More

    ಇಂದು ಭಾರತ-ದ.ಆಫ್ರಿಕಾ ಮೊದಲ ಏಕದಿನ ಕದನ ; ಎಲ್ಲರ ಚಿತ್ತ ವಿರಾಟ್ ಕೊಹ್ಲಿಯತ್ತ

    ಪಾರ್ಲ್: ಕಳೆದ 7 ವರ್ಷಗಳಿಂದ ಭಾರತ ತಂಡದ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದ ವಿರಾಟ್ ಕೊಹ್ಲಿ ಬುಧವಾರ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಸಾಮಾನ್ಯ ಆಟಗಾರನಾಗಿ ಕಣಕ್ಕಿಳಿಯಲಿದ್ದು, ಎಲ್ಲರ ಕೇಂದ್ರಬಿಂದುವಾಗಿರಲಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ಟಿ20 ತಂಡ, ಕಳೆದ ವಾರ ಟೆಸ್ಟ್ ತಂಡದ ನಾಯಕತ್ವಕ್ಕೆ ಕೊಹ್ಲಿ ಗುಡ್‌ಬೈ ಹೇಳಿದ್ದರು. ಈ ನಡುವೆ ಏಕದಿನ ನಾಯಕತ್ವದಿಂದ ಬಿಸಿಸಿಐಯೇ ಅವರನ್ನು ವಜಾಗೊಳಿಸಿತ್ತು. ಟೆಸ್ಟ್ ಸರಣಿಯಲ್ಲಿ ಸೋತು ಮುಖಭಂಗಕ್ಕೀಡಾಗಿರುವ ಭಾರತ ತಂಡ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಜಯಿಸುವ ಮೂಲಕ ಸೇಡು ತೀರಿಸಿಕೊಳ್ಳುವ ಹಂಬಲದಲ್ಲಿದೆ. ನಾಯಕತ್ವ ಗುಣಗಳನ್ನು ಸಾಬೀತು ಪಡಿಸುವ ದೃಷ್ಟಿಯಿಂದ ಕನ್ನಡಿಗ ಕೆಎಲ್ ರಾಹುಲ್ ಪಾಲಿಗೆ ವೈಯಕ್ತಿಕವಾಗಿಯೂ ಈ ಸರಣಿ ಮಹತ್ವದ್ದಾಗಿದೆ. 2018ರ ಪ್ರವಾಸದ ವೇಳೆ ಭಾರತ ತಂಡ ಟೆಸ್ಟ್ ಸರಣಿ ಸೋಲಿನ ನಡುವೆಯೂ ಏಕದಿನ ಸರಣಿಯನ್ನು 5-1ರಿಂದ ವಶಪಡಿಸಿಕೊಂಡಿತ್ತು ಎಂಬುದು ಇದೀಗ ಸ್ಫೂರ್ತಿಯ ಅಂಶವಾಗಿದೆ.

    * ರಾಹುಲ್ ಪಡೆಗೆ ಗೆಲುವಿನ ತವಕ
    2023ರ ಏಕದಿನ ವಿಶ್ವಕಪ್ ಟೂರ್ನಿಗೆ ತಂಡದ ಸಂಯೋಜನೆ ದೃಷ್ಟಿಯಿಂದ ಭಾರತ ತಂಡ ಹೊಸ ನಾಯಕ, ಹೊಸ ಸಹಾಯಕ ಸಿಬ್ಬಂದಿಯೊಂದಿಗೆ ಸಜ್ಜಾಗಿದೆ. ಕಳೆದ ಮಾರ್ಚ್‌ನಲ್ಲಿ ತವರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ ಪೂರ್ಣ ಪ್ರಮಾಣದ ತಂಡದೊಂದಿಗೆ ಆಡಿತ್ತು. ಬಳಿಕ ಜುಲೈನಲ್ಲಿ ಶ್ರೀಲಂಕಾ ಪ್ರವಾಸಕ್ಕೆ ಎರಡನೇ ಸ್ತರದ ಆಟಗಾರರಿಗೆ ಮಣೆ ಹಾಕಲಾಗಿತ್ತು. ಇಂಗ್ಲೆಂಡ್ ವಿರುದ್ಧ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ರಾಹುಲ್, ಅನುಭವಿ ಎಡಗೈ ಆರಂಭಿಕ ಶಿಖರ್ ಧವನ್ ಜತೆಗೂಡಿ ಇನಿಂಗ್ಸ್ ಆರಂಭಿಸಲಿದ್ದಾರೆ. ಪಂದ್ಯಪೂರ್ವ ಸುದ್ದಿಗೋಷ್ಠಿಯಲ್ಲಿ ರಾಹುಲ್ ಇದನ್ನು ಖಚಿತಪಡಿಸಿದ್ದಾರೆ. ಇದರಿಂದ, ದೇಶೀಯ ಕ್ರಿಕೆಟ್‌ನಲ್ಲಿ ರನ್‌ಹೊಳೆಯನ್ನೇ ಹರಿಸಿರುವ ಋತುರಾಜ್ ಗಾಯಕ್ವಾಡ್ ಪದಾರ್ಪಣೆಗೆ ಇನ್ನಷ್ಟು ಸಮಯ ಕಾಯುವುದು ಅನಿವಾರ್ಯವಾಗಿದೆ. ಈಗಾಗಲೇ ಟಿ20 ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಶಿಖರ್ ಧವನ್‌ಗೆ ಈ ಸರಣಿ ಮಹತ್ವದ್ದಾಗಿದೆ. ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಎಂದಿನಂತೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದರೆ, ಸೂರ್ಯಕುಮಾರ್ ಯಾದವ್ ಹಾಗೂ ಶ್ರೇಯಸ್ ಅಯ್ಯರ್ ನಡುವೆ 4ನೇ ಕ್ರಮಾಂಕಕ್ಕೆ ಪೈಪೋಟಿ ಏರ್ಪಟ್ಟಿದೆ. ರಿಷಭ್ ಪಂತ್ 5ನೇ ಕ್ರಮಾಂಕದಲ್ಲೇ ಉಳಿದರೆ, ವೇಗದ ಬೌಲಿಂಗ್ ಆಲ್ರೌಂಡರ್ ವೆಂಕಟೇಶ್ ಅಯ್ಯರ್ 6ನೇ ಕ್ರಮಾಂಕದಲ್ಲಿ ಆಡುವ ಮೂಲಕ ಏಕದಿನ ತಂಡಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಜತೆಗೆ 6ನೇ ಬೌಲಿಂಗ್ ಆಯ್ಕೆಯೂ ಆಗಿರಲಿದ್ದಾರೆ.

    * ಆತ್ಮವಿಶ್ವಾಸದಲ್ಲಿ ಆತಿಥೇಯರು
    ಟೆಸ್ಟ್ ಸರಣಿ ಗೆಲುವಿನ ಹುಮ್ಮಸ್ಸಿನಲ್ಲಿರುವ ದಕ್ಷಿಣ ಆಫ್ರಿಕಾ ತಂಡ ಮತ್ತೊಂದು ಸರಣಿ ಗೆಲುವಿನ ಹುಮ್ಮಸ್ಸಿನಲ್ಲಿದೆ. ನಾಯಕ ಟೆಂಬಾ ಬವುಮಾ ಟೆಸ್ಟ್ ಸರಣಿಯ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಎಡಗೈ ವೇಗಿ ಮಾರ್ಕೋ ಜಾನ್ಸೆನ್ ಚೊಚ್ಚಲ ಟೆಸ್ಟ್ ಸರಣಿಯಲ್ಲೇ ಮಿಂಚಿದ್ದರು. ಏಕದಿನ ಸರಣಿಯಲ್ಲೂ ಭಾರತಕ್ಕೆ ಮಾರಕವಾದರೂ ಅಚ್ಚರಿಯಿಲ್ಲ. ಮೊದಲ ಟೆಸ್ಟ್ ಪಂದ್ಯ ಮುಕ್ತಾಯಗೊಂಡ ಬೆನ್ನಲ್ಲೇ ಟೆಸ್ಟ್ ಕ್ರಿಕೆಟಿಗೆ ವಿದಾಯ ಘೋಷಿಸಿದ್ದ ಕ್ವಿಂಟನ್ ಡಿಕಾಕ್ ತಂಡಕ್ಕೆ ವಾಪಸಾಗಿದ್ದಾರೆ.

    ಟೀಮ್ ನ್ಯೂಸ್:
    ಭಾರತ: ಅನುಭವಿ ರೋಹಿತ್ ಶರ್ಮ ಹೊರತುಪಡಿಸಿ ಪೂರ್ಣ ಪ್ರಮಾಣದ ತಂಡ ಲಭ್ಯವಿದೆ. ಸ್ವತಃ ರಾಹುಲ್ ಹೇಳಿಕೊಂಡಿರುವಂತೆ ಇಬ್ಬರು ಸ್ಪಿನ್ನರ್‌ಗಳಿಗೆ ಅವಕಾಶ ನೀಡಲಾಗುತ್ತಿದೆ. ಆರ್.ಅಶ್ವಿನ್, ಯಜುವೇಂದ್ರ ಚಾಹಲ್ ಇಬ್ಬರೂ ಕಣಕ್ಕಿಳಿಯಲಿದ್ದಾರೆ. ಶಾರ್ದೂಲ್ ಠಾಕೂರ್ ಹಾಗೂ ಭುವನೇಶ್ವರ್ ಕುಮಾರ್ ನಡುವೆ 3ನೇ ವೇಗಿ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿದೆ. 2ನೇ ಟೆಸ್ಟ್ ವೇಳೆ ಗಾಯಗೊಂಡಿದ್ದ ಮತ್ತೋರ್ವ ವೇಗಿ ಸಿರಾಜ್ ಫಿಟ್ ಆಗಿದ್ದರೂ, ಕಣಕ್ಕಿಳಿಯುವ ಸಾಧ್ಯತೆ ಇಲ್ಲ.
    ಸಂಭಾವ್ಯ ತಂಡ: ಕೆಎಲ್ ರಾಹುಲ್ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್/ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೀ), ವೆಂಕಟೇಶ್ ಅಯ್ಯರ್, ದೀಪಕ್ ಚಹರ್, ಶಾರ್ದೂಲ್ ಠಾಕೂರ್/ಭುವನೇಶ್ವರ್, ಆರ್. ಅಶ್ವಿನ್, ಜಸ್‌ಪ್ರೀತ್ ಬುಮ್ರಾ, ಯಜುವೇಂದ್ರ ಚಾಹಲ್.

    ದಕ್ಷಿಣ ಆಫ್ರಿಕಾ: ಇಬ್ಬರು ಆಲ್ರೌಂಡರ್‌ಗಳಿಗೆ ಮಣೆ ಹಾಕಲು ಯೋಜಿಸಿದ್ದು, ಇಬ್ಬರು ತಜ್ಞ ಸ್ಪಿನ್ನರ್‌ಗಳಿಗೆ ಅವಕಾಶ ನೀಡಲಾಗುತ್ತಿದೆ. ಜಾರ್ಜ್ ಲಿಂಡೆ ಹಾಗೂ ಡ್ವೇನ್ ಪ್ರಿಟೋರಿಯಸ್ ನಡುವೆ ಪೈಪೋಟಿ ಏರ್ಪಟ್ಟಿದೆ.
    ಸಂಭಾವ್ಯ ತಂಡ: ಕ್ವಿಂಟನ್ ಡಿಕಾಕ್, ಜನ್ನೆಮಾನ್ ಮಲಾನ್, ಟೆಂಬಾ ಬವುಮಾ, ಏಡನ್ ಮಾರ್ಕ್ರಮ್, ರಾಸೀ ವಾನ್ ಡರ್ ಡುಸೆನ್, ಡೇವಿಡ್ ಮಿಲ್ಲರ್, ಡ್ವೇನ್ ಪ್ರಿಟೋರಿಯಸ್, ಜಾರ್ಜ್ ಲಿಂಡೆ, ಆದಿಲ್ ಪೆಹ್ಲುಕ್‌ವಾಯೊ, ಲುಂಗಿ ಎನ್‌ಗಿಡಿ, ತಬರೇಜ್ ಶಮ್ಸಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts