More

    11 ಕ್ಕೆ ಇಂಡಿ ಶಾಖೆ ಕಟ್ಟಡ ಉದ್ಘಾಟನೆ

    ವಿಜಯಪುರ: ಅವಿಭಜಿತ ವಿಜಯಪುರ ಜಿಲ್ಲೆಯ 7 ಹಾಗೂ ವಿಭಜಿತ ವಿಜಯಪುರ ಜಿಲ್ಲೆಯ 3ನೇ ಶಾಖೆಯಾದ ಇಂಡಿ ಡಿಸಿಸಿ ಬ್ಯಾಂಕ್‌ನ ನೂತನ ಕಟ್ಟಡದ ಉದ್ಘಾಟನೆ ಸಮಾರಂಭ ಜ.11ಕ್ಕೆ ನೆರವೇರಲಿದೆ ಎಂದು ಬ್ಯಾಂಕ್‌ನ ಜಿಲ್ಲಾಧ್ಯಕ್ಷರೂ ಆದ ಶಾಸಕ ಶಿವಾನಂದ ಪಾಟೀಲ ಹೇಳಿದರು.
    ಜ.12, 1949ರಂದು ಇಂಡಿ ಶಾಖೆ ಸ್ಥಾಪಿಸಲಾಗಿತ್ತು. ಸ್ವಂತ ಕಟ್ಟಡ ನಿರ್ಮಾಣಕ್ಕೆ ಸಿದ್ಧೇಶ್ವರ ಶ್ರೀಗಳು ಶಂಕುಸ್ಥಾಪನೆ ನೆರವೇರಿಸಿದ್ದರು. ಇದೀಗ ಕಟ್ಟಡ ತಲೆ ಎತ್ತಿ ನಿಂತಿದ್ದು, ಪೂಜ್ಯರ ಸಾನ್ನಿಧ್ಯದಲ್ಲೇ ಉದ್ಘಾಟನೆ ನೆರವೇರಿಸಲಾಗುತ್ತಿದೆ. ಅಂದು ಬೆಳಗ್ಗೆ 11.30 ಕ್ಕೆ ಸಹಕಾರಿ ಸಚಿವ ಬಸವರಾಜ ಬೊಮ್ಮಾಯಿ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
    ಸಹಕಾರಿ ಸಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ರಾಜಣ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಶಿರಶ್ಯಾಡದ ಅಭಿನವ ಮುರುಘೇಂದ್ರ ಶ್ರೀ, ಗೊಳಸಾರದ ಪುಂಡಲಿಂಗ ಶ್ರೀಗಳು ಸಾನ್ನಿಧ್ಯ ವಹಿಸುವರು. ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಎಂ.ಸಿ. ಮನಗೂಳಿ, ಯಶವಂತರಾಯಗೌಡ ಪಾಟೀಲ, ದೇವಾನಂದ ಚವಾಣ್, ಜಿಪಂ ಅಧ್ಯಕ್ಷ ಶಿವಯೋಗಪ್ಪ ನೇದಲಗಿ ಇತರರು ಭಾಗವಹಿಸುವರು ಎಂದು ತಿಳಿಸಿದರು.
    ಪ್ರಸ್ತುತ ಇಂಡಿ ಶಾಖೆ 85 ಕೋಟಿ ರೂ. ಠೇವಣಿ, 112 ಕೋಟಿ ರೂ. ಸಾಲ ವ ಮುಂಗಡಗಳೊಂದಿಗೆ ಒಟ್ಟು 196.52 ಕೋಟಿ ರೂ. ವ್ಯವಹಾರ ಹೊಂದಿದೆ. 81 ವರ್ಷಗಳ ಕಾಲ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ. ಬ್ಯಾಂಕ್ ತನ್ನ ಎಲ್ಲ ಶಾಖೆಗಳಿಗೆ ಸುಸಜ್ಜಿತ ಹಾಗೂ ಭದ್ರತೆಗಳಿಗೆ ಅನುಗುಣವಾಗಿ ಸ್ವಂತ ನಿವೇಶನ ನಿರ್ಮಾಣಕ್ಕೆ ಗುರಿ ಇಟ್ಟಿದೆ. ಈವರೆಗೆ 8 ಶಾಖೆಗಳಿಗೆ ಸ್ವಂತ ಕಟ್ಟಡ ನಿರ್ಮಿಸಿದೆ. 11 ಶಾಖೆಗಳಿಗೆ ಸ್ವಂತ ನಿವೇಶನ ಹೊಂದಿದೆ. ಜಿಲ್ಲಾ ಬ್ಯಾಂಕ್‌ನ ಒಟ್ಟು ವ್ಯವಹಾರ 3 ಸಾವಿರ ಕೋಟಿ ರೂ. ಗುರಿ ದಾಟಿದೆ ಎಂದರು.
    ನಿರ್ದೇಶಕರಾದ ಗುರುಶಾಂತ ನಿಡೋಣಿ, ಸೋಮನಗೌಡ ಬಿರಾದಾರ, ಸುರೇಶ ಬಿರಾದಾರ, ಎಂ.ಜಿ. ಪಾಟೀಲ, ಅಣ್ಣಪ್ಪ ಪೂಜಾರಿ ಮತ್ತಿತರರಿದ್ದರು.

    ‘ಎ’ ಮಾನ್ಯತೆ

    ಬ್ಯಾಂಕ್ ಸತತ ಮೂರು ವರ್ಷಗಳಿಂದ ‘ಎ’ ಗ್ರೇಡ್ ಪಡೆದಿದೆ. ಪ್ರಸಕ್ತ ಸಾಲಿನಲ್ಲೂ ನಬಾರ್ಡ್‌ನಿಂದ ‘ಎ’ ಗ್ರೇಡ್ ಪಡೆದಿದೆ. ಒಟ್ಟು 50 ಶಾಖೆ ತೆರೆಯುವ ಗುರಿ ಇದೆ. ಈಗಾಗಲೇ 39 ಶಾಖೆ ಉದ್ಘಾಟಿಸಲಾಗಿದೆ. ಶೀಘ್ರದಲ್ಲೇ ಇನ್ನುಳಿದ ಶಾಖೆಗಳನ್ನು ಉದ್ಘಾಟಿಸಲಾಗುವುದು ಎಂದು ಶಿವಾನಂದ ಪಾಟೀಲ ತಿಳಿಸಿದರು.
    ಜಿಲ್ಲೆಯಲ್ಲಿ 272 ಸೊಸೈಟಿಗಳಿದ್ದು, ಅದರಲ್ಲಿ 250 ಸ್ವಂತ ಕಟ್ಟಡಗಳನ್ನು ಹೊಂದಿದ್ದು, ಬಾಕಿ ಉಳಿದ ಪಿಕೆಪಿಎಸ್‌ಗಳು ಸ್ವಂತ ಕಟ್ಟಡ ಹೊಂದಿದರೆ ಇದು ಸಹ ಒಂದು ಅಪೂರ್ವ ದಾಖಲೆಯಾಗಿದೆ. ಈ ಎಲ್ಲ ಸೊಸೈಟಿಗಳ ಕಾರ್ಯನಿರ್ವಹಣೆಗಾಗಿ ಏಕರೂಪದ ಸ್ಟಾವೇರ್ ರೂಪಿಸುವ ನಿಟ್ಟಿನಲ್ಲಿ ಚಿಂತನೆ ನಡೆಯುತ್ತಿದೆ. ರಾಜ್ಯದಲ್ಲಿಯೇ ಬ್ಯಾಂಕ್ 4 ನೇ ಸ್ಥಾನದಲ್ಲಿ ಇರುವುದು ಸಂತಸದ ಸಂಗತಿ ಎಂದರು.
    ರಾಜ್ಯ ಮಟ್ಟದ ಸಹಕಾರಿ ಸಪ್ತಾಹ ನ.14 ಕ್ಕೆ ಆಗಲಿದೆ. ಅದನ್ನು ವಿಜಯಪುರದಲ್ಲೇ ಬ್ಯಾಂಕ್ ಶತಮಾನೋತ್ಸವದ ಜತೆ ಹಮ್ಮಿಕೊಳ್ಳಲು ಮನವಿ ಮಾಡುವುದಾಗಿ ಶಿವಾನಂದ ಪಾಟೀಲ ತಿಳಿಸಿದರು.

    ಜನವರಿ ಮೊದಲ ವಾರದಲ್ಲಿ ಡಿಸಿಸಿ ಬ್ಯಾಂಕ್ ಶತಮಾನೋತ್ಸವ ಆಚರಿಸಲು ನಿರ್ಧರಿಸಲಾಗಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಮುಂದೂಡಲ್ಪಟ್ಟಿದೆ. ಮುಹೂರ್ತ ನಿಗದಿಯಾಗುವವರೆಗೂ ನಿರಂತರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.
    – ಶಿವಾನಂದ ಪಾಟೀಲ, ಅಧ್ಯಕ್ಷ ರು, ಡಿಸಿಸಿ ಬ್ಯಾಂಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts