More

    ಪ್ರಶಸ್ತಿಗಾಗಿ ಇಂಡೋ-ಇಂಗ್ಲೆಂಡ್ ಫೈಟ್ ; ಇಂದು 19 ವಯೋಮಿತಿ ವಿಶ್ವಕಪ್ ಫೈನಲ್

    ಆಂಟಿಗಾ: ಕಿರಿಯರ ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿರುವ ಭಾರತ, ಶನಿವಾರ ನಡೆಯಲಿರುವ ಪ್ರಶಸ್ತಿ ಹಣಾಹಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ 14 ಆವೃತ್ತಿಗಳಲ್ಲಿ 8ನೇ ಬಾರಿ ಫೈನಲ್ ಪ್ರವೇಶಿಸಿರುವ 4 ಬಾರಿಯ ಚಾಂಪಿಯನ್ ಭಾರತ ತಂಡ, 5ನೇ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ. ಪ್ರತಿಭಾನ್ವಿತ ಆಟಗಾರರಿಂದ ಕೂಡಿರುವ ಭಾರತ ತಂಡ ಟೂರ್ನಿಯುದ್ದಕ್ಕೂ ಕೋವಿಡ್ ಮಹಾಮಾರಿ ಕಾಡಿದರೂ ಪ್ರಶಸ್ತಿ ಸುತ್ತಿಗೇರುವಲ್ಲಿ ಯಶಸ್ವಿಯಾಗಿದೆ. ಮತ್ತೊಂದೆಡೆ, ಕ್ರಿಕೆಟ್ ಜನಕರ ಯುವ ತಂಡ 24 ವರ್ಷಗಳ ಬಳಿಕ ಪ್ರಶಸ್ತಿ ಒಲಿಸಿಕೊಳ್ಳುವ ಹಂಬಲದಲ್ಲಿದೆ.

    ಸರ್ ವಿವ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಡೆಯಲಿರುವ ಪ್ರಶಸ್ತಿ ಕದನ ಕುತೂಹಲ ಕೆರಳಿಸಿದೆ. ಎರಡೂ ತಂಡಗಳು ಟೂರ್ನಿಯಲ್ಲಿ ಅಜೇಯ ಸಾಧನೆಯೊಂದಿಗೆ ಫೈನಲ್ ಪ್ರವೇಶಿಸಿವೆ. ಕೋವಿಡ್‌ನಿಂದ ಲೀಗ್ ಹಂತದ 2 ಪಂದ್ಯಗಳಿಂದ ಹೊರಗುಳಿದಿದ್ದ ನಾಯಕ ಯಶ್ ಧುಲ್, ಉಪನಾಯಕ ಶೇಖ್ ರಶೀದ್ ಆಸ್ಟ್ರೇಲಿಯಾ ವಿರುದ್ಧದ ಉಪಾಂತ್ಯದ ಹಣಾಹಣಿಯಲ್ಲಿ ಉತ್ತಮ ನಿರ್ವಹಣೆ ತೋರಿದ್ದರು. ಸೆಮಿಫೈನಲ್‌ನಲ್ಲಿ ಶತಕ ಸಿಡಿಸಿ ಮಿಂಚಿದ್ದ ಧುಲ್ ಮತ್ತೊಂದು ಉತ್ತಮ ಇನಿಂಗ್ಸ್ ನಿರೀಕ್ಷೆಯಲ್ಲಿದ್ದಾರೆ. ಅಂಗ್‌ಕ್ರಿಷ್ ರಘುವಂಶಿ, ಹರ್‌ನೂರ್ ಸಿಂಗ್, ನಿಶಾಂತ್ ಸಿಂಧು, ಸಿದ್ದಾರ್ಥ್ ಯಾದವ್ ಒಳಗೊಂಡ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದ್ದರೆ, ಇದುವರೆಗೆ 12 ವಿಕೆಟ್ ಕಬಳಿಸಿರುವ ವಿಕ್ಕಿ ಒಸ್ತ್‌ವಾಲ್, ರಾಜಾ ಬಾವಾ, ವೇಗಿ ರವಿ ಕುಮಾರ್, ವಾಸು ವತ್ಸ್‌ರಂಥ ಭರವಸೆಯ ಬೌಲರ್‌ಗಳು ಇಂಗ್ಲೆಂಡ್‌ಗೆ ಆಘಾತ ನೀಡುವ ಸಾಮರ್ಥ್ಯ ಹೊಂದಿದ್ದಾರೆ.

    1998ರ ಬಳಿಕ ಫೈನಲ್ ಪ್ರವೇಶಿಸಿರುವ ಇಂಗ್ಲೆಂಡ್, 2ನೇ ಬಾರಿ ಪ್ರಶಸ್ತಿ ಜಯಿಸುವ ಹುಮ್ಮಸ್ಸಿನಲ್ಲಿದೆ. ಸೆಮಿಫೈನಲ್ ಹಣಾಹಣಿಯಲ್ಲಿ ಅಫ್ಘಾನಿಸ್ತಾನ ತಂಡವನ್ನು ರೋಚಕವಾಗಿ ಮಣಿಸಿತ್ತು. ನಾಯಕ ಟಾಮ್ ಪ್ರೆಸ್ಟ್ ಸರಾಸರಿ 73ರಂತೆ ಟೂರ್ನಿಯಲ್ಲಿ ಇದುವರೆಗೆ 292 ರನ್ ಪೇರಿಸಿದ್ದಾರೆ. ವೇಗಿ ಜೋಶ್ವಾ ಬಾಯ್ಡೆನ್ 13 ವಿಕೆಟ್ ಕಬಳಿಸಿದ್ದು, ಭಾರತದ ಬ್ಯಾಟಿಂಗ್ ಪಡೆಗೆ ಸವಾಲಾಗಲಿದ್ದಾರೆ. ಸೆಮೀಸ್‌ನಲ್ಲಿ ಒಂದೇ ಓವರ್‌ನಲ್ಲಿ 3 ವಿಕೆಟ್ ಕಬಳಿಸಿ ಪಂದ್ಯದ ಚಿತ್ರಣ ಬದಲಿಸಿದ್ದ ಸ್ಪಿನ್ನರ್ ರೆಹನ್ ಅಹ್ಮದ್ ಕೂಡ ಭಾರತಕ್ಕೆ ಅಪಾಯಕಾರಿ ಎನಿಸಬಲ್ಲರು.

    ಪಂದ್ಯ ಆರಂಭ: ಸಂಜೆ 6.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts