More

    ಸಂಸದರ ಅಮಾತನು ವಿರೋಧಿಸಿ ಜಂತರ್​ ಮಂತರ್​ನಲ್ಲಿ ಪ್ರತಿಭಟನೆ: ಪ್ರತಿಪಕ್ಷಗಳ ನಾಯಕರು ಹೇಳಿದ್ದೇನು?

    ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನದ ವೇಳೆ 146 ಪ್ರತಿಪಕ್ಷಗಳ ಸಂಸದರನ್ನು ಅಮಾನತುಗೊಳಿಸಿರುವುದನ್ನು ವಿರೋಧಿಸಿ ಮತ್ತು ಡಿಸೆಂಬರ್ 13 ರಂದು ಸಂಸತ್ತಿನ ಭದ್ರತಾ ಉಲ್ಲಂಘನೆ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವಿವರವಾದ ಹೇಳಿಕೆ ನೀಡುವಂತೆ ಒತ್ತಾಯಿಸಿ ಇಂಡಿಯಾ ಮೈತ್ರಿಕೂಟದ ನಾಯಕರು ಶುಕ್ರವಾರ ಇಲ್ಲಿನ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದರು.

    ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಅಧೀರ್ ರಂಜನ್ ಚೌಧರಿ, ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ಸೇರಿದಂತೆ ಅಮಾನತುಗೊಂಡಿರುವ ಎಲ್ಲ ಸಂಸದರು ಹಾಗೂ ಸಿಪಿಐನ ಡಿ.ರಾಜಾ, ಸಿಪಿಎಂನ ಸೀತಾರಾಂ ಯೆಚೂರಿ ಮೊದಲಾದ ನಾಯಕರು ಜಂತರ್ ಮಂತರ್ ಬಳಿ ಜಮಾಯಿಸಿದ್ದರು.

    ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ರಾಜ್ಯಸಭಾ ಸಂಸದ ಸೈಯದ್ ನಸೀರ್ ಹುಸೇನ್, “ಸಂಸತ್ತು ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾಗಿದೆ. 700ಕ್ಕೂ ಹೆಚ್ಚು ಸಂಸದರು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಆಯ್ಕೆಯಾಗಿದ್ದಾರೆ. ಸಂಸದರನ್ನು ಅಮಾನತುಗೊಳಿಸಿ ಸದನ ನಡೆಸುವ ಹಕ್ಕು ಸರ್ಕಾರಕ್ಕೆ ಇಲ್ಲ. ಈ ಸರ್ಕಾರ ಸಂಪೂರ್ಣ ಸರ್ವಾಧಿಕಾರಿ ಮತ್ತು ಪ್ರಜಾಪ್ರಭುತ್ವ ವಿರೋಧಿಯಾಗಿದೆ,’’ ಎಂದರು.

    “ಇಷ್ಟು ಸಂಸದರನ್ನು ಇದುವರೆಗೆ ಅಮಾನತುಗೊಳಿಸಲಾಗಿದೆಯೇ? ನಾವು ಗೃಹ ಸಚಿವರಿಂದ ಹೇಳಿಕೆಗೆ ಮಾತ್ರ ಬೇಡಿಕೆ ಇಟ್ಟಿದ್ದೇವೆ” ಎಂದು ಕಾಂಗ್ರೆಸ್ ಸಂಸದ ದಿಗ್ವಿಜಯ ಸಿಂಗ್ ಹೇಳಿದರು.

    ‘ಸದ್ಯ ಅಧಿಕಾರದಲ್ಲಿರುವವರಿಂದ ನಾವು ಪ್ರಜಾಪ್ರಭುತ್ವವನ್ನು ಉಳಿಸಬೇಕಾಗಿದೆ. ಸಂಸತ್ತಿನಲ್ಲಿ ನಡೆದ ಭದ್ರತಾ ಲೋಪದ ಘಟನೆಗೆ ಬಿಜೆಪಿಯನ್ನು ಹೊಣೆಯಾಗಿಸಬೇಕು ಎಂದು ಸಿಪಿಐ(ಎಂ) ನಾಯಕ ಸೀತಾರಾಂ ಯೆಚೂರಿ ಟೀಕಿಸಿದರು.

    ಸಂಸತ್ತಿನಲ್ಲಿ ಭದ್ರತಾ ಲೋಪದ ಬಗ್ಗೆ ಗೃಹ ಸಚಿವರಿಂದ ವಿವರವಾದ ಹೇಳಿಕೆಗಾಗಿ ಆಗ್ರಹಿಸಿದ್ದಕ್ಕಾಗಿ ಕನಿಷ್ಠ 146 ಸಂಸದರನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಿಂದ ಅಮಾನತುಗೊಳಿಸಲಾಗಿದೆ. ಡಿಸೆಂಬರ್ 13 ರಂದು, ಶೂನ್ಯ ವೇಳೆಯ ಕಲಾಪದಲ್ಲಿ ಇಬ್ಬರು ಜನರು ಲೋಕಸಭೆಯ ಸಂದರ್ಶಕರ ಗ್ಯಾಲರಿಯಿಂದ ಜಿಗಿದು ಲೋಕಸಭೆ ಚೇಂಬರ್​ ಪ್ರವೇಶಿಸಿ, ಹಳದಿ ಬಣ್ಣದ ಹೊಗೆಯನ್ನು ಹರಡಿಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.

    ಪಡೆದ ಡಿಗ್ರಿಗಳ ಸಂಖ್ಯೆ 20; ಐಪಿಎಸ್​, ಐಎಎಸ್​ ಪಾಸಾದರೂ ರಾಜೀನಾಮೆ ನೀಡಿ ರಾಜಕೀಯ ಪ್ರವೇಶ; ಯಾರೂ ಈ ಭಾರತೀಯ ಪ್ರತಿಭಾವಂತ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts