More

    ಪಡೆದ ಡಿಗ್ರಿಗಳ ಸಂಖ್ಯೆ 20; ಐಪಿಎಸ್​, ಐಎಎಸ್​ ಪಾಸಾದರೂ ರಾಜೀನಾಮೆ ನೀಡಿ ರಾಜಕೀಯ ಪ್ರವೇಶ; ಯಾರೂ ಈ ಭಾರತೀಯ ಪ್ರತಿಭಾವಂತ?

    ನವದೆಹಲಿ: ಪದವಿ ಗಳಿಸಲು ಓದುವುದು ಅಗತ್ಯ. ಆದರೆ, ಈ ವ್ಯಕ್ತಿ ಗಳಿಸಿದ ಡಿಗ್ರಿಗಳ ಪಟ್ಟಿಯನ್ನೇ ಓದುವುದು ಕಷ್ಟ. ಈ ಭಾರತೀಯ ಪ್ರತಿಭೆ ಪಡೆದುಕೊಂಡ ಡಿಗ್ರಿಗಳ ಸಂಖ್ಯೆ ಬರೋಬ್ಬರಿ 20.

    ಇವರೇ ಡಾ.ಶ್ರೀಕಾಂತ್ ಜಿಚ್ಕರ್. ಶೈಕ್ಷಣಿಕವಾಗಿ ದೇಶದಲ್ಲಿಯೇ ಅತ್ಯಂತ ಅರ್ಹ ವ್ಯಕ್ತಿ ಎಂಬ ಹಿರಿಮೆಗೆ ಪಾತ್ರರಾದವರು. 25ನೇ ವಯಸ್ಸಿನಲ್ಲಿಯೇ ಜಿಚ್ಕರ್ ಅವರು 14 ಪದವಿಗಳನ್ನು ಪಡೆದು, ಲಿಮ್ಕಾ ಬುಕ್ ಆಫ್ ರೆಕಾಡ್ಸ್​ನಲ್ಲಿ ಸ್ಥಾನ ಪಡೆದರು, ಈ ಮೂಲಕ ಶೈಕ್ಷಣಿಕವಾಗಿ ಭಾರತದ ಅತ್ಯಂತ ಅರ್ಹ ವ್ಯಕ್ತಿ ಎಂಬ ಸ್ಥಾನಮಾನ ಗಳಿಸಿದರು.

    ಜಿಚ್ಕರ್ ಈ ಪರೀಕ್ಷೆಗಳಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದುದಲ್ಲದೆ, ಹಲವಾರು ಚಿನ್ನದ ಪದಕಗಳನ್ನು ಕೂಡ ಗಳಿಸಿದರು.

    ಶ್ರೀಕಾಂತ್ ಜಿಚ್ಕರ್ ಅವರು ಪಡೆದ ಪದವಿಗಳು: ಎಂಬಿಬಿಎಸ್, ಎಂಡಿ, ಎಲ್​ಎಲ್​ಬಿ, ಎಲ್​ಎಲ್​ಎಂ, . ಬಿಸಿನೆಸ್ ಅಡ್ಮಿನಿಸ್ಟ್ರೇಷನ್, ಡಿಬಿಎಂ, ಎಂಬಿಎ, ಪತ್ರಿಕೋದ್ಯಮದಲ್ಲಿ ಪದವಿ, ಎಂಎ. ಸಾರ್ವಜನಿಕ ಆಡಳಿತ, ಎಂ.ಎ. ಸಮಾಜಶಾಸ್ತ್ರ, ಎಂ.ಎ. ಅರ್ಥಶಾಸ್ತ್ರ, ಎಂ.ಎ ಸಂಸ್ಕೃತ, ಎಂ.ಎ ಇತಿಹಾಸ, ಎಂ.ಎ. . ಇಂಗ್ಲೀಷ್ ಸಾಹಿತ್ಯ… ಹೀಗೆ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ.

    1973 ಮತ್ತು 1990 ರ ನಡುವೆ ಅವರು ವಿವಿಧ ವಿಶ್ವವಿದ್ಯಾಲಯಗಳಲ್ಲಿ 42 ಪರೀಕ್ಷೆಗಳಿಗೆ ಹಾಜರಾಗಿದ್ದರು. ಐಎಎಸ್​ ಅಧಿಕಾರಿಯಾಗಲು ಯುಪಿಎಸ್​ಸಿ ಪರೀಕ್ಷೆ ಬರೆದರು. ತೇರ್ಗಡೆ ಕೂಡ ಆದರು. ಆದರೆ, ಐಎಎಸ್ ಆಗಲು ಪೊಲೀಸ್​ ಅಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿ ಮತ್ತೆ ಯುಪಿಎಸ್​ಸಿ ಪರೀಕ್ಷೆ ಬರೆದರು. ಇದರಲ್ಲಿ ಯಶಸ್ಸು ಗಳಿಸಿ ಐಎಎಸ್​ ಅಧಿಕಾರಿಯಾದರು.

    ಇವರ ಸಾಹಸ ಇಲ್ಲಿಗೇ ನಿಲ್ಲಲಿಲ್ಲ. ಐಎಎಸ್​ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕೇವಲ ನಾಲ್ಕು ತಿಂಗಳ ನಂತರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ಪ್ರಯಾಣ ಪ್ರಾರಂಭಿಸಿದರು.

    1980ರಲ್ಲಿ, ಜಿಚ್ಕರ್ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸೇವೆ ಸಲ್ಲಿಸುವ ಮೂಲಕ ದೇಶದ ಅತ್ಯಂತ ಕಿರಿಯ ಶಾಸಕರಾದರು. ರಾಜ್ಯಸಭಾ ಸದಸ್ಯರಾಗಿ, ರಾಜ್ಯ ಸಚಿವರಾಗಿಯೂ ಕಾರ್ಯನಿರ್ವಹಿಸಿದರು.

    1999 ರಲ್ಲಿ ರಾಜ್ಯಸಭಾ ಚುನಾವಣೆಯಲ್ಲಿ ವಿಫಲವಾದ ನಂತರ, ಜಿಚ್ಕರ್ ಅವರ ಆಸಕ್ತಿ ಪ್ರವಾಸ, ಚಿತ್ರಕಲೆ, ಛಾಯಾಗ್ರಹಣ ಮತ್ತು ನಾಟಕಗಳಲ್ಲಿ ನಟನೆಯತ್ತ ತಿರುಗಿತು. ಅವರು ರಾಷ್ಟ್ರದಾದ್ಯಂತ ಪ್ರಯಾಣಿಸಿದರು, ಧರ್ಮ, ಆರೋಗ್ಯ ಮತ್ತು ಶಿಕ್ಷಣದಂತಹ ವಿಷಯಗಳ ಕುರಿತು ಭಾಷಣಗಳನ್ನು ಮಾಡಿದರು. ಅಲ್ಲದೆ, ಯುನೆಸ್ಕೋದಲ್ಲಿ ಭಾರತವನ್ನು ಪ್ರತಿನಿಧಿಸಿದರು.

    ಜೂನ್ 2, 2004 ರಂದು ವಿಧಿಯಾಟವು ಬೇರೆಯೇ ಆಗಿತ್ತು. ತಮ್ಮ ಸ್ನೇಹಿತನ ಕಾರಿನಲ್ಲಿ ಸಾಗುತ್ತಿದ್ದಾಗ ಬಸ್ ಡಿಕ್ಕಿ ಹೊಡೆಯಿತು. 49ನೇ ವಯಸ್ಸಿನಲ್ಲಿ ಡಾ. ಜಿಚ್ಕರ್ ಅವರು ಅಕಾಲಿಕವಾಗಿ ಸಾವನ್ನಪ್ಪುವುದಕ್ಕೆ ಈ ಅಪಘಾತ ಕಾರಣವಾಯಿತು.

    ತಮ್ಮ ಕಡಿಮೆ ಜೀವಿತಾವಧಿಯಲ್ಲಿಯೇ ಡಾ. ಜಿಚ್ಕರ್ ಅವರು ವೈದ್ಯರಾಗಿ, ವಕೀಲರಾಗಿ, ಐಪಿಎಸ್ ಅಧಿಕಾರಿಯಾಗಿ, ಐಎಎಸ್​ ಅಧಿಕಾರಿಯಾಗಿ, ರಾಜಕಾರಣಿಯಾಗಿ ವಿಶಿಷ್ಟ ಜೀವನ ನಡೆಸಿದರು. ಅವರ ವೈಯಕ್ತಿಕ ಗ್ರಂಥಾಲಯದಲ್ಲಿ 52,000 ಪುಸ್ತಕಗಳ ವ್ಯಾಪಕ ಸಂಗ್ರಹವು ಅವರ ಕಲಿಕೆಯ ಉತ್ಸಾಹಕ್ಕೆ ಈಗಲೂ ಸಾಕ್ಷಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts