More

    2021ರಲ್ಲೂ ಚೀನಿ ಸೈನಿಕರನ್ನು ಹಿಮ್ಮೆಟ್ಟಿಸಿದ್ದ ಭಾರತ ಸೇನೆ: ಹೊಸ ಉದ್ವಿಗ್ನತೆ ನಡುವೆ ಹಳೇ ವಿಡಿಯೋ ಬಹಿರಂಗ

    ನವದೆಹಲಿ: ಭಾರತ-ಚೀನಾ ನಡುವೆ ಹೊಸದಾಗಿ ಗಡಿ ಸಂಘರ್ಷ ತಲೆಯೆತ್ತಿರುವ ನಡುವೆ, 2021ರಲ್ಲಿ ಅತಿಕ್ರಮಣಕ್ಕೆ ಯತ್ನಿಸಿದ್ದ ಚೀನಿ ಪಡೆಗಳನ್ನು ಭಾರತೀಯ ಯೋಧರು ದಿಟ್ಟತನದಿಂದ ಹಿಮ್ಮೆಟ್ಟಿಸಿದ್ದ ವಿಡಿಯೋ ದೃಶ್ಯ ಬಹಿರಂಗವಾಗಿದೆ. ವಾಸ್ತವ ನಿಯಂತ್ರಣ ರೇಖೆಯ (ಎಲ್​ಎಸಿ) ಯಾಂಗ್​ತ್ಸೆ ಸೆಕ್ಟರ್ ಬಳಿ ನಡೆದಿದ್ದ ಘಟನೆಯ ದೃಶ್ಯ ಇದೆಂದು ಹೇಳಲಾಗಿದೆ. 2020ರ ಜೂನ್​ನಲ್ಲಿ ಪೂರ್ವ ಲಡಾಖ್​ನ ಗಲ್ವಾನ್ ಕಣಿವೆಯಲ್ಲಿ ಉಭಯ ಕಡೆಗಳ ನಡುವೆ ನಡೆದ ಭೀಷಣ ಘರ್ಷಣೆಯ ನಂತರ ಈ ಪ್ರಕರಣ ನಡೆದಿತ್ತು ಎನ್ನಲಾಗಿದೆ. ಈ ವಿಡಿಯೋ ಡಿ. 9ರ ಘಟನೆಯದ್ದಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

    ಭಾರತದ ಭಾಗವಾಗಿರುವ ಇಳಿಜಾರು ಪ್ರದೇಶವನ್ನು ಚೀನಿ ಸೈನಿಕರ ಅತಿಕ್ರಮಣ ಯತ್ನವನ್ನು ಭಾರತೀಯ ಯೋಧರು ಯಶಸ್ವಿಯಾಗಿ ವಿಫಲಗೊಳಿಸಿದ್ದನ್ನು ಈ ವಿಡಿಯೋ ತೋರಿಸುತ್ತದೆ. ಭಾರತೀಯ ಸೈನಿಕರು ಕೆಚ್ಚೆದೆಯಿಂದ ಹೋರಾಡಿ ಚೀನಿಯರನ್ನು ಸದೆಬಡಿದಿದ್ದು ಈ ದೃಶ್ಯದಲ್ಲಿ ಕಾಣಿಸುತ್ತದೆ. ‘ಅವರನ್ನು ಗಟ್ಟಿಯಾಗಿ ಹೊಡಿ. ಅವರು ಮತ್ತೆ ಬರುವುದಿಲ್ಲ’, ‘ಅವರನ್ನು ಅಟ್ಟಿಸಿಕೊಂಡು ಹೋಗು’ ಎಂದು ಯೋಧರು ಪಂಜಾಬಿ ಭಾಷೆಯಲ್ಲಿ ಕೂಗುತ್ತಿರುವುದು ವಿಡಿಯೋದಲ್ಲಿ ಇದೆ.

    1990ರ ದಶಕದಿಂದ: ತವಾಂಗ್​ನ ಯಾಂಗ್​ತ್ಸೆ ಪ್ರದೇಶವನ್ನು ಅತಿಕ್ರಮಿಸಲು ಚೀನಾ 1990ರ ದಶಕದ ಅಂತ್ಯ ಭಾಗದಿಂದಲೂ ಪ್ರಯತ್ನಿಸುತ್ತಿದ್ದು, ಚಳಿಗಾಲಕ್ಕೆ ಮುಂಚೆ ಹಾಗೂ ನಂತರ, ಅಂದರೆ ವರ್ಷಕ್ಕೆರಡು ಬಾರಿ ಇಂಥ ಮುಖಾಮುಖಿ ಸಂಘರ್ಷ ನಡೆಯುವುದು ಸಾಮಾನ್ಯವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಯಾಂಗ್​ತ್ಸೆ ಬಳಿ ಚೀನಾದ ಗಸ್ತು ತೀವ್ರಗೊಂಡಿದ್ದು 200ರಷ್ಟು ಸೈನಿಕರು ಮೊಳೆಗಳನ್ನು ಚುಚ್ಚಿರುವ ದೊಣ್ಣೆಗಳು ಮತ್ತು ಟೇಸರ್ ಗನ್ ಸಜ್ಜಿತರಾಗಿ ಬರುತ್ತಿದ್ದಾರೆ. ಕಳೆದ ವರ್ಷ ಅಕ್ಟೋಬರ್​ನಲ್ಲಿ ಕೂಡ ಯಾಂಗ್​ತ್ಸೆಯಲ್ಲಿ ಎಲ್​ಎಸಿಯಲ್ಲಿ ಎರಡೂ ಕಡೆಗಳ ನಡುವೆ ಭಾರಿ ಕಾಳಗ ನಡೆದಿತ್ತು. ಚೀನಿ ಯೋಧರನ್ನು ಸ್ವಲ್ಪ ಸಮಯ ಬಂಧಿಸಿಟ್ಟು ಕೊಳ್ಳಲಾಗಿತ್ತು.

    ಸಂಸತ್​ನಲ್ಲಿ ಎರಡನೇ ದಿನವೂ ಗದ್ದಲ: ತವಾಂಗ್​ನಲ್ಲಿ ಇತ್ತೀಚಿನ ಚೀನಿ ಅತಿಕ್ರಮಣದ ಬಗ್ಗೆ ಚರ್ಚೆಗೆ ಅವಕಾಶ ನೀಡದ್ದನ್ನು ಪ್ರತಿಭಟಿಸಿ ವಿರೋಧ ಪಕ್ಷಗಳು ಬುಧವಾರ ಸಂಸತ್​ನಲ್ಲಿ ಸಭಾತ್ಯಾಗ ಮಾಡಿದವು. ಯಾವುದೇ ನೋಟಿಸ್ ಬಾರದಿರುವುದರಿಂದ ಈ ವಿಷಯದಲ್ಲಿ ಚರ್ಚೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ರಾಜ್ಯಸಭೆಯ ಉಪಾಧ್ಯಕ್ಷ ಹರಿವಂಶ್ ನೀಡಿದ ರೂಲಿಂಗ್​ನಿಂದ ಕೆರಳಿದ ವಿಪಕ್ಷ ಸದಸ್ಯರು ಸದನದಿಂದ ಹೊರ ನಡೆದರು. ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿ ಮುಗಿದ ನಂತರ ಪ್ರತಿಪಕ್ಷಗಳು ಎಲ್​ಎಸಿ ವಿಷಯವನ್ನು ಚರ್ಚೆ ಕೈಗೆತ್ತಿಕೊಳ್ಳಲು ಆಗ್ರಹಿಸಿದವು. ಈ ವಿಷಯವನ್ನು ಸದನದ ಕಲಾಪ ಸಲಹಾ ಸಮಿತಿಯಲ್ಲಿ ನಿರ್ಧರಿಸುವುದಾಗಿ ಹೇಳಿದ ಸ್ಪೀಕರ್ ಓಂ ಬಿರ್ಲಾ, ಚರ್ಚೆಗೆ ಅವಕಾಶ ನೀಡಲಿಲ್ಲ. ಆಗ ಪ್ರತಿಪಕ್ಷಗಳ ಸದಸ್ಯರು ಘೋಷಣೆ ಕೂಗಿ ಸದನದಿಂದ ಹೊರನಡೆದರು.

    ಅಮೆರಿಕ ನಿಲುವು: ಡಿಸೆಂಬರ್ 9ರಂದು ತವಾಂಗ್ ಸೆಕ್ಟರ್​ನಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ನಡೆದ ನಂತರ ಉಭಯ ಕಡೆಗಳವರು ಹಿಂದೆ ಸರಿದಿದ್ದು ಒಳ್ಳೆಯ ವಿಚಾರ ಎಂದು ಅಮೆರಿಕ ಸರ್ಕಾರ ಹೇಳಿದೆ. ಈ ವಿದ್ಯಮಾನವನ್ನು ನಿಕಟವಾಗಿ ಪರಿಶೀಲಿಸಲಾಗುತ್ತಿದೆ ಎಂದು ಶ್ವೇತ ಭವನ ತಿಳಿಸಿದೆ.

    ತ್ರಿವಳಿ ಜಂಕ್ಷನ್​ನಿಂದ ಅಪಾಯ: ಭಾರತಕ್ಕೆ ಸಾಮಾನ್ಯವಾಗಿ ತ್ರಿವಳಿ ಜಂಕ್ಷನ್​ಗಳಿಂದ, ಅಂದರೆ ನೇಪಾಳ-ಟಿಬೆಟ್ ಗಡಿಯಲ್ಲಿರುವ ತವಾಂಗ್ ಮತ್ತು ಚುಂಬಿ ಕಣಿವೆ ಹಾಗೂ ಚೀನಾ-ಭೂತಾನ್ ಜಂಕ್ಷನ್ ಡೋಕ್ಲಾಂನಿಂದ ಅಪಾಯ ಎದುರಾಗುತ್ತಿದೆ.

    ಹೊಸ ಮಿಲಿಟರಿ ಕ್ಯಾಂಪ್: ಅರುಣಾಚಲ ಪ್ರದೇಶ ಗಡಿಯಲ್ಲಿ ಚೀನಿ ಅತಿಕ್ರಮಣ ಯತ್ನದಿಂದ ಬಿಗುವು ಹೆಚ್ಚಿರುವ ಸಮಯದಲ್ಲೇ ಲಡಾಖ್​ನಲ್ಲಿ ಕಾರ್ಯತಂತ್ರಾತ್ಮಕವಾಗಿ ಮಹತ್ವದ್ದಾದ ಪ್ಯಾಂಗಾಂಗ್ ತ್ಸೊ ಸರೋವರದ ಬಳಿಯ ಖುರ್ನಾಕ್ ಕೋಟೆಯ ಸಮೀಪ ಚೀನಾ ಹೊಸ ಮಿಲಿಟರಿ ನೆಲೆಯೊಂದನ್ನು ನಿರ್ವಿುಸಿರುವುದು ಬೆಳಕಿಗೆ ಬಂದಿದೆ. ಈ ಪ್ರದೇಶದಲ್ಲಿ ಪೂರ್ಣ ಪ್ರಮಾಣದ ಮಿಲಿಟರಿ ಮೂಲಸೌಕರ್ಯ ಕಟ್ಟಿರುವುದು ಉಪಗ್ರಹ ಚಿತ್ರಗಳಿಂದ ದೃಢಪಟ್ಟಿದೆ. 2020ರ ಜೂನ್ 15ರಿಂದ 2022 ಅಕ್ಟೋಬರ್ 24 ವರೆಗಿನ ಉಪಗ್ರಹ ಚಿತ್ರಗಳ ತುಲನೆ ಮಾಡಿದಾಗ ಆಘಾತಕಾರಿಯಾದ ಅಂಶ ಬಯಲಾಗಿದೆ. ಈ ಹೊಸ ನೆಲೆಯಲ್ಲಿ ಆಧುನಿಕ ವೈಮಾನಿಕ ರಕ್ಷಣಾ ವ್ಯವಸ್ಥೆ ಕೂಡ ಒಂದು ಚಿಕ್ಕ ಲ್ಯಾಂಡಿಂಗ್ ಗ್ರೌಂಡ್, ಬ್ಯಾಲಿಸ್ಟಿಕ್ ಶೆಲ್ಟರ್ ಇರುವುದು ಚಿತ್ರದಲ್ಲಿ ಕಾಣಿಸುತ್ತದೆ. ಕೆಲವು ಟ್ಯಾಂಕ್​ಗಳು ಮತ್ತು ಯುದ್ಧ ವಿಮಾನಗಳು ಕೂಡ ಕಾಣಿಸಿವೆ. ಇಷ್ಟು ಮಾತ್ರವಲ್ಲದೆ, ತ್ವರಿತ ಓಡಾಟಕ್ಕಾಗಿ ಚೀನಾ ಎರಡು ಸೇತುವೆಗಳನ್ನು ಕೂಡ ನಿರ್ವಿುಸಿರುವುದು ತಿಳಿದು ಬಂದಿದೆ. ಈ ಮಧ್ಯೆ, ಯಾಂಗ್​ತ್ಸೆ ಬಳಿಯ ಜಲಪಾತದ ಸಮೀಪ ವೀಕ್ಷಣಾ ಪಾಯಿಂಟ್ ನಿರ್ಮಾಣ ಸೇರಿದಂತೆ 13 ಮೂಲ ಸೌಕರ್ಯ ಯೋಜನೆಗೆ ಚೀನಾ ಮುಂದಾಗಿದೆ ಎನ್ನಲಾಗಿದೆ.

    ಬೇಹು ನೌಕೆಯಿಂದ ನಿಗಾ: ಚೀನಾದ ಬೇಹುಗಾರಿಕೆ ನೌಕೆ ಯುವಾನ್ ವಾಂಗ್ 5, ಹಿಂದು ಮಹಾಸಾಗರದಲ್ಲಿ ಚೀನಿ ಜಲಾಂತರ್ಗಾಮಿಗಳ ಕಾರ್ಯಾಚರಣೆ ಸಂಬಂಧ ಭಾರತ ಪರಿಶೀಲನೆ ನಡೆಸುತ್ತಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕ್ಯಾಂಪ್​ಬೆಲ್ ಕೊಲ್ಲಿ ಮತ್ತು ಲಕ್ಷದ್ವೀಪದಲ್ಲಿ ಮಿಲಿಟರಿ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಭಾರತ ಪ್ರಯತ್ನಿಸುತ್ತಿರುವಾಗ, ಚೀನಾ ಹಿಂದು ಮಹಾಸಾಗರದಲ್ಲಿ ತನ್ನ ನೌಕೆಯ ಸಂಚಾರ ಮುಂದುವರಿಸಿದೆ.

    ಕಳೆದ ಒಂದು ವರ್ಷದಲ್ಲಿ ಹಠಾತ್ ಹೃದಯಾಘಾತ, ಅನಾರೋಗ್ಯ ಶೇ. 20 ಹೆಚ್ಚಳ: ಬಾಧಿತರಲ್ಲಿ ಲಸಿಕೆ ಪಡೆದವರ ಪ್ರಮಾಣವೆಷ್ಟು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts