ಬೆಳಗಾವಿ: ನಗರದಲ್ಲಿ ದಿನೇ ದಿನೆ ಹಾಡಹಗಲೇ ಮನೆಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ. ಎಪಿಎಂಸಿ ಠಾಣೆ ವ್ಯಾಪ್ತಿಯ ಜಯನಗರದಲ್ಲಿರುವ ಶ್ರೀಧರ ಸುಳಾಕೆ ಎಂಬುವರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಗೆ ನುಗ್ಗಿದ ಕಳ್ಳರು ಹಾಡಹಗಲೇ 24.64 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಹಾಗೂ 2 ಲಕ್ಷ ರೂ. ದೋಚಿಕೊಂಡು ಪರಾರಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಅಕ್ಕಪಕ್ಕದ ಮನೆಯಲ್ಲಿರುವ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿರುವ ಫುಟೇಜ್‌ಗಳನ್ನು ಪೊಲೀಸರಿಗೆ ನೀಡಿದರೂ, ಆರೋಪಿಗಳನ್ನು ಪೊಲೀಸರು ಬಂಧಿಸಿಲ್ಲ ಏಕೆ ಎಂದು ಜನತೆ ಪ್ರಶ್ನಿಸುತ್ತಿದ್ದಾರೆ.
ಈ ಪ್ರಕರಣ ಜನರ ಮನಸ್ಸಿನಿಂದ ಮಾಸುವ ಮುನ್ನವೇ ಮತ್ತೊಂದೆಡೆ ಕಾಕತಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಸುಳಗಾ ಗ್ರಾಮದಲ್ಲಿರುವ ನಿತೇಶ ಪಾಟೀಲ ಎಂಬುವರ ಮನೆಗೆ ನುಗ್ಗಿದ ಕಳ್ಳರು 1.20 ಲಕ್ಷ ರೂ.ಮೌಲ್ಯದ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿರುವ ಘಟನೆ ಮಂಗಳವಾರ ನಡೆದಿದೆ.
ಕ್ಯಾಂಪ್ ಠಾಣೆಯಲ್ಲಿರುವ ವಿಜಯನಗರದಲ್ಲಿನ ವಾಸವಾಗಿದ್ದ ಪ್ರತಿಷ್ಠಿತ ಬಟ್ಟೆ ಅಂಗಡಿಯೊಂದರ ಸೇಲ್ಸ್ ಮನ್ ಆಗಿರುವ ಗುಂಡು ಫಿರಾಜಿ ಚೌಗಲೆ ಅವರ ಮನೆಯಲ್ಲಿಯೇ ಕಳ್ಳತನ ನಡೆದಿತ್ತು. ಅದು ಕೂಡ ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದಾಗ ಮನೆಯ ಹಿಂಬದಿಯ ಕಿಟಕಿ ಮುರಿದು ಒಳನುಗ್ಗಿದ ಕಳ್ಳರು, ಟ್ರೇಜರಿಯಲ್ಲಿದ್ದ 10 ಲಕ್ಷ ರೂ.ನಗದು ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ಗುಂಡು ಚೌಗಲೆ ದೂರು ದಾಖಲಿಸಿದ್ದರು. ಈ ಮೂರು ಘಟನೆಗಳನ್ನು ಅವಲೋಕಿಸಿದರೆ ಮೂರು ಕಳ್ಳತನ ಪ್ರಕರಣಗಳು ಹಾಡಹಗಲೇ ನಡೆದಿರುವುದರಿಂದ ಒಂದಕ್ಕೊಂದು ಸಾಮ್ಯತೆ ಕಂಡುಬರುತ್ತಿದೆ.
ಹಾಗಾಗಿ ಬೆಳಗಾವಿ ನಗರದ ವ್ಯಾಪ್ತಿಯಲ್ಲಿ ಮೇಲಿಂದ ಮೇಲೆ ಹಾಡುಹಗಲೇ ಕಳ್ಳತನ ನಡೆಯುತ್ತಿರುವುದರಿಂದ ಬೆಳಗಾವಿ ಜನತೆಯಲ್ಲಿ ಭೀತಿ ಮೂಡಿದ್ದು, ಮನೆಗೆ ಬೀಗ ಹಾಕಿ ಹೊರಹೋಗುವುದಕ್ಕೂ ಹೆದರುತ್ತಿದ್ದಾರೆ.
ಆದಷ್ಟು ಬೇಗನೆ ಬೆಳಗಾವಿ ಪೊಲೀಸರು, ಕಳ್ಳರ ಗ್ಯಾಂಗ್‌ಅನ್ನು ಬಂಧಿಸಿ ಜೈಲಿಗೆ ಅಟ್ಟಬೇಕು. ಕಳ್ಳತನವಾಗಿರುವ ಚಿನ್ನಾಭರಣ ಹಾಗೂ ನಗದು ಹಣವನ್ನು ಜಪ್ತಿ ಮಾಡಿಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕಳ್ಳರ ಬಂಧನಕ್ಕಾಗಿ ವಿಶೇಷ ಆದ್ಯತೆ ಮೇಲೆ ತನಿಖೆ ನಡೆಸಲಾಗುತ್ತಿದೆ. ಆದಷ್ಟು ಬೇಗ ಕಳ್ಳರ ಗ್ಯಾಂಗ್ ಹಿಡಿಯುವುದಕ್ಕಾಗಿ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಗರದ ಜನತೆ ಆತಂಕಪಡುವ ಅಗತ್ಯವಿಲ್ಲ. ಸೂಕ್ತ ಕ್ರಮ ಜರುಗಿಸಲಾಗುವುದು.
| ಸದಾಶಿವ ಕಟ್ಟಿಮನಿ, ಎಸಿಪಿ (ಕಾನೂನು ಮತ್ತು ಸುವ್ಯವಸ್ಥೆ)