಲಾಗಿದೆ. ಸಮಸ್ಯೆಗಳ ಪರಿಹಾರಕ್ಕೆ ಇತರ ರಾಷ್ಟ್ರಗಳು ಈಗ ನವ ಭಾರತದತ್ತ ನೋಡುತ್ತಿವೆ.

    ಮದ್ಯದ ಅಮಲಿನಲ್ಲಿ ಗಣೇಶನ ಮೂರ್ತಿಗಳನ್ನು ಚೆಲ್ಲಾಡಿ ವಿರೂಪಗೊಳಿಸಿದ ಯುವಕರು; ಐವರ ಬಂಧನ..

    ಜನಜಂಗುಳಿಯಿಂದಾಗಿ ಕುಸಿದು ಬಿತ್ತು ಗಣೇಶನ ಗೋಲ್ಡನ್ ಟೆಂಪಲ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts