More

    ವಿಶ್ವಕಪ್​ನಲ್ಲಿ ಭಾರತದ ಅಜೇಯ ಓಟ: ನೆದರ್ಲೆಂಡ್ಸ್​ ವಿರುದ್ಧ ದಾಖಲೆ ಗೆಲುವು, ಮುಂದಿನ ಗುರಿ ಸಮಿಫೈನಲ್​

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್​​ ಟೂರ್ನಿಯ 45ನೇ ಪಂದ್ಯ ಹಾಗೂ ಉಭಯ ತಂಡಗಳ ಗ್ರೂಪ್​ ಹಂತದ ಕೊನೆಯ ಪಂದ್ಯದಲ್ಲಿ ಆತಿಥೇಯ ಭಾರತ ಎದುರಾಳಿ ನೆದರ್ಲೆಂಡ್ಸ್​ ವಿರುದ್ಧ ಭಾರೀ ರನ್​ ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸುವ ಮೂಲಕ ವಿಶ್ವಕಪ್​ ಟೂರ್ನಿಯಲ್ಲಿ 9ನೇ ಗೆಲುವಿನೊಂದಿಗೆ ತನ್ನ ಅಜೇಯ ಓಟವನ್ನು ಮುಂದುವರಿಸಿದೆ. ಇತ್ತ ನೆದರ್ಲೆಂಡ್ಸ್​ ತಂಡ ಸೋಲಿನೊಂದಿಗೆ ತನ್ನ ವಿಶ್ವಕಪ್​ ಅಭಿಯಾನವನ್ನು ಮುಕ್ತಾಯಗೊಳಿಸಿದೆ.

    ಭಾರತ ನೀಡಿದ 411ರನ್​ಗಳ ಬೃಹತ್​ ಗುರಿ ಬೆನ್ನತ್ತಿದ ನೆದರ್ಲೆಂಡ್ಸ್​ ಪಡೆ 47.5 ಓವರ್​ಗಳಲ್ಲಿ ತನ್ನೆಲ್ಲ ವಿಕೆಟ್​ ಕಳೆದುಕೊಂಡು 250 ರನ್​ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಟೀಮ್​ ಇಂಡಿಯಾ 160 ರನ್​ಗಳ ಭಾರೀ ಅಂತರದಿಂದ ಗೆಲುವಿನ ಕೇಕೆ ಹಾಕಿತು. ತಂಡದ ಪರ ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ (45), ತೇಜ ನಿಡಮನೂರು (54), ಕಾಲಿನ್ ಅಕರ್ಮನ್ (35) ಹೊರತುಪಡಿಸಿದರೆ ಉಳಿದ ಯಾವೊಬ್ಬ ಬ್ಯಾಟ್ಸ್​ಮನ್​ ಕೂಡ ಭಾರತದ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸಲಿಲ್ಲ.

    ಭಾರತ ಪರ ಮಿಂಚಿನ ಬೌಲಿಂಗ್​ ದಾಳಿ ಮಾಡಿದ ಮೊಹಮ್ಮದ್​ ಸಿರಾಜ್​, ಕುಲದೀಪ್​ ಯಾದವ್​, ರವೀಂದ್ರ ಜಡೇಜಾ ಮತ್ತು ಜಸ್​​ಪ್ರಿತ್​ ಬೂಮ್ರಾ ತಲಾ ಎರಡು ವಿಕೆಟ್​ ಪಡೆದರೆ, ವಿರಾಟ್​ ಕೊಹ್ಲಿ ಮತ್ತು ನಾಯಕ ರೋಹಿತ್​ ಶರ್ಮ ತಲಾ ಒಂದೊಂದು ವಿಕೆಟ್​ ಪಡೆದರು. ಅಪರೂಪಕ್ಕೊಮ್ಮೆ ಬೌಲಿಂಗ್​ ಮಾಡಿ ಕೊಹ್ಲಿ ಮತ್ತು ರೋಹಿತ್​ ವಿಕೆಟ್​ ಪಡೆದಿದ್ದು, ಕ್ರೀಡಾಭಿಮಾನಿಗಳನ್ನು ಹೆಚ್ಚು ಗಮನ ಸೆಳೆಯಿತು.

    ಭಾರತದ ಪರಾಕ್ರಮ
    ಇದಕ್ಕೂ ಮುನ್ನ ಟಾಸ್​ ಗೆದ್ದು ಬ್ಯಾಟಿಂಗ್​ ಆರಂಭಿಸಿದ ಭಾರತ ನಿಗದಿತ 50 ಓವರ್​ಗಳಲ್ಲಿ ಕೇವಲ 4 ವಿಕೆಟ್​ ನಷ್ಟಕ್ಕೆ 410 ರನ್​ ಕಲೆ ಹಾಕಿತು. ಬ್ಯಾಟ್​ ಹಿಡಿದು ಕ್ರೀಡಾಂಗಣಕ್ಕಿಳಿದ ಟೀಮ್​ ಇಂಡಿಯಾದ ಪ್ರತಿ ಬ್ಯಾಟರ್​ಗಳು ಸಹ ರನ್​ ಮಾರುತವನ್ನೇ ಸೃಷ್ಟಿಸಿದರು. ರೋಹಿತ್​ ಶರ್ಮ (61 ರನ್​, 54 ಎಸೆತ, 8 ಬೌಂಡರಿ, 2 ಸಿಕ್ಸರ್​) ಮತ್ತು ಶುಭಮಾನ್​ ಗಿಲ್​ (51 ರನ್​, 32 ಎಸೆತ, 3 ಬೌಂಡರಿ, 4 ಸಿಕ್ಟರ್​) 100 ರನ್​ಗಳ ಜತೆಯಾಟದ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್​ ಹಿಡಿದು ಮೈದಾನಕ್ಕಿಳಿದ ವಿರಾಟ್​ ಕೊಹ್ಲಿ ಸಹ ನೆದರ್ಲೆಂಡ್ಸ್​ ಬೌಲರ್​ಗಳನ್ನು ಕಾಡಿದರು. 56 ಎಸೆತಗಳನ್ನು ಎದುರಿಸಿದ ಕೊಹ್ಲಿ 5 ಬೌಂಡರಿ 1 ಸಿಕ್ಸರ್​ ನೆರವಿನಿಂದ 51 ರನ್​ ಗಳಿಸಿ ವಿಕೆಟ್​ ಒಪ್ಪಿಸಿದರು.

    ಶ್ರೇಯಸ್​-ರಾಹುಲ್​ ಜುಗಲ್​ಬಂಧಿ
    ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್​ಗೆ ಇಳಿದ ಶ್ರೇಯಸ್​ ಅಯ್ಯರ್ ( ಅಜೇಯ 128 ರನ್​, 94 ಎಸೆತ, 10 ಬೌಂಡರಿ, 5 ಸಿಕ್ಸರ್​)​ ಮತ್ತು ಐದನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸಿದ ಕೆ.ಎಲ್​. ರಾಹುಲ್​ (102 ರನ್​, 64 ಎಸೆತ, 11 ಬೌಂಡರಿ, 4 ಸಿಕ್ಸರ್​) ದ್ವಿಶತಕ ಜತೆಯಾಟದೊಂದಿಗೆ ಉತ್ತಮ ಇನಿಂಗ್ಸ್​ ಆಡಿದರು. ನೆದರ್ಲೆಂಡ್ಸ್​ ಬೌಲರ್​ಗಳನ್ನು ಅಕ್ಷರಶಃ ಬೆಂಡತ್ತಿದ ಈ ಜೋಡಿ ಎರಡು ವೈಯಕ್ತಿಕ ಶತಕಗಳೊಂದಿಗೆ ಭಾರತ ತಂಡ 410 ರನ್​ಗಳ ಬೃಹತ್​ ಗುರಿಯನ್ನು ಮುಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದರು. ಕೊನೆಯಲ್ಲಿ ಸೂರ್ಯಕುಮಾರ್​ ಯಾದವ್​ 2 ರನ್​ ಗಳಿಸಿ ಅಜೇಯರಾಗಿ ಉಳಿದರು.

    ನೆದರ್ಲೆಂಡ್ಸ್​ ಪರ ಬಾಸ್ ಡಿ ಲೀಡೆ ಎರಡು ವಿಕೆಟ್​ ಪಡೆದರೆ, ಪೌಲ್​ ವ್ಯಾನ್​ ಮೀಕೆರೆನ್​ ಮತ್ತು ರೋಲೋಫ್ ವ್ಯಾನ್ ಡೆರ್ ಮೆರ್ವೆ ತಲಾ ಒಂದೊಂದು ವಿಕೆಟ್​ ಕಬಳಿಸಿದರು. ಆದರೆ, ಯಾರೊಬ್ಬರು ಸಹ ಟೀಮ್​ ಇಂಡಿಯಾ ಬ್ಯಾಟರ್​ಗಳಿಗೆ ಸವಾಲಾಗಲೇ ಇಲ್ಲ.

    ಸೆಮೀಸ್​ನಲ್ಲಿ ಮುಖಾಮುಖಿಯಾಗುವ ತಂಡಗಳು
    ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್​ ಸಮೀಸ್​ ಪ್ರವೇಶ ಪಡೆದಿದ್ದು, ನವೆಂಬರ್​ 15ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಸಮಿಫೈನಲ್​ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಭಾರತ ಮತ್ತು ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್​ ಮುಖಾಮುಖಿಯಾಗಲಿವೆ. ನ.16ರಂದು ಕೋಲ್ಕತದ ಈಡನ್​ ಗಾರ್ಡನ್​ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಸಮಿಫೈನಲ್​ನಲ್ಲಿ ಎರಡನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಮತ್ತು ಮೂರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ.

    ನ.19ಕ್ಕೆ ವಿಶ್ವಕಪ್​ ಹಬ್ಬಕ್ಕೆ ವಿದ್ಯುಕ್ತ ತೆರೆ
    ಎರಡೂ ಸಮಿಫೈನಲ್​ಗಳಲ್ಲಿ ಗೆಲ್ಲುವ ತಂಡಗಳು ನ. 19ರಂದು ಗುಜರಾತಿನ ಅಹಮದಾಬಾದ್​ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟ್ರೋಫಿಗಾಗಿ ನಡೆಯಲಿರುವ ಅಂತಿಮ ಹಾಗೂ ಫೈನಲ್​ ಪಂದ್ಯದಲ್ಲಿ ಸೆಣಸಾಡಲಿದ್ದು, ಗೆಲ್ಲುವ ತಂಡ ವಿಶ್ವಕಪ್​ ಟ್ರೋಫಿಯ ಜತೆಗೆ 4 ಮಿಲಿಯನ್​ ಡಾಲರ್ (33,30,89,400 ರೂಪಾಯಿ) ಬಹುಮಾನ ಮೊತ್ತವನ್ನು ಪಡೆಯಲಿದೆ. ರನ್ನರ್​ ಅಪ್​ ತಂಡಗಳು 2 ಮಿಲಿಯನ್​ ಡಾಲರ್​ ಬಹುಮಾನ ಮೊತ್ತ ಹಾಗೂ ಲೀಗ್​ ಹಂತದಲ್ಲಿ ವಿಜೇತರಾದ ಪ್ರತಿ ತಂಡಕ್ಕೆ ತಲಾ 40 ಸಾವಿರ ಡಾಲರ್​ ಬಹುಮಾನ ಮೊತ್ತವನ್ನು ಪಡೆಯಲಿವೆ. (ಏಜೆನ್ಸೀಸ್​)

    ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬೌಂಡರಿ, ಸಿಕ್ಸರ್​, ಶತಕಗಳ ಸಿಡಿಮದ್ದು: ನೆದರ್ಲೆಂಡ್ಸ್​ಗೆ ಬೃಹತ್​ ಗುರಿ ನೀಡಿದ ಭಾರತ

    ಅದ್ಭುತ, ಅವಿಸ್ಮರಣೀಯ: ಫೋಟೋಗಳನ್ನು ಶೇರ್​ ಮಾಡಿ ಅಯೋಧ್ಯೆ ದೀಪೋತ್ಸವ ಬಣ್ಣಿಸಿದ ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts