More

    ಮಾತೃ ಮೌಲ್ಯಗಳನ್ನು ಸಾಹಿತ್ಯದ ಮೂಲಕ ರೂಢಿಸಿ

    ಬಾಗಲಕೋಟೆ: ಪ್ರಸ್ತುತ ಅಧಿಕಾರ ರಾಜಧರ್ಮವನ್ನು ಅಕ್ಷರದ ಮೂಲಕ ಬದಲಾಯಿಸುವ ಅವಶ್ಯಕತೆ ಇದೆ. ಆಧುನೀಕರಣ ಪ್ರಭಾವದಿಂದ ಮನುಷ್ಯ,ಮನುಷ್ಯರ ನಡುವೆ ಹೀನ ಕೃತ್ಯ ನಡೆಯುತ್ತಿದೆ. ಅವನ ನಡವಳಿಕೆ ರಾಕ್ಷಸಿ ಕೃತ್ಯದಂತೆ ಭಾಸವಾಗಿ ಮನುಷ್ಯತ್ವದ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಧಾರವಾಡದ ಹಿರಿಯ ಸಾಹಿತಿ ರಾಘವೇಂದ್ರ ಪಾಟೀಲ ಹೇಳಿದರು.

    ನಗರದ ಬಿಡಿಸಿಸಿ ಬ್ಯಾಂಕ್ ಸಭಾಭವನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ತ್ರಿವೇಣಿ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿ ಪ್ರದಾನ ಹಾಗೂ ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರ ದೀಡೆಕರೆ ಜಮೀನು ಕಥಾಸಂಕಲನದ ಎರಡನೇ ಆವೃತ್ತಿ ಬಿಡುಗಡೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

    ಮಾಸ್ಕೂಲೈನ್ಸ್ ಲಕ್ಷಣಗಳಾದ ದಾಸ್ಯತೆ, ಆಕ್ರಮಣ, ಒರಟುತನ, ಕ್ರೌರ್ಯವನ್ನು ಹೊಡೆದೋಡಿಸಿ ಮಾತೃಮೌಲ್ಯಗಳಾದ ಸಿಂಪತಿ,ವಾತ್ಸಲ್ಯ, ಪ್ರೀತಿ, ವಿಶ್ವಾಸವನ್ನು ರೂಢಿಸುವ ಅಗತ್ಯವಿದೆ ಎಂದರು.

    ಹಂಪಿಯ ಹಿರಿಯ ಕಥೆಗಾರ ಅಮರೇಶ ನುಗಡೋಣಿ ಮಾತನಾಡಿ, ತ್ರಿವೇಣಿ ಶೆಲ್ಲಿಕೇರಿ ಅವರು ಸಾಯಬಾರದ ವಯಸ್ಸಿನಲ್ಲಿ ತೀರಿಕೊಂಡಿದ್ದು ದುಃಖ ಒಂದು ಕಡೆಯಾದರೆ, ಇನ್ನೊಂದೆಡೆ ಅವರ ಹೆಸರನ್ನು ಅಚ್ಚಳಿಯದೆ ಉಳಿಸಲು ಅವರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸುವ ಮೂಲಕ ಸಾಹಿತ್ಯ ಪ್ರಶಸ್ತಿ ಸ್ಥಾಪಿಸಿ ಹೊಸ ಬರಹಗಾರರನ್ನು ಗುರುತಿಸುವ ಕೆಲಸ ಸಂತೋಷದಾಯಕವಾಗಿದೆ ಎಂದರು.

    ಇಂದು ಕರ್ನಾಟಕದಲ್ಲಿ ಅದೆಷ್ಟೋ ನೆನಪಿಡಲಾರದ ಪ್ರಶಸ್ತಿಗಳಿವೆ. ನನಗೆ ಒಂದು ಪ್ರಶ್ನೆ ಎದುರಾಗಿದೆ. ಪ್ರಶಸ್ತಿ ಸಲುವಾಗಿಯೇ ಬರೆಯುತ್ತಾರಾ ಎಂಬ ಸಂಶಯವಿದೆ. ಓದುಗರಿಗಿಂತ ಬರೆಯುವವರೇ ಜಾಸ್ತಿಯಾಗಿದ್ದಾರೆ. ಇಂತಹ ಪ್ರಶಸ್ತಿ ಮೂಲಕ ಗಟ್ಟಿ ಬರಹಗಾರರನ್ನು ಗುರುತಿಸುವಂತಾಗಲಿ. ಸುಳ್ಳೇ ವಿಜೃಂಭಿಸುವ ಇಂದಿನ ದಿನಗಳಲ್ಲಿ ಬರಹದಿಂದ ಸತ್ಯವನ್ನು ಕಂಡುಕೊಳ್ಳಬೇಕಾಗಿದೆ. ಆದರೆ ಸತ್ಯವನ್ನು ಎದುರು ನಿಲ್ಲಿಸಲಾರದ ಸ್ಥಿತಿ ಇಂದು ಇದೆ ಎಂದು ಹೇಳಿದರು.

    ತೀರ್ಪುಗಾರರ ಪರವಾಗಿ ಬೆಂಗಳೂರಿನ ಸಾಹಿತಿ ರಘುನಾಥ.ಚ.ಹ. ಹಾಗೂ ಕಲಬುರಗಿಯ ಸಾಹಿತಿ ಸಂಧ್ಯಾ ಹೊನಗುಂಟಿಕರ್ ಮಾತನಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಕಥೆಗಾರ ಬಾಳಾಸಾಹೇಬ ಲೋಕಾಪೂರ, ಕಥೆಗಾರ ಮಲ್ಲಿಕಾರ್ಜುನ ಶೆಲ್ಲಿಕೇರಿ ವೇದಿಕೆಯ ಮೇಲಿದ್ದರು. ಪ್ರಶಸ್ತಿ ವಿವರ: ಕಾದಂಬರಿಯಲ್ಲಿ ಚಿಮನಹಳ್ಳಿ ರಮೇಶಬಾಬು, ಕವನಸಂಕಲನದಲ್ಲಿ ಧಾರವಾಡದ ಭಾಗ್ಯಜೋತಿ ಹಿರೇಮಠ ಅವರ ಬಿದಿರ ಭಿನ್ನಹ, ಕಥಾ ಸಂಕಲನದಲ್ಲಿ ಸ್ವಾಮಿ ಪೊನ್ನಾಚಿಯವರ ದಾರಿ ತಪ್ಪಿಸುವ ಗಿಡ ಹಾಗೂ ಗೋವಿಂದರಾಜು ಕಲ್ಲೂರ ಅವರ ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು ಕೃತಿಗಳಿಗೆ ಪ್ರಶಸ್ತಿ ಬಂದಿದ್ದು, ಆಯಾ ಕೃತಿ ಲೇಖಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts