More

    ಟಿ20 ವಿಶ್ವಕಪ್‌ಗೆ ತಾಲೀಮು ; ಇಂದು ಭಾರತ-ಇಂಗ್ಲೆಂಡ್ ಅಭ್ಯಾಸ ಪಂದ್ಯ

    ದುಬೈ: ಅರಬ್‌ನಾಡಿನಲ್ಲಿ ಕಳೆದ ಒಂದು ತಿಂಗಳಿನಿಂದ ಐಪಿಎಲ್ ಹಣಾಹಣಿಯಲ್ಲಿ ಮುಳುಗಿದ್ದ ಭಾರತ ತಂಡದ ಆಟಗಾರರು ಇದೀಗ ಮತ್ತೊಂದು ಚುಟುಕು ಕ್ರಿಕೆಟ್ ಸಮರಕ್ಕೆ ಸಜ್ಜಾಗಿದ್ದಾರೆ. ಟಿ20 ವಿಶ್ವಕಪ್ ಪೂರ್ವಭಾವಿಯಾಗಿ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಳಗ ಸೋಮವಾರ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಬುಧವಾರ ನಡೆಯಲಿರುವ ಎರಡನೇ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಅಕ್ಟೋಬರ್ 24 ರಂದು ನಡೆಯಲಿರುವ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಹಣಾಹಣಿಗೆ ಸಜ್ಜಾಗುವ ದೃಷ್ಟಿಯಿಂದ ಭಾರತದ ಪಾಲಿಗೆ ಈ ಪಂದ್ಯ ಮಹತ್ವ ಪಡೆದಿದೆ. ವಿರಾಟ್ ಕೊಹ್ಲಿ ನಾಯಕನಾಗಿ ಮುನ್ನಡೆಸುತ್ತಿರುವ ಕಡೇ ಟೂರ್ನಿ ಇದಾಗಿದೆ. ಸ್ಟಾರ್ ಆಟಗಾರ ಎಂಎಸ್ ಧೋನಿ ತಂಡದ ಸಲಹೆಗಾರರಾಗಿದ್ದು, ನಾಯಕ ವಿರಾಟ್ ಕೊಹ್ಲಿ ತಲೆ ಮೇಲಿನ ಭಾರ ಕೂಡ ಕೊಂಚ ಕಡಿಮೆಯಾಗಲಿದೆ.

    * ತಂಡದ ಸಂಯೋಜನೆಗೆ ವೇದಿಕೆ
    ಯುಎಇ ಚರಣದ ಐಪಿಎಲ್‌ನಲ್ಲಿ ಬಿರುಸಿನ ಬ್ಯಾಟಿಂಗ್ ಮೂಲಕ ಗಮನಸೆಳೆದಿದ್ದ ವಿರಾಟ್ ಕೊಹ್ಲಿಗೆ ವೈಯಕ್ತಿಕವಾಗಿ ಈ ಟೂರ್ನಿ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಪ್ರಮುಖ ಆಟಗಾರರಾದ ರೋಹಿತ್ ಶರ್ಮ, ಕೆಎಲ್ ರಾಹುಲ್ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಆರಂಭಿಕ ಸ್ಥಾನಕ್ಕೆ ರಾಹುಲ್ ಜತೆಗೆ ಇಶಾನ್ ಕಿಶನ್ ಪೈಪೋಟಿ ನಡೆಸಬಹುದು. ಐಪಿಎಲ್‌ನಲ್ಲಿ (30 ಸಿಕ್ಸರ್ ಸೇರಿದಂತೆ 626 ರನ್) ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದಿರುವ ರಾಹುಲ್ ಸಹಜವಾಗಿಯೇ ಆರಂಭಿಕನಾಗಿ ಮೊದಲ ಆಯ್ಕೆಯಾಗಿದ್ದಾರೆ. ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಸೂರ್ಯಕುಮಾರ್ ಐಪಿಎಲ್‌ನಲ್ಲಿ ರನ್‌ಗಳಿಸಲು ಪರದಾಡಿದರೂ ಕಡೇ ಲೀಗ್ ಪಂದ್ಯದಲ್ಲಿ ಸನ್‌ರೈಸರ್ಸ್‌ ಎದುರು ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದಿದ್ದರು. ರಿಷಭ್ ಪಂತ್ ಹಾಗೂ ಇಶಾನ್ ಕಿಶನ್ ಇಬ್ಬರೂ ಉತ್ತಮ ಫಾರ್ಮ್‌ನಲ್ಲಿದ್ದು ವಿಕೆಟ್ ಕೀಪಿಂಗ್ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಮೊಹಮದ್ ಶಮಿ, ಜಸ್‌ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ಒಳಗೊಂಡ ವೇಗಿಗಳ ಪಡೆ ಬಲಿಷ್ಠವಾಗಿದ್ದರೆ, ಆಲ್ರೌಂಡರ್ ಕೋಟಾದಲ್ಲಿ ರವೀಂದ್ರ ಜಡೇಜಾ, ಸ್ಪಿನ್ ವಿಭಾಗದಲ್ಲಿ ಆರ್.ಅಶ್ವಿನ್ ಮೋಡಿ ಮಾಡಲು ಸಜ್ಜಾಗಿದ್ದಾರೆ. ಭಾರತ ತಂಡದ ಎಲ್ಲ ಆಟಗಾರರು ಐಪಿಎಲ್‌ನಲ್ಲಿ ಆಡಿರುವುದರಿಂದ ಟಿ20 ಕ್ರಿಕೆಟ್‌ಗೆ ಒಗ್ಗಿಕೊಳ್ಳಲು ಕಷ್ಟವಾಗದು. ಆದರೆ, ಕೆಲವೊಂದು ಆಟಗಾರರು ಐಪಿಎಲ್‌ನಲ್ಲಿ ನಿರೀಕ್ಷಿತ ನಿರ್ವಹಣೆ ತೋರಿಲ್ಲ. ಇದೀಗ ಪಾಕ್ ವಿರುದ್ಧದ ಪಂದ್ಯಕ್ಕೆ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ಈ ಪಂದ್ಯಗಳು ಸಹಕಾರಿಯಾಗಲಿವೆ. 15 ಸದಸ್ಯರ ಭಾರತ ತಂಡದಲ್ಲಿ, ಅಕ್ಷರ್ ಪಟೇಲ್ ಬದಲಿಗೆ ಕಡೇ ಕ್ಷಣದಲ್ಲಿ ಶಾರ್ದೂಲ್ ಠಾಕೂರ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

    ಪಂದ್ಯ ಆರಂಭ: ರಾತ್ರಿ 7.30
    ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್

    * ತಲಾ 2 ಅಭ್ಯಾಸ ಪಂದ್ಯಗಳು
    ಪ್ರಧಾನ ಸುತ್ತಿಗೇರಿರುವ 8 ತಂಡಗಳು ತಲಾ 2 ಅಭ್ಯಾಸ ಪಂದ್ಯಗಳನ್ನಾಡಲಿವೆ. ಸೋಮವಾರ ಹಾಗೂ ಬುಧವಾರ (ಸೆ.20) ಪಂದ್ಯಗಳು ನಡೆಯಲಿವೆ. ಸೋಮವಾರದ ಇತರ ಅಭ್ಯಾಸ ಪಂದ್ಯಗಳು: ಪಾಕಿಸ್ತಾನ-ವೆಸ್ಟ್ ಇಂಡೀಸ್ (ದುಬೈ, ಮ.3.30ಕ್ಕೆ), ಅ್ಘಾನಿಸ್ತಾನ – ದ.ಆಫ್ರಿಕಾ (ಅಬುಧಾಬಿ, ಮ.3.30ಕ್ಕೆ), ನ್ಯೂಜಿಲೆಂಡ್-ಆಸ್ಟ್ರೇಲಿಯಾ (ಅಬುಧಾಬಿ, ರಾತ್ರಿ 7.30ಕ್ಕೆ).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts