More

    ಭಾರತಕ್ಕೆ ಜಮ್ಮು-ಕಾಶ್ಮೀರದಲ್ಲಿ ಲಿಥಿಯಂ ನಿಕ್ಷೇಪ ಪತ್ತೆಯಾಗಿದ್ದು ಜಾಕ್​ಪಾಟ್ ಯಾಕೆ?

    ನವದೆಹಲಿ: ದೇಶದಲ್ಲಿ ಮೊದಲ ಬಾರಿಗೆ ಲಿಥಿಯಂನ ದೊಡ್ಡ ಸಂಗ್ರಹ ಕಂಡುಬಂದಿದೆ ಎಂದು ಭಾರತ ಸರ್ಕಾರ ಗುರುವಾರ ಪ್ರಕಟಿಸಿದೆ. ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ 5.9 ಮಿಲಿಯನ್ ಟನ್ ಲಿಥಿಯಂ ನಿಕ್ಷೇಪಗಳು ಪತ್ತೆಯಾಗಿವೆ ಎಂದು ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ (ಜಿಎಸ್‌ಐ) ಘೋಷಣೆ ಮಾಡಿದೆ. ಲಿಥಿಯಂ ಒಂದು ಹಗುರವಾದ ಲೋಹವಾಗಿದ್ದು, ವೈದ್ಯಕೀಯ ಕ್ಷೇತ್ರದಿಂದ ಹಿಡಿದು ವಾಹನಗಳ ಕ್ಷೇತ್ರದ ತನಕ ಅನೇಕ ಕ್ಷೇತ್ರಗಳಲ್ಲಿ ಬಳಸಲ್ಪಡುತ್ತದೆ.

    ಲಿಥಿಯಂ ಸಿಕ್ಕಿದ್ದು ಯಾಕೆ ಮಹತ್ವಕಾರಿ?
    ಲಿಥಿಯಂ ನಾನ್-ಫೆರಸ್ ಲೋಹವಾಗಿದ್ದು ಇದು ಎಲೆಕ್ಟ್ರಿಕ್ ವಾಹನಗಳ (ಇವಿ) ಬ್ಯಾಟರಿಗಳಲ್ಲಿನ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಈ ಲೋಹದಿಂದಾಗಿ ಬ್ಯಾಟರಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್​ ಸಂಗ್ರಹಿಸಬಹುದಾಗಿದೆ.

    ಲಿಥಿಯಂ ಐಯಾನ್‌ಗಳಿಂದ ತಯಾರಿಸಿದ ಬ್ಯಾಟರಿಗಳು ಲೆಡ್-ಆಸಿಡ್ ಬ್ಯಾಟರಿಗಳು ಅಥವಾ ನಿಕಲ್-ಮೆಟಲ್ ಹೈಡ್ರೈಡ್ ಬ್ಯಾಟರಿಗಳಿಗಿಂತ ಹೆಚ್ಚಿನ ಶಕ್ತಿಯ ಸಾಂದ್ರತೆಯನ್ನು ಹೊಂದಿರುತ್ತವೆ. ಆದ್ದರಿಂದ ಚಿಕ್ಕ ಬ್ಯಾಟರಿಯಲ್ಲಿ ಹೆಚ್ಚಿನ ವಿದ್ಯುತ್​ ಶೇಖರಣಾ ಸಾಮರ್ಥ್ಯವನ್ನು ಈ ಲಿಥಿಯಂ ಬ್ಯಾಟರಿಗಳು ಹೊಂದಿವೆ.

    ಭಾರತಕ್ಕೆ ಲಿಥಿಯಂ ಏಕೆ ನಿರ್ಣಾಯಕ?
    ಭಾರತವು ಇತ್ತೀಚೆಗೆ ತನ್ನ ಎಲೆಕ್ಟ್ರಿಕ್ ವಾಹನಕ್ಕೆ ಸಂಬಂಧಿಸಿದ ಯೋಜನೆಗಳನ್ನು ಹೆಚ್ಚಿಸಲು ನಿರ್ಧರಿಸಿದ್ದು ಇದು ಯಶಸ್ವಿಯಾಗಲು ನಿರ್ಣಾಯಕವಾಗಿರುವ ಲಿಥಿಯಂ ಸೇರಿದಂತೆ ಪ್ರಮುಖ ಖನಿಜಗಳ ಪೂರೈಕೆ ಅತ್ಯಗತ್ಯ. ಹೀಗಾಗಿ ಅವುಗಳ ಪೂರೈಕೆ ನಿಲ್ಲದಂತೆ ನೋಡಿಕೊಳ್ಳುವುದು ಅತ್ಯವಶ್ಯಕವಾಗಿದೆ.

    ಈ ಹಿಂದೆ, ಗಣಿ ಸಚಿವಾಲಯವು ಉದಯೋನ್ಮುಖ ತಂತ್ರಜ್ಞಾನಗಳಿಗೆ ನಿರ್ಣಾಯಕ ಖನಿಜ ಪೂರೈಕೆ ಸರಪಳಿಯನ್ನು ಬಲಪಡಿಸಲು, ಆಸ್ಟ್ರೇಲಿಯಾ ಮತ್ತು ಅರ್ಜೆಂಟೀನಾದಿಂದ ಲಿಥಿಯಂ ಸೇರಿದಂತೆ ಖನಿಜಗಳನ್ನು ಪಡೆಯಲು ಸರ್ಕಾರವು ಹಲವಾರು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿತ್ತು. ಪ್ರಸ್ತುತ, ಭಾರತವು ಲಿಥಿಯಂ, ನಿಕಲ್ ಮತ್ತು ಕೋಬಾಲ್ಟ್‌ನಂತಹ ಅನೇಕ ಖನಿಜಗಳಿಗೆ ಹೊರಗಿನ ದೇಶಗಳ ಮೇಲೆ ಅವಲಂಬಿತವಾಗಿದೆ.

    ಭೂಮಿಯಲ್ಲಿರುವ ಐವತ್ತು ಪ್ರತಿಶತ ನಿಕ್ಷೇಪಗಳು ಮೂರು ದಕ್ಷಿಣ ಅಮೆರಿಕಾದ ದೇಶಗಳಲ್ಲಿ ಕೇಂದ್ರೀಕೃತವಾಗಿವೆ. ಅರ್ಜೆಂಟೀನಾ, ಬೊಲಿವಿಯಾ ಮತ್ತು ಚಿಲಿ. ಹೀಗಾಗಿ, ಈ ಲಿಥಿಯಂ ನಿಕ್ಷೇಪಗಳನ್ನು ಪಡೆದುಕೊಳ್ಳುವುದು ಭಾರತಕ್ಕೆ ದೊಡ್ಡ ವಿಚಾರವಾಗಲಿದೆ. ಗುರುವಾರ ನಡೆದ ಸೆಂಟ್ರಲ್ ಜಿಯೋಲಾಜಿಕಲ್ ಪ್ರೋಗ್ರಾಮಿಂಗ್ ಬೋರ್ಡ್ ಸಭೆಯಲ್ಲಿ ಮಾತನಾಡಿದ ಗಣಿ ಕಾರ್ಯದರ್ಶಿ ವಿವೇಕ್ ಭಾರದ್ವಾಜ್, ಮೊಬೈಲ್ ಫೋನ್ ಆಗಿರಲಿ, ಸೋಲಾರ್ ಪ್ಯಾನೆಲ್ ಆಗಿರಲಿ, ಎಲ್ಲೆಡೆ ನಿರ್ಣಾಯಕ ಖನಿಜಗಳು ಬೇಕು. ಸ್ವಾವಲಂಬಿಯಾಗಲು, ದೇಶವು ನಿರ್ಣಾಯಕ ಖನಿಜಗಳನ್ನು ಕಂಡುಹಿಡಿಯುವುದು ಮತ್ತು ಅದನ್ನು ಸಂಸ್ಕರಿಸುವುದು ಬಹಳ ಮುಖ್ಯ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts