More

    ಸವಳಿನ ಪ್ರಮಾಣ ಹೆಚ್ಚಳದಿಂದ ಭತ್ತಕ್ಕೆ ಹಾನಿ

    ಸಿಂಧನೂರು: ತಾಲೂಕಿನ ನದಿಪಾತ್ರ ಮತ್ತು ಹಳ್ಳದ ದಂಡೆಯಲ್ಲಿರುವ ಕಲ್ಲೂರು, ಮುಳ್ಳೂರು ಕ್ಯಾಂಪ್, ಬೂತಲದಿನ್ನಿ, ಪಗಡದಿನ್ನಿ ಹಾಗೂ ಇತರ ಗ್ರಾಮಗಳ ಜಮೀನುಗಳಲ್ಲಿ ಬೆಳೆದಿರುವ ಭತ್ತ ಬೆಳೆ ಒಣಗುತ್ತಿರುವ ಹಿನ್ನೆಲೆಯಲ್ಲಿ ಕೃಷಿ ವಿಜ್ಞಾನಿಗಳ ತಂಡ ವಿವಿಧ ಜಮೀನುಗಳಿಗೆ ಭೇಟಿ ನೀಡಿ ಮಂಗಳವಾರ ಪರಿಶೀಲನೆ ನಡೆಸಿತು.

    ಗಂಗಾವತಿ ಕೃಷಿ ಸಂಶೋಧನಾ ಕೇಂದ್ರದ ಭತ್ತದ ತಳಿ ವಿಜ್ಞಾನಿ ಡಾ.ಮಹಾಂತ ಶಿವಯೋಗಿ ಮಾತನಾಡಿ, ಕೊಳವೆಬಾವಿ ನೀರಿನ ಬಳಕೆಯಿಂದ ಸವಳಿನ ಪ್ರಮಾಣ ಹೆಚ್ಚಾಗಿ ಭತ್ತದ ಬೇರು ಕೊಳೆತಿದೆ. ಕಾಂಡಕೊರಕ ಹುಳು ಬಾಧೆ ಹೆಚ್ಚಿರುವುದರಿಂದ ಕ್ರಿಮಿನಾಶಕದಿಂದ ಹುಳುಗಳನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ ಎಂದರು.

    ಗದ್ದೆಯಲ್ಲಿ ನೀರು ನಿಲ್ಲಿಸುವುದರಿಂದ ಪಾಚು ಉತ್ಪತ್ತಿಯಾಗಿ ಬೇರುಗಳಿಗೆ ಆಮ್ಲಜನಕದ ಕೊರತೆಯಾಗಿದೆ. ಕೆರೆಗಳಲ್ಲಿ ಮೂರ‌್ನಾಲ್ಕು ತಿಂಗಳುಗಳಿಂದ ನೀರು ಶೇಖರಣೆ ಮಾಡಿದ್ದು, ಆ ನೀರಿನಲ್ಲೂ ಉಪ್ಪಿನಾಂಶ ಹೆಚ್ಚಳವಾಗಿದ್ದು, ಅದು ಭತ್ತಕ್ಕೆ ಹಾನಿಯುಂಟು ಮಾಡಿದೆ. ಅತಿಯಾದ ಕಳೆನಾಶಕ ಬಳಕೆಯಿಂದಲೂ ಭತ್ತದ ಬೆಳೆ ಕುಂಠಿತವಾಗುತ್ತದೆ. ಹವಾಮಾನ ವೈಪರೀತ್ಯದಿಂದ ತಾಲೂಕಿನಲ್ಲಿ ಹಲವಾರು ಕಡೆ ಇದೇ ರೀತಿ ಶೇ.70 ಬೆಳೆ ಹಾನಿ ಸಂಭವಿಸಿದೆ ಎಂದು ಮಹಾಂತ ಶಿವಯೋಗಿ ತಿಳಿಸಿದರು.

    ಸಹಾಯಕ ಕೃಷಿ ನಿರ್ದೇಶಕ ನಜೀರ್ ಅಹ್ಮದ್ ಮಾತನಾಡಿ, ಪ್ರತಿವರ್ಷ ಎಲ್ಲ ರೈತರು ಭತ್ತ ಬೆಳೆಯುತ್ತಿದ್ದರು. ಭತ್ತಕ್ಕೆ ಹರಿಸಿದ ನೀರು ಬಸಿಗಾಲುವೆ ಮೂಲಕ ಹರಿಯುತ್ತಿದ್ದ ಕಾರಣ ಉಪ್ಪಿನಾಂಶ ಶೇಖರಣೆ ಆಗುತ್ತಿರಲಿಲ್ಲ. ಪ್ರತಿವರ್ಷಕ್ಕಿಂತ ಈ ವರ್ಷ ಉಷ್ಣಾಂಶ ಹೆಚ್ಚಿನ ಪ್ರಮಾಣದಲ್ಲಿ ಇರುವುದು ಸಹ ಭತ್ತದ ಬೆಳೆ ಕುಂಠಿತವಾಗಲು ಕಾರಣವಾಗಿದೆ. ಕಾಂಡಕೊರಕ ಹುಳ ಬಾಧೆಯೂ ತೀವ್ರಗೊಂಡಿದೆ ಎಂದರು. ಪ್ರಮುಖರಾದ ಸಿ.ಎಚ್.ದಾಸ್, ಸಿದ್ದನಗೌಡ ಗದ್ದಿ, ಹಂಪನಗೌಡ ಗದ್ದಿ, ಮಲ್ಲಿಕಾರ್ಜುನ ಮಡಿವಾಳರ್, ವೀರನಗೌಡ, ಅಮರೇಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts