More

    ಭಾರತವು ಮೋಕ್ಷ ಪ್ರಧಾನ ರಾಷ್ಟ್ರ: ಉಜ್ಜಯಿನಿ ಜಗದ್ಗುರುಗಳ ಅಭಿಮತ

    ರಾಯಚೋಟಿ (ಆಂಧ್ರಪ್ರದೇಶ): ವಿಶ್ವದ ಒಟ್ಟು ವಿದ್ಯಮಾನಗಳ ಚಾರಿತ್ರಿಕ ಹಿನ್ನೆಲೆಯ ತೌಲನಿಕ ಅವಲೋಕನದಲ್ಲಿ ಜಗತ್ತಿನಲ್ಲಿಯ ಅರ್ಥ ಪ್ರಧಾನ ದೇಶಗಳಿಗೆ ಹೋಲಿಸಿದರೆ ಭಾರತ ಮಾತ್ರ ಮೋಕ್ಷ ಪ್ರಧಾನ ರಾಷ್ಟ್ರವಾಗಿ ಗಮನಸೆಳೆಯುತ್ತದೆ ಎಂದು ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾಗಿರುವ ಉಜ್ಜಯಿನಿ ಸದ್ಧರ್ಮ ಪೀಠದ ಶ್ರೀಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರು ಪ್ರತಿಪಾದಿಸಿದರು.

    ರಾಯಚೋಟಿ ಶ್ರೀವೀರಭದ್ರ ದೇವರ ಹಾಗೂ ಶ್ರೀಭದ್ರಕಾಳಿ ಅಮ್ಮನವರ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಜನಜಾಗೃತಿ ಭಾವೈಕ್ಯ ಧರ್ಮ ಸಮ್ಮೇಳನದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿ ಮಾತನಾಡುತ್ತಿದ್ದರು. ನಮ್ಮ ದೇಶವು ವಿವಿಧತೆಯಲ್ಲಿ ಏಕತೆಯನ್ನು, ಅನೇಕತೆಯಲ್ಲಿ ಐಕ್ಯತೆಯನ್ನು ಕಾಪಾಡಿಕೊಂಡು ಬಂದಿದೆ. ಭಾರತೀಯರು ದೇಹಕ್ಕಿಂತ ದೇವರನ್ನೇ ಪ್ರೀತಿಸಿದ್ದು, ಭಕ್ತಿಯ ಅನುಸಂಧಾನದಲ್ಲಿ ಸದಾ ಸಾಕ್ಷಾತ್ಕಾರ ಸಂಪಾದನೆಗೆ ಹಂಬಲಿಸಿದವರು. ಹೆತ್ತ ತಾಯಿ ಮತ್ತು ಜನ್ಮವೆತ್ತ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲಾದದ್ದು ಎಂಬ ಭಾವನಾತ್ಮಕ ತನ್ಮಯತೆಯಲ್ಲಿ ತಮ್ಮ ರಾಷ್ಟ್ರವನ್ನು ‘ಭಾರತಮಾತೆ’ ಎಂದೂ, ದೇಶದ ಮಣ್ಣನ್ನು ‘ಭೂಮಿತಾಯಿ’ ಎಂದು ಸಂಬೋಧಿಸಿ ಎಲ್ಲದರಲ್ಲಿ ಶಿವ ಮತ್ತು ಶಕ್ತಿಯನ್ನು ಕಂಡು ಆರಾಧಿಸಿದ ಹಿರಿಮೆಗೆ ಭಾರತೀಯರು ಭಾಜನರಾಗಿದ್ದಾರೆ ಎಂದರು.

    ಸಮಷ್ಟಿ ಚೈತನ್ಯವೇ ವೀರಭದ್ರ: ಸತ್ಯ ನಿಷ್ಠೆಯ ಸಮಷ್ಟಿ ಚೈತನ್ಯದ ಅತ್ಯದ್ಭುತ ಶಕ್ತಿ ಸಂಚಯವೇ ವೀರಭದ್ರ ಅವತಾರ. ಸನ್ನಡತೆಯನ್ನು ಬೆಂಬಲಿಸಿ ಶಿಷ್ಟ ರಕ್ಷಕನಾಗುವ ವೀರಭದ್ರನು ದುಷ್ಟ ಶಿಕ್ಷಕನೂ ಹೌದು. ಪಾಪದ ಕೈಂಕರ್ಯಗಳನ್ನು ಸಹಿಸದೆ ತೀಕ್ಷವಾದ ಶಿಕ್ಷೆ ನೀಡುವ ವೀರಭದ್ರ ಸಾತ್ವಿಕ ಸತ್ಯ-ಶುದ್ಧ ಧರ್ಮಮಾರ್ಗವನ್ನು ಸದಾಕಾಲವೂ ಬೆಂಬಲಿಸಿ ರಕ್ಷಾಕವಚದ ಒಡೆಯನಾಗಿ ಭಕ್ತಗಣದ ಜೊತೆಗೇ ಇರುತ್ತಾನೆ. ಶಿವಸಂಸ್ಕೃತಿಯ ಹರಿಕಾರನಾದ ವೀರಭದ್ರನು ವೀರಶೈವರಿಗಷ್ಟೇ ಸೀಮಿತಗೊಳ್ಳದೇ ವಿಸ್ತೃತವಾಗಿ ಎಲ್ಲರಿಂದಲೂ ಪೂಜೆಗೊಂಡಿದ್ದಾನೆ ಎಂದೂ ಉಜ್ಜಯಿನಿ ಪೀಠದ ಶ್ರೀಸಿದ್ಧಲಿಂಗ ಜಗದ್ಗುರುಗಳು ಹೇಳಿದರು.
    ಧಾರವಾಡದ ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ನಿವೃತ್ತ ಸಂಪಾದಕ ಡಾ. ಗುರುಮೂರ್ತಿ ಯರಗಂಬಳಿಮಠ ಹಾಗೂ ಶ್ರೀವೀರಭದ್ರೇಶ್ವರ ದೇವಾಲಯ ಟ್ರಸ್ಟ್ ಅಧ್ಯಕ್ಷೆ ಪೋಲಂರೆಡ್ಡಿ ವಿಜಯಮ್ಮ ಮಾತನಾಡಿದರು.

    ಭಾರತವು ಮೋಕ್ಷ ಪ್ರಧಾನ ರಾಷ್ಟ್ರ: ಉಜ್ಜಯಿನಿ ಜಗದ್ಗುರುಗಳ ಅಭಿಮತ

    ಗುರುರಕ್ಷೆ ಗೌರವ: ಚಿಕ್ಕಮಗಳೂರು ಜಿಲ್ಲೆ ಬೇರುಗಂಡಿ ಬೃಹನ್ಮಠದ ಶ್ರೀರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಬೆಳಗಾವಿ ಜಿಲ್ಲೆ ಸಂಪಗಾಂವ ಕಟಾಪುರಿ ಹಿರೇಮಠದ ಶ್ರೀಚೆನ್ನವೀರ ಶಿವಾಚಾರ್ಯ ಸ್ವಾಮೀಜಿ, ನಂದ್ಯಾಲ ಬ್ರಹ್ಮಶ್ರೀ ನಂದುಲಮಠದ ಶ್ರೀರೇವಣ ಸಿದ್ಧಾಂತಿ ಸ್ವಾಮೀಜಿ, ಶ್ರೀಶಶಿಭೂಷಣ ಸಿದ್ಧಾಂತಿ ಸ್ವಾಮೀಜಿ, ರಾಯಚೋಟಿ ನಗರಸಭೆ ಉಪಾಧ್ಯಕ್ಷ ದಶರಥರಾಮಿರೆಡ್ಡಿ, ರಾಯಚೋಟಿ ಶ್ರೀವೀರಭದ್ರೇಶ್ವರ ದೇವಾಲಯ ಟ್ರಸ್ಟ್ ಅಧ್ಯಕ್ಷೆ ಪೋಲಂರೆಡ್ಡಿ ವಿಜಯಮ್ಮ, ಕಾರ್ಯನಿರ್ವಾಹಕ ಅಧಿಕಾರಿ ಡಿ.ವ್ಹಿ.ರಮಣರೆಡ್ಡಿ, ಶ್ರೀವೀರಭದ್ರಸ್ವಾಮಿ ದೇಗುಲದ ಅರ್ಚಕರಾದ ಎ. ಕೃಷ್ಣಯ್ಯಸ್ವಾಮಿ, ಶಂಕ್ರಯ್ಯಸ್ವಾಮಿ ಮಠಪತಿ, ಎಂ. ರಾಚ ಯೋಗೀಶಶಾಸ್ತ್ರಿ, ಎಂ. ಚಂದ್ರಶೇಖರಯ್ಯ, ಅವರಿಗೆ ಉಜ್ಜಯಿನಿ ಪೀಠದ ಶ್ರೀಸಿದ್ಧಲಿಂಗ ಜಗದ್ಗುರುಗಳು ಗುರುರಕ್ಷೆಯ ಗೌರವ ನೀಡಿ ಆಶೀರ್ವದಿಸಿದರು.
    ಶ್ರೀವೀರಭದ್ರೇಶ್ವರ ದೇವಾಲಯ ಟ್ರಸ್ಟ್​ ಧರ್ಮದರ್ಶಿ ಸಿ.ಎಂ. ಶಿವಶರಣ ಕಲಬುರ್ಗಿ, ಹುಬ್ಬಳ್ಳಿಯ ರಾಯಚೋಟಿ ಶ್ರೀವೀರಭದ್ರೇಶ್ವರಸ್ವಾಮಿ ರಥೋತ್ಸವ ಸೇವಾ ಸಮಿತಿಯ ಗಿರೀಶಕುಮಾರ ಬುಡರಕಟ್ಟಿಮಠ, ಪಿ.ಎಂ. ಚಿಕ್ಕಮಠ, ಶಂಕರ ಕುರ್ತಕೋಟಿ, ರಮೇಶಕುಮಾರ ಬುಡರಕಟ್ಟಿಮಠ, ರಾಚಯ್ಯ ಮಠಪತಿ, ಶಿವಾನಂದ ನಾಗಠಾಣ, ಗೋವಾದ ಶಂಕರ ಹಿರೇಮಠ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಭಕ್ತಗಣ ಪಾಲ್ಗೊಂಡಿದ್ದರು.

    ಇದಕ್ಕೂ ಮುನ್ನ ರಾಯಚೋಟಿ ನಗರದಲ್ಲಿ ಉಜ್ಜಯಿನಿ ಸದ್ಧರ್ಮ ಪೀಠದ ಶ್ರೀಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರ ಅಡ್ಡಪಲ್ಲಕ್ಕಿ ಮಹೋತ್ಸವವು ವಿವಿಧ ಜನಪದ ವಾದ್ಯಮೇಳಗಳು, ಪೂರ್ಣಕುಂಭಗಳು ಹಾಗೂ ಭಕ್ತಗಣದ ಜಯಘೋಷಗಳ ಮಧ್ಯ ಅತ್ಯಂತ ಯಶಸ್ವಿಯಾಗಿ ಜರುಗಿತು.

    ಬರ್ತ್​ಡೇ ಪಾರ್ಟಿಯಲ್ಲಿ ಚಿತ್ರನಟನ ಮೇಲೆ ಹಲ್ಲೆ; ಆಡಿ ಕಾರಿನ ಗಾಜುಗಳು ಧ್ವಂಸ

    ಹಠಾತ್ ಹೃದಯಾಘಾತಕ್ಕೆ ಮತ್ತೆರಡು ಬಲಿ; ಕ್ರಿಕೆಟ್​ ಆಡುತ್ತಲೇ ಕುಸಿದು ಬಿದ್ದ ಆಟಗಾರರ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts