More

    ಭಾರತಕ್ಕೆ ಎರಡೂವರೆ ದಿನಗಳಲ್ಲೇ ಒಲಿದ ಪಿಂಕ್‌ಬಾಲ್ ಟೆಸ್ಟ್ ; ಲಂಕಾಗೆ 238 ರನ್ ಸೋಲು, 2-0 ಸರಣಿ ಗೆದ್ದ ರೋಹಿತ್ ಪಡೆ

    ಪ್ರಸಾದ್ ಶೆಟ್ಟಿಗಾರ್ ಬೆಂಗಳೂರು : ರೋಹಿತ್ ಶರ್ಮ ಪೂರ್ಣ ಪ್ರಮಾಣದ ನಾಯಕತ್ವ ವಹಿಸಿಕೊಂಡ ಬಳಿಕ ಭಾರತ ತಂಡ ಸತತ 14ನೇ ಪಂದ್ಯದಲ್ಲೂ (9 ಟಿ20, 3 ಏಕದಿನ, 2 ಟೆಸ್ಟ್) ಗೆಲುವಿನ ಕೇಕೆ ಹಾಕಿದೆ. ನಾಯಕ ದಿಮುತ್ ಕರುಣರತ್ನೆ (107 ರನ್, 174 ಎಸೆತ, 15 ಬೌಂಡರಿ) ಶತಕದ ಪ್ರತಿರೋಧವನ್ನು ಲೆಕ್ಕಸದ ಭಾರತ ತಂಡ ಆರ್. ಅಶ್ವಿನ್ (55ಕ್ಕೆ 4) ಮಾರಕ ದಾಳಿ ನೆರವಿನಿಂದ ಪ್ರವಾಸಿ ಶ್ರೀಲಂಕಾ ವಿರುದ್ಧದ 2ನೇ ಹಾಗೂ ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಎರಡೂವರೆ ದಿನಗಳಲ್ಲೇ 238 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಭಾರತ 2-0ಯಿಂದ ಸರಣಿ ವಶಪಡಿಸಿಕೊಂಡು ಬೀಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಚೊಚ್ಚಲ ಅಹರ್ನಿಶಿ ಟೆಸ್ಟ್ ಪಂದ್ಯ ಟೀಮ್ ಇಂಡಿಯಾ ಪಾಲಿಗೆ ಸ್ಮರಣೀಯವೆನಿಸಿದ್ದು, ತವರಿನ ಪಿಂಕ್ ಬಾಲ್ ಟೆಸ್ಟ್‌ಗಳಲ್ಲಿ ಹ್ಯಾಟ್ರಿಕ್ ಗೆಲುವಿನ ಸಾಧನೆ ಮಾಡಿದೆ.

    ಭಾರತ ತಂಡದ 447 ರನ್ ಸವಾಲಿಗೆ ಪ್ರತಿಯಾಗಿ ಸೋಮವಾರ 1 ವಿಕೆಟ್‌ಗೆ 28 ರನ್‌ಗಳಿಂದ 3ನೇ ದಿನದಾಟ ಮುಂದುವರಿಸಿದ ಶ್ರೀಲಂಕಾ ತಂಡ ಡಿನ್ನರ್ ವಿರಾಮಕ್ಕೆ ಮೊದಲೇ 59.3 ಓವರ್‌ಗಳಲ್ಲಿ 208 ರನ್‌ಗಳಿಗೆ ಸರ್ವಪತನ ಕಂಡಿತು. ಅಶ್ವಿನ್ ಜತೆಗೆ ವೇಗಿ ಜಸ್‌ಪ್ರೀತ್ ಬುಮ್ರಾ (23ಕ್ಕೆ 3) ಮತ್ತು ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ (37ಕ್ಕೆ 2) ಲಂಕೆಗೆ ಕಡಿವಾಣ ಹಾಕಲು ಶ್ರಮಿಸಿದರು. 3ನೇ ದಿನ ಸಂಪೂರ್ಣ  ಫ್ಲಡ್ ಲೈಟ್ಸ್ ಬೆಳಗುವ ಮುನ್ನವೇ ಲಂಕಾ ಹೋರಾಟ ಕೊನೆಗೊಂಡಿತು. ಭಾರತಕ್ಕೆ ಇದು ರೋಹಿತ್ ಶರ್ಮ ಸಾರಥ್ಯದಲ್ಲಿ ಚೊಚ್ಚಲ ಮತ್ತು ತವರು ನೆಲದಲ್ಲಿ ಸತತ 15ನೇ ಟೆಸ್ಟ್ ಸರಣಿ ಗೆಲುವಾಗಿದೆ. ಭಾರತ ಕೊನೆಯದಾಗಿ 2012ರ ಡಿಸೆಂಬರ್‌ನಲ್ಲಿ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಟೆಸ್ಟ್ ಸರಣಿ ಸೋತಿತ್ತು. ಬೇರಾವುದೇ ತಂಡ ಇದುವರೆಗೆ ತವರಿನಲ್ಲಿ ಸತತ 10ಕ್ಕಿಂತ ಹೆಚ್ಚು ಸರಣಿ ಜಯಿಸಿಲ್ಲ ಎಂಬುದು ಗಮನಾರ್ಹ.

    ಭಾರತ: 252 ಮತ್ತು 9 ವಿಕೆಟ್‌ಗೆ 303, ಶ್ರೀಲಂಕಾ: 109 ಮತ್ತು 59.3 ಓವರ್‌ಗಳಲ್ಲಿ 208 (ದಿಮುತ್ ಕರುಣರತ್ನೆ 107, ಕುಶಾಲ್ ಮೆಂಡೀಸ್ 54, ನಿರೋಶಾನ್ ಡಿಕ್‌ವೆಲ್ಲಾ 12, ಜಸ್‌ಪ್ರೀತ್ ಬುಮ್ರಾ 23ಕ್ಕೆ 3, ಆರ್.ಅಶ್ವಿನ್ 55ಕ್ಕೆ 4, ಅಕ್ಷರ್ ಪಟೇಲ್ 37ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts