More

    ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿ ಕ್ರಿಕೆಟ್ ಬದುಕಿನ ಪುಸ್ತಕದಲ್ಲಿ ಏನೇನು ಬರೆಯುತ್ತಿದ್ದಾರೆ ಗೊತ್ತೇ?

    ನವದೆಹಲಿ: ಕ್ರಿಕೆಟಿಗ, ವೀಕ್ಷಕವಿವರಣೆಕಾರ ಮತ್ತು ಟೀಮ್ ಇಂಡಿಯಾದ ಕೋಚ್ ಆಗಿ ಕಳೆದ 4 ದಶಕಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಸೇವೆ ಸಲ್ಲಿಸುತ್ತಿರುವ ರವಿಶಾಸ್ತ್ರಿ, ತಮ್ಮ ಅನುಭವಗಳನ್ನು ಇದೀಗ ಪುಸ್ತಕದಲ್ಲಿ ಹಂಚಿಕೊಳ್ಳಲು ಮುಂದಾಗಿದ್ದಾರೆ. ಕ್ರಿಕೆಟ್ ಬದುಕಿನಲ್ಲಿ ತಾವು ಕಂಡ ಹಲವು ಪ್ರತಿಭಾನ್ವಿತ ಮತ್ತು ದಿಗ್ಗಜ ಆಟಗಾರರ ಬಗ್ಗೆಯೂ ರವಿಶಾಸ್ತ್ರಿ ಈ ಪುಸ್ತಕದಲ್ಲಿ ಬರೆಯಲಿದ್ದಾರೆ. ಅಲ್ಲದೆ ಹಿಂದೆಂದೂ ಹಂಚಿಕೊಳ್ಳದಿರುವ ಕೆಲವು ಸ್ವಾರಸ್ಯಕರ ಘಟನೆ ಮತ್ತು ಒಳನೋಟಗಳನ್ನೂ ಬರೆಯಲಿದ್ದಾರೆ.

    ಖ್ಯಾತ ಕ್ರೀಡಾ ಪತ್ರಕರ್ತ ಅಯಜ್ ಮೆಮೊನ್ ಜತೆಗೂಡಿ ರವಿಶಾಸ್ತ್ರಿ ಅವರು ಈ ಪುಸ್ತಕವನ್ನು ಬರೆಯುತ್ತಿದ್ದು, ಶಿವ ರಾವ್ ಅವರು ಇದಕ್ಕೆ ರೇಖಾಚಿತ್ರಗಳನ್ನು ನೀಡಲಿದ್ದಾರೆ. ಈ ಪುಸ್ತಕ ಶೀಘ್ರದಲ್ಲಿಯೇ ಬಿಡುಗಡೆಯಾಗುವ ನಿರೀಕ್ಷೆ ಇದೆ.

    ಇದನ್ನೂ ಓದಿ: ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಸವಾಲಿನ ಗುರಿ ನೀಡಿದ ಆಸೀಸ್

    ‘ಕ್ರಿಕೆಟ್ ಆಟವನ್ನು ಆಡಿರುವ ಹಲವು ದಿಗ್ಗಜ ಆಟಗಾರರ ಜತೆ, ವಿರುದ್ಧ ಆಡಿರುವ, ಅವರ ಆಟಕ್ಕೆ ವೀಕ್ಷಕವಿವರಣೆ ನೀಡಿರುವ ಮತ್ತು ಈಗ ತರಬೇತಿ ನೀಡುತ್ತಿರುವ ಭಾಗ್ಯ ನನ್ನದಾಗಿದೆ. ಇದೀಗ ನನ್ನ ಈ ಅನುಭವಗಳನ್ನು ಹಂಚಿಕೊಳ್ಳಲು ಉತ್ಸುಕನಾಗಿರುವೆ. ಕ್ರಿಕೆಟ್ ಜತೆಗಿನ ನನ್ನ ಬದುಕಿನ ಅನುಭವಗಳನ್ನು ಪುಸ್ತಕದಲ್ಲಿ ಹಂಚಿಕೊಳ್ಳಲಿದ್ದೇನೆ’ ಎಂದು ಕರ್ನಾಟಕ ಮೂಲದ ಮುಂಬೈನ ಮಾಜಿ ಆಲ್ರೌಂಡರ್ ರವಿಶಾಸ್ತ್ರಿ ಹೇಳಿದ್ದಾರೆ.

    ಸುನೀಲ್ ಗಾವಸ್ಕರ್, ವಿವ್ ರಿಚರ್ಡ್ಸ್, ಇಮ್ರಾನ್ ಖಾನ್, ಇಯಾನ್ ಬಾಥಂ, ರಿಕಿ ಪಾಂಟಿಂಗ್, ಸಚಿನ್ ತೆಂಡುಲ್ಕರ್, ಮುತ್ತಯ್ಯ ಮುರಳೀಧರನ್ ಮುಂತಾದವರ ಜತೆ-ವಿರುದ್ಧ ಆಡಿದ್ದ ರವಿಶಾಸ್ತ್ರಿ, ಬಳಿಕ ವೀಕ್ಷಕವಿವರಣೆಕಾರರಾಗಿ ಯುವರಾಜ್ ಸಿಂಗ್, ಎಂಎಸ್ ಧೋನಿ, ವಿರಾಟ್ ಕೊಹ್ಲಿ ಮುಂತಾದ ತಾರೆಯರ ಬೆಳವಣಿಗೆ, ಸಾಧನೆಗಳನ್ನು ಕಂಡಿದ್ದರು. ಬಳಿಕ ಭಾರತ ತಂಡದ ಕೋಚ್ ಆಗಿಯೂ ಹಲವು ಪ್ರಮುಖ ಆಟಗಾರರಿಗೆ ಮಾರ್ಗದರ್ಶನ ನೀಡಿದ್ದಾರೆ.

    ಇದನ್ನೂ ಓದಿ: ಆಸ್ಪತ್ರೆಯ ಬೆಡ್‌ನಿಂದಲೇ ಐಪಿಎಲ್ ಸಭೆಯಲ್ಲಿ ಪಾಲ್ಗೊಂಡಿದ್ದ ಸೌರವ್ ಗಂಗೂಲಿ!

    36 ವರ್ಷಗಳ ಹಿಂದೆ 1985ರಲ್ಲಿ ರಣಜಿ ಟ್ರೋಫಿ ಪಂದ್ಯದಲ್ಲಿ ಆಗಿನ ಬಾಂಬೆ ತಂಡದ ಪರ ಬರೋಡದ ತಿಲಕ್ ರಾಜ್ ಓವರ್‌ನಲ್ಲಿ 6 ಸಿಕ್ಸರ್ ಸಿಡಿಸಿ ದಾಖಲೆ ನಿರ್ಮಿಸಿದ್ದ ರವಿಶಾಸ್ತ್ರಿ ಬಳಿಕ 2007ರ ಟಿ20 ವಿಶ್ವಕಪ್‌ನಲ್ಲಿ ಯುವರಾಜ್ ಸಿಂಗ್ ಇಂಗ್ಲೆಂಡ್ ಬೌಲರ್ ಸ್ಟುವರ್ಟ್ ಬ್ರಾಡ್ ಓವರ್‌ನಲ್ಲಿ 6 ಸಿಕ್ಸರ್ ಸಿಡಿಸಿದಾಗ ಕಾಮೆಂಟರಿ ಬಾಕ್ಸ್‌ನಲ್ಲಿದ್ದರು. ಆ ಕ್ಷಣಕ್ಕೆ ಅದ್ಭುತವಾದ ವೀಕ್ಷಕವಿವರಣೆಯನ್ನೂ ರವಿಶಾಸ್ತ್ರಿ ನೀಡಿದ್ದರು.

    ಯುವರಾಜ್ ಸಿಂಗ್ ವೃತ್ತಿಜೀವನದ ಬೆಳವಣಿಗೆಗಳ ಬಗ್ಗೆ ಅವರಿಗೆ ಏನನ್ನಿಸಿತ್ತು, ಎಂಎಸ್ ಧೋನಿ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದಾಗ ಅವರಿಗೆ ಹೇಳಬೇಕೆಂದು ಬಯಸಿದ್ದರೂ, ಹೇಳದೆ ಬಾಕಿ ಉಳಿಸಿದ್ದನ್ನು, ವಿರಾಟ್ ಕೊಹ್ಲಿ ಜತೆಗಿನ ಅವರ ವಿಶೇಷ ಬಾಂಧವ್ಯ ಮತ್ತು ಕೋಚ್ ಆಗಿ ನಿಭಾಯಿಸಿದ ಪಾತ್ರವನ್ನು 58 ವರ್ಷದ ರವಿಶಾಸ್ತ್ರಿ ಪುಸ್ತಕದಲ್ಲಿ ಹಂಚಿಕೊಳ್ಳಲಿದ್ದಾರೆ.

    ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಶುಭಾರಂಭ ಕಂಡ ಕರ್ನಾಟಕ ತಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts