More

    ಇಂದು ರಾಂಚಿಯಲ್ಲಿ ಕಿವೀಸ್ ವಿರುದ್ಧ 2ನೇ ಟಿ20, ಭಾರತಕ್ಕೆ ಸರಣಿ ಗೆಲುವಿನ ಗುರಿ

    ರಾಂಚಿ: ರಾಹುಲ್ ದ್ರಾವಿಡ್-ರೋಹಿತ್ ಶರ್ಮ ಅವರ ಕೋಚ್-ಕ್ಯಾಪ್ಟನ್ ಕಾಂಬಿನೇಷನ್‌ನ ಮೊದಲ ಪಂದ್ಯದಲ್ಲಿ ಗೆದ್ದು ಶುಭಾರಂಭ ಕಂಡಿರುವ ಟೀಮ್ ಇಂಡಿಯಾ, ಇದೀಗ ಸರಣಿ ಗೆಲುವಿನೊಂದಿಗೆ ಈ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಲು ಸಜ್ಜಾಗಿದೆ. ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಭಾರತ ತಂಡ ಶುಕ್ರವಾರ 2ನೇ ಟಿ20 ಪಂದ್ಯ ಆಡಲಿದ್ದು, 2-0 ಮುನ್ನಡೆಯೊಂದಿಗೆ ಸರಣಿ ವಶಪಡಿಸಿಕೊಳ್ಳುವ ಹಂಬಲದಲ್ಲಿದೆ.

    ಟೀಮ್ ಇಂಡಿಯಾ ಕೋಚ್ ಆಗಿ ದಿಗ್ಗಜ ರಾಹುಲ್ ದ್ರಾವಿಡ್ ಮೊದಲ ಪಂದ್ಯದಲ್ಲೇ ಯಶಸ್ಸು ಕಂಡಿದ್ದರೂ, ಇದಕ್ಕಾಗಿ ಕೊನೇ ಓವರ್‌ವರೆಗೂ ಆಟಗಾರರು ಕಷ್ಟಪಡಬೇಕಾಗಿ ಬಂದಿದ್ದು ಅವರಿಗೆ ಸಮಾಧಾನ ತಂದಿರಲಿಕ್ಕಿಲ್ಲ. ಸುಲಭವಾಗಿ ಗೆಲ್ಲಬಹುದಾದ ಪಂದ್ಯದಲ್ಲಿ ಕೊನೇ ಓವರ್‌ನಲ್ಲಿ ಕೆಲ ಆತಂಕದ ಕ್ಷಣಗಳೂ ಎದುರಾದವು. ಹೀಗಾಗಿ ಮಧ್ಯಮ ಕ್ರಮಾಂಕದ ಸುಧಾರಣೆಯತ್ತ ಅವರು ಈ ಬಾರಿ ಗಮನಹರಿಸಲಿದ್ದಾರೆ. ಸಂಘಟಿತ ಬೌಲಿಂಗ್ ಮತ್ತು ಅಗ್ರ ಕ್ರಮಾಂಕದ ಬ್ಯಾಟಿಂಗ್ ಉತ್ತಮವಾಗಿತ್ತು.

    ಜೈಪುರದಲ್ಲಿ ವಿರಾಟ್ ಕೊಹ್ಲಿ ಗೈರು ಕಾಡದಂತೆ ಸೂರ್ಯಕುಮಾರ್ ಯಾದವ್ 3ನೇ ಕ್ರಮಾಂಕದಲ್ಲಿ ತಂಡಕ್ಕೆ ಸಮರ್ಥ ಆಸರೆ ಒದಗಿಸಿದರು. ರೋಹಿತ್-ಸೂರ್ಯ ಜತೆಯಾಟ ತಂಡಕ್ಕೆ ಸುಲಭ ಗೆಲುವಿನ ನಿರೀಕ್ಷೆ ಮೂಡಿಸಿತ್ತು. ಆದರೆ ಸ್ಲಾಗ್ ಓವರ್‌ಗಳಲ್ಲಿ ರಿಷಭ್ ಪಂತ್-ಶ್ರೇಯಸ್ ಅಯ್ಯರ್ ಕೆಲ ಎಸೆತಗಳನ್ನು ವ್ಯರ್ಥಗೊಳಿಸಿದ್ದು, ಕೊನೇ ಓವರ್‌ನಲ್ಲಿ 10 ರನ್ ಗಳಿಸುವ ಕಠಿಣ ಸವಾಲು ಎದುರಾಗುವಂತೆ ಮಾಡಿತ್ತು. ಕಿವೀಸ್‌ಗೆ ತಜ್ಞ ಬೌಲರ್ ಕೊರತೆ ಕಾಡಿರದಿದ್ದರೆ ಗೆಲುವು ಕೈತಪ್ಪುವ ಅಪಾಯವೂ ಎದುರಾಗಿತ್ತು.

    ಬೌಲಿಂಗ್ ವಿಭಾಗದಲ್ಲಿ ಆರ್. ಅಶ್ವಿನ್ ಮತ್ತು ಭುವನೇಶ್ವರ್ ಅವರು ಅನುಭವ ಭಾರತಕ್ಕೆ ನೆರವಾಗಿತ್ತು. ಕೊನೇ 5 ಓವರ್‌ಗಳಲ್ಲಿ 3 ವಿಕೆಟ್ ಕಬಳಿಸಿ 41 ರನ್ ಮಾತ್ರ ಬಿಟ್ಟುಕೊಟ್ಟಿದ್ದು ಕೂಡ ಕಿವೀಸ್ 180ರ ಗಡಿ ದಾಟುವುದನ್ನು ತಪ್ಪಿಸಿತ್ತು.

    ತಿರುಗೇಟು ನೀಡುತ್ತಾ ಕಿವೀಸ್?
    ಟಿ20 ವಿಶ್ವಕಪ್ ರನ್ನರ್‌ಅಪ್ ಕಿವೀಸ್ ತಂಡ ಸೋಲಿನ ನಡುವೆಯೂ ಕೆಲ ಸಕಾರಾತ್ಮಕ ಅಂಶಗಳನ್ನು ಕಂಡಿದೆ. ಬ್ಯಾಟ್ಸ್‌ಮನ್ ಮಾರ್ಕ್ ಚಾಪ್‌ಮನ್ 7 ತಿಂಗಳ ಬಳಿಕ ಪಡೆದ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದರೆ, ಟಿಮ್ ಸೌಥಿ ಸಾರಥ್ಯದಲ್ಲಿ ಬೌಲರ್‌ಗಳು ತೋರಿದ ನಿರ್ವಹಣೆಯೂ ಸದೃಢವಾಗಿತ್ತು. ಇಶ್ ಸೋಧಿ, ಜೇಮ್ಸ್ ನೀಶಾಮ್‌ಗೆ ವಿಶ್ರಾಂತಿ ನೀಡಿದ ನಡುವೆಯೂ ಮೊತ್ತವನ್ನು ರಕ್ಷಿಸಿಕೊಳ್ಳಲು ಕೊನೇ ಓವರ್‌ವರೆಗೆ ಪಂದ್ಯವನ್ನು ವಿಸ್ತರಿಸಿದ್ದು, ಸ್ಫೂರ್ತಿ ತುಂಬುವಂಥದ್ದಾಗಿದೆ.

    *ಆರಂಭ: ರಾತ್ರಿ 7.00
    *ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

    ಟಾಸ್ ನಿರ್ಣಾಯಕ
    ರಾಂಚಿಯ ಜೆಎಸ್‌ಸಿಎ ಸ್ಟೇಡಿಯಂನಲ್ಲಿ ರನ್‌ಪ್ರವಾಹ ಹರಿಯುವ ನಿರೀಕ್ಷೆ ಇದೆ. ಜತೆಗೆ ಭಾರಿ ಇಬ್ಬನಿಯ ಸಮಸ್ಯೆಯಿಂದಾಗಿ ಟಾಸ್ ನಿರ್ಣಾಯಕ ಪಾತ್ರ ವಹಿಸಲಿದೆ. ಟಾಸ್ ಗೆದ್ದ ತಂಡ ಎಂದಿನಂತೆ ಫೀಲ್ಡಿಂಗ್ ಆಯ್ದುಕೊಂಡರೆ ಅರ್ಧ ಪಂದ್ಯ ಗೆದ್ದಂತೆ.

    ಶೇ. 100 ಪ್ರೇಕ್ಷಕರು
    ಪಂದ್ಯಕ್ಕೆ ಶೇ. 100 ಪ್ರೇಕ್ಷಕರು ಹಾಜರಾಗಲು ಜಾರ್ಖಂಡ್ ಸರ್ಕಾರ ಅನುಮತಿ ನೀಡಿದೆ. ಇದರಿಂದ, 39 ಸಾವಿರ ಪ್ರೇಕ್ಷಕ ಸಾಮರ್ಥ್ಯದ ಜೆಎಸ್‌ಸಿಎ ಸ್ಟೇಡಿಯಂ ಭರ್ತಿಯಾಗುವ ನಿರೀಕ್ಷೆ ಇದೆ. ಆದರೆ ಪಂದ್ಯ ವೀಕ್ಷಿಸಲು ಕೋವಿಡ್ ಲಸಿಕೆಯ ಡೋಸ್ ಅಥವಾ ಆರ್‌ಟಿ-ಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿ ಸಲ್ಲಿಸುವುದು ಕಡ್ಡಾಯವಾಗಿದೆ.

    2: ಭಾರತ ತಂಡ ರಾಂಚಿಯಲ್ಲಿ ಇದುವರೆಗೆ 2 ಟಿ20 ಪಂದ್ಯ (ಆಸೀಸ್, ಲಂಕಾ ವಿರುದ್ಧ) ಆಡಿದ್ದು, ಎರಡರಲ್ಲೂ ಜಯಿಸಿದೆ.

    ಟೀಮ್ ನ್ಯೂಸ್:

    ಭಾರತ: ಕಿವೀಸ್ ಇನಿಂಗ್ಸ್‌ನ ಕೊನೇ ಓವರ್‌ನಲ್ಲಿ ಸ್ಯಾಂಟ್ನರ್ ಬಾರಿಸಿದ ಚೆಂಡು ತಡೆಯುವ ಪ್ರಯತ್ನದಲ್ಲಿ ಮೊಹಮದ್ ಸಿರಾಜ್ ಎಡಗೈಗೆ ಗಾಯವಾಗಿ ರಕ್ತವೂ ಸುರಿದಿತ್ತು. ಹೀಗಾಗಿ ಅವರು ಅಲಭ್ಯರಾದರೆ ಐಪಿಎಲ್ ಹೀರೋಗಳಾದ ಹರ್ಷಲ್ ಪಟೇಲ್ ಅಥವಾ ಆವೇಶ್ ಖಾನ್ ಕಣಕ್ಕಿಳಿಯಬಹುದು. ಸ್ಪಿನ್ ಬಲ ಹೆಚ್ಚಿಸಲು ಯಜುವೇಂದ್ರ ಚಾಹಲ್ ಕಣಕ್ಕಿಳಿದರೂ ಅಚ್ಚರಿ ಇಲ್ಲ.

    ನ್ಯೂಜಿಲೆಂಡ್: ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ನ್ಯೂಜಿಲೆಂಡ್ ತಂಡ ಭಾರತ ವಿರುದ್ಧದ ಟಿ20 ಸರಣಿಯಲ್ಲಿ ಆವರ್ತನ ನಾಯಕತ್ವ ಪದ್ಧತಿ ಅಳವಡಿಸಿಕೊಳ್ಳಲು ಚಿಂತಿಸಿದೆ. ಇದರಿಂದಾಗಿ ಟಿ20 ಸರಣಿಯ 3 ಪಂದ್ಯಗಳಲ್ಲೂ ಭಿನ್ನ ನಾಯಕರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಟಿಮ್ ಸೌಥಿ ಮೊದಲ ಟಿ20 ಪಂದ್ಯಕ್ಕೆ ಮಾತ್ರ ನಾಯಕರಾಗಿದ್ದರೆ, ಉಳಿದೆರಡು ಪಂದ್ಯಗಳಲ್ಲಿ ವೇಗಿ ಟ್ರೆಂಟ್ ಬೌಲ್ಟ್ ಮತ್ತು ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ನಾಯಕತ್ವ ನಿರ್ವಹಿಸುವ ನಿರೀಕ್ಷೆ ಇದೆ. ಟಿಮ್ ಸೌಥಿಗೆ ಕೊನೇ 2 ಟಿ20 ಪಂದ್ಯಗಳಿಂದ ವಿಶ್ರಾಂತಿ ನೀಡಲಾಗುತ್ತದೆ ಎನ್ನಲಾಗಿದೆ. ಸರಣಿ ಜೀವಂತವಿಡುವ ದೃಷ್ಟಿಯಿಂದ ಜೇಮ್ಸ್ ನೀಶಾಮ್​ ಮತ್ತು ಇಶ್​ ಸೋಧಿ ತಂಡಕ್ಕೆ ಮರಳುವ ನಿರೀಕ್ಷೆಯೂ ಇದೆ.

    ಪ್ರೇಕ್ಷಕರ ಗ್ಯಾಲರಿಯಲ್ಲಿ ಧೋನಿ?
    ಮಾಜಿ ನಾಯಕ ಎಂಎಸ್ ಧೋನಿ ತವರೂರು ರಾಂಚಿಯಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಪ್ರೇಕ್ಷಕರಾಗಿ ಹಾಜರಾಗುವ ಸಾಧ್ಯತೆ ಇದೆ. ಇತ್ತೀಚೆಗೆ ಟಿ20 ವಿಶ್ವಕಪ್ ವೇಳೆ ಅವರು ಭಾರತ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸಿದ್ದರು.

    *ಮೊದಲ ಟಿ20 ಪಂದ್ಯದಲ್ಲಿ ನಾವು ನಿರೀಕ್ಷಿಸಿದಷ್ಟು ಸುಲಭವಾಗಿ ಗೆಲುವು ಸಿಗಲಿಲ್ಲ. ತಂಡಕ್ಕೆ ಉತ್ತಮ ಕಲಿಕೆಯ ಅನುಭವವನ್ನು ಈ ಪಂದ್ಯ ಒದಗಿಸಿದೆ.
    |ರೋಹಿತ್ ಶರ್ಮ, ಟಿ20 ನಾಯಕ

    *ದ್ರಾವಿಡ್ ಅವರ ಕೋಚಿಂಗ್ ಶೈಲಿಯ ಬಗ್ಗೆ ಇಷ್ಟು ಬೇಗನೆ ನನ್ನ ಅಭಿಪ್ರಾಯವನ್ನು ತಿಳಿಸಲಾಗದು. ಆದರೆ ಅವರು ಡ್ರೆಸ್ಸಿಂಗ್ ರೂಂನಲ್ಲಿ ಸಂತಸದ ದಿನಗಳನ್ನು ತರುವ ವಿಶ್ವಾಸವಿದೆ. ಸಿದ್ಧತೆ ಮತ್ತು ಅದರ ಪ್ರಕ್ರಿಯೆಗೆ ಹೆಚ್ಚಿನ ಒತ್ತು ನೀಡುತ್ತಾರೆ.
    | ಆರ್. ಅಶ್ವಿನ್, ಸ್ಪಿನ್ನರ್

    *ನಾನು 1ರಿಂದ 7ನೇ ಕ್ರಮಾಂಕದವರೆಗೆ ಬ್ಯಾಟಿಂಗ್ ಮಾಡಿರುವೆ. ಯಾವುದೇ ಕ್ರಮಾಂಕದಲ್ಲಿ ಆಡಲು ಸಿದ್ಧನಿರುವೆ. ಕಳೆದ 3 ವರ್ಷಗಳಿಂದ ಮುಂಬೈ ಇಂಡಿಯನ್ಸ್ ಪರ 3ನೇ ಕ್ರಮಾಂಕದಲ್ಲೇ ಆಡುತ್ತಿರುವೆ. ಇಲ್ಲೂ ಅದೇ ರೀತಿಯ ಆಟವಾಡಿದೆ.
    | ಸೂರ್ಯಕುಮಾರ್ ಯಾದವ್

    VIDEO: ಮೊದಲ ಟಿ20 ಪಂದ್ಯದ ವೇಳೆ ಗುಪ್ಟಿಲ್-ದೀಪಕ್ ಚಹರ್ ದೃಷ್ಟಿಯುದ್ಧ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts