More

    ಬ್ಯಾಂಕ್‌ಗಳೇ ನಿಜವಾದ ಲಕ್ಷ್ಮಿ ನಿವಾಸಗಳು

    ವಿಜಯಪುರ: ಬ್ಯಾಂಕ್‌ಗಳೇ ನಿಜವಾದ ಲಕ್ಷ್ಮೀ ನಿವಾಸಗಳು. ಲಕ್ಷ್ಮಿ ಇಲ್ಲಿ ಭದ್ರವಾಗಿರುತ್ತಾಳೆ. ಬ್ಯಾಂಕ್‌ನಿಂದ ಲಕ್ಷ್ಮಿಯನ್ನು ಕರೆದೊಯ್ಯುವ ಕೈಗಳು ಸ್ವಚ್ಛ ಹಾಗೂ ಶುದ್ಧವಾಗಿರಬೇಕು. ಅಂದಾಗ ಸುಂದರ ಬದುಕು ನಿರ್ಮಾಣ ಸಾಧ್ಯ ಎಂದು ಜ್ಞಾನಯೋಗಾಶ್ರಮದ ಪರಮಪೂಜ್ಯ ಸಿದ್ಧೇಶ್ವರ ಶ್ರೀಗಳು ನುಡಿದರು.
    ಶುಕ್ರವಾರ ಇಂಡಿ ಪಟ್ಟಣದ ಕೆಇಬಿ ಹತ್ತಿರದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಇಂಡಿ ಶಾಖೆಯ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಆಶೀರ್ವಚನ ನೀಡಿದರು.
    ಲಕ್ಷ್ಮಿಯನ್ನು ವಿಷ್ಣು ಎಷ್ಟು ಭದ್ರವಾಗಿ ರಕ್ಷಿಸುತ್ತಾನೋ ಅಷ್ಟೇ ಭದ್ರವಾಗಿ ಬ್ಯಾಂಕ್‌ಗಳು ಹಣವನ್ನು ರಕ್ಷಿಸುತ್ತವೆ. ವಿಷ್ಣುವನ್ನು ರಕ್ಷಕ ಎನ್ನುತ್ತೇವೆ. ಅದೇ ರೀತಿ ಬ್ಯಾಂಕ್‌ಗಳು ಲಕ್ಷ್ಮಿಯನ್ನು ರಕ್ಷಿಸುವ ರಕ್ಷಕರಂತೆ. ಇಲ್ಲಿಂದ ಹಣ ಒಯ್ದವರು ಅದನ್ನು ಸುಂದರ ಮನೆ ಕಟ್ಟಲು, ದೇಶ ಕಟ್ಟಲು ಬಳಸಿಕೊಳ್ಳಬೇಕೇ ವಿನಃ ಕತ್ತಲಲ್ಲಿ ಬಾಟಲಿ ಖರೀದಿಸಲು ಅಲ್ಲ ಎಂದು ಮಾರ್ಮಿಕವಾಗಿ ನುಡಿದರು.
    ಡಿಸಿಸಿ ಬ್ಯಾಂಕ್ ಸಹಕಾರ ಮನೋಭಾವ ಹಾಗೂ ಸುಭದ್ರತೆಯಿಂದ ಕೂಡಿದೆ. ಸಹಕಾರಿ ಮನೋಭಾವದೊಂದಿಗೆ ಬ್ಯಾಂಕ್ ಜತೆ ರೈತರು ಏಳಿಗೆ ಸಾಧಿಸಬೇಕು. ಬ್ಯಾಂಕ್‌ಗಳು ಸಹಾಯ ಮಾಡುವುದು ಸಾಲ ಪ್ರಮಾಣ ಹೆಚ್ಚಿಸಲು ಅಲ್ಲ. ಇಲ್ಲಿ ಸಾಲ ಒಯ್ದವರು ಶ್ರೀಮಂತರಾಗಲಿ, ಬಳಿಕ ಬ್ಯಾಂಕ್‌ಗೇ ಸಾಲ ಕೊಡಲಿ ಎಂಬ ಉದ್ದೇಶದಿಂದ. ಸಾಲ ಒಯ್ದವರು ಕುಡಿದು ಹಾಳು ಮಾಡಬಾರದು. ರೈತರು ಯಾರಲ್ಲೂ ಕೈ ಒಡ್ಡಬಾರದು ಎಂದರು.

    ಹೃದಯ ಶ್ರೀಮಂತಿಕೆ ಬೇಕು

    ಇರಲು ಪುಟ್ಟ ಮನೆ, ಉಡಲು ಬಟ್ಟೆ, ಊರಲ್ಲಿ ನಾಲ್ಕು ಜನ ಪ್ರೀತಿಯಿಂದ ಮಾತನಾಡಿದರೆ ಸಾಕು ಅದುವೇ ಶ್ರೀಮಂತ ಜೀವನ. ಅಂಥ ಬದುಕು ಕಟ್ಟಿಕೊಳ್ಳಲು ಇಂಥ ಸಹಕಾರಿ ಕ್ಷೇತ್ರ ಬೇಕು. ಹಣವನ್ನು ದುಡಿಸಿ ಬೆಳೆಸಬೇಕು. ರಾಷ್ಟ್ರಕ್ಕೆ ಬೇಕಾದಷ್ಟು ಹಣ ಬೆಳೆಸಬೇಕು. ಅಂಥವರಿಗೆ ಮಾತ್ರ ಸಾಲ ಕೊಡಬೇಕೆಂಬುದು ಅರ್ಥಶಾಸ್ತ್ರಜ್ಞರ ಅಭಿಪ್ರಾಯ.
    ದೇಹ ಸಂಪತ್ತು, ಭಾವ ಸಂಪತ್ತು, ಬುದ್ದಿ ಸಂಪತ್ತು ಬೆಳೆಯಬೇಕು. ಕಿಸೆ ದೊಡ್ಡದಾದರೆ ಅಲ್ಲ. ಇಂದು ಎಷ್ಟೋ ಜನ ಶ್ರೀಮಂತರಿದ್ದಾರೆ. ಆದರೆ, ವಾಸ್ತವದಲ್ಲಿ ಅವರು ಶ್ರೀಮಂತರೇ ಅಲ್ಲ. ಹೃದಯ ಶ್ರೀಮಂತಿಕೆ ಇದ್ದವರೇ ನಿಜವಾದ ಶ್ರೀಮಂತರು. ಮೈ ಕೈಗೆಲ್ಲಾ ಆಭರಣಗಳಿದ್ದು ಮುಖದಾಗ ನಗುವೇ ಇಲ್ಲದಿದ್ದರೆ ಆಭರಣವೇ ಬೇಸರಿಸಿಕೊಳ್ಳುತ್ತದೆ. ಮುಖದ ಮೇಲೆ ನಗು, ಮನಸ್ಸಿನಲ್ಲಿ ಆನಂದ ವಿದ್ದರೆ ಅದುವೇ ಶ್ರೀಮಂತಿಕೆ.
    ಸೂಜಿ ಮೊನೆಯಲ್ಲಿ ಒಂಟೆ ಹೋಗಬಹುದು ಆದರೆ ಶ್ರೀಮಂತರು ಸ್ವರ್ಗಕ್ಕೆ ಹೋಗಲ್ಲ ಎಂಬ ಗಾದೆ ಅನ್ಯದೇಶಗಳಲ್ಲಿದೆ. ಯಾಕೆಂದರೆ ಇಂದು ಶ್ರೀಮಂತರು ಸಣ್ಣವರಾಗಿದ್ದಾರೆ. ನಿಜವಾದ ಶ್ರೀಮಂತ ಒಕ್ಕಲಿಗ. ಆತ ನಿಸರ್ಗದ ಮಧ್ಯೆ ಬದುಕುವ ಶ್ರೀಮಂತ. ಆತನ ಮುಖದಲ್ಲಿ ಖಿನ್ನತೆ ಬರದಂತೆ ನೋಡಿಕೊಳ್ಳಬೇಕು ಎಂದರು.

    ಸಹಕಾರಿ ಮನೋಭಾವ

    ಒಬ್ಬರಿಗೊಬ್ಬರು ಒಳ್ಳೆಯದನ್ನು ಬಯಸುವುದೇ ಸಹಕಾರಿ ಭಾವ. ಈ ಸೂತ್ರ ಎಲ್ಲರೂ ಅರಿತರೆ ಎಲ್ಲರ ಬದುಕು ಸುಂದರವಾಗಿರುತ್ತದೆ. ಸಹಕಾರಿ ಗುಣ ನಿಸರ್ಗದಿಂದಲೇ ಬಂದಿದೆ. ಹರಿಯುವ ನದಿಗೆ ಜಮೀನು ಹೇಳುತ್ತದೆ ‘ನೀನೊಂದಿಷ್ಟು ನೀರು ಕೊಡು ನಾನೊಂದಿಷ್ಟು ಹಸಿರು ಕೊಡುತ್ತೇನೆ’ ಎಂದು. ಭೂಮಿ ಮೋಡಕ್ಕೆ ಹೇಳುತ್ತದೆ ‘ಸ್ವಲ್ಪ ಹನಿ ಸುರಿಸಿ ನೋಡು ಹೂ ಹಣ್ಣುಗಳಿಂದ ಕೂಡಿದ ಸುಂದರ ಪರಿಸರ ನಿರ್ಮಿಸಿ ಮತ್ತೆ ನಿನ್ನನ್ನು ಮೇಲಕ್ಕೆ ಕಳುಹಿಸಿಕೊಡುವೆ’ ಎಂದು. ನೇರಳಕಾಯಿ ವೃಕ್ಷವೊಂದರ ಬಳಿ ಪಕ್ಷಿ ಬಂದಾಗ ನೇರಳೆ ಗಿಡ ಹೇಳಿತು ‘ನೀನು ನನ್ನ ಅತಿಥಿ, ನಾಲ್ಕು ಹಣ್ಣು ಕೊಡುವೆ ಆನಂದದಿಂದ ತಿನ್ನು ಎಂದು. ಆಗ ಪಕ್ಷಿ ‘ನಾನು ಸುಮ್ಮನೇ ತಗೊಳ್ಳೋದಿಲ್ಲ…..ನಾನೇನಾದರೂ ನಿನಗೆ ಮಾಡಬೇಕು. ನೀನು ಸಹ ಸಂತೋಷವಾಗಬೇಕು. ಅಂದಾಗ ನಾನು ತಿನ್ನುವೆ ಎಂದಾಗ ನೇರಳೆ ಗಿಡ ‘ನೀನು ತಿನ್ನುವ ಬೀಜ ಅಲ್ಲಲ್ಲಿ ಹರಡಿಕೊಂಡು ಹೋಗು ನಮ್ಮ ಸಂತತಿ ಬೆಳೆಯಲಿ’ ಎನ್ನುತ್ತದೆ. ಇದೇ ಪರಸ್ಪರ ಸಹಕಾರ ಎಂದು ದೃಷ್ಠಾಂತಗಳ ಸಹಿತ ವಿವರಿಸಿದರು.
    ಶಿರಶ್ಯಾಡದ ಅಭಿನವ ಮುರುಘೇಂದ್ರ ಶಿವಾಚಾರ್ಯರು ಮಾತನಾಡಿ, ಸಹಕಾರದ ಬದುಕು ಸರ್ವಶ್ರೇಷ್ಠ ಬದುಕು. ಪರರ ಉಪಕಾರಕ್ಕಾಗಿ ಬದುಕುಬೇಕು. ಈ ಶರೀರ ಪರೋಪಕಾರಕ್ಕಾಗಿಯೇ ಇದೆ. ಭಗವಂತ ಸುಂದರವಾದ ಪರಿಸರ ನೀಡಿದ್ದಾನೆ. ಜತೆಗೆ ಅನುಭವಿಸಿ ಆನಂದಿಸುವ ಮನಸ್ಸು ಕೊಟ್ಟಿದ್ದಾನೆ. ಅದನ್ನು ಪರಸ್ಪರ ಹಂಚಿಕೊಂಡು ಸಹಕಾರ ಸಹಬಾಳ್ವೆಯಿಂದ ಬದುಕಬೇಕೆಂದರು.
    ಶಾಸಕ ಎಂ.ಸಿ. ಮನಗೂಳಿ ಮಾತನಾಡಿ, ಪ್ರತೀ ಹಳ್ಳಿಗೆ ಪಂಚಾಯಿತಿ, ಸೊಸಾಯಿಟಿ ಹಾಗೂ ಶಿಕ್ಷಣ ಸಂಸ್ಥೆ ಇರಬೇಕೆಂಬುದು ಗಾಂಧೀಜಿ ಅವರ ಕನಸಾಗಿತ್ತು. ಆ ನಿಟ್ಟಿನಲ್ಲಿ ನಾವೆಲ್ಲರೂ ಸಹಕಾರದಿಂದ ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಶ್ರಮಿಸಬೇಕೆಂದರು.
    ತಿಕೋಟಾದ ಚನ್ನಮಲ್ಲಿಕಾರ್ಜುನ ಶ್ರೀಗಳು ಮಾತನಾಡಿದರು. ಗೊಳಸಾರದ ಅಭಿನವ ಪುಂಡಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಜಿಪಂ ಅಧ್ಯಕ್ಷ ಶಿವಯೋಗಪ್ಪ ನೇದಲಗಿ, ಬ್ಯಾಂಕ್ ಎಂಡಿ ಕೆ.ಬಿ. ರಾಜಣ್ಣ, ಉಪಾಧ್ಯಕ್ಷ ರಾಜಶೇಖರ ಬಿ.ಗುಡದಿನ್ನಿ, ನಿರ್ದೇಶಕರಾದ ಸಂಯುಕ್ತಾ ಪಾಟೀಲ, ಗುರುಶಾಂತ ನಿಡೋಣಿ, ಸೋಮನಗೌಡ ಬಿರಾದಾರ, ಮುರುಗೇಷ ಹೆಬ್ಬಾಳ, ಜಿ.ಟಿ. ಗಚ್ಚಿ, ಅವಳಿ ಜಿಲ್ಲೆ ಹಾಲು ಒಕ್ಕೂಟದ ಅಧ್ಯಕ್ಷ ಮಿಸಾಳೆ ಮತ್ತಿತರರಿದ್ದರು.

    ರೈತರು ಸಾಲಮುಕ್ತರಾಗಲಿ

    ರೈತರಿಗೆ ಸಾಲ ನೀಡುವುದೇ ಸಹಕಾರಿ ಬ್ಯಾಂಕ್ ಉದ್ದೇಶವಲ್ಲ. ರೈತರನ್ನು ಸಾಲಗಾರರನ್ನಾಗಿಸುವ ಬದಲು ಅಗತ್ಯ ಹಣಕಾಸು ನೆರವು ನೀಡುವ ಮೂಲಕ ರೈತರನ್ನು ಸದೃಢರನ್ನಾಗಿಸಿ ಅವರಿಂದಲೇ ಬ್ಯಾಂಕ್ ಸಾಲ ಪಡೆಯುವಂತಾಗಬೇಕೆಂಬುದು ಸಹಕಾರಿ ಕ್ಷೇತ್ರದ ಉದ್ದೇಶ ಎಂದು ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಶಾಸಕ ಶಿವಾನಂದ ಪಾಟೀಲ ಹೇಳಿದರು.
    ಪರಸ್ಪರ ಸಹಕಾರದೊಂದಿಗೆ ಬ್ಯಾಂಕ್ ಮತ್ತು ರೈತರು ಏಳಿಗೆ ಸಾಧಿಸಬೇಕು. ಪ್ರಸ್ತುತ ಡಿಸಿಸಿ ಬ್ಯಾಂಕ್ 101 ವರ್ಷಕ್ಕೆ ಕಾಲಿಟ್ಟಿದೆ. ಆದರೆ ಕೇವಲ 20-25 ವರ್ಷಗಳಲ್ಲಿ ಅಪಾರ ಬೆಳವಣಿಗೆ ಕಂಡಿದೆ. ಪಿಕೆಪಿಎಸ್‌ನ ಅಧ್ಯಕ್ಷರ ಶ್ರಮ ಮತ್ತು ಸಹಕಾರದ ಫಲ ಇಂದು ಬ್ಯಾಂಕ್ ಏಳಿಗೆಯಾಗಿದೆ. ಅವಿಭಜಿತ ವಿಜಯಪುರ ಜಿಲ್ಲೆ ಸೇರಿದರೆ ರಾಜ್ಯದ ಅತೀ ದೊಡ್ಡ ಬ್ಯಾಂಕ್ ಎಂಬ ಖ್ಯಾತಿ ಡಿಸಿಸಿ ಬ್ಯಾಂಕ್‌ಗೆ ಸಿಗಲಿದೆ. ಎರಡೂ ಜಿಲ್ಲೆ ಸೇರಿದರೆ ಬ್ಯಾಂಕ್ ವಹಿವಾಟು ಆರು ಸಾವಿರ ಕೋಟಿ ದಾಟಲಿದೆ ಎಂದರು.
    ಇಂಡಿ ಶಾಖೆಗೆ ದೊಡ್ಡ ಕೊಡುಗೆ ಕೊಟ್ಟವರು ಈ ಭಾಗದ ಒಕ್ಕಲುತನ ಹುಟ್ಟುವಳಿ ಮಾರಾಟಗಾರರು. ಜಿಲ್ಲೆಯ ಅತ್ಯಂತ ದೊಡ್ಡ ಮತ್ತು ಶ್ರೀಮಂತ ಶಾಖೆ ಇಂಡಿಯದ್ದು. ಈ ಎಲ್ಲ ಸಾಧನೆಗೆ ಈ ಭಾಗದ ಜನರು ಹಾಗೂ ಜನಪ್ರತಿನಿಧಿಗಳು ಕಾರಣ. 1949 ರಿಂದ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಿಕೊಂಡು ಬಂದ ಇಂಡಿ ಶಾಖೆ ಇಂದು 3 ಎಕರೆ ಜಾಗೆಯಲ್ಲಿ ಭವ್ಯವಾಗಿ ನಿರ್ಮಾಣಗೊಂಡಿದ್ದು ಇತರ ಶಾಖೆಗಳಿಗೆ ಮಾದರಿಯಾಗಿದೆ ಎಂದರು.

    ಶಿವಾನಂದ ಪಾಟೀಲ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಮೇಲೆ ಬ್ಯಾಂಕ್ ಸಹ ಆನಂದವಾಯಿತು. ಶಿವಾನಂದ ಅವರ ಜತೆ ಆ ಬ್ಯಾಂಕ್‌ನ ಎಲ್ಲರೂ ಬೆಳೆಯುವ ಮತ್ತು ಬೆಳೆಸುವ ಗುಣವೇ ಹೊಂದಿದ್ದಾರೆ. ಬ್ಯಾಂಕ್‌ನ ಗ್ರಾಹಕರು ಮೊದಲು ಮನೆ ಕಟ್ಟಿಕೊಳ್ಳಲು ಬಿಟ್ಟು ಇದೀಗ ಬ್ಯಾಂಕ್‌ಗೆ ಹೊಸ ಕಟ್ಟಡ ನಿರ್ಮಿಸುತ್ತಿದ್ದಾರೆ. ಬ್ಯಾಂಕ್‌ನಂತೆ ಎಲ್ಲರೂ ಸಹಕಾರಯುತವಾಗಿ ಬಾಳಬೇಕು.
    ಸಿದ್ಧೇಶ್ವರ ಶ್ರೀ, ಜ್ಞಾನಯೋಗಾಶ್ರಮ ವಿಜಯಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts